ಶುಕ್ರವಾರ, ಏಪ್ರಿಲ್ 23, 2021
22 °C

ಡಿಚ್ಕಿ ಡಿಸೈನ್‌: ಇವು ನಗರದ ಬಣ್ಣಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದ ಹೆಸರು ‘ಡಿಚ್ಕಿ ಡಿಸೈನ್‌’. ಚಿತ್ರವನ್ನು ರೂಪಿಸಿರುವುದು ಹೊಸಬರ ತಂಡ. ತಂಡವೂ ಹೊಸದು, ಶೀರ್ಷಿಕೆ ಕೂಡ ತೀರಾ ಭಿನ್ನ. ಹಾಗಾಗಿ, ಈ ಚಿತ್ರವು ಜನರ ಬಳಿ ತಲುಪುವಲ್ಲಿ ಯಶಸ್ಸು ಕಾಣುವುದೇ ಎಂಬ ಪ್ರಶ್ನೆಯನ್ನು, ‘ಇದು ಜನರಿಗೆ ಇಷ್ಟವಾಗುತ್ತದೆ, ಖಂಡಿತ’ ಎಂಬ ವಿಶ್ವಾಸವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸುದ್ದಿಗೋಷ್ಠಿ ಕರೆದಿದ್ದರು ನಿರ್ದೇಶಕ ರಣಚಂದು.

ಈ ಚಿತ್ರ ಸೆಟ್ಟೇರಿದ್ದು 2017ರಲ್ಲಿ. ಚಿತ್ರದ ಕೆಲಸಗಳು ಈಗ ಪೂರ್ಣಗೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಚಿತ್ರದ ಪೋಸ್ಟರ್‌ನಲ್ಲಿ, ಹದಿಹರೆಯದ ವ್ಯಕ್ತಿಯೊಬ್ಬ ಒಂದು ಕೈಯಲ್ಲಿ ಪಿಸ್ತೂಲ್‌ ಹಿಡಿದು, ಇನ್ನೊಂದು ಕೈಯಲ್ಲಿ ಹುಕ್ಕಾ ಪೈಪ್‌ ಹಿಡಿದಿದ್ದಾನೆ. ಕೊರಳಿಗೆ ಬಗೆಬಗೆಯ ಆಭರಣಗಳನ್ನು ಸುತ್ತಿಕೊಂಡಿದ್ದಾನೆ. ಚಿತ್ರದಲ್ಲಿ ಉಪೇಂದ್ರ ಸ್ಟೈಲ್‌ನ ಪ್ರಭಾವ ಇದ್ದಂತಿದೆ.

ಹೊಸಬರು ಹೊಸ ಶೈಲಿಯಲ್ಲಿ ಸಿನಿಮಾ ಮಾಡಿದರೆ ಮಾತ್ರ ವೀಕ್ಷಕರು ಸ್ವೀಕರಿಸುತ್ತಾರೆ ಎಂದು, ಹೀಗೆ ವಿಭಿನ್ನವಾಗಿ ಶೀರ್ಷಿಕೆ ನೀಡಲಾಗಿದೆಯಂತೆ.

‘ಈ ಸಿನಿಮಾದ ಕಥೆಗಿಂತಲೂ, ಸಿನಿಮಾ ಇಲ್ಲಿಯವರೆಗೆ ನಡೆದುಬಂದ ಕಥೆಯೇ ಹೆಚ್ಚು ರೋಚಕವಾಗಿದೆ’ ಎನ್ನುತ್ತ ಮಾತು ಆರಂಭಿಸಿದರು ನಿರ್ದೇಶಕ ರಣಚಂದು. ಅವರು ಈ ಚಿತ್ರದ ನಾಯಕ ಕೂಡ ಹೌದು. ‘ನನ್ನ ಕೈಯಲ್ಲಿ ಒಂದೂವರೆ ಲಕ್ಷ ರೂಪಾಯಿ ಮಾತ್ರ ಇತ್ತು. ಆದರೆ, ಕೈಯಲ್ಲಿ ಚಿತ್ರಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸ್ಕ್ರಿಪ್ಟ್‌ ಇತ್ತು. ಸಿನಿಮಾ ಉದ್ಯಮದಲ್ಲಿ ನಮಗೆ ದೊಡ್ಡ ಕೈ ಇಲ್ಲ. ಆದರೆ ದೊಡ್ಡ ಕನಸುಗಳು ಇವೆ’ ಎಂದು ಹೇಳಿಕೊಂಡರು.

‘ಚಿತ್ರದ ಹೆಸರು ಡಿಚ್ಕಿ ಡಿಸೈನ್‌ ಎಂದು ಹೇಳಿದಾಗ, ಏನಪ್ಪಾ ಇದು ಎಂದು ಕೇಳಿದವರು ಇದ್ದಾರೆ. ಆದರೆ ಎರಡನೆಯ ಬಾರಿ ಹೇಳಿದ ನಂತರ, ಶೀರ್ಷಿಕೆ ಅವರ ತಲೆಯಲ್ಲಿ ಅಚ್ಚೊತ್ತಿ ನಿಲ್ಲುತ್ತಿದೆ. ಕಥೆಯೇ ಈ ಸಿನಿಮಾದ ಆಸ್ತಿ. ಕಥೆ ಕೇಳಿದ ನಂತರ ಚಿತ್ರದಲ್ಲಿ ಕೆಲಸ ಮಾಡಲು ತಾಂತ್ರಿಕ ವರ್ಗದವರೆಲ್ಲ ಒಪ್ಪಿದರು. ಕಥೆಯ ಕಾರಣದಿಂದಾಗಿಯೇ ಸಿನಿಮಾ ಇಲ್ಲಿವರೆಗೆ ನಡೆದುಬಂದಿದೆ’ ಎಂದು ಖುಷಿಯಿಂದ ಹೇಳಿಕೊಂಡರು ರಣಚಂದು.

ಏನೂ ಗೊತ್ತಿಲ್ಲದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಬೆಂಗಳೂರು ದುನಿಯಾ ನೋಡಲು ಹೊರಟರೆ ಏನಾಗುತ್ತದೆ ಎಂಬುದು ಚಿತ್ರದ ಕಥಾಸಾರ. ‘ನಾಯಕಿ ಮನಕಲಕುವ ಪಾತ್ರ ನಿಭಾಯಿಸಿದ್ದಾರೆ. ಈ ಪಾತ್ರ ನಿಭಾಯಿಸುವುದು ಸುಲಭದ ಕೆಲಸ ಆಗಿರಲಿಲ್ಲ’ ಎಂದು ಅವರು ಹೇಳಿದರು.

ಬಹಳ ಮಾತನಾಡುವ, ಎಲ್ಲವನ್ನೂ ಓವರ್‌ ಆಗಿ ಮಾಡುವವನ್ನು ಕಾಲೇಜು ಹುಡುಗರು ‘ಡಿಚ್ಕಿ ಡಿಸೈನ್’ ಎಂದು ಕರೆಯುತ್ತಾರಂತೆ. ಈ ಕಾಲೇಜಿನ ಹೊರಗಡೆ ಕೇಳಿಸುವುದಿಲ್ಲವಂತೆ. ಈ ಚಿತ್ರದಲ್ಲಿ ಹಳ್ಳಿಯ ಹುಡುಗನೊಬ್ಬ ಪೇಟೆಯ ಡಿಚ್ಕಿ ಡಿಸೈನ್‌ ಬದುಕು ನೋಡುತ್ತಾನೆ. ಚಿತ್ರದ ಚಿತ್ರೀಕರಣವು ಬೆಂಗಳೂರು, ಬೆಳಗಾವಿ, ಗೋಕರ್ಣ ಮತ್ತು ಮುಂಬೈನಲ್ಲಿ ನಡೆದಿದೆ.

‘ಬೆಂಗಳೂರಿನ ಮಜಲುಗಳು, ಬಣ್ಣಗಳು ಇಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಇಲ್ಲಿ ನಾಯಕ ಭೂಗತ ಜಗತ್ತಿನಷ್ಟೇ ಕರಾಳ ದಂಧೆಯೊಂದಕ್ಕೆ ಇಳಿಯುತ್ತಾನೆ’ ಎಂದು ಚಿತ್ರತಂಡ ಹೇಳಿದೆ.

‘ನಾನು ಈ ಸಿನಿಮಾದಲ್ಲಿ ನಟಿಸಲು ಒಪ್ಪಿದಾಗ, ಶೀರ್ಷಿಕೆ ಅಂತಿಮಗೊಂಡಿರಲಿಲ್ಲ. ನಾನು ಮೂರು ಶೇಡ್‌ಗಳಲ್ಲಿ ನಟಿಸಿದ್ದೇನೆ. ಒಂದು ಹೋಮ್ಲಿ ಹುಡುಗಿಯದ್ದು, ಇನ್ನೊಂದು ಇನ್‌ಸ್ಪೆಕ್ಟರ್‌ ಪಾತ್ರ. ಮತ್ತೊಂದು ಗ್ಲಾಮರಸ್ ಪಾತ್ರ’ ಎಂದರು ನಾಯಕಿ ನಿಮಿಕಾ ರತ್ನಾಕರ್. ಚಿತ್ರದಲ್ಲಿ ಮೂರು ಹಾಡುಗಳಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು