ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೆಲುಗಿನಲ್ಲಿ ‘ಭೀಮ’ನಾದ ಗೋಪಿಚಂದ್‌!

Published : 12 ಜೂನ್ 2023, 11:05 IST
Last Updated : 12 ಜೂನ್ 2023, 11:05 IST
ಫಾಲೋ ಮಾಡಿ
Comments

ಸ್ಯಾಂಡಲ್‌ವುಡ್‌ನಲ್ಲಿ ‘ದುನಿಯಾ’ ವಿಜಯ್‌ ನಟಿಸುತ್ತಿರುವ ‘ಭೀಮ’ ತೆರೆಕಾಣಲು ಸಜ್ಜಾಗುತ್ತಿರುವ ಬೆನ್ನಲ್ಲೇ ತೆಲುಗಿನಲ್ಲಿ ‘ಭೀಮ’ ಎಂಬ ಶೀರ್ಷಿಕೆಯ ಸಿನಿಮಾ ಸೆಟ್ಟೇರಿದೆ. 

ಕನ್ನಡದಲ್ಲಿ ‘ಭಜರಂಗಿ’, ‘ವಜ್ರಕಾಯ’, ‘ವೇದ’ ಹೀಗೆ ಹಿಟ್‌ ಸಿನಿಮಾಗಳನ್ನು ನಿರ್ದೇಶಿಸಿರುವ ಎ.ಹರ್ಷ ಇದೀಗ ಟಾಲಿವುಡ್‌ ಅಂಗಳಕ್ಕೆ ಹೆಜ್ಜೆ ಇಟ್ಟಿದ್ದಾರೆ. ತೆಲುಗಿನ ಖ್ಯಾತ ನಟ ಗೋಪಿಚಂದ್‌ ಅವರಿಗೆ ಹರ್ಷ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಎನ್ನುವುದು ಮೊದಲೇ ಸುದ್ದಿಯಾಗಿತ್ತು. ಎರಡು ತಿಂಗಳ ಹಿಂದೆ ಚಿತ್ರದ ಮುಹೂರ್ತವೂ ನಡೆದಿತ್ತು. ಆದರೆ ಚಿತ್ರದ ಶೀರ್ಷಿಕೆ ಘೋಷಣೆಯಾಗಿರಲಿಲ್ಲ. ಇದೀಗ ಗೋಪಿಚಂದ್‌ ಅವರ ಜನ್ಮದಿನದ ಸಂದರ್ಭದಲ್ಲಿ ಸಿನಿಮಾದ ಟೈಟಲ್‌ ಹಾಗೂ ಫಸ್ಟ್‌ಲುಕ್‌ ಅನ್ನು ಚಿತ್ರತಂಡ ಘೋಷಿಸಿದೆ.   

‘ಭೀಮ’ನಾಗಿ ‘ಮ್ಯಾಚೋ ಸ್ಟಾರ್’ ಇಲ್ಲಿ ಕಾಣಿಸಿಕೊಂಡಿದ್ದು, ಪೊಲೀಸ್ ಅಧಿಕಾರಿಯಾಗಿ ತೆರೆ ಮೇಲೆ ಬರಲಿದ್ದಾರೆ. ಮುಖದ ಮೇಲೆ ಗಾಯದ ಗುರುತು, ಉಗ್ರ ರೂಪಿಯಾಗಿ ತೀಕ್ಷ್ಣ ನೋಟದ ಗೋಪಿಚಂದ್ ಹೊಸ ಅವತಾರದಲ್ಲಿ ಇಲ್ಲಿ ಕಾಣಿಸಿಕೊಂಡಿದ್ದಾರೆ.

ಇದು ಗೋಪಿಚಂದ್‌ ಅವರ 31ನೇ ಸಿನಿಮಾ. ತೆಲುಗಿನಲ್ಲಿ ಎ.ಹರ್ಷ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಮೊದಲ ಸಿನಿಮಾ ಇದಾಗಿದೆ. ‘ಭೀಮ’ ಕೌಟುಂಬಿಕ ಹಾಗೂ ಆ್ಯಕ್ಷನ್ ಎಂಟರ್‌ಟೈನರ್ ಕಥಾಹಂದರ ಹೊಂದಿದೆ.‌ ಕೆ.ಕೆ.ರಾಧಾ ಮೋಹನ್ ಶ್ರೀ ಸತ್ಯ ಸಾಯಿ ಆರ್ಟ್ಸ್ ಪ್ರೊಡಕ್ಷನ್‌ನಡಿ ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ ಎಂದಿದೆ ಚಿತ್ರತಂಡ. ‘ಭೀಮ’ ಶ್ರೀ ಸತ್ಯ ಸಾಯಿ ಆರ್ಟ್ಸ್ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ 14ನೇ ಸಿನಿಮಾ. ಸ್ವಾಮಿ.ಜೆ ಛಾಯಾಚಿತ್ರಗ್ರಹಣ, ರವಿ ಬಸ್ರೂರ್ ಸಂಗೀತ ನಿರ್ದೇಶನ, ಅಜ್ಜು ಮಹಂಕಾಳಿ ಸಂಭಾಷಣೆ, ವೆಂಕಟ್ ಹಾಗೂ ರವಿವರ್ಮಾ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ಸದ್ಯ ಹೈದರಾಬಾದ್‌ನ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು, ನಾಯಕಿ ಹಾಗೂ ಉಳಿದ ತಾರಾಬಳಗದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುವುದಾಗಿ ಚಿತ್ರತಂಡ ತಿಳಿಸಿದೆ. 

ಎ.ಹರ್ಷ
ಎ.ಹರ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT