ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಮಧರ್ಮ ಚಿಕ್ಕಣ್ಣ!

Last Updated 4 ಫೆಬ್ರುವರಿ 2020, 12:46 IST
ಅಕ್ಷರ ಗಾತ್ರ

ಹಾಸ್ಯನಟ ಚಿಕ್ಕಣ್ಣ ಅಭಿನಯದ ಹೊಸ ಚಿತ್ರ ‘ಬಿಲ್‌ಗೇಟ್ಸ್‌’. ಇದು ಶುಕ್ರವಾರ (ಫೆ. 7) ತೆರೆಗೆ ಬರುತ್ತಿದೆ. ಹಾಗಂತ, ‘ಬಿಲ್‌ಗೇಟ್ಸ್‌’ ಶೀರ್ಷಿಕೆಗೂ ಅಮೆರಿಕದ ಮೈಕ್ರೊಸಾಫ್ಟ್‌ ಕಂಪನಿಯ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರಿಗೂ ಸಂಬಂಧ ಇಲ್ಲ.

ಇದು ಪಕ್ಕಾ ಕನ್ನಡಿಗರಾದ ಬಿಲ್ ಮತ್ತು ಗೇಟ್ಸ್ ಎನ್ನುವ ಇಬ್ಬರು ಯುವಕರ ಕಥೆ. ಚಿಕ್ಕಣ್ಣ ಅವರು ಈ ಚಿತ್ರದಲ್ಲಿ ಯಮನ ಪಾತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇದೇ ಚಿತ್ರದ ಒಂದು ಪೋಸ್ಟರ್‌ನಲ್ಲಿ ಸೂಟು–ಬೂಟು ಧರಿಸಿದ ಉದ್ಯಮಿಯಂತೆಯೂ ಕಾಣಿಸಿಕೊಂಡಿದ್ದಾರೆ. ‘ಚಿಕ್ಕಣ್ಣ ಅವರನ್ನು ಹಾಸ್ಯಮಯ ಪಾತ್ರದಲ್ಲಿ ಮಾತ್ರವಲ್ಲದೆ, ಬೇರೊಂದು ಬಗೆಯಲ್ಲೂ ಕಾಣಬಹುದು’ ಎಂದು ಚಿತ್ರತಂಡ ಹೇಳಿದೆ.

ಶಿಶಿರ್ ಶಾಸ್ತ್ರಿ ಅವರು ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಅಕ್ಷರಾ ರೆಡ್ಡಿ ಮತ್ತು ರಶ್ಮಿತಾ ರೋಜ ಅವರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ‘ಈ ಚಿತ್ರದಲ್ಲಿ ಎಲ್ಲವನ್ನೂ ಜನರ ನಾಡಿಮಿಡಿತ ಅರಿತೇ ಮಾಡಲಾಗಿದೆ. ಚಿತ್ರದಲ್ಲಿ ಶಾಲಾ ಮೇಷ್ಟ್ರೊಬ್ಬರು ತಮ್ಮ ಇಬ್ಬರು ವಿದ್ಯಾರ್ಥಿಗಳಿಗೆ ಒಂದು ಸ್ಫೂರ್ತಿದಾಯಕ ಕಥೆ ಹೇಳುತ್ತಾರೆ. ಅವರಿಬ್ಬರೂ ಬಿಲ್‌ ಗೇಟ್ಸ್‌ ರೀತಿ ಆಗಬೇಕು ಎಂದು ಆಶಿಸುತ್ತಾರೆ. ಇದರಿಂದ ಪ್ರೇರೇಪಿತರಾಗಿ ಆ ಇಬ್ಬರು ಪೇಟೆಗೆ ಬರುತ್ತಾರೆ’ ಎಂದು ಕಥೆಯ ಒಂದು ಎಳೆಯನ್ನು ನಿರ್ದೇಶಕ ಶ್ರೀನಿವಾಸ ಸಿ. ಮಂಡ್ಯ ಅವರು ಬಿಟ್ಟುಕೊಡುತ್ತಾರೆ.

ಇಬ್ಬರೂ ವಿದ್ಯಾರ್ಥಿಗಳು ಪೇಟೆಗೆ ಬಂದ ನಂತರ ಚಿತ್ರದ ಪಯಣವು ಸಸ್ಪೆನ್ಸ್, ಥ್ರಿಲ್ಲರ್ ಹಳಿಗೆ ಹೊರಳಿಕೊಳ್ಳುತ್ತದೆ. ಈ ಚಿತ್ರದಲ್ಲಿ ಯಮಲೋಕವನ್ನು ಕಾಲ್ಪನಿಕವಾಗಿ ಸೃಷ್ಟಿ ಮಾಡಲಾಗಿದೆ. ಚಿತ್ರದ ಪ್ರಮುಖ ಸನ್ನಿವೇಶಗಳಿಗಾಗಿ ಯಮನ ಅರಮನೆಯ ಸೆಟ್ ಹಾಕಲಾಗಿದೆ. ‘ಯಮಲೋಕವನ್ನು ಗ್ರಾಫಿಕ್ಸ್ ಮೂಲಕ ಅದ್ದೂರಿಯಾಗಿ ತೋರಿಸಿರುವುದು ಕನ್ನಡ ಚಿತ್ರಲೋಕದಲ್ಲಿ ಇದೇ ಮೊದಲು’ ಎಂದು ಚಿತ್ರತಂಡ ಹೇಳಿದೆ.

ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ, ಕೊಳ್ಳೆಗಾಲ, ಬೆಂಗಳೂರು ಕಡೆ ಚಿತ್ರೀಕರಣ ನಡೆದಿದೆ. ನೊಬಿನ್ ಪಾಲ್ ಸಂಗೀತ, ರಾಕೇಶ್ ಸಿ. ತಿಲಕ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಒಟ್ಟು ಹದಿನೈದು ಜನ ಈ ಚಿತ್ರಕ್ಕೆ ಬಂಡವಾಳ ಹೂಡಿಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT