ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಸ್ಟಲ್‌ವುಡ್‌ನ‌ತ್ತ ಬೆರಗುಗಣ್ಣಿನ ನೋಟ

6 ರಾಷ್ಟ್ರೀಯ ಪ್ರಶಸ್ತಿ, 15ಕ್ಕೂ ಅಧಿಕ ರಾಜ್ಯ ಪ್ರಶಸ್ತಿಯ ಗರಿ
Last Updated 26 ಡಿಸೆಂಬರ್ 2021, 4:57 IST
ಅಕ್ಷರ ಗಾತ್ರ

ಮಂಗಳೂರು: ತುಳು ಸಿನಿಮಾದ ಮಾರುಕಟ್ಟೆ ತುಂಬಾ ಚಿಕ್ಕದು. ಆದರೆ, ಇಲ್ಲಿ ಪ್ರತಿಭೆಗಳಿಗೆ ಬರವಿಲ್ಲ. ಅದರ ಫಲವಾಗಿ ಪ್ರಯೋಗಶೀಲ, ಕಲಾತ್ಮಕ, ಕಮರ್ಷಿಯಲ್‌ ಚಿತ್ರಗಳು ಹೊರ ಬಂದಿವೆ. ಹೀಗಾಗಿ, ರಾಜ್ಯ, ರಾಷ್ಟ್ರ ಪ್ರಶಸ್ತಿ ಗಳಿಸುವುದರಲ್ಲಿ ತುಳು ಚಿತ್ರರಂಗ ಹಿಂದೆ ಬಿದ್ದಿಲ್ಲ. ಐದು ದಶಕದಲ್ಲಿ 6 ಸಿನಿಮಾಗಳು ರಾಷ್ಟ್ರೀಯ, 15ಕ್ಕೂ ಅಧಿಕ ಸಿನಿಮಾಗಳು ರಾಜ್ಯ ಮಟ್ಟದ ಪುರಸ್ಕಾರ ಪಡೆಯುವ ಮೂಲಕ ಇತರ ಚಿತ್ರರಂಗದವರು ಕೋಸ್ಟಲ್‌ವುಡ್‌ನ‌ತ್ತ ಬೆರಗುಗಣ್ಣಿನಿಂದ ನೋಡುವಂತಾಗಿದೆ.

ರಿಚರ್ಡ್‌ ಕ್ಯಾಸ್ಟಲಿನೊ ನಿರ್ದೇಶನದ ‘ಬಂಗಾರ್ ಪಟ್ಲೇರ್’ (1993), ಆನಂದ ಪಿ. ರಾಜು ನಿರ್ದೇಶನದ ‘ಕೋಟಿ ಚೆನ್ನಯ’ (ಕಲರ್‌– 2006), ಶಿವಧ್ವಜ್‌ ನಿರ್ದೇಶನದ ‘ಗಗ್ಗರ’ (2008), ಚೇತನ್‌ ಮುಂಡಾಡಿ ನಿರ್ದೇಶನದ ‘ಮದಿಪು’ (2017), ಅಭಯಸಿಂಹ ನಿರ್ದೇಶನದ ‘ಪಡ್ಡಾಯಿ’ (2018), ಆರ್‌.ಪ್ರೀತಂ ಶೆಟ್ಟಿ ನಿರ್ದೇಶನದ ‘ಪಿಂಗಾರ’ (2021) ಸಿನಿಮಾಗಳಿಗೆ ರಾಷ್ಟ್ರೀಯ ಪ್ರಶಸ್ತಿಯ ಗೌರವ ಸಿಕ್ಕಿದೆ. ಐವತ್ತು ವರ್ಷಕ್ಕೆ ಆರು ಪ್ರಶಸ್ತಿ ಕಡಿಮೆ ಎನಿಸಿದರೂ ಈ ಉದ್ದಿಮೆಯ ಭೌಗೋಳಿಕ ವ್ಯಾಪ್ತಿಯನ್ನು ಗಮನಿಸಿದರೆ ತುಳುವಿನ ಸಾಧನೆ ಸಣ್ಣದೇನಲ್ಲ. ಕೋಸ್ಟಲ್‌ವುಡ್‌ ಹಲವು ದಾಖಲೆಗಳ ಜತೆಗೆ ಇತರ ಚಿತ್ರರಂಗದ ಕೆಲ ದಿಗ್ಗಜರ ಜತೆ ಸಂಬಂಧವನ್ನು ಬೆಸೆದುಕೊಂಡಿದೆ. ರಿಚರ್ಡ್‌ ಕ್ಯಾಸ್ಟಲಿನೊ ನಿರ್ದೇಶನದ ‘ಸೆಪ್ಟೆಂಬರ್ 8’ ಚಿತ್ರ ಕೇವಲ 24 ಗಂಟೆಯಲ್ಲಿ ಚಿತ್ರೀಕರಣವಾಗಿದ್ದು, ಇಂದಿಗೂ ದಾಖಲೆಯಾಗಿ ಉಳಿದಿದೆ. ಗೀತಪ್ರಿಯ ನಿರ್ದೇಶನದ ‘ಕಾಸ್ ದಾಯೆ ಕಂಡನಿ’ (1973) ಸಿನಿಮಾಕ್ಕೆ ಬಾಲಿವುಡ್‌ ನಟ ಅಮಿತಾಬ್ ಬಚ್ಚನ್ ಪಾತ್ರ ಪರಿಚಯದ ಕಂಠದಾನ ಮಾಡಿರುವುದು ಹೆಮ್ಮೆಯ ವಿಚಾರ. ‘ರಂಗ್’ (2014) ಸಿನಿಮಾದಲ್ಲಿ ಬಾಲಿವುಡ್‌ನ ಹಾಸ್ಯ ನಟ ಜಾನಿ ಲಿವರ್ ಬಣ್ಣ ಹಚ್ಚಿದ್ದಾರೆ. ‘ಉಮಿಲ್‌’ (2018) ಚಿತ್ರದ ಟೈಟಲ್‌ ಹಾಡಿಗೆ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌, ‘ದೊಂಬರಾಟ’ (2016) ಚಿತ್ರದ ಹಾಡಿಗೆ ನಟ ಉಪೇಂದ್ರ ಮತ್ತು ಶ್ರೀಮುರಳಿ ಸ್ವರ ನೀಡಿದ್ದಾರೆ.

ಸ್ಯಾಂಡಲ್‌ವುಡ್‌ನ ಪ್ರಸಿದ್ಧ ಕಲಾವಿದರಾದ ಅನಂತನಾಗ್, ರಮೇಶ್‌ ಅರವಿಂದ, ಪಂಢರೀಬಾಯಿ, ಕಲ್ಪನಾ, ಲೀಲಾವತಿ, ವಿನಯಾ ಪ್ರಸಾದ್, ಶ್ರುತಿ, ಸುನಿಲ್, ಸುಧಾರಾಣಿ, ಅವಿನಾಶ್, ರಮೇಶ್ ಭಟ್, ಸಾಯಿಕುಮಾರ್‌, ಭಾರತಿ ವಿಷ್ಣುವರ್ಧನ್‌, ಬುಲೆಟ್ ಪ್ರಕಾಶ್, ಸತ್ಯಜಿತ್, ರಂಗಾಯಣ ರಘು, ವಿಜಯ ರಾಘವೇಂದ್ರ, ಶರತ್ ಲೋಹಿತಾಶ್ವ ಮೊದಲಾದದರು ತುಳು ಚಿತ್ರಗಳಲ್ಲಿ ಬಣ್ಣ ಹಚ್ಚಿರುವುದು ಕೋಸ್ಟಲ್‌ವುಡ್‌ನ ಬೆಳವಣಿಗೆಗೆ ಸಾಕ್ಷಿಯಾಗಿವೆ.

‘ತುಳು ಚಿತ್ರರಂಗದ ಬಗ್ಗೆ ಇತರ ಚಿತ್ರರಂಗದವರಿಗೆ ವಿಶೇಷ ಗೌರವ ಇದೆ. ತುಳುವಿನಲ್ಲೂ ಸಾಕಷ್ಟು ಗುಣಾತ್ಮಕ ಚಿತ್ರಗಳು ಬಂದಿರುವುದು ಇದಕ್ಕೆ ಕಾರಣ. ತುಳು ಭಾಷೆ ಗೊತ್ತಿಲ್ಲದ ಸಾಕಷ್ಟು ಕಲಾವಿದರು ತುಳು ಸಿನಿಮಾದ ಮೇಲಿನ ಅಭಿಮಾನದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ತುಳು ಸಿನಿಮಾಗಳಿಗೆ ದೊರೆತ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳು ನಮ್ಮ ಚಿತ್ರರಂಗದ ತೂಕವನ್ನು ಹೆಚ್ಚಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ’ ಎನ್ನುತ್ತಾರೆ ಹಿರಿಯ ರಂಗಕರ್ಮಿ ವಿ.ಜಿ.ಪಾಲ್‌.

ಪ್ರತ್ಯೇಕ ಪ್ರಶಸ್ತಿಯ ಕೂಗು ಈಡೇರಿಲ್ಲ!
ರಾಜ್ಯ ಸರ್ಕಾರವು ಪ್ರಾದೇಶಿಕ ಭಾಷಾ ಸಿನಿಮಾಗಳಿಗೆ ಪ್ರತ್ಯೇಕವಾಗಿ ಪ್ರಶಸ್ತಿ ನೀಡಬೇಕೆಂಬ ಕೂಗು ಹಲವು ದಶಕಗಳಿಂದ ಕೇಳಿಬರುತ್ತಿದೆ. ಆದರೆ, ಕನ್ನಡ ಚಿತ್ರದ ಜತೆಗೆ ತುಳುವಿಗೆ ಪ್ರಾದೇಶಿಕ ಭಾಷಾ ಚಿತ್ರ ಎಂಬುದಾಗಿ ಪ್ರಶಸ್ತಿ ನೀಡುತ್ತಿದೆ. ಈ ತಾರತಮ್ಯ, ಪೈಪೋಟಿಯ ಮಧ್ಯೆಯೂ ತುಳು ಚಿತ್ರರಂಗ ಉತ್ತಮ ಸಾಧನೆ ಮಾಡಿದೆ.

1972ರಲ್ಲಿ ತೆರೆಗೆ ಬಂದ ಆರೂರು ಪಟ್ಟಾಭಿ ನಿರ್ದೇಶನದ ‘ಬಿಸತ್ತಿ ಬಾಬು’ ಚಿತ್ರದಿಂದ ಆರಂಭಗೊಂಡು ಈತನಕ 15ಕ್ಕೂ ಅಧಿಕ ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿಗಳು ದೊರಕಿವೆ. ಅಲ್ಲದೆ, ‘ಕೋಟಿ ಚನ್ನಯ’ (2006) ಸಿನಿಮಾದ ಅಭಿನಯಕ್ಕಾಗಿ ನೀತು ಅವರಿಗೆ, ‘ಗಗ್ಗರ’ ಸಿನಿಮಾಕ್ಕಾಗಿ ಎಂ.ಕೆ.ಮಠ ಅವರಿಗೆ, ‘ಕುಡ್ಲ ಕೆಫೆ’ ಚಿತ್ರಕ್ಕಾಗಿ ನವೀನ್‌ ಡಿ. ಪಡೀಲ್‌ ಅವರಿಗೆ ‘ಪೋಷಕ ನಟ ಪ್ರಶಸ್ತಿ’ ಲಭಿಸಿದೆ.

(ಪ್ರತಿಕ್ರಿಯಿಸಿ–9513322936, editormng@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT