ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿಣಿ ಸಾಧನೆಗಳನ್ನು ಆಧರಿಸಿ ‘ಭಾರತ ಸಿಂಧೂರಿ’ ಚಿತ್ರ ನಿರ್ಮಾಣಕ್ಕೆ ಸಿದ್ಧತೆ

ಮೌಖಿಕ ಒಪ್ಪಿಗೆ ಸೂಚಿಸಿದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ | ಅಕ್ಷತಾ ಪಾಂಡವಪುರ ನಟನೆ
Last Updated 8 ಜೂನ್ 2021, 21:30 IST
ಅಕ್ಷರ ಗಾತ್ರ

ಮಂಡ್ಯ: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಸಾಧನೆಗಳನ್ನು ಆಧರಿಸಿ ನಗರದ ‘ನಾಲ್ವಡಿ ಕೃಷ್ಣರಾಜ ಒಡೆಯರ್‌ ಫಿಲಮ್ಸ್‌’ ಸಂಸ್ಥೆಯು ‘ಭಾರತ ಸಿಂಧೂರಿ’ ಚಲನಚಿತ್ರ ನಿರ್ಮಿಸಲು ಸಿದ್ಧತೆ ನಡೆಸಿದೆ.

ನಟಿ ಅಕ್ಷತಾ ಪಾಂಡವಪುರ ‘ಸಿಂಧೂರಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಹಿತಿ, ನಿರ್ದೇಶಕ ಕೃಷ್ಣ ಸ್ವರ್ಣಸಂದ್ರ ಚಿತ್ರ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಲಾಕ್‌ಡೌನ್‌ ಮುಗಿದ ನಂತರ ಚಿತ್ರ ಸೆಟ್ಟೇರಲಿದೆ. ಸಿಂಧೂರಿ ಅವರು ಹುಟ್ಟಿ ಬೆಳೆದ ಆಂಧ್ರಪ್ರದೇಶ, ಕರ್ತವ್ಯ ನಿರ್ವಹಿಸಿದ ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಭಾಗದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ನಟಿ ಅಕ್ಷತಾ ಪಾಂಡವಪುರ
ನಟಿ ಅಕ್ಷತಾ ಪಾಂಡವಪುರ

‘ಮೈಸೂರಿನಲ್ಲಿ ಈಚೆಗೆ ನಡೆದ ರೋಹಿಣಿ ಸಿಂಧೂರಿ– ಶಿಲ್ಪಾನಾಗ್‌ ನಡುವಿನ ಜಟಾಪಟಿಗೂ ಭಾರತ ಸಿಂಧೂರಿ ಚಲನಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ವರ್ಷದಿಂದಲೂ ಚಿತ್ರದ ಸಿದ್ಧತೆ ನಡೆಯುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಅವರು ಮಾಡಿದ ಸಾಧನೆ
ಗಳನ್ನು ಪ್ರಮುಖವಾಗಿಟ್ಟುಕೊಂಡು ಹಾಸನ, ಮೈಸೂರಿನಲ್ಲಿ ಮಾಡಿದ ಸಾಧನೆಗಳೊಂದಿಗೆ ಚಿತ್ರ ರೂಪುಗೊಳ್ಳಲಿದೆ. ಚಿತ್ರ ನಿರ್ಮಾಣಕ್ಕೆ ಸಿಂಧೂರಿ ಒಪ್ಪಿಗೆ ಸೂಚಿಸಿದ್ದಾರೆ. ಈಚೆಗೆ ಭೇಟಿಯಾಗಿದ್ದಾಗ, ಚಿತ್ರ ನೋಡಲು ಕಾತರದಿಂದ ಇರುವುದಾಗಿ ತಿಳಿಸಿದ್ದರು’ ಎಂದು ನಿರ್ದೇಶಕ ಕೃಷ್ಣ ಸ್ವರ್ಣಸಂದ್ರ ಹೇಳಿದರು.

ಸಿಂಧೂರಿ ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದಾಗ ಜಿಲ್ಲೆಯನ್ನು ರಾಜ್ಯದಲ್ಲೇ ಮೊದಲ ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿ ಮಾಡಿದ್ದರು. ರಾಷ್ಟ್ರದಲ್ಲೇ 3ನೇ ಜಿಲ್ಲೆಯಾಗಿ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆಗೂ ಪಾತ್ರವಾಗಿತ್ತು. ರಾಷ್ಟ್ರ ಪ್ರಶಸ್ತಿಗೂ ಪಾತ್ರವಾಯಿತು. ಕೇವಲ ಒಂದು ವರ್ಷದಲ್ಲಿ (2014–15) 1.30 ಲಕ್ಷ ಶೌಚಾಲಯ ನಿರ್ಮಿಸಿದ ಕೀರ್ತಿಗೆ ಅವರು
ಪಾತ್ರರಾಗಿದ್ದರು.

ಜೊತೆಗೆ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಬಾಲ್ಯವಿವಾಹ ನಿರ್ಮೂಲನೆ, ಹೆಣ್ಣು ಭ್ರೂಣಹತ್ಯೆ ತಡೆಗೆ ಪ್ರಯತ್ನಿಸಿದ್ದರು. ಈ ಅಂಶಗಳನ್ನಾಧರಿಸಿ ನಿರ್ದೇಶಕರು ಕತೆ ಸಿದ್ಧಗೊಳಿಸಿದ್ದಾರೆ.

ರಾಜಕೀಯ: ಸಿಂಧೂರಿ ಸಿಇಒ ಆಗಿದ್ದಾಗ ಮಂಡ್ಯ ಜಿಲ್ಲಾಪಂಚಾಯಿತಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗೂ ಸಾಕ್ಷಿಯಾಗಿತ್ತು. ಅವರ ಅವಧಿಯಲ್ಲಿ 7 ಮಂದಿ ಅಧ್ಯಕ್ಷರು ಬದಲಾಗಿದ್ದರು. ಆಗಲೂ ರೋಹಿಣಿ ಒತ್ತಡದಲ್ಲಿ ಕೆಲಸ ಮಾಡಿದ್ದರು. ಈ ಅಂಶಗಳೂ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಲಿವೆ.

‘ಕಾರ್ಯಕ್ರಮವೊಂದರಲ್ಲಿ ಅಂಬರೀಷ್‌ ಅವರು ರೋಹಿಣಿ ಸಿಂಧೂರಿ ಅವರನ್ನು, ‘ನೀವು ಸುಂದರವಾಗಿದ್ದೀರಿ, ಚೆನ್ನಾಗಿ ಕೆಲಸವನ್ನೂ ಮಾಡುತ್ತೀರಿ’ ಎಂದು ಹೊಗಳಿದಿದ್ದರು. ಚಿತ್ರದಲ್ಲಿ ಅಂಬರೀಷ್‌ ಪಾತ್ರವೂ ಪ್ರಮುಖವಾಗಿರಲಿದೆ’ ಎಂದು ಕೃಷ್ಣ ತಿಳಿಸಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ರೋಹಿಣಿ ಸಿಂಧೂರಿ ಅವರನ್ನು ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

* ಕೃಷ್ಣ ಸ್ವರ್ಣಸಂದ್ರ ಅವರು ಚಿತ್ರದ ಬಗ್ಗೆ ತಿಳಿಸಿದ್ದಾರೆ. ಜೀವನಾಧಾರಿತ ಕತೆಗಳಲ್ಲಿ ಅಭಿನಯಿಸುವುದು ಸವಾಲು, ಅದೃಷ್ಟವೇ ಆಗಿದೆ. ಕತೆ ಬಗ್ಗೆ ಕುತೂಹಲವಿದೆ.

–ಅಕ್ಷತಾ ಪಾಂಡವಪುರ, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT