ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಲನಚಿತ್ರ ಪ್ರಶಸ್ತಿ ಪುನರಾರಂಭಕ್ಕೆ ಸಮಿತಿ: ಸಿದ್ದರಾಮಯ್ಯ ಘೋಷಣೆ

15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ
Published 29 ಫೆಬ್ರುವರಿ 2024, 22:30 IST
Last Updated 29 ಫೆಬ್ರುವರಿ 2024, 22:30 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ಸ್ಥಗಿತಗೊಂಡಿರುವ ಕರ್ನಾಟಕ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು ಪುನರಾರಂಭಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದ ಪೂರ್ವದ್ವಾರದ ಮುಂಭಾಗದಲ್ಲಿ ಗುರುವಾರ(ಫೆ.29) ನಡೆದ 15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಪ್ರಶಸ್ತಿಗೆ ಸಂಬಂಧಿಸಿದಂತೆ ಸಮಿತಿಗಳನ್ನು ಮಾಡಿದ್ದು ಇವುಗಳು ವರದಿ ನೀಡಿದ ತಕ್ಷಣ, ಈ ವರ್ಷದ್ದೂ ಸೇರಿದಂತೆ ಹಿಂದಿನ ವರ್ಷಗಳ ಪ್ರಶಸ್ತಿಗಳನ್ನು ನೀಡಲಾಗುವುದು’ ಎಂದು ತಿಳಿಸಿದರು. 

‘ದೇಶದಲ್ಲಿ ಅನೇಕ ಧರ್ಮ, ಜಾತಿ, ಭಾಷೆಗಳಿವೆ. ನಾವು ಇವೆಲ್ಲವನ್ನೂ ಮೀರಿ ಮನುಷ್ಯರಾಗಿ ಬಾಳುವ ಪ್ರಯತ್ನವನ್ನು ಮಾಡುವ ಸಂದೇಶವನ್ನು ನೀಡುವುದೇ ಈ ಚಿತ್ರೋತ್ಸವಗಳ ಉದ್ದೇಶ. ಈ ಸಮಾಜದಲ್ಲಿ ನಾವೆಲ್ಲರು ಸಮಾನತೆ ತರಲು ಪ್ರಯತ್ನ ಮಾಡಬೇಕು. ಎಲ್ಲ ಸರ್ಕಾರಗಳೂ ಕೂಡಾ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ಅದೇ ನಮ್ಮ ಸಂವಿಧಾನದ ತಿರುಳು. ಹೀಗಾಗಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಕುರಿತಾದ ಚಿತ್ರಗಳನ್ನು ಮಾಡುವವರಿಗೆ ಸರ್ಕಾರ ಹಣಕಾಸಿನ ಬೆಂಬಲ ಸೇರಿದಂತೆ ಇತರೆ ಎಲ್ಲ ಸಹಕಾರ ನೀಡಲಿದೆ’ ಎಂದು ಘೋಷಿಸಿದರು.   

ಚಿತ್ರೋತ್ಸವದ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ನಟ ಶಿವರಾಜ್ ಕುಮಾರ್, ‘ಕನ್ನಡ ಸಿನಿಮಾಗಳು ಇಂದು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿವೆ. ಇದು ಹೆಮ್ಮೆಯ ವಿಷಯ. ಕನ್ನಡ ಚಿತ್ರರಂಗಕ್ಕೆ 90 ವರ್ಷ ಪೂರೈಸಿದ್ದು, ಇದರಲ್ಲಿ ನಾನು 38 ವರ್ಷ ಸೇವೆ ಸಲ್ಲಿಸಿರುವುದು ಪುಣ್ಯ’ ಎಂದರು. ಕನ್ನಡ ಚಿತ್ರರಂಗದ 90 ವರ್ಷದ ವಿಶೇಷ ಸಂಚಿಕೆಯನ್ನು ಚಿತ್ರೋತ್ಸವದ ರಾಯಭಾರಿ, ನಟ ಡಾಲಿ ಧನಂಜಯ ಬಿಡುಗಡೆಗೊಳಿಸಿದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ನಟ ಸಾಧುಕೋಕಿಲ, ನಟಿ ಆರಾಧನಾ, ಚಿತ್ರೋತ್ಸವ ಸಮಿತಿ ಅಧ್ಯಕ್ಷ ಕೆ.ವಿ. ತ್ರಿಲೋಕ್‌ ಚಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್‌ ಎಂ. ನಿಂಬಾಳ್ಕರ್‌ ಮತ್ತಿತರರು ಉಪಸ್ಥಿತರಿದ್ದರು. ಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೂ ಮುನ್ನ ನಡೆದ ರಿಕ್ಕಿ ಕೇಜ್‌ ತಂಡದ ಸಂಗೀತ ಕಾರ್ಯಕ್ರಮ ಜನರನ್ನು ಸೆಳೆಯಿತು. 

‘ಡಾ . ಬಾಬಾಸಾಹೇಬ್‌ ಅಂಬೇಡ್ಕರ್‌ ಸಿನಿಮಾ ಕನ್ನಡಕ್ಕೆ ಡಬ್‌ ಆಗಲಿ’

ಬೆಂಗಳೂರು ಚಿತ್ರೋತ್ಸವದ ಸಿಗ್ನೇಚರ್‌ ಟ್ಯೂನ್‌ ಬಿಡುಗಡೆಗೊಳಿಸಿ ಮಾತನಾಡಿದ ಖ್ಯಾತ ನಿರ್ದೇಶಕ ಜಬ್ಬಾರ್‌ ಪಟೇಲ್‌, ‘ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಸಾಹಿತ್ಯ, ರಂಗಭೂಮಿಯ ಕೊಡುಕೊಳ್ಳುವಿಕೆ ಹಿಂದಿನಿಂದಲೂ ಇದೆ. ಪುಣೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆದ ಸಂದರ್ಭದಲ್ಲಿ ಕರ್ನಾಟಕದ ಯುವ ನಿರ್ದೇಶಕರ ಸಿನಿಮಾಗಳು ಅಲ್ಲಿಗೆ ಬರುತ್ತವೆ. ಇಂತಹ ಚಿತ್ರೋತ್ಸವಗಳು ಗ್ರಾಮೀಣ ಭಾಗದಲ್ಲಿರುವ ಚಿತ್ರ ನಿರ್ಮಾಣ ಮಾಡುವ ಯುವಜನತೆಗೂ ವೇದಿಕೆಯಾಗಬೇಕು’ ಎಂದರು.

‘ನಟ ಮಮ್ಮುಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ ‘ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌’ ಸಿನಿಮಾವನ್ನು ನಾನು ನಿರ್ದೇಶಿಸಿದ್ದೆ. ದೇಶದ 9 ಭಾಷೆಗಳಿಗೆ ಈ ಸಿನಿಮಾ ಡಬ್‌ ಆಗಿದೆ. ಆದರೆ ಕನ್ನಡದಲ್ಲಿ ಈ ಸಿನಿಮಾ ಡಬ್‌ ಆಗಲು ನಿಯಮವೊಂದು ಅಡ್ಡಿಯಾಯಿತು. ಈ ಸಿನಿಮಾವನ್ನು ಕನ್ನಡಕ್ಕೆ ಡಬ್‌ ಮಾಡಲು ಸಿ.ಎಂ ಕ್ರಮಕೈಗೊಳ್ಳಬೇಕು. ಏಕೆಂದರೆ ಅಂಬೇಡ್ಕರ್‌ ಅವರು ನೀಡಿದ ಮೌಲ್ಯಗಳು ಈ ಮೂಲಕ ಜನರನ್ನು ತಲುಪಲಿವೆ. ಸಂವಿಧಾನ ಎನ್ನುವುದು ಅತ್ಯುತ್ತಮ ಧರ್ಮಗ್ರಂಥ’ ಎಂದರು. 

ಕಲಾವಿದರಿಗೆ, ಚಿತ್ರರಂಗಕ್ಕೆ ಸರ್ಕಾರದ ಪ್ರೋತ್ಸಾಹ ಮುಖ್ಯ. ಸಬ್ಸಿಡಿ ಹಾಗೂ ಪ್ರಶಸ್ತಿ ವಿತರಣೆಯನ್ನು ಮುಂದುವರಿಸಬೇಕು.
ಡಾಲಿ ಧನಂಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT