ಶನಿವಾರ, ನವೆಂಬರ್ 23, 2019
23 °C

ಅಂಬಿಯ ವರ್ಷದ ಪುಣ್ಯತಿಥಿ ಬಳಿಕ‌ ಚಲನಚಿತ್ರ ಕಲಾವಿದರ ಸಂಘದ‌ ಸಭೆ: ದೊಡ್ಡಣ್ಣ

Published:
Updated:

ಬೆಂಗಳೂರು: 'ನಟ ಅಂಬರೀಷ್ ಅವರ ಒಂದು ವರ್ಷದ‌ ಪುಣ್ಯತಿಥಿ ಮುಗಿದ ಬಳಿಕ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಸರ್ವಸದಸ್ಯರ ವಾರ್ಷಿಕ ಸಭೆ ಕರೆಯಲಾಗುವುದು' ಎಂದು ನಟ ಮತ್ತು ಸಂಘದ ಖಜಾಂಚಿ ದೊಡ್ಡಣ್ಣ ತಿಳಿಸಿದರು.

ಸಂಘದ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ 'ನಮ್ಮ ಗಣಿ ಬಿ.ಕಾಂ ಪಾಸ್' ಸಿನಿಮಾದ ಆಡಿಯೊ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

'ಸಂಘದ ಕಚೇರಿ‌ ನಿರ್ಮಾಣದಲ್ಲಿ ಅಂಬರೀಷ್ ಕೊಡುಗೆ ದೊಡ್ಡದು. ಅವರ ಶ್ರಮದಿಂದಲೇ ಈ ಭವ್ಯವಾದ ಕಟ್ಟಡ ನಿರ್ಮಾಣವಾಗಿದೆ. ಈಗ ಎಲ್ಲರ ಕಣ್ಣು ಕಟ್ಟಡದ ಮೇಲೆ ಬೀಳುತ್ತಿದೆ. ಒಂದು ವರ್ಷದಿಂದ ಸಭೆ ಕರೆದಿಲ್ಲ. ಚಿತ್ರರಂಗದಲ್ಲಿಯೇ ಇರುವ ವ್ಯಕ್ತಿಯೊಬ್ಬರು ಎಲ್ಲಾ ಹಿರಿಯ ಕಲಾವಿದರಿಗೆ ಮೊಬೈಲ್ ಕರೆ ಮಾಡಿ ಸಭೆಯ ವಿಳಂಬದ ಬಗ್ಗೆ ಪ್ರಶ್ನಿಸುವಂತೆ ಒತ್ತಡ ಹೇರುತ್ತಿದ್ದಾರೆ' ಎಂದು ದೂರಿದರು. 

ಅಂಬರೀಷ್ ಅವರು ಕಟ್ಟಡಕ್ಕೆ ತನ್ನ‌ ಹೆಸರನ್ನೇ‌ ನಾಮಕರಣ ಮಾಡಬಹುದಿತ್ತು. ಆದರೆ, ವರನಟ ರಾಜ್ ಕುಮಾರ್ ಅವರ ಮೇಲೆ ಆತನಿಗೆ ಅಪಾರವಾದ ಪ್ರೀತಿ‌ ಮತ್ತು ಗೌರವವಿತ್ತು. ಕನ್ನಡವೇ ರಾಜ್ ಕುಮಾರ್ ಅವರ ಉಸಿರಾಗಿತ್ತು. ಹಾಗಾಗಿಯೇ, ಕಟ್ಟಡಕ್ಕೆ ರಾಜ್ ಕುಮಾರ್ ಭವನ ಎಂದು ಹೆಸರಿಟ್ಟರು ಎಂದರು.

ಅಂಬರೀಷ್ ನಿಧನರಾಗಿ ಬರುವ ನವೆಂಬರ್ 24ಕ್ಕೆ ಒಂದು ವರ್ಷ ತುಂಬುತ್ತದೆ. ಆ ಬಳಿಕ ಸಭೆ ಕರೆಯುತ್ತೇವೆ. ಸಂಘದ ಕಟ್ಟಡ‌ದ ಮುಂದೆ ಇದ್ದ ಒಂದು ಮೂಟೆ ಸಿಮೆಂಟ್, ಒಂದು ಟನ್ ಕಬ್ಬಿಣವನ್ನು ಆ ವ್ಯಕ್ತಿ ಕಾಯಲಿಲ್ಲ. ಈಗ ಹಿರಿಯ ನಟ, ನಟಿಯರ ಮೂಲಕ ಮೊಬೈಲ್ ಕರೆ ಮಾಡಿಸುತ್ತಿರುವುದು ಸರಿಯೇ? ಎಂದು‌ ಪ್ರಶ್ನಿಸಿದ ಅವರು, ಆ ವ್ಯಕ್ತಿಯ‌ ಹೆಸರನ್ನು‌ ಬಹಿರಂಗಪಡಿಸಲಿಲ್ಲ.

ಈ ಹಿಂದೆಯೇ ಕಲಾವಿದರ ಸಂಘದ ಕಟ್ಟಡದಲ್ಲಿ ಫಿಲ್ಮ್‌ ಇನ್ ಸ್ಟಿಟ್ಯೂಟ್ ತೆರೆಯಲು‌ ನಿರ್ಧರಿಸಲಾಗಿತ್ತು. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ಇದರಿಂದ ಹೊಸ ಕಲಾವಿದರಿಗೆ ಅನುಕೂಲವಾಗಲಿದೆ. ಜೊತೆಗೆ ಜಿಮ್, ಸ್ನಾನದ ಗೃಹಗಳನ್ನು‌ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.

ನಟ‌ 'ಮುಖ್ಯಮಂತ್ರಿ' ಚಂದ್ರು ಮಾತನಾಡಿ,  'ಖಳನಟರು ಹೀರೊಗಳಷ್ಟು ಕೆಟ್ವವರಲ್ಲ. ಕೆಲವರು ಹೀರೊಗಳು ಪರದೆ ಮೇಲಷ್ಟೇ ಒಳ್ಳೆಯವರಾಗಿರುತ್ತಾರೆ. ದೈನಂದಿನ ಬದುಕಿನಲ್ಲಿ ಅವರಿಂದ ಒಳ್ಳೆಯತನ ಕಾಣುವುದು ಕಷ್ಟ. ವಿಲನ್ ಗಳು ತೆರೆಯ ಮೇಲಷ್ಟೇ ಕೆಟ್ಟವರಾಗಿರುತ್ತಾರೆ. ನಿಜಬದುಕಿನಲ್ಲಿ ಅವರಷ್ಟು ಒಳ್ಳೆಯವರು ಸಿಗುವುದಿಲ್ಲ' ಎಂದು  ಹೇಳಿದರು.

ಪ್ರತಿಕ್ರಿಯಿಸಿ (+)