ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿ ಬದುಕಿನ ಎರಡನೇ ಅಧ್ಯಾಯ

Last Updated 20 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

‘ಲವ್‌ ಮಾಕ್ಟೇಲ್ – 2’ ಚಿತ್ರದ ಚಿತ್ರೀಕರಣವನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವ ಯೋಚನೆಯಲ್ಲಿದ್ದಾರೆ ಡಾರ್ಲಿಂಗ್ ಕೃಷ್ಣ.

‘ಲವ್‌ ಮಾಕ್ಟೇಲ್‌’ ಚಿತ್ರ ಇಷ್ಟಪಟ್ಟಿರುವ ಪ್ರೇಕ್ಷಕರಿಗೆ ಅದರ ಮುಂದುವರಿದ ಭಾಗ ನಿಜಕ್ಕೂ ಹಬ್ಬವಿದ್ದಂತೆ...’

–ಹೀಗೆಂದು ಒಂದೇ ಸಾಲಿನಲ್ಲಿ ‘ಲವ್‌ ಮಾಕ್ಟೇಲ್‌ 2’ ಸಿನಿಮಾ ಕುರಿತು ಹೇಳಿದವರು ನಟ ಡಾರ್ಲಿಂಗ್‌ ಕೃಷ್ಣ. ‘ಲವ್‌ ಮಾಕ್ಟೇಲ್‌’ ಚಿತ್ರದ ಭರ್ಜರಿ ಯಶಸ್ಸಿನ ಅಲೆಯಲ್ಲಿಯೇ ಅವರು ಅದರ ಸೀಕ್ವೆಲ್‌ಗೆ ಸಿದ್ಧತೆ ನಡೆಸಿದ್ದಾರೆ. ಇದರ ಶೂಟಿಂಗ್‌ಗಾಗಿ ಇಡೀ ಕರ್ನಾಟಕದಾದ್ಯಂತ ಪಯಣಿಸಲು ಅವರು ನಿರ್ಧರಿಸಿದ್ದಾರಂತೆ. ಅವರೊಟ್ಟಿಗೆ ನಡೆಸಿದ ಮಾತುಕತೆಯ ಅಕ್ಷರರೂಪ ಇಲ್ಲಿದೆ.

* ‘ಲವ್‌ ಮಾಕ್ಟೇಲ್‌ 2’ ಸಿನಿಮಾದ ಕಥೆಯ ಎಳೆ ಎಂತಹದ್ದು?
‘ಲವ್‌ ಮಾಕ್ಟೇಲ್’‌ನ ಮುಂದುವರಿದ ಭಾಗವಿದು. ಆದಿಯ ಬದುಕಿನಲ್ಲಿ ಏನೆಲ್ಲಾ ಆಗುತ್ತದೆ ಎಂಬುದೇ ಕಥೆಯ ತಿರುಳು. ಇದರಲ್ಲಿ ನನ್ನದು ಎರಡು ಶೇಡ್‌ಗಳಿರುವ ಪಾತ್ರ. ಚಿತ್ರದ ಸ್ಕ್ರಿಪ್ಟ್‌ ಪೂರ್ಣಗೊಂಡಿದೆ. ಚಿತ್ರದ ಪಾತ್ರಕ್ಕಾಗಿಯೇ ಗಡ್ಡ ಬಿಟ್ಟಿರುವೆ. ಮೊದಲಿಗೆ ಈ ಭಾಗದ ಶೂಟಿಂಗ್‌ ಪೂರ್ಣಗೊಳಿಸಲು ನಿರ್ಧರಿಸಿರುವೆ. ಇದಾದ ಬಳಿಕ ನನ್ನದೇ ಆದ ಕೆಲವು ಕೆಲಸಗಳಿವೆ. ಅವುಗಳನ್ನು ಪೂರ್ಣಗೊಳಿಸಿದ ಬಳಿಕ ಮತ್ತೆ ಶೂಟಿಂಗ್‌ ಶುರು ಮಾಡಲು ತೀರ್ಮಾನಿಸಿದ್ದೇನೆ.

* ನಿಮ್ಮ ಅಭಿಮಾನಿಗಳನ್ನು ರಂಜಿಸುವ ಅಂಶಗಳು ಏನಿವೆ?
ಯಾವ ಪಾತ್ರಗಳು ಬರುತ್ತವೆ, ಅವು ಹೇಗೆ ಕಥೆಯೊಳಗೆ ಮಿಳಿತಗೊಂಡಿವೆ ಎನ್ನುವುದೇ ಈ ಚಿತ್ರದ ತಿರುಳು. ಅದಿತಿ, ಜೋ, ವಿಜು, ಸುಷ್ಮಾ, ರೋಜು ಇವರೆಲ್ಲರೂ ಆದಿಯ ಬದುಕಿನಲ್ಲಿ ಬಂದಿರುವ ಪಾತ್ರಗಳಾಗಿವೆ. ಇವುಗಳನ್ನು ಬಿಟ್ಟು ಹೊಸ ಪಾತ್ರಗಳು ಬರುತ್ತವೆ. ಈ ನಡುವೆಯೇ ಆತನ ಬದುಕಿನಲ್ಲಿ ಮತ್ತೆ ಹಳೆಯ ಪಾತ್ರಗಳು ಬಂದರೆ ಹೇಗಿರುತ್ತದೆ ಎಂಬುದೇ ಕಥೆಯ ಕುತೂಹಲ.

*ಎಲ್ಲೆಲ್ಲಿ ಶೂಟಿಂಗ್‌ ನಡೆಸಲು ಯೋಜನೆ ರೂಪಿಸಿದ್ದೀರಿ?
ಅರ್ಧದಷ್ಟು ಶೂಟಿಂಗ್ ಬೆಂಗಳೂರಿನಲ್ಲಿಯೇ ನಡೆಯಲಿದೆ. ಮಡಿಕೇರಿಯಲ್ಲಿ ಶೇಕಡ 40ರಷ್ಟು ಚಿತ್ರೀಕರಣ ನಡೆಸಲಾಗುವುದು. ಉಳಿದ ಭಾಗವನ್ನು ಇಡೀ ಕರ್ನಾಟಕದಾದ್ಯಂತ ಪ್ರಯಾಣ ಬೆಳೆಸಿ ಶೂಟಿಂಗ್‌ ನಡೆಸಲು ನಿರ್ಧರಿಸಿದ್ದೇನೆ.

*ನಿಮ್ಮ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಹೇಳಿ.
‘ಶ್ರೀಕೃಷ್ಣ@ಜಿಮೇಲ್ ಡಾಟ್‌ ಕಾಮ್‌’ ಚಿತ್ರದಲ್ಲಿ ನಟಿಸುತ್ತಿರುವೆ. ಮುಂದಿನ ತಿಂಗಳು ಇದರ ಶೂಟಿಂಗ್ ಶುರುವಾಗುವ ನಿರೀಕ್ಷೆಯಿದೆ. ಬಹುತೇಕ ಕಾಮಿಡಿ ಹಾದಿಯಲ್ಲಿಯೇ ಇದರ ಕಥೆ ಸಾಗಲಿದೆ.‘ವರ್ಜಿನ್’ ಸಿನಿಮಾದ ಶೂಟಿಂಗ್‌ ಶೇಕಡ 60ರಷ್ಟು ಪೂರ್ಣಗೊಂಡಿದೆ. ನಾನೇ ಬರೆದಿರುವ ಮೂರು ಕಥೆಗಳಿವೆ. ಅವುಗಳನ್ನು ಯಾವಾಗ ಕೈಗೆತ್ತಿಕೊಳ್ಳುತ್ತೇನೆ ಎಂಬುದು ಗೊತ್ತಿಲ್ಲ. ಬೇರೆ ನಿರ್ದೇಶಕರ ಕಥೆಗಳನ್ನೂ ಕೇಳುತ್ತಿರುವೆ. ಈಗ ನಾನು ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಲು ಒಂದು ವರ್ಷ ಬೇಕು. ಅದಾದ ಬಳಿಕವಷ್ಟೇ ಹೊಸ ಸಿನಿಮಾಗಳ ಬಗ್ಗೆ ಆಲೋಚಿಸುತ್ತೇನೆ.

*ನೀವು ಸಿನಿಮಾ ನಿರ್ದೇಶಿಸುವಾಗ ಮತ್ತು ಹೊಸ ಸಿನಿಮಾ ಒಪ್ಪಿಕೊಳ್ಳುವಾಗ ಯಾವ ಅಂಶಗಳಿಗೆ ಒತ್ತು ನೀಡುತ್ತೀರಿ?
ನನ್ನ ನಿರ್ದೇಶನದ ರೀತಿಯೇ ಭಿನ್ನವಾಗಿರುತ್ತದೆ. ಏಕೆಂದರೆ ಅದು ನನ್ನದೇ ಸ್ಕ್ರಿಪ್ಟ್‌. ಅದಕ್ಕೆ ಆ್ಯಕ್ಷನ್‌ ಕಟ್‌ ಹೇಳುವುದೂ ನಾನೇ. ಚಿತ್ರದ ಕಥೆಯ ಬಗ್ಗೆ ಒಂದಷ್ಟು ಟ್ರಾವೆಲ್‌ ಮಾಡುತ್ತೇನೆ. ಕಥೆ ನನಗೆ ಮೊದಲಿಗೆ ಇಷ್ಟವಾಗಬೇಕು. ಅದು ಮನರಂಜನಾತ್ಮಕವಾಗಿದೆಯೇ ಎಂದು ಯೋಚಿಸುತ್ತೇನೆ. ಅದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆಯೇ ಎಂದು ಪರಿಶೀಲಿಸುತ್ತೇನೆ. ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳುತ್ತೇನೆ.

ಬೇರೆ ನಿರ್ದೇಶಕರ ಸಿನಿಮಾಗಳಲ್ಲಿ ನಟಿಸುವಾಗ ಕಥೆಗೆ ವಿಶೇಷ ಪ್ರಾಧಾನ್ಯ ನೀಡುತ್ತೇನೆ. ಅಲ್ಲಿ ನನ್ನ ಆಲೋಚನೆಗಳನ್ನು ತುರುಕುವುದಿಲ್ಲ. ಕಥೆ ಇಷ್ಟವಾದರೆ ನಾನು ನಟಿಸಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT