ವಾರಣಾಸಿ: ಭೋಜಪುರಿ ಚಿತ್ರರಂಗದ ಜನಪ್ರಿಯ ನಟಿ ಹಾಗೂ ಡ್ಯಾನ್ಸರ್ ಆಕಾಂಕ್ಷಾ ದುಬೆ ಅವರು ವಾರಾಣಸಿಯ ಹೋಟೆಲ್ ಒಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ವರದಿಯಾಗಿದೆ.
ಆಕಾಂಕ್ಷಾ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಾಥಮಿಕವಾಗಿ ಇದೊಂದು ಆತ್ಮಹತ್ಯೆ ಇರಬಹುದು ಎಂದು ಪೊಲೀಸರು ಶಂಕಿಸಿರುವುದಾಗಿ ‘ಟೈಮ್ಸ್‌ನೌ ನ್ಯೂಸ್’ ವರದಿ ಮಾಡಿದೆ.
25 ವರ್ಷದ ಈ ನಟಿ ತಮ್ಮ ಮುಂದಿನ ಚಿತ್ರಕ್ಕಾಗಿ ವಾರಣಾಸಿಯಲ್ಲಿ ಶೂಟಿಂಗ್‌ಗೆ ತೆರಳಿದ್ದರು. ತಮ್ಮ ಪಾಲಿನ ಶೂಟಿಂಗ್ ಮುಗಿಸಿ ವಾರಾಣಸಿಯ ಸಾರಾನಾಥ್ ಹೋಟೆಲ್‌ನಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ ಹೋಟೆಲ್ ಸಿಬ್ಬಂದಿಯಿಂದ ಘಟನೆ ಬೆಳಕಿಗೆ ಬಂದಿದೆ.
ಭೋಜಪುರಿ ಚಿತ್ರರಂಗದ ಕನಸಿನ ರಾಣಿಯಂದು ಗುರುತಿಸಿಕೊಂಡಿದ್ದ ಮಿರ್ಜಾಪುರ್ ಮೂಲದ ಆಕಾಂಕ್ಷಾ ಅವರು ಐಎಎಸ್ ಅಧಿಕಾರಿ ಆಗಬೇಕೆಂದುಕೊಂಡು ಮುಂಬೈ ಸೇರಿದ್ದರು. ಆದರೆ, ಅಲ್ಲಿಂದ ಭೋಜಪುರಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಹೆಸರು ಮಾಡಿದ್ದರು.
ನಿನ್ನೆಯಷ್ಟೇ ಅವರು ಬೆಲ್ಲಿ ಡ್ಯಾನ್ಸ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ಭೋಜಪುರಿಯ ಮೇರಿ ಜಂಗ್, ಮೇರಿ ಪೈಸಲಾ, ಮುಜಸೆ ಶಾದಿ ಕರೋಗೆ (ಭೋಜಪುರಿ), ವೀರೋನ್ ಕಿ ವೀರ, ಕಸಮ್ ಪೈದಾ ಕರನೇ ಕಿ 2 ಸಿನಿಮಾಗಳಲ್ಲಿ ಮಿಂಚಿದ್ದಲ್ಲದೇ ಆಕಾಂಕ್ಷಾ ಹಲವು ಭೋಜಪುರಿ ಮ್ಯುಸಿಕ್ ಅಲ್ಬಂಗಳಲ್ಲಿ ನಟಿಸಿ ಗಮನ ಸೆಳೆದಿದ್ದರು.
ಆಕಾಂಕ್ಷಾ ಅವರು ಇತ್ತೀಚೆಗೆ ಸಮರ್ ಸಿಂಗ್ ಎನ್ನುವ ನಟರೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಆಕಾಂಕ್ಷಾ ಸಾವಿನ ಬಗ್ಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವಾರಾಣಸಿ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.