ಶನಿವಾರ, ಜುಲೈ 31, 2021
24 °C
ಶೋಲೆಯ ಸೂರ್ಮಾ ಭೋಪಾಲಿ

ನಗಿಸುತ್ತಲೇ ವಿದಾಯ ಹೇಳಿದ ‘ಜಗದೀಪ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಶಿಷ್ಟ ಹಾವಭಾವದ ಮೂಲಕವೇ ಪ್ರೇಕ್ಷಕರಿಗೆ ಕಚಗುಳಿ ಇಡುತ್ತಿದ್ದ ಹಿಂದಿ ಚಿತ್ರಂಗದ ಹಿರಿಯ ಹಾಸ್ಯನಟ ಜಗದೀಪ್ ಬದುಕಿಗೆ  ವಿದಾಯ ಹೇಳಿದ್ದಾರೆ. ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ 81 ವರ್ಷದ ಜಗದೀಪ್ ಬುಧವಾರ ರಾತ್ರಿ‌ ಮುಂಬೈ ಬಾಂದ್ರಾ ನಿವಾಸದಲ್ಲಿ ಉಸಿರು ನಿಲ್ಲಿಸಿದರು.

ಹಿಂದಿ ಚಿತ್ರರಂಗದ ಎವರ್‌ಗ್ರೀನ್ ಮತ್ತು ಕ್ಲಾಸಿಕ್‌‌ ಸಿನಿಮಾ ‘‌ಶೋಲೆ’ಯ ಸೂರ್ಮಾ ಭೋಪಾಲಿ ಪಾತ್ರದ ಮೂಲಕ ಜಗದೀಪ್ ಮನೆಮಾತಾಗಿದ್ದರು. ಈ ಪಾತ್ರ ಅವರಿಗೆ ಭಾರಿ ಜನಪ್ರಿಯತೆ ತಂದುಕೊಟ್ಟಿತ್ತು. 

‌‘ಖಂಬಾ ಉಕಾಡ್ಕೆ’ ಡೈಲಾಗ್‌ನಿಂದ ಜನಪ್ರಿಯವಾಗಿದ್ದ ಜಗದೀಪ್ ಅವರ ಮೂಲ ಹೆಸರು ಸೈಯದ್‌ ಇಷ್ತಿಯಾಕ್‌ ಅಹ್ಮದ್ ಜಾಫ್ರಿ. ಸಿನಿಮಾಕ್ಕಾಗಿ ಹೆಸರು ಬದಲಿಸಿಕೊಂಡಿದ್ದ ಅವರು ಜಗದೀಪ್‌ ಎಂದೇ ಚಿರಪರಿಚಿತರಾಗಿದ್ದರು. 2012ರಲ್ಲಿ ತೆರೆಕಂಡ ‘ಗಲಿ ಗಲಿ ಚೋರ್‌ ಹೈ’ ಅವರು ಬಣ್ಣ ಹಚ್ಚಿದ ಕೊನೆಯ ಸಿನಿಮಾ. 

ಜಗದೀಪ್‌ ಅವರ ಇಡೀ ಕುಟುಂಬ ಹಿಂದಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದೆ. 90ರ ದಶಕದಲ್ಲಿ ಕಿರುತೆರೆಯ ಜನಪ್ರಿಯ ಡಾನ್ಸ್ ಷೊ ‘ಬೂಗಿ ವೂಗಿ’ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಜಾವೇದ್‌ ಜಾಫ್ರಿ ಮತ್ತು ನಾವೇದ್‌ ಜಾಫ್ರಿ ಇಬ್ಬರೂ ಜಗದೀಪ್ ಅವರ‌ ಮಕ್ಕಳು. ಇಬ್ಬರೂ ಒಳ್ಳೆಯ ಡಾನ್ಸರ್‌ಗಳು. 

ಬಾಲ್ಯದಲ್ಲೇ ಬಣ್ಣದ ನಂಟು 

ಬಿ.ಆರ್.ಚೋಪ್ರಾ ಬ್ಯಾನರ್‌ ನಿರ್ಮಿಸಿದ ‘ಅಫ್ಸಾನಾ’ ಚಿತ್ರದ ಮೂಲಕ ಬಾಲನಟನಾಗಿ 9ನೇ ವಯಸ್ಸಿನಲ್ಲಿಯೇ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಒಟ್ಟು 400 ಚಿತ್ರಗಳಲ್ಲಿ ನಟಿಸಿದ್ದಾರೆ. ‘ಅಫ್ಸಾನಾ’ ಅವರಿಗೆ ಅವಕಾಶಗಳ ಬಾಗಿಲು ತೆರೆಯಿತು. ಎವಿಎಂ ಪ್ರೊಡಕ್ಷನ್‌ನ ‘ಹಮ್‌ ಪಂಚಿ ಏಕ್‌ ಡಾಲ್‌ ಕೆ’, ರಾಜ್‌ ಕಪೂರ್‌ ಅವರ ‘ಅಬ್‌ ದಿಲ್ಲಿ ದೂರ್‌ ನಹಿ’ ಕೆ.ಎ. ಅಬ್ಬಾಸ್‌ ಅವರ ‘ಮುನ್ನಾ’ ಮತ್ತು ಬಿಮಲ್‌ ರಾಯ್‌ ಅವರ ‘ದೋ ಬಿಘಾ ಜಮೀನ್‌’ ಹೀಗೆ ಒಂದಾದ ಮೇಲೊಂದರಂತೆ ಹಿಟ್ ಚಿತ್ರಗಳಲ್ಲಿ ನಟಿಸಿದರು. 

‘ಹಮ್‌ ಪಂಚಿ ಏಕ್‌ ಡಾಲ್‌ ಕೆ’ ಚಿತ್ರದಲ್ಲಿಯ ಅಭಿನಯಕ್ಕಾಗಿ ಅಂದಿನ ಪ್ರಧಾನಿ ಪಂಡಿತ್‌ ಜವಾಹರಲಾಲ್ ನೆಹರೂ ಜಗದೀಪ್‌ ಅವರನ್ನು ಸತ್ಕರಿಸಿದ್ದರು. ‘ನಟನಾಗಲು ನಾನು ಹಿಂದಿ ಚಿತ್ರರಂಗಕ್ಕೆ ಬಂದವನಲ್ಲ. ಮನೆಯಲ್ಲಿಯ ಕಿತ್ತು ತಿನ್ನುವ ಬಡತನದಿಂದ ಹೊಟ್ಟೆ ಹೊರೆಯಲು ಚಿತ್ರರಂಗಕ್ಕೆ ಬಂದ ನನಗೆ ಜವಾಹರಲಾಲ್‌ ನೆಹರೂ ಅವರಿಂದ ಗೌರವಿಸಿಕೊಳ್ಳುವ ಅವಕಾಶ ಸಿಗುತ್ತದೆ ಎಂದು ಖಂಡಿತ ಊಹಿಸಿರಲಿಲ್ಲ’ ಎಂದು ಜಗದೀಪ್‌ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು.   

ಶೋಲೆ, ಚೈನಾ ಗೇಟ್‌, ಅಂದಾಜ್‌ ಅಪ್ನಾ, ಅಪ್ನಾ, ಪ್ರಿಯದರ್ಶನ್‌ ಅವರ ಮುಷ್ಕುರಾಹಟ್‌ ಚಿತ್ರಗಳಲ್ಲಿ ಅವರು ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದರು. ಜನಪ್ರಿಯತೆ ತಂದು ಕೊಟ್ಟ ಶೋಲೆ ಚಿತ್ರದ ಸೂರ್ಮಾ ಭೋಪಾಲಿ ಪಾತ್ರದ ಹೆಸರಿನಲ್ಲಿಯೇ 1988ರಲ್ಲಿ ಕಾಮಿಡಿ ಚಿತ್ರವೊಂದನ್ನು ಅವರು ನಿರ್ದೇಶಿಸಿದ್ದರು. ಇದರಲ್ಲಿ ಜಗದೀಪ್‌ ಮುಖ್ಯ ಪಾತ್ರದಲ್ಲಿ ನಟಿಸಿದರೆ, ಧರ್ಮೆಂದ್ರ, ಅಮಿತಾಭ್ ಬಚ್ಚನ್‌ ಮತ್ತು ರೇಖಾ ಅತಿಥಿ ಪಾತ್ರಗಳಲ್ಲಿ ಬಂದು ಹೋಗಿದ್ದರು. ಬಹುತಾರಾಗಣದ ಸೂರ್ಮಾ ಭೋಪಾಲಿ ಅದು  ಥಿಯೇಟರ್‌ನಲ್ಲಿ ಬಹಳ ದಿನ ನಿಲ್ಲಲಿಲ್ಲ. 

ಕಚಗುಳಿ ಇಟ್ಟು ಹೋದ ಹಾಸ್ಯನಟ

ಜಗದೀಪ್‌ ಕೇವಲ ಹಾಸ್ಯ ನಟರಾಗಿ ಮಾತ್ರವಲ್ಲ, ಐದು ಚಿತ್ರಗಳಲ್ಲಿ ನಾಯಕನ ಪಾತ್ರಗಳಲ್ಲೂ ಸೈ ಎನಿಸಿಕೊಂಡಿದ್ದರು. ಅಂದಿನ ಕಾಲದ ಜನಪ್ರಿಯ ನಟಿ ನಂದಾ ಅವರೊಂದಿಗೆ ‘ಭಾಭಿ’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಆಜ್ರಾ, ಅಮಿತಾ ಮತ್ತು‌ ನಾಜ್ ಅವರಂತಹ ನಾಯಕಿಯರ ಜತೆ ಅವರು ನಾಯಕನ ಪಾತ್ರದಲ್ಲಿ ಮಿಂಚಿದ್ದರು. ‘ಭಾಭಿ’ ಚಿತ್ರದ ನಂತರ ಅವರು ಹಾಸ್ಯನಟನೆಯತ್ತ ಹೊರಳಿದರು.

ಪುರಾನಾ ಮಂದಿರ್, ಯೇ ರಿಶ್ತಾ ನ ಟೂಟೆ ಚಿತ್ರಗಳ ಜೆತೆಗೆ ರಾಮಸೇ ಬ್ರದರ್ಸ್‌ ನಿರ್ಮಿಸಿದ ಹಲವಾರು ಭಯಾನಕ ಚಿತ್ರಗಳಲ್ಲಿ ಜಗದೀಪ್‌ ನಟಿಸಿದ್ದರು. ದೆವ್ವದ ಭಯಾನಕ ದೃಶ್ಯಗಳಲ್ಲಿಯೂ ಅವರ ಪಂಚಿಂಗ್‌ ಡೈಲಾಗ್‌ ಮತ್ತು ನವಿರಾದ ಹಾಸ್ಯ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದವು.  

ಮೆಳ್ಳೆಗಣ್ಣು, ಕಡ್ಡಿ ಮೀಸೆ ಮತ್ತು ಕೆದರಿದ ಕೂದಲು, ಸದಾ ತಲೆ ಮೇಲೊಂದು ಟೊಪ್ಪಿಗೆ, ವಿಶಿಷ್ಟ ಡೈಲಾಗ್‌ ಡೆಲಿವರಿ ಮತ್ತು ಮ್ಯಾನರಿಸಂನಿಂದ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದ ಜಗದೀಪ್‌ ಅವರ ಏಳು ದಶಕಗಳ ಬಣ್ಣದ ಬದುಕಿಗೆ ತೆರೆಬಿದ್ದಿದೆ.

ಸೂರ್ಮಾ ಭೋಪಾಲಿ ಪಾತ್ರ ಮತ್ತು ‘ಖಂಬಾ ಉಕಾಡ್ಕೆ’ ಡೈಲಾಗ್ ಅನ್ನು ಜಗದೀಪ್‌‌ ಪ್ರೇಕ್ಷಕರ ಮನದಲ್ಲಿ ಇನ್ನೂ ಹಚ್ಚಹಸಿರಾಗಿ ಉಳಿಸಿ ಹೋಗಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು