ಶುಕ್ರವಾರ, ಆಗಸ್ಟ್ 12, 2022
23 °C

ಶಾಲಾ ದಿನಗಳಲ್ಲಿ ಕಿರುಕುಳ ಅನುಭವಿಸಿದ್ದೆ: ಬಾಲಿವುಡ್ ನಟ ಶಾಹೀದ್ ಕಪೂರ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬಾಲಿವುಡ್ ನಟ ಶಾಹೀದ್‌ ಕಪೂರ್‌ ಅವರು, ತಾವು ಶಾಲಾ ದಿನಗಳಲ್ಲಿ ಕಿರುಕುಳ ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ. ಶಾಹೀದ್‌ ಅಭಿನಯದ 'ಜೆರ್ಸಿ' ಸಿನಿಮಾ ಕಳೆದ ವಾರ ದೇಶದಾದ್ಯಂತ ಬಿಡುಗಡೆಯಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಈ ನಡುವೆ 'ಫುಡ್‌ ಅಂಡ್‌ ಟ್ರಾವೆಲ್‌' ಯುಟ್ಯೂಬ್‌ ಚಾನೆಲ್‌ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಕಪೂರ್‌, ಶಾಲಾ ದಿನಗಳಲ್ಲಿ ಕಿರುಕುಳ ಅನುಭವಿಸಿದ್ದರ ಬಗ್ಗೆ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. 'ನಾನು ಮುಂಬೈನಲ್ಲಿ ಕಲಿಯುತ್ತಿದ್ದ ಶಾಲೆಯನ್ನು ದ್ವೇಷಿಸುತ್ತಿದ್ದೆ. ಏಕೆಂದರೆ ಅಲ್ಲಿ ನಾನು ಕಿರುಕುಳ ಅನುಭವಿಸಿದ್ದೆ. ಅಲ್ಲಿ ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿತ್ತು. ಶಿಕ್ಷಕರೂ ಕೂಡ ನನ್ನೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿರಲಿಲ್ಲ. ಕ್ಷಮಿಸಿ ಆದರೆ, ಇದು ನಿಜ. ದೆಹಲಿಯಲ್ಲಿ ಕಲಿಯುತ್ತಿದ್ದ ಶಾಲೆಯನ್ನು ತುಂಬಾ ಇಷ್ಟಪಡುತ್ತಿದ್ದೆ. ಅಲ್ಲಿನ ಕಿಂಡರ್‌ಗಾರ್ಟನ್‌ನಲ್ಲಿ ನನಗೆ ಸಾಕಷ್ಟು ಸ್ನೇಹಿತರಿದ್ದರು' ಎಂದು 41 ವರ್ಷದ ನಟ ಹೇಳಿದ್ದಾರೆ.

ಮುಂದುವರಿದು, 'ದೆಹಲಿಯಲ್ಲಿ ಸಾಕಷ್ಟು ಅದ್ಭುತವಾದ ನೆನಪುಗಳನ್ನು ಹೊಂದಿದ್ದೇನೆ. ಮುಂಬೈ ಶಾಲೆಯಲ್ಲಿ ಅಂತಹ ಆಹ್ಲಾದಕರ ನೆನಪುಗಳಿಲ್ಲ. ಮುಂಬೈನಲ್ಲಿನ ನನ್ನ ಕಾಲೇಜೂ ತುಂಬಾ ಚೆನ್ನಾಗಿತ್ತು. ಮಿಥಿಬಾಯ್‌ ಕಾಲೇಜಿನಲ್ಲಿ ಕಲಿತೆ. ಅಲ್ಲಿ ತುಂಬಾ ಸಂಭ್ರಮಿಸಿದ್ದೇನೆ. ಆದರೆ, ಶಾಲಾ ದಿನಗಳು ನನ್ನ ಪಾಲಿಗೆ ಚೆನ್ನಾಗಿರಲಿಲ್ಲ' ಎಂದಿದ್ದಾರೆ.

ಉಡ್ತಾ ಪಂಜಾಬ್‌, ಹೈದರ್‌, ಜಬ್‌ ವೆ ಮೆತ್‌, ಪದ್ಮಾವತ್‌, ಇಷ್ಕ್‌ ವಿಷ್ಕ್‌ ಮತ್ತು ಕಬೀರ್‌ ಸಿಂಗ್‌ ಸಿನಿಮಾಗಳಲ್ಲಿನ ಶಾಹೀದ್‌ ಅಭಿನಯಕ್ಕೆ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇದೀಗ ತೆಲುಗಿನ 'ಜೆರ್ಸಿ' ಸಿನಿಮಾದ ಹಿಂದಿ ರಿಮೇಕ್‌ನಲ್ಲಿ ನಟಿಸಿದ್ದಾರೆ. ಈ ಚಿತ್ರ ಅದೇ ಹೆಸರಿನಲ್ಲಿ (ಜೆರ್ಸಿ) ಏಪ್ರಿಲ್‌ 22ರಂದು ಬಿಡುಗಡೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು