ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸೇರಿರುವ ನಟಿಯರನ್ನು ‘ಐಟಂಗಳು’ಎಂದಿದ್ದ ಡಿಎಂಕೆ ನಾಯಕ ಸಾದಿಕ್ ಕ್ಷಮೆಯಾಚನೆ

Last Updated 28 ಅಕ್ಟೋಬರ್ 2022, 10:33 IST
ಅಕ್ಷರ ಗಾತ್ರ

ಚೆನ್ನೈ: ಬಿಜೆಪಿ ಸೇರಿ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ತಮಿಳುನಾಡಿನ ನಟಿಯರನ್ನು ಐಟಂಗಳು ಎಂದು ಸಂಬೋಧಿಸಿದ್ದ ಡಿಎಂಕೆ ನಾಯಕ ಸೈದಾಯ್ ಸಾದಿಕ್ ಕ್ಷಮೆ ಯಾಚಿಸಿದ್ದಾರೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.

ಡಿಎಂಕೆ ನಾಯಕನ ಈ ಹೇಳಿಕೆಯನ್ನು ಟ್ವಿಟರ್‌ನಲ್ಲಿ ಉಲ್ಲೇಖಿಸಿದ್ದ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್, ಡಿಎಂಕೆ ಸಂಸದೆ ಕನಿಮೊಳಿ ಅವರಿಗೆ ಟ್ಯಾಗ್ ಮಾಡಿದ್ದರು. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಕನಿಮೋಳಿ ಕೂಡಲೇ ಕ್ಷಮೆಯಾಚಿಸಿದ್ದರು. ಇದರಿಂದ ಎಚ್ಚೆತ್ತ ಸೈದಾಯ್ ಸಾದಿಕ್ ಸಹ ಕ್ಷಮೆ ಕೇಳಿದ್ದಾರೆ.

ಖುಷ್ಬೂ ಸೇರಿದಂತೆ ಯಾವುದೇ ನಾಯಕಿಯರಿಗೆ ಘಾಸಿಯುಂಟುಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಆದರೆ, ಬಿಜೆಪಿ ನಾಯಕರ ಹೇಳಿಕೆಗಳ ಬಗ್ಗೆ ಯಾರೊಬ್ಬರೂ ಪ್ರತಿಕ್ರಿಯಿಸುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.

‘ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ, ಡಿಎಂಕೆ ನಾಯಕರನ್ನು ಹಂದಿಗಳು ಎಂದು ಕರೆದಿದ್ದಾರೆ. ಅವರು ಪತ್ರಕರ್ತರನ್ನು ಕೋತಿಗಳಿಗೆ ಹೋಲಿಸಿದ್ದಾರೆ. ಈ ಬಗ್ಗೆ ಈ ಬಿಜೆಪಿ ನಾಯಕಿಯರು ಮಾತನಾಡುತ್ತಿಲ್ಲವೇಕೆ?’ ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ಸೇರಿ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ನಟಿ ಖುಷ್ಬೂ ಸುಂದರ್, ಗೌತಮಿ, ಗಾಯತ್ರಿ ರಘುರಾಮ್ ಮತ್ತು ನಮಿತಾ ಅವರನ್ನು ಉದ್ದೇಶಿಸಿ ಡಿಎಂಕೆ ನಾಯಕ ಸೈದಾಯ್ ಸಾದಿಕ್ ಅವಹೇಳನಕಾರಿ ಹೇಳಿಕೆ ನೀಡಿದ್ದರು.

ಗುರುವಾರ ಸಾರ್ವಜನಿಕ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ್ದ ಸಾದಿಕ್,‘ಬಿಜೆಪಿಯಲ್ಲಿರುವ ಎಲ್ಲ 4 ನಾಯಕಿಯರು ಐಟಂಗಳು. ತಮಿಳುನಾಡಿನಲ್ಲಿ ಕಮಲ ಅರಳಲಿದೆ ಎಂದು ಖುಷ್ಬೂ ಹೇಳುತ್ತಾರೆ. ಅಮಿತ್ ಶಾ ತಲೆಯಲ್ಲಿ ಮತ್ತೆ ಕೂದಲು ಬೆಳೆಯಬಹುದೇನೋ. ಆದರೆ, ತಮಿಳುನಾಡಿನಲ್ಲಿ ಕಮಲ ಅರಳುವ ಯಾವುದೇ ಸಂಭವವಿಲ್ಲ’ಎಂದಿದ್ದರು.

ಖುಷ್ಬೂ ಅವರು ಡಿಎಂಕೆಯಲ್ಲಿದ್ದಾಗ ನನ್ನ ಸಹೋದರ ಇಳಯ ಅರುಣಾ ಸುಮಾರು 6 ಬಾರಿ ಅವರ ಜೊತೆ ಆರ್‌ಎ ಪುರಂನಲ್ಲಿ ಸಭೆ ನಡೆಸಿದ್ದಾರೆ ಎಂದು ವ್ಯಂಗ್ಯವಾಗಿ ಮಾತನಾಡಿದ್ದರು.

ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಖುಷ್ಬೂ, ಪುರುಷರು ಮಹಿಳೆಯರನ್ನು ನಿಂದಿಸಿದಾಗ, ಅದು ಅವರು ಬೆಳೆದ ವಿಷಕಾರಿ ವಾತಾವರಣವನ್ನು ತೋರಿಸುತ್ತದೆ. ಈ ಪುರುಷರು ಮಹಿಳೆಯ ಗರ್ಭವನ್ನು ಅವಮಾನಿಸುತ್ತಾರೆ. ಅಂತಹ ವ್ಯಕ್ತಿಗಳು ತಮ್ಮನ್ನು ತಾವು ಕಲೈನರ್ ಅವರ ಅನುಯಾಯಿಗಳು ಎಂದು ಕರೆದುಕೊಳ್ಳುತ್ತಾರೆ. ಸಿಎಂ ಸ್ಟಾಲಿನ್ ಆಳ್ವಿಕೆಯಲ್ಲಿ ಇದು ಹೊಸ ದ್ರಾವಿಡ ಮಾದರಿಯೇ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಅಲ್ಲದೆ, ಇದನ್ನು ಕನಿಮೋಳಿ ಅವರಿಗೆ ಟ್ಯಾಗ್ ಮಾಡಿದ್ದರು.

ಖುಷ್ಬೂ ಅವರ ಟ್ವೀಟ್‌ಗೆ ಕೂಡಲೇ ಪ್ರತಿಕ್ರಿಯಿಸಿದ್ದ ಕನಿಮೋಳಿ, ‘ಈ ಹೇಳಿಕೆ ಕುರಿತಂತೆ ಒಬ್ಬ ಮಹಿಳೆ ಮತ್ತು ಮಾನವೀಯತೆಯುಳ್ಳ ಮನುಷ್ಯಳಾಗಿ ಕ್ಷಮೆಯಾಚಿಸುತ್ತೇನೆ. ಪಕ್ಷಾತೀತವಾಗಿ ಈ ರೀತಿ ಯಾರೇ ಮಾಡಿದರೂ ಎಂದಿಗೂ ಸಹಿಸಲಾಗುವುದಿಲ್ಲ. ನಮ್ಮ ನಾಯಕ ಸ್ಟಾಲಿನ್ ಮತ್ತು ನಮ್ಮ ಪಕ್ಷದಲ್ಲಿ ಇಂತಹುದಕ್ಕೆ ಜಾಗವಿಲ್ಲ. ಹೀಗಾಗಿ, ನಾನು ಬಹಿರಂಗವಾಗಿ ಕ್ಷಮೆಯಾಚಿಸುತ್ತಿದ್ದೇನೆ’ಎಂದು ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT