ಬೆಂಗಳೂರು: ಜೂನಿಯರ್ ಎನ್‌ಟಿಆರ್ ಅವರ ಬಹುನಿರೀಕ್ಷಿತ ‘ದೇವರ‘ ಸಿನಿಮಾದ ಸೆಕೆಂಡ್ ಲುಕ್ ಬಿಡುಗಡೆಯಾಗಿದ್ದು ಅದರಲ್ಲಿ ನಟಿ ಜಾಹ್ನವಿ ಕಪೂರ್ ಸಕತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.
ನಿರ್ಮಾಪಕರು ಸಾಮಾಜಿಕ ಜಾಲತಾಣಗಳಲ್ಲಿ ಈ ಸೆಕೆಂಡ್ ಲುಕ್ ಹಂಚಿಕೊಂಡಿದ್ದಾರೆ. 20 ಸೆಕೆಂಡ್‌ಗಳ ಈ ವಿಡಿಯೊದಲ್ಲಿ ಎನ್‌ಟಿಆರ್ ಜೊತೆ ಜಾಹ್ನವಿ ನೀಲಿ ಸೀರೆಯಲ್ಲಿ ಬೀಚ್ ಪಕ್ಕದಲ್ಲಿ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ವಿಡಿಯೊ ನಿನ್ನೆಯಿಂದ ಎಕ್ಸ್‌ನಲ್ಲಿ ಟ್ರೆಂಡ್ ಸೃಷ್ಟಿಸಿದೆ.
ಕೊರಟಾಲ ಶಿವ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಜ್ಯೂ. ಎನ್‌ಟಿಆರ್ ವಿಭಿನ್ನವಾದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
‘ದೇವರ’ ಚಿತ್ರದ ಮೂಲಕ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇದೇ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಹೆಜ್ಜೆ ಇಟ್ಟಿದ್ದಾರೆ. ಜೊತೆಗೆ ಬಾಲಿವುಡ್‌ನ ಖ್ಯಾತ ನಟ ಸೈಫ್ ಅಲಿ ಖಾನ್ ಖಳನಟನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ ಎಂದಿದೆ ಚಿತ್ರತಂಡ. ಯುವಸುಧಾ ಆರ್ಟ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್‌ನಡಿ ಸುಧಾಕರ್ ಮಿಕ್ಕಿಲಿನೇನಿ ಮತ್ತು ಹರಿಕೃಷ್ಣ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
2024ರ ಸೆಪ್ಟೆಂಬರ್ 27 ರಂದು ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ‘ದೇವರ’ ಬಿಡುಗಡೆಯಾಗಲಿದ್ದು, ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ, ರತ್ನವೇಲು ಛಾಯಾಚಿತ್ರಗ್ರಹಣ ಮತ್ತು ಶ್ರೀಕರ್ ಪ್ರಸಾದ್ ಅವರ ಸಂಕಲನವಿದೆ.