ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ ವಿಲ್‌ ಕಿಲ್‌ ಯೂ | ಕೊರೊನಾ ವಿರುದ್ಧ ಗುರು ಗರಂ

Last Updated 24 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಸಂಗೀತ ನಿರ್ದೇಶಕ ಗುರುಕಿರಣ್ ಅವರ ‘ಕೊರೊನಾ ವಿ ವಿಲ್‌ ಕಿಲ್‌ ಯೂ’ ಕಂಗ್ಲಿಷ್ ಹಾಡು ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲರಲ್ಲಿಯೂ ಸ್ಫೂರ್ತಿ ತುಂಬುವ ಉದ್ದೇಶದಿಂದ ಗುರುಕಿರಣ್ ತಮ್ಮ ಮನೆಯಿಂದಲೇ ಸಿದ್ಧಪಡಿಸಿದ ಹಾಡು ಇದು.

‘ಕೊರೊನಾ ವಿಚಾರವಾಗಿ ಏನಾದರೂ ಮಾಡೋಣ ಅಂತ ಇದ್ದೆ. ಏನಾದರೂ ಮಾಡಬೇಕು ಎಂಬ ಮಾತನ್ನು ನಟಿ ತಾರಾ ಅವರೂ ಹೇಳಿದ್ದರು. ಈ ಹಾಡನ್ನು ನಾನು ಮನೆಯಲ್ಲೇ ಕುಳಿತು ಮಾಡಿದ್ದೇನೆ. ಇದಕ್ಕಾಗಿಯೇ ಹೊಸ ಟ್ಯೂನ್‌ ರಚಿಸಿದ್ದೇನೆ, ಸಾಹಿತ್ಯ ಬರೆದಿದ್ದೇನೆ. ನಾನು ಸಿದ್ಧಪಡಿಸಿದ್ದ ಯಾವುದೇ ಹಳೆಯ ಟ್ಯೂನ್‌ಗಳನ್ನು ಇದಕ್ಕೆ ಬಳಸಿಲ್ಲ. ಒಂದು ಅರ್ಥದಲ್ಲಿ, ಈ ಹಾಡು ಹೊಸೆಯುವುದಕ್ಕೆ ನನಗೆ ಕೊರೊನಾ ವಾರಿಯರ್ಸ್‌ ಸ್ಫೂರ್ತಿ’ ಎಂದರು ಗುರುಕಿರಣ್.

‘ಕೊರೊನಾ ವಿರುದ್ಧದ ಹೋರಾಟದಲ್ಲಿ ನಮ್ಮ ಕೊಡುಗೆ ಏನು ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಹಾಗಾಗಿ, ಈ ಹಾಡು ಮೂಡಿಬಂತು. ಈ ಹಾಡಿನಿಂದಾಗಿ ಜನರಲ್ಲಿ ಒಂದಿಷ್ಟು ಜಾಗೃತಿ ಮೂಡಲಿ, ಅವರಲ್ಲಿನ ಭಯ ಒಂದಿಷ್ಟು ದೂರವಾಗಲಿ ಎನ್ನುವ ಉದ್ದೇಶ ಇದೆ’ ಎಂದು ಅವರು ಹೇಳಿದರು.

ಈ ಹಾಡಿಗೆ ಸಂಬಂಧಿಸಿದ ಅಷ್ಟೂ ಕೆಲಸಗಳು ಗುರುಕಿರಣ್ ಅವರದ್ದೇ. ಸಾಹಿತ್ಯ ಬರೆದು, ಸಂಗೀತ ನೀಡಿ, ಹಾಡನ್ನು ಕೂಡ ಅವರೇ ಹಾಡಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಗುರುಕಿರಣ್ ಅವರು ಒಂದಿಷ್ಟು ಹಳೆಯ ಹಾಡುಗಳ ರಿಮಿಕ್ಸ್‌ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ‘ನನ್ನ ಇಷ್ಟದ ಕೆಲವು ಹಾಡುಗಳನ್ನು ಬೇರೆ ಪ್ಯಾಟರ್ನ್‌ನಲ್ಲಿ ರಿಮಿಕ್ಸ್‌ ಮಾಡುತ್ತಿದ್ದೇನೆ. ನಾನು ಇದನ್ನು ಮಾಡಿದ್ದು ನನ್ನ ಖುಷಿಗಾಗಿ ಮಾತ್ರ’ ಎಂದು ಅವರು ಹೇಳುತ್ತಾರೆ.

ಈ ಅವಧಿಯಲ್ಲಿ ಒಂದಿಷ್ಟು ವೆಬ್ ಸರಣಿಗಳನ್ನು, ಸಿನಿಮಾಗಳನ್ನು ಗುರುಕಿರಣ್ ವೀಕ್ಷಿಸಿದ್ದಾರೆ. ‘ಮನಿ ಹೀಸ್ಟ್‌ ವೆಬ್ ಸರಣಿ, ದಿಯಾ ಮತ್ತು ಲವ್ ಮಾಕ್ಟೇಲ್‌ ಕನ್ನಡ ಸಿನಿಮಾಗಳು ಇಷ್ಟವಾದವು’ ಎಂದರು. ಹಾಗೆಯೇ, ‘ಮುದುಡಿದ ತಾವರೆ ಅರಳಿತು’ ಮತ್ತು ‘ಎ’ ಸಿನಿಮಾಗಳನ್ನು ಮತ್ತೊಮ್ಮೆ ವೀಕ್ಷಿಸಿದ್ದಾರಂತೆ.

ಲಾಕ್‌ಡೌನ್‌ ಅವಧಿಯು ಸಿನಿಮಾ ಉದ್ಯಮಕ್ಕೆ ಎದುರಾದ ಅತಿದೊಡ್ಡ ಹೊಡೆತ ಎಂದು ಅವರು ಹೇಳುತ್ತಾರೆ. ‘ಸಿನಿಮಾ ಮಂದಿರಗಳ ಬಾಗಿಲು ತೆರೆದ ನಂತರ, ಸಿನಿಮಾ ಚೆನ್ನಾಗಿದ್ದರೆ ಜನ ಅದನ್ನು ನೋಡಲು ಖಂಡಿತ ಬರುತ್ತಾರೆ. ದೊಡ್ಡ ತಾರೆಯರ ಸಿನಿಮಾ ವೀಕ್ಷಣೆಗೂ ಬರುತ್ತಾರೆ’ ಎಂಬ ನಂಬಿಕೆ ಗುರುಕಿರಣ್ ಅವರದ್ದು.

ಆದರೆ, ಈ ಆಶಾಭಾವನೆಯ ಜೊತೆಯಲ್ಲೇ ಒಂದಿಷ್ಟು ಎಚ್ಚರಿಕೆಯ ಮಾತುಗಳನ್ನೂ ಅವರು ಆಡುತ್ತಾರೆ. ‘ಬಹುತೇಕರು ಈಗ ಮನೆಯಲ್ಲಿ ಇದ್ದಾರೆ. ಜನ ಒಟಿಟಿ ವೇದಿಕೆಗಳಿಗೆ ಹೊಂದಿಕೊಳ್ಳುತ್ತ ಇದ್ದಾರೆ. ಒಮ್ಮೆ ಇದು ಅಭ್ಯಾಸ ಆದರೆ, ಆ ವೇದಿಕೆಗಳ ಮೂಲಕವೇ ಸಿನಿಮಾ ವೀಕ್ಷಿಸಬಹುದು. ಮಲ್ಟಿಪ್ಲೆಕ್ಸ್‌ಗೆ ಬರುವ ಜನರ ಸಂಖ್ಯೆಯಲ್ಲಿ ಕಡಿಮೆ ಆಗುವ ಸಾಧ್ಯತೆಯೂ ಇದೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT