ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪುಗಳ ಉಯ್ಯಾಲೆಯಲ್ಲಿ 80ರ ದಶಕದ ತಾರೆಗಳು

Last Updated 2 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ನೆನಪುಗಳನ್ನು ಹಸಿರಾಗಿಸುವಲ್ಲಿ ಚಲನಚಿತ್ರ ಮಾಧ್ಯಮದ ಪ್ರಭಾವ ಗಾಢವಾದುದು. ಒಂದು ಕಾಲದಲ್ಲಿ ನೋಡಿದ ಯಶಸ್ವಿ ಚಿತ್ರಗಳು, ಕೇಳಿದ ಜನಪ್ರಿಯ ಗೀತೆಗಳು, ಚಿತ್ರಸಂಗೀತ ಈಗಲೂ ಎಲ್ಲಿಯೋ ಅಚಾನಕ್ಕಾಗಿ ಕಿವಿಗೆ ಬಿದ್ದಾಗ, ಅದರ ಜೊತೆಗೆ ತಳಕು ಹಾಕಿಕೊಂಡಿರುವ ನಮ್ಮ ನೆನಪುಗಳೂ ಜಾಗೃತವಾಗುತ್ತವೆ. ಅದು, ಅವುಗಳ ತಾಕತ್ತು.

ಈಗಲೂ ಯೂಟ್ಯೂಬ್ ನಂತಹ ತಾಣಗಳನ್ನು ಜಾಲಾಡಿದರೆ 70ರ ದಶಕದ ಗೀತೆಗಳು, 80ರ ದಶಕದ ಗೀತೆಗಳು ಅಥವಾ 90ರ ದಶಕದ ಗೀತೆಗಳು ಎಂಬ ಗುಚ್ಛಗಳೇ ಕಂಡುಬರಲಿವೆ. ಅವು ಮಧುರ ಎಂಬುದರ ಜೊತೆಗೆ ಆ ಕಾಲಘಟ್ಟದ ನಮ್ಮೊಳಗಿನ ನೆನಪುಗಳು ಜಾಗೃತ ಆಗುವುದೂ ಇದಕ್ಕೆ ಕಾರಣ.

ಹಾಗೆ, ನೋಡಿದರೆ ಎಲ್ಲ ಹಳೆಯ ಅನುಭೂತಿಗಳು ಆಪ್ತವೇ. ಹಳೆಯ ಗೆಳೆಯರು, ಆಪ್ತರು, ಭೇಟಿಯಾದಾಗಲೂ ಇಂಥದೇ ಆಪ್ತಭಾವ ಆವರಿಸಲಿದೆ. ಇದಕ್ಕೆ ಸಾಮಾನ್ಯ, ಸೆಲೆಬ್ರಿಟಿ ಎಂಬ ವಿಂಗಡಣೆಯಿಲ್ಲ, ಆದರೆ, ಒಂದು ಕಾಲದ ಎಲ್ಲ ಸೆಲೆಬ್ರಿಟಿಗಳು ಅಕಸ್ಮಾತ್ ಈಗ ಆ ಕಾಲಘಟ್ಟದ ಪೋಷಾಕುಗಳಲ್ಲಿಯೇ ಕಾಣಿಸಿಕೊಂಡರೆ? ಖಂಡಿತವಾಗಿ ಆಗ, ಅದು ಸಾಮಾನ್ಯರಿಗೂ ವಿಶೇಷ ಎನಿಸಿಬಿಡುತ್ತದೆ.

ಇಂಥದೇ ಕಾರಣಕ್ಕೆ ಹೈದರಾಬಾದಿನ ಜ್ಯೂಬಿಲಿ ಹಿಲ್ ನಲ್ಲಿ ಈಚೆಗೆ ನಡೆದ ಮುಖಾಮುಖಿ ಗಮನಸೆಳೆಯಿತು.
ಅದು, 80ರ ದಶಕದ ಸಿನಿತಾರೆಯರ ಮುಖಾಮುಖಿ ಅಥವಾ ಸಮ್ಮಿಲನ. ಕನ್ನಡದ ಜೊತೆಗೆ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಚಿತ್ರತಾರೆಯಲ್ಲಿ ಒಂದುಗೂಡಿದ್ದರು. ಆಗಾಗ್ಗೆ ಇವರು ಒಂದುಗೂಡುವುದು ಇದ್ದರೂ, ಈ ಭಾರಿಗೆ ಸಂಗಮಕ್ಕೆ ವಿಶೇಷ ಕಾರಣವಿತ್ತು. ಈಗ ಇವರಿಗೆ ಆತಿಥ್ಯ ಒದಗಿಸಿದ್ದು ನಟ ಕಂ ರಾಜಕಾರಣಿ ಚಿರಂಜೀವಿ.

ಅವರು ಜ್ಯೂಬಿಲಿ ಹಿಲ್‌ನಲ್ಲಿ ನಿರ್ಮಿಸಿರುವ ನೂತನ ಮನೆ ಇದಕ್ಕೆ ನೆಪವಾಗಿರುವುದರ ಜೊತೆಗೆ ವೇದಿಕೆಯೂ ಆಯಿತು.

ಎಎನ್.ಆರ್ ಪ್ರಶಸ್ತಿ ಸ್ವೀಕರಿಸಲು ಕಳೆದ ವಾರ ಹೈದರಾಬಾದ್‌ನಲ್ಲಿದ್ದ ಮೋಹಕ ತಾರೆ ರೇಖಾ ಅವರು ಹಾಜರಾಗಿದ್ದರು. ಕನ್ನಡವಷ್ಟೇ ಅಲ್ಲದೆ, ತೆಲುಗು, ತಮಿಳು, ಮಲಯಾಳ ಹಾಗೂ ಹಿಂದಿ ಚಿತ್ರರಂಗದ ನಟ, ನಟಿಯರು ಇದ್ದರು.

ರಜನಿಕಾಂತ್, ಮೋಹನಲಾಲ್, ಕಮಲ್‌ ಹಾಸನ್, ಮುಮ್ಮೂಟಿ, ಜಾಕಿ ಶ್ರಾಫ್, ಶರತ್ ಕುಮಾರ್, ಶಿವಾಜಿ ಪ್ರಭು, ದಗ್ಗುಬಾಟಿ ವೆಂಕಟೇಶ್, ಅಕ್ಕಿನೇನಿ ನಾಗಾರ್ಜುನ, ಭಾಗ್ಯರಾಜ್, ಸುಹಾಸಿನಿ, ರಮ್ಯಕೃಷ್ಣ, ಜಯಪ್ರದಾ, ಅಮಲಾ, ಖುಷ್ ಬೂ, ರಾಧಿಕಾ, ಶೋಭನಾ, ಜಯಸುಧಾ, ಸರಿತಾ, ಸುಮಲತಾ, ಶೋಭನಾ, ನಿರ್ದೇಶಕ ಕೆ. ಭಾಗ್ಯರಾಜ್... ಹೀಗೆ ನಟ,ನಟಿಯರ ಸಂಗಮದ ಸೊಬಗು ಹೆಚ್ಚಿಸಿದ`ಕ್ಲಾಸ್ ಆಫ್ 80’ ನಟರ ಪಟ್ಟಿ ಬೆಳೆಯಲಿದೆ.

ಸುಮಾರು 37 ಮಂದಿ ನಟ, ನಟಿಯರು, ನಿರ್ದೇಶಕರು ಒಟ್ಟಿಗೆ ಸೇರಿದ್ದರು. ಕಪ್ಪು ಬಣ್ಣ ಮತ್ತು ಚಿನ್ನದ ಮೆರುಗು ಒಳಗೊಂಡ ಪೋಷಾಕುಈ ಸಮ್ಮಿಲನದ ಸೊಬಗನ್ನೂ ಹೆಚ್ಚಿಸಿತ್ತು. ಈ ಭೇಟಿಯ ಚಿತ್ರಗಳು ಬಳಿಕ ಸಾಮಾಜಿಕ ಜಾಲತಾಣದಲ್ಲಿಯೂ ಗಮನಸೆಳೆದಿದ್ದು, ಅವರ ಅಭಿಮಾನಿ ಬಳಗದ ಸಂಭ್ರಮಕ್ಕೂ ಕಾರಣವಾಯಿತು.

ಇಂಥ ಸಮ್ಮಿಲನದ ಕಸರತ್ತು ತಿಂಗಳ ಹಿಂದೆ ಆರಂಭವಾಗಿದ್ದು, ವಾಟ್ಸ್ ಆ್ಯಪ್‌ ಗ್ರೂಪ್ ರಚನೆ ಆಗಿತ್ತು. ಚರ್ಚೆಯ ನಡುವೆ ವಸ್ತ್ರಸಂಹಿತೆ ಹೇಗಿರಬೇಕು ಎಂದೂ ಚರ್ಚಿಸಿ ತೀರ್ಮಾನವಾಯಿತು. ಸಮ್ಮಿಲನದ ನಂತರನಟ, ನಟಿಯರು #friends #reunion #classof80 ಹ್ಯಾಶ್ ಟ್ಯಾಗ್ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಹಂಚಿಕೊಂಡರು.

ರಾಧಿಕಾ ಹೀಗೆ ಹಂಚಿಕೊಂಡ ಚಿತ್ರಗಳ ಜೊತೆಗೆ, `ಹಲವು ವರ್ಷಗಳ ಸ್ನೇಹ ಬಾಂಧವ್ಯಕ್ಕೆ ಒಂದು ಉದಾಹರಣೆ. ಇದಕ್ಕೆ ಕಾರಣವಾದ ಚಿರಂಜೀವಿಗೆ ಥ್ಯಾಂಕ್ಸ್ ಹೇಳಲೇಬೇಕು. ಇಂಥದೊಂದು ಬಾಂಧವ್ಯ ಹೊಂದಿರುವ ನಾವೇ ಅದೃಷ್ಟವಂತರು’ ಎಂದು ಸಂದೇಶವನ್ನು ಹಾಕಿದರು.

ಬಹುತೇಕರು ಕಪ್ಪು ಬಣ್ಣ ಮಿಶ್ರಿತ, ಚಿನ್ನದ ಮೆರುಗು ಉಳ್ಳ ಉಡುಪುಗಳನ್ನೇ ಧರಿಸಿದ್ದು ಗಮನಸೆಳೆಯಿತು. ಹೀಗೆ, ಚಿರಂಜೀವಿಮನೆಯ ಗೃಹಪ್ರವೇಶದ ನೆಪದಲ್ಲೇ ಕ್ಲಾಸ್ ಆಫ್ 80 ಗಮನಸೆಳೆಯಿತು.80ರ ದಶಕದ ನೆನಪುಗಳ ಮೆರವಣಿಗೆ ಆಯಿತು.

ಬಹುಶಃ ಚಿತ್ರಸಂಪುಟವನ್ನುಕಣ್ತುಂಬಿಕೊಳ್ಳುವ ಅಭಿಮಾನಿಗಳಿಗೆ ಇದೇ ಭಾವ ಕಾಡಬಹುದು. ಆ ನಟ, ನಟಿಯರು ಚಿತ್ರಗಳು, ಪಾತ್ರವಹಿಸಿದ ಹಾಡುಗಳ ಜೊತೆಗೆ ಗತಿಸಿದ ನೆನಪೂ ಕಾಡಬಹುದು. ಏಕೆಂದರೆ, ಮಾತುಗಳು ಮರೆತುಹೋದರೂ, ನೆನಪು ಮಾಸುವುದಿಲ್ಲ.

ಜನಪ್ರಿಯವಾದ ಚಿತ್ರಗೀತೆಯೊಂದರ ಸಾಲು ‘ಭಾತೆ ಭೂಲ್ ಜಾತೆ ಹೈ, ಯಾದೇ ರೆಹ್‌ ಜಾತಾ ಹೈ’ ಇದೇ ಭಾವವನ್ನು ಹೊಮ್ಮಿಸುತ್ತದೆ. `ಸವಿ ನೆನಪುಗಳು ಬೇಕು, ಸವಿಯಲಿ ಬದುಕು…’ಎಂಬ ಕನ್ನಡದ ಜನಪ್ರಿಯ ಗೀತೆಯೊಂದರ ಸಾಲನ್ನೂ ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT