ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ತೆರೆಗೆ ಬರುತ್ತಿದೆ ‘ಭಾವಪೂರ್ಣ’, ‘ಟಿ.ಆರ್‌.ಪಿ ರಾಮ’

Published 2 ನವೆಂಬರ್ 2023, 23:30 IST
Last Updated 2 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಈ ಶುಕ್ರವಾರ(ನ.3) ಬೆಳ್ಳಿತೆರೆಯಲ್ಲಿ ಹೊಸಬರ ಸಿನಿಮಾಗಳು ತೆರೆಕಂಡಿವೆ. ರಾಜ್ಯೋತ್ಸವದ ಆರಂಭವಾದರೂ ಸ್ಟಾರ್ಸ್‌ ಸಿನಿಮಾಗಳು ಯಾವುದೂ ಈ ವಾರದಲ್ಲಿ ಚಿತ್ರಮಂದಿರಗಳ ಕದ ತಟ್ಟಿಲ್ಲ.   

‘ಟಿ.ಆರ್‌.ಪಿ ರಾಮ’

ಅಶುತೋಶ್ ಪಿಕ್ಚರ್ಸ್ ಬ್ಯಾನರ್‌ನಡಿ ನಿರ್ಮಾಣವಾಗಿರುವ ಸಿನಿಮಾ ‘TRP ರಾಮ’. ಈ ಸಿನಿಮಾದಲ್ಲಿ ರವಿಪ್ರಸಾದ್‌ ನಟಿಸಿ, ಆ್ಯಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಪ್ರಯತ್ನ. ಕನ್ನಡದ ಖ್ಯಾತ ನಟಿ ಮಹಾಲಕ್ಷ್ಮೀ ಅವರು ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ವೇಗದ ಯುಗದಲ್ಲಿ ಚಿಕ್ಕಪುಟ್ಟ ತಪ್ಪುಗಳಿಂದ ಎಷ್ಟು ದೊಡ್ಡ ಪ್ರಮಾದವಾಗುತ್ತದೆ ಅನ್ನೋದು ಚಿತ್ರದ ಒಂದು ಎಳೆ ಎಂದಿದೆ ಚಿತ್ರತಂಡ. ಚಿತ್ರದಲ್ಲಿ ನಟಿ ಸ್ಪರ್ಶ ಅವರು ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದು, ಅವರ ತಾಯಿ ಪಾತ್ರದಲ್ಲಿ ಮಹಾಲಕ್ಷ್ಮೀ ನಟಿಸಿದ್ದಾರೆ. ಓಂ ಸಾಯಿ ಪ್ರಕಾಶ್ ತಾರಾಬಳಗದಲ್ಲಿದ್ದಾರೆ. ಪ್ರವೀಣ್ ಸೂಡಾ ಸಂಭಾಷಣೆ,  ರಾಜ್ ಗುರು ಹೊಸಕೋಟೆ ಸಂಗೀತ, ಸುನಿಲ್ ಕಶ್ಯಪ್ ಸಂಕಲನ, ಗುರುಪ್ರಸಾದ್ ಛಾಯಾಚಿತ್ರಗ್ರಹಣ ಸಿನಿಮಾಕ್ಕಿದೆ. ಸತ್ಯ ಘಟನೆಗಳನ್ನ ಆಧರಿಸಿ ಈ ಸಿನಿಮಾ ಬರುತ್ತಿದೆ. 

‘ಗರುಡ ಪುರಾಣ’

ಮಂಜುನಾಥ್‌ ಬಿ.ಎನ್‌. ನಿರ್ದೇಶಿಸಿರುವ ಸಿನಿಮಾ ಇದಾಗಿದ್ದು, ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾಹಂದರವನ್ನು ಒಳಗೊಂಡಿದೆ. 27 ಫ್ರೇಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಸಿಂಧು ಕೆ.ಎಂ ಮತ್ತು ಬಿ.ಎಲ್ ಯೋಗೇಶ್ ಕುಮಾರ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮಂಜುನಾಥ್ ಅವರೇ ಕಥೆ, ಚಿತ್ರಕಥೆ ಬರೆದು ಸಂಕಲನ ಮಾಡಿ ನಿರ್ದೇಶಿಸಿರುವ ಈ ಚಿತ್ರದ ಒಂದು ಭಾಗಕ್ಕೆ ಗರುಡ ಪುರಾಣದ ಕೆಲವು ಅಂಶಗಳು ಹೊಂದಿಕೆಯಾಗುತ್ತದೆ. ಹಾಗಾಗಿ ‘ಗರುಡ ಪುರಾಣ’ ಎಂಬ ಶೀರ್ಷಿಕೆ ಇಡಲಾಗಿದೆ ಎಂದಿದೆ ಚಿತ್ರತಂಡ. ಚಿತ್ರದ ನಾಯಕನಾಗಿಯೂ ಮಂಜುನಾಥ್ ನಟಿಸಿದ್ದಾರೆ. ದಿಶಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ‘ಭಜರಂಗಿ’ ಖ್ಯಾತಿಯ ಚೆಲುವರಾಜು, ಸಂತೋಷ್ ಕರ್ಕಿ, ಕೆಂಚಣ್ಣ, ರಾಜಕುಮಾರ್, ಮಹೇಂದ್ರ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಭಾವಪೂರ್ಣ

ಚೇತನ್ ಮುಂಡಾಡಿ ನಿರ್ದೇಶನದ, ಪ್ರಶಾಂತ್ ಅಂಜನಪ್ಪ ನಿರ್ಮಾಣದ ಹಾಗೂ ರಮೇಶ್ ಪಂಡಿತ್ ನಾಯಕರಾಗಿ ನಟಿಸಿರುವ ಸಿನಿಮಾ ‘ಭಾವಪೂರ್ಣ’. ಈ ಸಿನಿಮಾ ಒಬ್ಬ ಮಧ್ಯವಯಸ್ಸು ಮೀರಿದ ಮುಗ್ಧನ ಭಾವ ತೀರ ಯಾನ. ಇನ್ನೊಬ್ಬ ಯುವಕ. ಕನಸುಗಳಿಗೆ ಬಣ್ಣ ಹಚ್ಚಿ ಬದುಕನ್ನು ಬಲೂನ್‌ನಂತೆ ಹಾರಿ ಬಿಡುವೆ ಎನ್ನುವ ಹುಮ್ಮಸ್ಸಿನಾತ. ತನಗೆ ಬೇಕಾದಂತೆ ತನ್ನ ಬದುಕು ರೂಪಿಸಿಕೊಳ್ಳಬಹುದು ಎನ್ನುವ ಕಿಚ್ಚಿನಿಂದ ಹೊರಟವನು. ಇವರ ಬದುಕೇ ‘ಭಾವಪೂರ್ಣ’ ಎಂದಿದೆ ಚಿತ್ರತಂಡ. 

‘ಸೈಕಲ್ ಸವಾರಿ’

ಹಳ್ಳಿಯಲ್ಲಿ ಮಿಠಾಯಿ ಮಾರಿಕೊಂಡು ಜೀವನ ನಡೆಸುತ್ತಿದ್ದ ಯುವಕನೊಬ್ಬನನ್ನು ಶ್ರೀಮಂತ ಮನೆತನದ ಯುವತಿಯು ಪ್ರೀತಿಸಿದಾಗ ಏನಾಗಬಹುದು ಎಂಬುವುದು ‘ಸೈಕಲ್ ಸವಾರಿ’ ಚಿತ್ರದ ಎಳೆ. ದೇವು ಕೆ‌.ಅಂಬಿಗ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಕಲಾರಂಗ್ ಫಿಲಂ ಸ್ಟುಡಿಯೊ ಆ್ಯಂಡ್‌ ಪ್ರೊಡಕ್ಷನ್ಸ್ ಹೆಸರಿನಲ್ಲಿ ಸುರೇಶ್ ಶಿವೂರ ಹಾಗೂ ಲೋಕೇಶ್ ಸವದಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಂಪೂರ್ಣ ಉತ್ತರ ಕರ್ನಾಟಕ ಭಾಷೆ, ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ನಿರ್ದೇಶಕ‌ ದೇವು ಅವರೇ ನಾಯಕನಾಗಿಯೂ ನಟಿಸಿದ್ದಾರೆ. ಬಿಜಾಪುರದ ದೀಕ್ಷಾ ಬೀಸೆ ನಾಯಕಿಯಾಗಿ ನಟಿಸಿದ್ದಾರೆ. ಬಹುತೇಕ‌ ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಿಸಿರುವ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ದೇವು ಅವರೇ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT