ಮಂಗಳವಾರ, ಏಪ್ರಿಲ್ 20, 2021
27 °C

‘ಬೌ ಬೌ’ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುಟ್ಟ ಬಾಲಕ ಮತ್ತು ನಾಯಿಯ ಒಡನಾಟ– ಬಾಂಧವ್ಯದ ಕತೆಯನ್ನು ಹೇಳಲಿದೆ ‘ಬೌ ಬೌ‘ ಸಿನಿಮಾ. ಈ ಸಿನಿಮಾ ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲೂ ಸುದ್ದಿ ಮಾಡಿದ್ದು, ಈವರೆಗೆ 21 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಎರಡು ದಶಕಗಳ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಎಸ್.ಪ್ರದೀಪ್‍ ಕಿಲಿಕರ್ ಈ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳುವ ಮೂಲಕ, ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ.

ಮನುಷ್ಯರಲ್ಲಿ ಅಹಂಕಾರ, ಕೋಪ, ದೌರ್ಬಲ್ಯ ಎಲ್ಲವೂ ಸಹಜ. ಆದರೆ, ಏನೂ ಅರಿಯದ ಮುಗ್ದ ಮಕ್ಕಳು ಮತ್ತು ಪ್ರಾಣಿಗಳ ಹತ್ತಿರ ಇಂತಹ ಗುಣಗಳು ಸುಳಿಯುವುದಿಲ್ಲ. ಹಿರಿಯರು ಚಿಣ್ಣರಿಂದ ಕಲಿಯಬೇಕಾದದ್ದು ಸಾಕಷ್ಟಿದೆ. ಅನಾಥ ಬಾಲಕನೊಬ್ಬ ತಾತ, ಅಜ್ಜಿಯ ಆಸರೆಯಲ್ಲಿ ಬೆಳೆಯುತ್ತಾನೆ. ಅವನಿಗೆ ನಾಯಿಯೊಂದು ಸಾಂಗತ್ಯ ಒದಗಿಸುತ್ತದೆ. ಇವರಿಬ್ಬರ ಜುಗಲ್‍ಬಂದಿ ಯಾವ ರೀತಿಯಲ್ಲಿರುತ್ತದೆ ಎನ್ನುವುದನ್ನು ಅರಿಯಬೇಕಾದರೆ ನೀವು ಬೌ ಬೌ ನೋಡಲೇಬೇಕು ಎನ್ನುತ್ತಾರೆ ನಿರ್ದೇಶಕ ಪ್ರದೀಪ್‌.

ಮನಸ್ಸಿಗೆ ನಾಟುವಂತಹ, ತೀವ್ರವಾಗಿ ಕಾಡುವ ದೃಶ್ಯಗಳು ಈ ಸಿನಿಮದಲ್ಲಿವೆ. ಕೊನೆಯ ಮೂವತ್ತು ನಿಮಿಷಗಳ ಸನ್ನಿವೇಶಗಳು ಪ್ರೇಕ್ಷಕನನ್ನು ಚಿತ್ರಮಂದಿರಲ್ಲಿ  ನಿಶ್ಯಬ್ದವಾಗಿ ಕುಳಿತುಕೊಳ್ಳುವಂತೆ ಮಾಡಲಿವೆ. ಈ ಸಿನಿಮಾ ನೋಡಿದ ಪ್ರೇಕ್ಷಕ ಮನೆಯಲ್ಲಿ ನಾಯಿ ಇಲ್ಲದಿದ್ದರೆ ಖಂಡಿತಾ ಮನೆಗೊಂದು ನಾಯಿಮರಿ ಸಾಕಲು ಕೊಂಡೊಯ್ಯುವುದು ಖಚಿತ ಎನ್ನುವುದು ನಿರ್ದೇಶಕರ ವಿಶ್ವಾಸದ ನುಡಿ.

ಈ ಸಿನಿಮಾದ ಹಾಡುಗಳ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಿದ ನಿರ್ಮಾಪಕ ಕೆ.ನಟರಾಜನ್, ‘ ಈ ಸಿನಿಮಾವನ್ನು ಡಬ್‌ ಮಾಡದೆ, ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳ ಮತ್ತು ಬೆಂಗಾಲಿ ಭಾಷೆಗಳನ್ನು ಸಿನಿಮಾ ಸಿದ್ಧಪಡಿಸಲಾಗಿದೆ’ ಎನ್ನುವ ಮಾಹಿತಿ ನೀಡಿದರು.

ಬೆಂಗಳೂರಿನ ಮಾಸ್ಟರ್‌ ಅಹಾನ್‌ ಜತೆಗೆ ಪುಟಾಣಿಗಳಾದ ಶಿವ, ತೇಜಸ್ವಿ ಅಭಿನಯಿಸಿದ್ದಾರೆ. ಅಲ್ಲದೆ, ಮೂರು ನಾಯಿಗಳು ಈ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿವೆ.

ಛಾಯಾಗ್ರಹಣ ಕೆ.ಅರುಣ್‍ ಪ್ರಸತ್, ಸಂಗೀತ ಮಾರ್ಕ್ ಡಿ.ಮ್ಯೂಸ್- ಡೆನಿಸ್‍ವಾಲಬನ್, ಸಂಕಲನ ಇ.ಗೋಪಾಲ್- ಎಸ್.ಆನಂದ್, ಕಲೆ ಎ.ಪಲನಿವೆಲ್ ಅವರದ್ದು.

ಲಂಡನ್ ಟಾಕೀಸ್ ಬ್ಯಾನರ್‌ನಡಿ ನಿರ್ಮಿಸಿರುವ 1.53 ಗಂಟೆ ಅವಧಿಯ ಈ ಸಿನಿಮಾವನ್ನು  ನಂದಿನಿ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಯ ರೂವಾರಿ ಸುಧೀರ್ ಆಗಸ್ಟ್‌ನಲ್ಲಿ ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು