ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಅನಂತನಾಗ್‌ಗೆ ಪದ್ಮ ಪ್ರಶಸ್ತಿಗಾಗಿ ಅಭಿಯಾನ

Last Updated 13 ಜುಲೈ 2021, 6:11 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗೆ ಸೂಕ್ತ ವ್ಯಕ್ತಿಗಳನ್ನು ಸೆ.15ರೊಳಗಾಗಿ ನಾಮನಿರ್ದೇಶನ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರನ್ನು ಕೇಳಿಕೊಂಡಿರುವ ಬೆನ್ನಲ್ಲೇ, ನಟ ಅನಂತ್‌ನಾಗ್‌ ಅವರಿಗೆ ಪದ್ಮಪ್ರಶಸ್ತಿ ನೀಡಬೇಕು ಎನ್ನುವ ಅಭಿಯಾನ ಟ್ವಿಟರ್‌ನಲ್ಲಿ ಆರಂಭವಾಗಿದೆ.

ಈ ಕುರಿತು ಮೊದಲು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ನಟ, ನಿರ್ದೇಶಕ ರಿಷಬ್‌ ಶೆಟ್ಟಿ, ‘ದೇಶದ ಅತ್ಯುನ್ನತ ಗೌರವಗಳಾದ ಪದ್ಮ ತ್ರಯ ಪ್ರಶಸ್ತಿಗಳಿಗೆ, 2022ರ ಸಾಲಿನಲ್ಲಿ ಯಾರು ಭಾಜನರಾಗಬೇಕೆಂಬ ಆಯ್ಕೆಯನ್ನು ಪ್ರಧಾನಿಗಳು ಜನತೆಗೇ ನೀಡಿರುವುದು ಪ್ರಶಂಸನೀಯ ನಡೆ. ಸರ್ಕಾರದ ಬದಲಾಗಿ ದೇಶದ ಪ್ರಜೆಗಳೇ ಪ್ರಶಸ್ತಿಗೆ ತೀರ್ಪುಗಾರರಾಗಬೇಕು ಎಂಬುವುದು ಇದರ ಹಿಂದಿನ ಉದ್ದೇಶ. ಅರ್ಹ ಪ್ರತಿಭೆಗಳ ಕೈ ಸೇರಿದಾಗಲೇ ಪ್ರಶಸ್ತಿಗಳಿಗೆ ಶೋಭೆ. ನಮ್ಮಲ್ಲಿ ಅಂತಹ ಹಲವಾರು ಬೃಹತ್‌ ಪ್ರತಿಭೆಗಳಿಗೆ ಕೊರತೆಯಿಲ್ಲ. ಈ ನಾಡು ಕಂಡ ಅತ್ಯಂತ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾದ ಹಿರಿಯ ನಟ, ಅನಂತನಾಗ್‌ ಕೂಡಾ ಅಂತಹ ಮಹಾನ್‌ ಪ್ರತಿಭೆಗಳಲ್ಲಿ ಒಬ್ಬರು. ಚಿತ್ರನಟರಾಗಿ, ಕನ್ನಡ ಭಾಷೆಗೆ, ನಾಡಿಗೆ, ಚಿತ್ರರಂಗಕ್ಕೆ ಇವರು ನೀಡಿರುವ, ನೀಡುತ್ತಿರುವ ಕೊಡುಗೆ ಚಿರಸ್ಮರಣೀಯ. ಯಾವುದೇ ಪಾತ್ರವಾಗಲಿ ಲೀಲಾಜಾಲವಾಗಿ ಅಭಿನಯಿಸಿ, ಚಿತ್ರರಸಿಕರ ಮನಗೆಲ್ಲುತ್ತಾ ಬಂದಿರುವ ಈ ‘ಅಭಿನಯ ಬ್ರಹ್ಮ’ನಿಗೆ ಪದ್ಮಪ್ರಶಸ್ತಿಯೊಂದು ಸಲ್ಲಬೇಕಾದದ್ದು ನ್ಯಾಯವೇ ಸರಿ.’

‘ಅದಕ್ಕಾಗಿ ನಾವೆಲ್ಲರೂ ಒಂದುಗೂಡಿ, ನಮ್ಮ ನಾಡಿನ ಪರವಾಗಿ ಅನಂತನಾಗ್‌ ಅವರನ್ನು #PeoplesPadma ಗೆ ನಾಮನಿರ್ದೇಶಿಸೋಣ. ಇದಕ್ಕೆ ಸೆ.15ರವರೆಗೂ ಸಮಯಾವಕಾಶವಿದ್ದು, ಅಲ್ಲಿಯವರೆಗೂ #AnanthnagForPadma ಎಂಬ ಹ್ಯಾಷ್‌ಟ್ಯಾಗ್‌ ಬಳಸುವ ಮೂಲಕ ಎಲ್ಲರೂ ಇದಕ್ಕೆ ಬೆಂಬಲ ಸೂಚಿಸೋಣ’ ಎಂದು ರಿಷಬ್‌ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈ ಅಭಿಯಾನಕ್ಕೆ ಸಾವಿರಾರು ಜನರು ಬೆಂಬಲ ಸೂಚಿಸಿ ಟ್ವೀಟ್‌ ಮಾಡಿದ್ದಾರೆ. ಸಂಸದ ಪ್ರತಾಪ್‌ ಸಿಂಹ ಅವರೂ ಈ ಕುರಿತು ಟ್ವೀಟ್‌ ಮಾಡಿದ್ದು, ‘ಅನಂತನಾಗ್ ಅವರಿಗೆ ಕೊಡುವುದು ಪದ್ಮ ಪುರಸ್ಕಾರಕ್ಕೇ ಭೂಷಣ’ ಎಂದು ಉಲ್ಲೇಖಿಸಿದ್ದಾರೆ. ‘ಅಪ್ರತಿಮ ನಟನಿಗೆ ಅತ್ಯುನ್ನತ ಪ್ರಶಸ್ತಿಯೊಂದು ಗುಡಿಯ ಮೇಲೆ ಕಲಶವಿಟ್ಟಂತೆ. ಹಿರಿಯ ನಟ ಅನಂತನಾಗ್ ಅವರಿಗೆ ಪದ್ಮಪ್ರಶಸ್ತಿ ನೀಡಬೇಕೆಂಬುದು ನನ್ನ ಹಾಗೂ ಕನ್ನಡಿಗರ ಆಶಯ. ಈ ಪ್ರಯತ್ನಕ್ಕೆ ನಾವೆಲ್ಲರೂ ಒಂದಾಗಿ ಬೆಂಬಲ ಸೂಚಿಸೋಣ’ ಎಂದು ನಟ ರಕ್ಷಿತ್‌ ಶೆಟ್ಟಿ ಅವರೂ ಟ್ವೀಟ್‌ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಈ ಅಭಿಯಾನ ಟ್ರೆಂಡಿಂಗ್‌ನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT