ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಸಿನ ಕಾಯಿ ಪಲ್ಯ ಕಲ್ತಿದ್ದಾಳೆ ಐಂದ್ರಿತಾ

Last Updated 25 ಮಾರ್ಚ್ 2019, 20:15 IST
ಅಕ್ಷರ ಗಾತ್ರ

‘ಹಲಸಿನಕಾಯಿ ಪಲ್ಯ ಮಾಡೋದು ಕಲಿತಿದ್ದಾಳೆ, ಕಡುಬು ಮಾಡೋದೆಲ್ಲ ಇನ್ನು ಕಲಿಬೇಕಷ್ಟೇ....’ ಹೀಗೆಂದು ಮುದ್ದಿನ ಮಡದಿ ಐಂದ್ರಿತಾರ ಕಣ್ಣಲ್ಲಿ ಕಣ್ಣಿಟ್ಟು ಪ್ರತಿಕ್ರಿಯೆ ನೀಡಿದವರು ನಟ ದಿಗಂತ್.

ಬಿಗ್‌ ಬಜಾರ್‌ ಉಡುಪುಗಳ ಪ್ರಚಾರ ರಾಯಭಾರಿಯಾಗಿರುವ ದಿಗಂತ್‌ ಮತ್ತು ಐಂದ್ರಿತಾ ಮಾಗಡಿ ರಸ್ತೆಯ ಜಿಟಿ ಮಾಲ್‌ನಲ್ಲಿ ಯುಗಾದಿಯ ಹೊಸ ಸಂಗ್ರಹದ ಪ್ರಚಾರಕ್ಕೆಂದು ಬಂದಿದ್ದಾಗ ‘ಮೆಟ್ರೊ’ ಜೊತೆ ಮಾತನಾಡಿದರು.

ವೃತ್ತಿಯ ಜಂಜಾಟದಿಂದ ಒಂದಷ್ಟು ದೂರವಿದ್ದು ದಾಂಪತ್ಯವನ್ನು ಅನುಭವಿಸುತ್ತಿರುವ ದಂಪತಿ ಒಬ್ಬರನ್ನೊಬ್ಬರು ಬಿಟ್ಟು ಕೊಡುತ್ತಿಲ್ಲ. ‘ಪತ್ನಿ ಚೆನ್ನಾಗಿ ಅಡುಗೆ ಮಾಡುತ್ತಾಳೆ. ಮಲೆನಾಡಿನಕೆಲವು ಅಡುಗೆಗಳನ್ನು ಕಲಿಯುತ್ತಿದ್ದಾಳೆ. ಹಲಸಿಕಾಯಿ ಪಲ್ಯ ಮಾಡೋದು ಕಲಿತಿದ್ದಾಳೆ’ ಎಂದ ದಿಗಂತ್‌, ‘ಏನೇ ಮಾಡಿ ಕೊಟ್ಟರೂ ಚೆನ್ನಾಗಿ ತಿಂತಾರೆ, ಬೇಜಾರೇ ಮಾಡ್ಕೊಳ್ಳಲ್ಲ’ ಅಂತ ನಕ್ಕರು ಐಂದ್ರಿತಾ. ಒಬ್ಬರಿಗೊಬ್ಬರು ಕೈಗಳನ್ನು ಹೊಸೆದುಕೊಂಡೇ ಮೆಚ್ಚುಗೆಯ ಮಾತುಗಳನ್ನಾಡಿದರು.

ಮೈಕ್‌ ಹಿಡಿದು ಮಿದುವಾಗಿ ಮಾತನಾಡುತ್ತಿದ್ದ ಪತ್ನಿಗೆ, ‘ಜೋರಾಗಿ ಮಾತಾಡು, ಮನೆಯಲ್ಲಿ ಅಷ್ಟು ಜೋರು ಮಾತಾಡುತ್ತಿ...’ ಎಂದು ನಗುತ್ತಲೇಕಾಲೆಳೆದ ದಿಗಂತ್‌ ಅಪ್ಪಟ ಭಾರತೀಯ ಪತಿಯ ಗತ್ತು ತೋರಿದರು.

‘ರಿಲೇಷನ್‌ಶಿಪ್‌ನಲ್ಲಿದ್ದಾಗ ಎಲ್ಲವೂ ಚೆನ್ನಾಗಿರುತ್ತೆ. ಆದರೆ, ಮದುವೆಯಾದ ಮೇಲೆ ಸಂಬಂಧ ಹೀಗೇ ಇರಲ್ಲ. ಜಗಳ, ಮನಸ್ತಾಪ ಶುರುವಾಗುತ್ತೆ ಅಂತಮದುವೆಯಾಗೋಕು ಮುನ್ನ ನಮ್ಮ ಗೆಳೆಯರೆಲ್ಲ ಭಯ ಹುಟ್ಟಿಸಿದ್ರು. ಆದರೆ, ನಾವು ಮದುವೆಯಾದ ಮೇಲೂ ಮೊದಲಿನಂತೆಯೇ ಇದ್ದೇವೆ. ನಮ್ಮ ಬದುಕಲ್ಲಿ ಏನೂ ಬದಲಾವಣೆ ಆಗಿಲ್ಲ’ ಎಂದು ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು.

ತಾರಾ ದಂಪತಿಯ ಮಾತು ವೃತ್ತಿಯ ಕಡೆಗೂ ಹೊರಳಿತು. ‘ಸದ್ಯ ಯಾವುದೇ ಸಿನಿಮಾಗಳ ಜೊತೆ ಕಮಿಟ್‌ ಆಗಿಲ್ಲ. ನನಗಿಷ್ಟದ ಪಾತ್ರಗಳು ಸಿಗುತ್ತಿಲ್ಲ. ಮುಂದೆ ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದೇನೆ’ ಎಂದರು ಐಂದ್ರಿತಾ. ‘ಒಂದು ಹಿಂದಿ ಮತ್ತು ಒಂದು ತೆಲುಗು ಸಿನಿಮಾ ಮುಗಿಸಿದ್ದೇನೆ’ ಎಂದು ಕೆರಿಯರ್‌ ಅಪ್‌ಡೇಟ್‌ ಮಾಡಿದರು ದಿಗಂತ್‌.

‘ಸದ್ಯ ಬದುಕನ್ನು ಖುಷಿಯಿಂದ ಕಳೆಯುತ್ತಿದ್ದೇವೆ. ಈ ಯುಗಾದಿ ನಮ್ಮಿಬ್ಬರಿಗೂ ವಿಶೇಷ. ಮದುವೆಯ ನಂತರ ಬಂದ ಮೊದಲ ಯುಗಾದಿ. ಹಾಗಾಗಿ ಈ ಹಬ್ಬವನ್ನು ಸಾಗರದ ನಮ್ಮ ಮನೆಯಲ್ಲಿ ಆಚರಿಸಲಿದ್ದೇವೆ’ ಎಂದು ದಿಗಂತ್‌ ಹೇಳಿದರು.

ಎಫ್‌ಬಿಬಿ ಯುಗಾದಿ ಸಂಗ್ರಹ
ಯುಗಾದಿಯ ಸಂಭ್ರಮ ಹೆಚ್ಚಿಸಲು ಬಿಗ್‌ ಬಜಾರ್‌ ವಿನೂತನ ಉಡುಗೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೆಣ್ಣುಮಕ್ಕಳು ಧರಿಸುವ ಆಕರ್ಷಕ ಕುರ್ತಾ, ಪಲೋಝಾ, ಪ್ಯಾಂಟ್‌, ಟೀ–ಶರ್ಟ್‌, ಟಾಪ್‌ಗಳು, ಜೀನ್ಸ್‌, ಪಾದರಕ್ಷೆಗಳು. ಮಕ್ಕಳ ಫ್ರಾಕ್‌, ಟಾಪ್‌, ಟೀ–ಶರ್ಟ್, ಜೀನ್ಸ್, ಪುರುಷರ ಸ್ಟೈಲಿಶ್‌ ಆಫಿಸ್‌ ವೇರ್, ಟೀಶರ್ಟ್‌, ಚಡ್ಡಿ, ಜೀನ್ಸ್‌ ಪ್ಯಾಂಟುಗಳ ಬೃಹತ್‌ ಸಂಗ್ರಹವಿದೆ.

ಪುಟಾಣಿ ಮಾಡೆಲ್‌ಗಳು, ಯುವ ಮಾಡೆಲ್‌ಗಳು ಹೊಸ ಉಡುಪುಗಳನ್ನು ತೊಟ್ಟು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಯುಗಾದಿ ಉಡುಪುಗಳ ಸಂಗ್ರಹವನ್ನು ದಿಗಂತ್‌, ಐಂದ್ರಿತಾ ಬಿಡುಗಡೆ ಮಾಡಿದರು. ಉಡುಗೆ ಕಂಫರ್ಟಬಲ್‌ ಆಗಿರಬೇಕು. ಆಗ ನಾವೂ ಹೆಚ್ಚು ಕಂಫರ್ಟಬಲ್‌ ಆಗಿರುತ್ತೇವೆ. ಅದು ಯಾವುದೇ ಬಗೆಯ ಉಡುಗೆಯಾಗಿದ್ದರೂ ತೊಡಲು ಹಿತವಾಗಿದ್ದರೆ ಆಕರ್ಷಕವಾಗಿಯೇ ಇರುತ್ತದೆ ಎಂಬುದು ಐಂದ್ರಿತಾರ ಫ್ಯಾಷನ್‌ ಮಾತು.

ತುಂಬಾ ವರ್ಷಗಳಿಂದ ಎಫ್‌ಬಿಬಿ ರಾಯಭಾರಿಯಾಗಿದ್ದೇವೆ. ಸಹಜವಾಗಿಯೇ ನಾನು ಈ ಬ್ರಾಂಡ್‌ನ ಉಡುಗೆಗಳನ್ನೇ ತೊಡುತ್ತೇನೆ. ವಿನ್ಯಾಸ ಮತ್ತು ಗುಣಮಟ್ಟದಲ್ಲಿ ಎಫ್‌ಬಿಬಿಯೇ ಮೊದಲ ಆಯ್ಕೆ ಎಂದು ದಿಗಂತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT