ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೋಲ್‌ ಆಗುತ್ತಿದೆ ‘ಬಿಗ್ ಬಿ’‌ ಅಮಾವಾಸ್ಯೆ ಥಿಯರಿ!

Last Updated 15 ಜುಲೈ 2020, 12:14 IST
ಅಕ್ಷರ ಗಾತ್ರ

ಕೊರೊನಾ ಸೋಂಕಿಗೆ ತುತ್ತಾಗಿರುವ ಬಾಲಿವುಡ್‌ನ ‘ಬಿಗ್‌ ಬಿ’ ಅಮಿತಾಭ್‌ ಬಚ್ಚನ್‌ ಮತ್ತು ಕುಟುಂಬ ಸದಸ್ಯರ ಆರೋಗ್ಯಕ್ಕಾಗಿ ಅಭಿಮಾನಿಗಳು ಪೂಜೆ, ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.ಬೇಗ ಗುಣಮುಖರಾಗುವಂತೆ ಹಾರೈಸಿದ ಶುಭಾಶಯಗಳ ಮಹಾಪೂರವೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬರುತ್ತಿದೆ.

ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಅಮಿತಾಭ್‌ ಬಚ್ಚನ್‌ ನಟಿಸಿದ್ದ ಆರೋಗ್ಯ ಸೇತು ಆ್ಯಪ್‌ ಜಾಹೀರಾತು ಮತ್ತು ಹಳೆಯ ಟ್ವೀಟ್‌ಗಳು ಸಿಕ್ಕಾಪಟ್ಟೆ ಟ್ರೋಲ್‌ ಆಗುತ್ತಿವೆ.

ಕೊರೊನಾ ಸೋಂಕು ತಗುಲಿದ ವ್ಯಕ್ತಿಗಳ ಮೇಲೆ ನಿಗಾ ಇರಿಸಲು ಕೇಂದ್ರ ಸರ್ಕಾರ ಅಭಿವೃದ್ದಿಪಡಿಸಿದ 'ಆರೋಗ್ಯಸೇತು ಆ್ಯಪ್'‌ ಜಾಹೀರಾತಿನಲ್ಲಿ, ಸುರಕ್ಷತೆ ಬಗ್ಗೆ ಪಾಠ ಮಾಡಿದ್ದ ಬಚ್ಚನ್ ಸರ್‌ ಅವರಿಗೆ ಸೋಂಕು ತಗುಲಿದ್ದಾದರೂ ಹೇಗೆ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ.

‘ಸರ್‌, ಆಯುರ್ವೇದ ಮತ್ತು ವೇದ ವಿಜ್ಞಾನ ಪಾಲಿಸುತ್ತಿದ್ದ ನಿಮಗೆ ಕೊರೊನಾ ಸೋಂಕು ತಗುಲಿದ್ದು ಹೇಗೆ ಎಂದು ಆಶ್ಚರ್ಯವಾಗುತ್ತಿದೆ. ಮುಂದಿನ ಅಮಾವಾಸ್ಯೆ ಒಳಗಾಗಿ ಆಯುರ್ವೇದ ಔಷಧ ನಿಮ್ಮ ರೋಗವನ್ನು ಗುಣಪಡಿಸಲಿ’ ಎಂದು ಕಾಲೆಳೆದಿದ್ದಾರೆ.

ಕೊರೊನಾ ಸೋಂಕಿನಿಂದ ಹೇಗೆ ಸುರಕ್ಷಿತವಾಗಿರಬೇಕು ಎಂಬ ಬಗ್ಗೆ ಬಚ್ಚನ್ ಅವರು ಮಾರ್ಚ್‌ 22ರಂದು ಮಾಡಿದ್ದ ಟ್ವೀಟ್‌ ಅನ್ನು (ಟಿ–3479‌) ನೆಟ್ಟಿಗರು ಟ್ಯಾಗ್‌ ಮಾಡಿದ್ದಾರೆ. ಪ್ರತಿ ಟ್ವೀಟ್‌ಗೂ ಒಂದು‌ ಕ್ರಮಸಂಖ್ಯೆ ಹಾಕುವುದನ್ನು ಸೀನಿಯರ್‌ ಬಚ್ಚನ್‌ ಪಾಲಿಸಿಕೊಂಡು ಬಂದಿದ್ದಾರೆ. ಅದರಂತೆ 3,479ನೇ ಟ್ವೀಟ್‌ನಲ್ಲಿ ‘ಬಿಗ್ ಬಿ’ ಏನು ಹೇಳಿದ್ದರು ಎನ್ನುವುದನ್ನು ನೆಟ್ಟಿಗರು ನೆನಪಿಸಿದ್ದಾರೆ.

‘ಕಗ್ಗತ್ತಲು ರಾತ್ರಿಯ ಅಮಾವಾಸ್ಯೆಯ ದಿನ ವೈರಸ್‌, ಬ್ಯಾಕ್ಟೀರಿಯಾ ಹಾಗೂ ಇತರ ದುಷ್ಟಶಕ್ತಿಗಳು ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಿಯಾಗಿರುತ್ತವೆ. ಶಂಖದ ಸದ್ದು ಮತ್ತು ಚಪ್ಪಾಳೆ ತಟ್ಟುವುದರಿಂದ ವೈರಸ್‌ಗಳು ನಾಶವಾಗುತ್ತವೆ ಅಥವಾ ಅವುಗಳ ಶಕ್ತಿ ಕುಂದುತ್ತದೆ. ರೇವತಿ ನಕ್ಷತ್ರಕ್ಕೆ ಪ್ರವೇಶಿಸುತ್ತಿರುವ ಚಂದ್ರನ ಪ್ರಭಾವ ಮತ್ತು ಸಕಾರಾತ್ಮಕ ಶಕ್ತಿಯು ನಮ್ಮದೇಹದಲ್ಲಿಯ ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ ಎಂದು ಸೀನಿಯರ್‌ ಬಚ್ಚನ್‌ ಹೇಳಿದ್ದರು.

ಬಚ್ಚನ್‌ ಅವರ ಈ ಅಮಾವಾಸ್ಯೆ ಥಿಯರಿಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಲೇವಡಿ ಮತ್ತು ಟ್ರೋಲ್‌ಗೆ ಒಳಗಾಗುತ್ತಿದೆ.

‘ಕೋವಿಡ್‌–19‘ ದೃಢವಾದ ನಂತರ ಬಚ್ಚನ್‌ ಸರ್‌ ಏಕೆ ನಾನಾವತಿ ಆಸ್ಪತ್ರೆ ಸೇರಿದರು. ಶಂಖ, ಜಾಗಟೆ, ಘಂಟೆ ಏನಾದವು? ನಿಮ್ಮ ಪ್ರಖ್ಯಾತ ಅಮಾವಾಸ್ಯೆ ಥಿಯರಿ ಕೆಲಸ ಮಾಡಲಿಲ್ಲವೇ? ಕೋವಿಡ್‌–19 ವೈರಸ್‌ಗಳು ನಾಶವಾಗಲಿಲ್ಲವೇ? ಎಂದು ಸ್ವೀಡನ್‌ನ ಉಪ್ಸಲಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತುಭಾರತೀಯ ಸಂಜಾತ ಅಶೋಕ್‌ ಸ್ವೇನ್ ಟ್ವೀಟ್‌ ಮಾಡಿದ್ದಾರೆ. ಈಟ್ವೀಟ್‌ ಅನ್ನು ಸಾವಿರಾರು ಜನರು ರೀ ಟ್ವೀಟ್ ಮಾಡಿದ್ದಾರೆ. ಆರು ಸಾವಿರ ಜನರು ಕಮೆಂಟ್‌ ಮಾಡಿದ್ದಾರೆ.

‘ಅದು ಅವರ ವೈಯಕ್ತಿಕ ನಂಬಿಕೆ. ಅವರವರ ನಂಬಿಕೆಗಳನ್ನು ಅವರಿಗೆ ಬಿಟ್ಟು ಬಿಡೋಣ. ಇದು ಕಾಲೆಳೆಯುವ ಕಾಲವಲ್ಲ. ಅವರೊಬ್ಬ ಹಿರಿಯ ನಟ. ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸೋಣ’ ಎಂದು ಒಬ್ಬರು ಮನವಿ ಮಾಡಿದ್ದಾರೆ.

‘ಅವರವರ ಬುಡಕ್ಕೆ ಬರುವವರೆಗೂ ಈ ಥಿಯರಿಗಳು ಬಹಳ ಚೆಂದ. ಬೇರೆಯವರಿಗಾದರೆ ಚಪ್ಪಾಳೆ, ಶಂಖ, ಜಾಗಟೆ. ಅವರಿಗೆ ಕೊರೊನಾ ತಗುಲಿದರೆ ನಾನಾವತಿ ಆಸ್ಪತ್ರೆಯೇ’ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ಅಮಿತಾಭ್‌ ತಮ್ಮ ಕುಟುಂಬ ಸದಸ್ಯರೊಂದಿಗೆ ಮನೆಯ ಮಾಳಿಗೆಯಲ್ಲಿ ನಿಂತು ಚಪ್ಪಾಳೆ ತಟ್ಟುತ್ತಿರುವ, ಘಂಟೆ ಬಾರಿಸುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT