ಶನಿವಾರ, ಜೂಲೈ 4, 2020
28 °C

ಗಾಡ್‌ಫಾದರ್‌ ನನಗಿಲ್ಲ: ದಿಶಾ ಪೂವಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Disha Poovaiah

‘ನಾನು ಇದುವರೆಗೆ ನಟಿಸಿದ ಸಿನಿಮಾಗಳ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಾಗಿಲ್ಲ. ಹಾಗಾಗಿ, ಇನ್ನು ನಾನು ಒಳ್ಳೆಯ ಸಿನಿಮಾಗಳನ್ನು ಮಾಡಬೇಕು. ಸಿನಿಮಾ ರಂಗದಲ್ಲಿ ನನಗೆ ಗಾಡ್‌ಫಾದರ್‌ ಯಾರೂ ಇಲ್ಲ. ನಾನು ನಡೆಯುವ ಹಾದಿ ಸರಿಯೋ ತಪ್ಪೋ ಎಂದು ಹೇಳುವವರು ಯಾರೂ ಇರಲಿಲ್ಲ. ಇದು ನನ್ನ ಸೋಲಿಗೆ ಕಾರಣವಾಗಿರಬಹುದು. ಅಥವಾ ಅಭಿನಯದಲ್ಲೂ ನಾನು ಸೋತಿರಬಹುದು...’

–ಇಷ್ಟು ಮಾತನ್ನು ಒಂದೇ ಉಸಿರಿಗೆ ಹೇಳಿದರು ನಟಿ ದಿಶಾ ಪೂವಯ್ಯ. ದಿಶಾ ಅವರು ನಟಿಸಿರುವ ‘ಒಂದು ದಿನ, ಒಂದು ಕ್ಷಣ’ ಸಿನಿಮಾದ ಚಿತ್ರೀಕರಣದ ಕೆಲಸಗಳು ಪೂರ್ಣಗೊಂಡಿದೆ. ಇದರ ಡಬ್ಬಿಂಗ್ ಕೆಲಸಗಳು ಆರಂಭವಾಗಬೇಕಿವೆ. ಈ ಸಿನಿಮಾ ನೆಪದಲ್ಲಿ ದಿಶಾ ಅವರು ‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕಿದ್ದರು.

ಮಾತಿನ ನಡುವೆ ತಮ್ಮ ಇದುವರೆಗಿನ ಸಿನಿಮಾ ಯಾನದ ಮೇಲೊಂದು ನೋಟ ಹರಿಸಿದ ದಿಶಾ, ಆತ್ಮಾವಲೋಕನದ ಮೂಡ್‌ನತ್ತ ಸಾಗಿದರು. ‘ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದೆ. ಒಳ್ಳೆಯ ನಿರ್ದೇಶಕರ ಜೊತೆ ಕೂಡ ಕೆಲಸ ಮಾಡಿದೆ. ಆದರೆ, ಎಲ್ಲಿಯೂ ನನಗೆ ಒಂದು ಅಸ್ಮಿತೆ ಕೊಡುವಂತಹ ಪಾತ್ರ ಸಿಗಲಿಲ್ಲ. ನಾನು ಯಾರು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಸಿನಿಮಾ ಆಯ್ಕೆ ಮಾಡುವಾಗ ಪಾತ್ರಗಳನ್ನು ನೋಡಿ ಆಯ್ಕೆ ಮಾಡಿಕೊಳ್ಳಿ ಎಂದು ಹಲವರು ಹೇಳಿದರು. ಆದರೆ ಅಂತಹ ಅವಕಾಶ ಸಿಗಲಿಲ್ಲ. ಮರ ಸುತ್ತುವ ಪಾತ್ರಗಳನ್ನೇ ಮಾಡಿಕೊಂಡು ಇರಲು ನನಗೆ ಇಷ್ಟವಿಲ್ಲ’ ಎಂದು ಹೇಳಿದರು ದಿಶಾ.

‘ಒಳ್ಳೆಯ ನಿರ್ದೇಶಕ, ಒಳ್ಳೆಯ ಸ್ಕ್ರಿ‍ಪ್ಟ್‌, ಒಳ್ಳೆಯ ಕಥೆ ಇರುವ ಸಿನಿಮಾದಲ್ಲಿ ಕೆಲಸ ಮಾಡಬೇಕು ಎಂಬ ಬಯಕೆಯಲ್ಲಿ ಇದ್ದೇನೆ. ಹಾಗಾಗಿ ಕಾಯುತ್ತ ಇದ್ದೇನೆ’ ಎಂದರು.

‘ಒಂದು ದಿನ, ಒಂದು ಕ್ಷಣ’ ಸಿನಿಮಾದಲ್ಲಿ ಇವರದ್ದು ನಾಯಕಿಯ ಪಾತ್ರ. ‘ಇದು ಸಮಾಜ ಸೇವೆಯನ್ನು ಆಧರಿಸಿದ ಸಿನಿಮಾ. ಕಿರಗೂರಿನ ಗಯ್ಯಾಳಿಗಳು ಸಿನಿಮಾದಲ್ಲಿ ಇದ್ದಂತಹ ಬಟ್ಟೆ, ಭಾಷೆ ಇದರಲ್ಲೂ ಇರಲಿದೆ. ಹೆಣ್ಣಿನ ಶೋಷಣೆಗೆ ಸಂಬಂಧಿಸಿದ ಕಥೆ ಇದರಲ್ಲಿ ಇದೆ. ನಾನು ಇದರಲ್ಲಿ ಸವಾಲಿನ ಪಾತ್ರ ನಿಭಾಯಿಸಿದ್ದೇನೆ’ ಎಂದು ತಿಳಿಸಿದರು.

ಈ ಚಿತ್ರದಲ್ಲಿ ನಾಯಕ ಇಲ್ಲ. ಶಶಿ, ಮದನ್, ಚೈತ್ರಾ ಕೊಟ್ಟೂರ್, ನಿಖಿತಾ ಸ್ವಾಮಿ ಅವರು ಇದರ ತಾರಾಬಳಗದಲ್ಲಿ ಇದ್ದಾರೆ. ಇದು ಡಿಸೆಂಬರ್‌ನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಅಲ್ವಿನ್ ಜಾನಿ ಅವರು ಇದನ್ನು ನಿರ್ದೇಶಿಸಿದ್ದಾರೆ.

ಲಾಕ್‌ಡೌನ್‌ ಘೋಷಣೆ ಆಗಿರದಿದ್ದರೆ ದಿಶಾ ಅಭಿನಯದ ದ್ವಿಭಾಷಾ (ಮಲಯಾಳ ಮತ್ತು ತಮಿಳು) ಚಿತ್ರವೊಂದರ ಶೂಟಿಂಗ್ ಕೆಲಸಗಳು ಶುರುವಾಗಬೇಕಿತ್ತು. ಇದರ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ.

‘ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ತಿಂಗಳಲ್ಲಿ ಈ ಚಿತ್ರದ ಕೆಲಸಗಳು ಶುರುವಾಗಲಿವೆ. ಬೈಜು ಅವರು ಇದರ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಮಲಯಾಳ ಭಾಷೆ ನನಗೆ ಬಾರದು ಎಂಬ ಕಾರಣಕ್ಕೆ ಸಿನಿತಂಡವು ನನಗಾಗಿ ಒಂದು ವರ್ಕ್‌ಶಾಪ್ ಕೂಡ ಮಾಡಿಸುತ್ತಿದೆ. ಹಿರಿಯ ಕಲಾವಿದರ ಎದುರಿನಲ್ಲಿ ನಾನು ಸಿಕ್ಕಾಪಟ್ಟೆ ಟೇಕ್‌ಗಳನ್ನು ತೆಗೆದುಕೊಳ್ಳಬಾರದು ಎಂಬ ಉದ್ದೇಶವೂ ಇದರ ಹಿಂದೆ ಇದೆ’ ಎಂದು ನಕ್ಕರು ದಿಶಾ.

ದಿಶಾ ಅವರಿಗೆ ಈಗ ಒಟ್ಟು ಮೂರು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಬಂದಿದೆ. ಈ ಮೂರೂ ಚಿತ್ರಗಳ ನಿರ್ಮಾಪಕರು ಒಬ್ಬರೇ. ‘ಇದಕ್ಕಿಂತ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡುವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು