ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 2ನೇ ಆವೃತ್ತಿಗೆ ದಿನಗಣನೆ

Published 14 ಜೂನ್ 2024, 7:56 IST
Last Updated 14 ಜೂನ್ 2024, 7:56 IST
ಅಕ್ಷರ ಗಾತ್ರ

ಚಂದನವನದ ಚೆಂದದ ಘಮಲನ್ನು ಪಸರಿಸುವ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಎರಡನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಕಳೆದ ವರ್ಷ ತನ್ನ ‘ಅಮೃತ ಸಂಭ್ರಮ’ದ ಸಂದರ್ಭದಲ್ಲಿ ‘ಪ್ರಜಾವಾಣಿ’ ಪ್ರಾರಂಭಿಸಿದ ಈ ‘ಸಿನಿ ಸಮ್ಮಾನ’ವೆಂಬ ಅರ್ಥಗರ್ಭಿತ, ವರ್ಣರಂಜಿತ ಕಾರ್ಯಕ್ರಮದ ಎರಡನೇ ಆವೃತ್ತಿ ಇದೇ 28ರಂದು ನಡೆಯಲಿದೆ.

ಕರ್ನಾಟಕದ ಶ್ರೀಮಂತ ಸಿನಿಮಾ ಪರಂಪರೆಯನ್ನು ಸಂಭ್ರಮಿಸುವ, ಬೆಸೆಯುವ ವೇದಿಕೆಯಾಗಿರುವ ಈ ‘ಸಿನಿ ಸಮ್ಮಾನ’ದ ಎರಡನೇ ಆವೃತ್ತಿಯ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬುಧವಾರ (ಜೂನ್‌ 12) ಸಿನಿ ಸಮ್ಮಾನದ ಮುಖ್ಯ ತೀರ್ಪುಗಾರರು ಹಾಗೂ ತಾಂತ್ರಿಕ ತೀರ್ಪುಗಾರರ ಸಭೆ ನಡೆಯಿತು. ಈ ಕಾರ್ಯಕ್ರಮದ ಮುಖಾಂತರ ಎರಡನೇ ಆವೃತ್ತಿಗೆ ಅಧಿಕೃತ ಚಾಲನೆ ದೊರೆಯಿತು. 

ನೆನಪುಗಳ ಮೆಲುಕು: ಆನ್‌ಲೈನ್‌ ಮೂಲಕವೇ ನಡೆದ ಎರಡನೇ ಆವೃತ್ತಿಯ ನಾಮನಿರ್ದೇಶಿತರ ಆಯ್ಕೆ ಪ್ರಕ್ರಿಯೆಯ ಬಳಿಕ ತೀರ್ಪುಗಾರರ ಮಂಡಳಿ ಇದೇ ಮೊದಲ ಬಾರಿ ಸಮ್ಮಿಲನಗೊಂಡಿತ್ತು. ಅವರಲ್ಲಿ ಹಲವರು ಮೊದಲ ಆವೃತ್ತಿಗೂ ತೀರ್ಪುಗಾರರಾಗಿದ್ದರು. ಅವರು ಹೊಸದಾಗಿ ಸೇರ್ಪಡೆಗೊಂಡ ತೀರ್ಪುಗಾರರ ಜೊತೆಗೂಡಿ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೊದಲ ಆವೃತ್ತಿಯ ನೆನಪುಗಳನ್ನು ಮೆಲುಕು ಹಾಕಿದರು. ಇದಕ್ಕೆ ಪೂರಕವಾಗಿ ಮೂಡಿಬಂದ ಮೊದಲ ಆವೃತ್ತಿಯ ಸಮಾರಂಭದ ವಿಡಿಯೊ ತುಣುಕುಗಳಲ್ಲಿ ಅವರ ನೆನಪುಗಳಿಗೆ ದೃಶ್ಯಗಳು ಸಾಥ್‌ ನೀಡಿದವು. ಇವುಗಳನ್ನು ಆಸ್ವಾದಿಸುತ್ತಲೇ ಸಿನಿ ಸಮ್ಮಾನದ ಎರಡನೇ ಆವೃತ್ತಿಗೆ ಅವರೆಲ್ಲರೂ ಒಕ್ಕೊರಲಿನಿಂದ ಶುಭಕೋರಿದರು.

ಎರಡನೇ ಆವೃತ್ತಿಯ ಮುಖ್ಯ ತೀರ್ಪುಗಾರರಾದ ನಿರ್ದೇಶಕ ಟಿ.ಎಸ್‌.ನಾಗಾಭರಣ, ಸಂಗೀತ ನಿರ್ದೇಶಕ ವಿ.ಮನೋಹರ್‌, ನಿರ್ದೇಶಕಿ ಸುಮನ್‌ ಕಿತ್ತೂರು, ತಾಂತ್ರಿಕ ತೀರ್ಪುಗಾರರ ಮಂಡಳಿಯಲ್ಲಿರುವ ಕಲಾ ನಿರ್ದೇಶಕ ಶಶಿಧರ ಅಡಪ, ಸಿನಿಮಾ ವಿಮರ್ಶಕ ಗಂಗಾಧರ್‌ ಮೊದಲಿಯಾರ್‌, ಸಂಕಲನಕಾರ ಎಂ.ಎನ್‌.ಸ್ವಾಮಿ, ಸಿನಿಮಾ ವಿಮರ್ಶಕ ಎಸ್‌.ವಿಶ್ವನಾಥ್‌, ನಟಿ ಪೂಜಾ ಗಾಂಧಿ, ಚಿತ್ರ ಸಾಹಿತಿ–ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್‌, ಸಾಹಿತಿ–ಸಿನಿಮಾ ವಿಮರ್ಶಕಿ ಪ್ರತಿಭಾ ನಂದಕುಮಾರ್‌, ಧ್ವನಿಗ್ರಹಣ ಪರಿಣಿತ ಜಾನ್ಸನ್‌, ಗಾಯಕಿ–ಸಂಗೀತ ನಿರ್ದೇಶಕಿ ಎಂ.ಡಿ.ಪಲ್ಲವಿ, ನಿರ್ದೇಶಕ ಜಯತೀರ್ಥ, ನಟ ಶಿವಧ್ವಜ್‌, ಸಾಹಿತಿ–ಸಿನಿಮಾ ವಿಮರ್ಶಕಿ ಸಂಧ್ಯಾರಾಣಿ, ಸಿನಿಮಾ ವಿಮರ್ಶಕಿ ಪ್ರೀತಿ ನಾಗರಾಜ್‌, ಸಿನಿಮಾ ವಿಮರ್ಶಕ ಹರೀಶ್‌ ಮಲ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು.  

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮುಖ್ಯ ಪ್ರಾಯೋಜಕರಾದ ಕಾಸಾಗ್ರ್ಯಾಂಡ್‌ನ ಮಾರ್ಕೆಟಿಂಗ್‌ ವಿಭಾಗದ ಗ್ರೂಪ್‌ ಮ್ಯಾನೇಜರ್‌ ಶೇಖ್‌ ಜಾಕೀರ್‌ ಹುಸೈನ್‌ ಹಾಗೂ ಸಹ ಪ್ರಾಯೋಜಕರಾದ ಇನ್‌ಸೈಟ್ಸ್‌ ಐಎಎಸ್‌ನ ಸಂಸ್ಥಾಪಕ-ನಿರ್ದೇಶಕ ವಿನಯ್‌ ಕುಮಾರ್‌ ಜಿ.ಬಿ. ಉಪಸ್ಥಿತರಿದ್ದರು.    

ಕಾರ್ಯಕ್ರಮದಲ್ಲಿ ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ನಿರ್ದೇಶಕರಾದ ಪಾರುಲ್‌ ಶಾ, ಸಿಇಒ ಸೀತಾರಾಮನ್‌ ಶಂಕರ್‌ ಹಾಗೂ ‘ಪ್ರಜಾವಾಣಿ‌’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಇದ್ದರು. 

2023ರಲ್ಲಿ ತೆರೆಕಂಡ ಸಿನಿಮಾಗಳಲ್ಲಿ ಪ್ರಶಸ್ತಿಗಳು ಯಾರು ಯಾರಿಗೆ ಸಲ್ಲಲಿವೆ ಎನ್ನುವ ಕುತೂಹಲ ಇನ್ನೇನು ಕೆಲವೇ ದಿನಗಳಲ್ಲಿ ತಣಿಯಲಿದೆ. ಎರಡು ಹಂತಗಳ ತೀರ್ಪುಗಾರರ ಮಂಡಳಿ ಆಯ್ಕೆ ಮಾಡಿರುವ ನಾಮನಿರ್ದೇಶಿತರ ಪಟ್ಟಿಯನ್ನು ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕಾಡೆಮಿ ಸದಸ್ಯರಿಗೆ ಮತದಾನಕ್ಕಾಗಿ ಕಳುಹಿಸಲಾಗಿದೆ. ಜೊತೆಗೆ ಸಾರ್ವಜನಿಕರೂ ಶ್ರೇಷ್ಠ ನಟ, ನಟಿ, ಚಿತ್ರ ಹಾಗೂ ಅತ್ಯುತ್ತಮ ಸಂಗೀತವನ್ನು ಮತದಾನದ ಮುಖಾಂತರ ಆಯ್ಕೆ ಮಾಡಬಹುದು. ಇದಕ್ಕಾಗಿ prajavani.net/cinesamman/season2 ಗೆ ಭೇಟಿ ನೀಡಿ.

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ 2ನೇ ಆವೃತ್ತಿಗೆ ಕ್ಲ್ಯಾಪ್‌ ಮಾಡುವ ಮುಖಾಂತರ ಚಾಲನೆ ನೀಡಿದ ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ನಿರ್ದೇಶಕರಾದ ಪಾರುಲ್‌ ಶಾ ಹಾಗೂ ಚಲನಚಿತ್ರ ನಿರ್ದೇಶಕ ಟಿ.ಎಸ್‌. ನಾಗಾಭರಣ  –

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ 2ನೇ ಆವೃತ್ತಿಗೆ ಕ್ಲ್ಯಾಪ್‌ ಮಾಡುವ ಮುಖಾಂತರ ಚಾಲನೆ ನೀಡಿದ ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ನಿರ್ದೇಶಕರಾದ ಪಾರುಲ್‌ ಶಾ ಹಾಗೂ ಚಲನಚಿತ್ರ ನಿರ್ದೇಶಕ ಟಿ.ಎಸ್‌. ನಾಗಾಭರಣ  –

ಪ್ರಜಾವಾಣಿ ಚಿತ್ರ: ಎಂ.ಎಸ್‌. ಮಂಜುನಾಥ್‌

ಆನ್‌ಲೈನ್‌ನಲ್ಲಿ ಸಿನಿಮಾ ನೋಡಿದರೆ ಮೆಷಿನ್‌ ಜೊತೆ ಸಿನಿಮಾ ನೋಡಿದ ಅನುಭವವಾಗುತ್ತದೆ. ನಾವೆಲ್ಲ ಒಟ್ಟಿಗೆ ಕುಳಿತು ಸಿನಿಮಾ ನೋಡುವಂತೆ ಆಗಬೇಕು. ಗುಂಪಾಗಿ ನೋಡಿದಾಗ ಮಾತ್ರ ಭಾವನೆಗಳು ಹೊರಬರಲು ಸಾಧ್ಯ. ಒಬ್ಬರೇ ಕುಳಿತು ಸಿನಿಮಾ ನೋಡಿದಾಗ ಎಷ್ಟೋ ಭಾವನೆಗಳು ಅಭಿವ್ಯಕ್ತಗೊಳ್ಳದೇ ಹೋಗಬಹುದು. ಸಿನಿಮಾ ಯಾವತ್ತೂ ಆಫ್‌ಲೈನ್‌ ಮಾಧ್ಯಮ, ಆನ್‌ಲೈನ್‌ ಅಲ್ಲ’
ಟಿ.ಎಸ್‌.ನಾಗಾಭರಣ, ಮುಖ್ಯ ತೀರ್ಪುಗಾರರ ಮಂಡಳಿ ಅಧ್ಯಕ್ಷ
ಪ್ರಜಾವಾಣಿಗೆ ತನ್ನದೇ ಆದ ಮೌಲ್ಯವಿದೆ. ನಮ್ಮ ಕೆಲಸವನ್ನು ಪ್ರಜಾವಾಣಿ ಮಾಡುತ್ತಿದೆ. ಇಂತಹ ಪ್ರಶಸ್ತಿಗಳು ಸ್ಫೂರ್ತಿ ನೀಡುತ್ತವೆ. ಕನ್ನಡ ಚಿತ್ರರಂಗದಲ್ಲಿ ಇದೊಂದು ಮಾದರಿ ಸನ್ಮಾನ ಕಾರ್ಯಕ್ರಮ. ನಿರ್ಮಾಪಕರನ್ನೂ ಪ್ರಶಸ್ತಿ ಮೂಲಕ ಗುರುತಿಸುವ ಕೆಲಸವಾಗಲಿ ಎಂದು ಆಶಿಸುತ್ತೇನೆ.
ಎನ್‌.ಎಂ.ಸುರೇಶ್‌, ಅಧ್ಯಕ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

‘ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ’

‘ಭಾರತೀಯ ಇತಿಹಾಸದಲ್ಲಿ ಬೆಳೆದು ಬಂದ ಕುಟುಂಬತನ ಮುಂದೆಯೂ ಪ್ರವಹಿಸಬೇಕೆಂಬ ‘ಪ್ರಜಾವಾಣಿ’ಯ ವಿಚಾರ ಅದ್ಭುತವಾದದ್ದು. ಸೃಜನಶೀಲ, ಪ್ರದರ್ಶನ ಕಲೆಗಳಲ್ಲಿ ಬಹುಮಟ್ಟಿನ ವ್ಯವಸ್ಥೆಯ ಕುಸಿತ ಕಂಡಿರುವಂತಹ ಕ್ಷಣವಿದು. ನಾವೆಲ್ಲ ಸ್ವಂತಿಗಳಾಗಿದ್ದೇವೆ. ಸೆಲ್ಫಿ ದಾಸರಾಗಿದ್ದೇವೆ. ದಿಗ್ಗಜರನ್ನು ಮರೆಯುತ್ತಿದ್ದೇವೆ. ಸಮುದಾಯ ಕಟ್ಟಬೇಕಿದ್ದರೆ ಸಾಂಘಿಕ ಕಲೆಯ ಭರವಸೆ, ನಂಬಿಕೆ ಬೇಕು ಎಂಬುದನ್ನು ಮರೆಯುತ್ತಿದ್ದೇವೆ. ಸಿನಿಮಾ ಅದ್ಭುತವಾದ ಸಾಂಘಿಕ ಕಲೆ. ಚಿತ್ರರಂಗ ಕುಟುಂಬದ ಕಲ್ಪನೆಗೆ ಒತ್ತು ನೀಡುತ್ತ ಬಂದಿದೆ. ನಿರ್ಮಾಪಕ ತಂದೆ, ನಿರ್ದೇಶಕ ತಾಯಿಯಾದಾಗ ಮಾತ್ರ ಸಿನಿಮಾ ಯಶಸ್ವಿಯಾಗಲು ಸಾಧ್ಯ. ಇಂತಹ ಸಿನಿಮಾ ರಂಗದ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ‘ಪ್ರಜಾವಾಣಿ’ ಈ ಪ್ರಶಸ್ತಿಯೊಂದಿಗೆ ಮಾಡುತ್ತಿದೆ’ ಎಂದರು ಮುಖ್ಯ ತೀರ್ಪುಗಾರರಾದ ನಿರ್ದೇಶಕ ಟಿ.ಎಸ್‌.ನಾಗಾಭರಣ.

‘2018ರಿಂದ ರಾಜ್ಯ ಸರ್ಕಾರ ಸಿನಿಮಾ ಪ್ರಶಸ್ತಿ ನೀಡಿಲ್ಲ. ಸರ್ಕಾರ ಮಾಡದ ಕೆಲಸವನ್ನು ಪತ್ರಿಕೆ ತನ್ನ ಕರ್ತವ್ಯವೆಂದು ಭಾವಿಸಿ ಮಾಡುತ್ತಿದೆ. ನಮ್ಮತನವನ್ನು ಕಟ್ಟಿಕೊಳ್ಳುವ, ಭಾಷೆಯನ್ನು ಬೆಳೆಸುವ ಕೆಲಸಕ್ಕೆ ಇಂತಹ ಇನ್ನಷ್ಟು ವೇದಿಕೆಗಳು ಸೃಷ್ಟಿಯಾಗಬೇಕು. ಕಳೆದ ಎರಡು ಮೂರು ದಶಕಗಳಲ್ಲಿ ಕೇವಲ ಸಿನಿಮಾ ಮಾತ್ರವಲ್ಲ, ಇಡೀ ನಮ್ಮ ಬದುಕಿನ ಜೀವನ ಕ್ರಮವೇ ಬದಲಾಗಿದೆ. ಬದುಕನ್ನು ಪ್ರೀತಿಸುವ, ಇನ್ನೊಬ್ಬರನ್ನು ಗೌರವಿಸುವ ಕಾರ್ಯಗಳು ಹಿಂದಕ್ಕೆ ಸರಿಯುತ್ತಿವೆ. ಇಂತಹ ಸಮಯದಲ್ಲಿ ಯಾರೇ ಪ್ರಶಸ್ತಿ ಪಡೆದರೂ ನಮ್ಮ ಕುಟುಂಬದವರು ಪ್ರಶಸ್ತಿ ಪಡೆದಂತೆ. ಮೊದಲ ಪ್ರಶಸ್ತಿಯಿಂದ ಎರಡನೇ ಆವೃತ್ತಿಗೆ ಬಂದಿರುವುದೇ ನಿರಂತರತೆ. ಮುಂದಿನ ದಿನಗಳಲ್ಲಿ ಈ ಪ್ರಶಸ್ತಿಯ ಬೆಲೆ ಅರ್ಥವಾಗುತ್ತದೆ. ಕನ್ನಡ ಮನಸ್ಸುಗಳನ್ನು ಕಟ್ಟುವಲ್ಲಿ ಈ ರೀತಿ ವೇದಿಕೆಗಳು ಬಹಳ ಮುಖ್ಯ’ ಎಂದು ಅವರು ತಿಳಿಸಿದರು.

ಹಾಡಿದ ಪೂಜಾ ಗಾಂಧಿ

ನಟಿ ಪೂಜಾ ಗಾಂಧಿ ಅವರ ಕನ್ನಡ ಪ್ರೇಮ ಎಲ್ಲರಿಗೂ ತಿಳಿದೇ ಇದೆ. ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ಎರಡನೇ ಆವೃತ್ತಿಯ ತಾಂತ್ರಿಕ ತೀರ್ಪುಗಾರರಲ್ಲಿ ಇವರೂ ಒಬ್ಬರು. ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ನಡುವೆ ಸ್ವಇಚ್ಛೆಯಿಂದ ವೇದಿಕೆಯೇರಿದ ಪೂಜಾ ಗಾಂಧಿ, ‘ಜೀವ ಹೂವಾಗಿದೆ..’ ಹಾಗೂ ‘ಜೇನಿನ ಹೊಳೆಯೋ..’ ಎಂಬ ಹಾಡುಗಳನ್ನು ಹಾಡಿ ತಮ್ಮ ಕನ್ನಡ ಪ್ರೇಮವನ್ನು ಮೆರೆದರು.   

ಜೇನಿನ ಹೊಳೆಯೋ.. ಹಾಡು ಹಾಡಿದ ಪೂಜಾ ಗಾಂಧಿ

ಜೇನಿನ ಹೊಳೆಯೋ.. ಹಾಡು ಹಾಡಿದ ಪೂಜಾ ಗಾಂಧಿ

ಪ್ರಜಾವಾಣಿ ಚಿತ್ರ: ಎಂ.ಎಸ್‌. ಮಂಜುನಾಥ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT