ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೇಡರ ಕಣ್ಣಪ್ಪ’ನಿಗೆ 66 ವಸಂತ!

Last Updated 8 ಜೂನ್ 2020, 6:21 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗಕ್ಕೆ ಡಾ.ರಾಜ್‌ಕುಮಾರ್ ಅವರಂಥ ಅದ್ಭುತ ನಟರನ್ನು ಕೊಡುಗೆಯಾಗಿ ನೀಡಿದ ‘ಬೇಡರ ಕಣ್ಣಪ್ಪ’ ಚಿತ್ರಕ್ಕೆ 66ರ ಸಂಭ್ರಮ.

ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಬರೆದ ಈ ಕಪ್ಪುಬಿಳುಪು ಚಿತ್ರ ಬಿಡುಗಡೆಯಾಗಿ ಮೇ ತಿಂಗಳಿಗೆ 66 ವರ್ಷಗಳಾದವು. ಹಲವಾರು ಕಾರಣಗಳಿಗಾಗಿ ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ವಿಶೇಷ ಮತ್ತು ವಿಶಿಷ್ಟವಾಗಿಯೇ ಉಳಿದಿದೆ.

ಆಗಿನ್ನೂ 20 ವರ್ಷಗಳ ಇತಿಹಾಸ ಹೊಂದಿದ್ದ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಏಕಕಾಲಕ್ಕೆ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ ಈ ಚಿತ್ರಕ್ಕಿದೆ. ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ. ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ. ಹೀಗೆ ಹಲವಾರು ವಿಶೇಷತೆಗಳಿಂದ‘ಬೇಡರ ಕಣ್ಣಪ್ಪ’ ಗಮನ ಸೆಳೆಯುತ್ತಾನೆ.

ಈ ಚಿತ್ರ ತಯಾರಾಗಿದ್ದು ಹೇಗೆ ಮತ್ತು ಬೇಡರ ಕಣ್ಣಪ್ಪನ ಪಾತ್ರ ಮೊದಲ ಆಯ್ಕೆ ರಾಜ್‌ಕುಮಾರ್‌ ಆಗಿರಲಿಲ್ಲ. ಬದಲಾಗಿ ಯಲಿವಾಳ ಸಿದ್ಧಯ್ಯ ಸ್ವಾಮಿ ಎಂಬಉತ್ತರ ಕರ್ನಾಟಕದ ವೃತ್ತಿ ರಂಗಭೂಮಿ ಕಲಾವಿದ ಎಂಬ ಸಂಗತಿ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಒಂದು ವೇಳೆ ಯಲಿವಾಳ ಸಿದ್ಧಯ್ಯ ಸ್ವಾಮಿ ಬೇಡರ ಕಣ್ಣಪ್ಪ ಚಿತ್ರಕ್ಕೆ ಆಯ್ಕೆಯಾಗಿದ್ದರೆ ಕನ್ನಡ ಚಿತ್ರರಂಗಕ್ಕೆ ರಾಜ್‌ಕುಮಾರ್‌ ಎಂಬ ಮಹಾರಾಜ ಸಿಗುತ್ತಿರಲಿಲ್ಲವೇನೋ?

20 ಚಿತ್ರಮಂದಿರಗಳಲ್ಲಿ ತೆರೆಗೆ

1954ರಲ್ಲಿ ಮೇ 7ರಂದು ಶುಕ್ರವಾರ ‘ಬೇಡರ ಕಣ್ಣಪ್ಪ’ ಕಪ್ಪುಬಿಳುಪು ಚಿತ್ರ ರಾಜ್ಯದಾದ್ಯಂತ 20 ಚಿತ್ರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿತ್ತು. ಬೆಂಗಳೂರಿನ ಸಾಗರ್‌, ಶಿವಾಜಿ ಮತ್ತು ಮೈಸೂರಿನ ನ್ಯೂ ಅಪೇರಾ, ಬಳ್ಳಾರಿಯ ರಾಯಲ್‌, ಧಾರವಾಡದ ವಿಜಯಾ ಸೇರಿದಂತೆ ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಂಡಿತ್ತು. ಬೆಂಗಳೂರಿನ ಸಾಗರ್‌ ಮತ್ತು ಮೈಸೂರಿನ ನ್ಯೂ ಅಪೇರಾ ಚಿತ್ರಮಂದಿರದಲ್ಲಿ ಚಿತ್ರ ಶತದಿನ ಆಚರಿಸಿತ್ತು.

ಆರಂಭದಲ್ಲಿ ಚಿತ್ರದ ಸ್ವಲ್ಪ ಪ್ರಿಂಟ್‌ಗಳನ್ನು ಮಾತ್ರ ಹಾಕಲಾಗಿತ್ತು. ಚಿತ್ರ ಸೂಪರ್ ಹಿಟ್‌ ಆಗುತ್ತಿದ್ದಂತೆಯೇ ಹೆಚ್ಚಿನ ಪ್ರಿಂಟ್‌ ಹಾಕಲಾಯಿತು. ಐದಾರು ಚಿತ್ರ ಮಂದಿರಗಳಲ್ಲಿ ಚಿತ್ರ ಶತದಿನೋತ್ಸವ ಕಂಡಿತ್ತು. ಮೊದಲ ಚಿತ್ರದಲ್ಲಿಯೇ ಮುತ್ತುರಾಜ್‌ ಎಂಬ ಹೊಸ ನಟ ಕನ್ನಡಿಗರ ಹೃದಯಗಳನ್ನು ಗೆದ್ದು ಬಿಟ್ಟಿದ್ದರು.

ಮೋಡಿ ಮಾಡಿದ ಶಿವಪ್ಪ ಕಾಯೋ ತಂದೆ...

ನಂಜ ಕವಿ ಎಂದು ಖ್ಯಾತರಾಗಿದ್ದ ಆನೆಕಲ್‌ನ ಜಾನಪದ ಕವಿ ಎಸ್‌. ನಂಜಪ್ಪ ಬರೆದ ‘ಶಿವಪ್ಪೊ ಕಾಯೋ ತಂದೆ. ಮೂರು ಲೋಕ ಸ್ವಾಮಿದೇವಾ. ಹಸಿವೆಯನ್ನು ತಾಳಲಾರೆ. ಕಾಪಾಡೆಯಾ ಹರನೇ ಕಾಪಾಡೆಯಾ’ ಎಂಬ ಹಾಡು ಎಲ್ಲರ ಬಾಯಲ್ಲಿ ನಲಿದಾಡತೊಡಗಿತು. ಆ ಕಾಲದ ಎಲ್ಲ ಸಭೆ, ಸಮಾರಂಭ, ಆರ್ಕೆಸ್ಟ್ರಾಗಳಲ್ಲಿ ಇದು ಕಾಯಂ ಪ್ರಾರ್ಥನಾ ಗೀತೆಯಾಗಿತ್ತು.

ಕಣ್ಣಪ್ಪ ಹುಟ್ಟಿದ್ದು ಹೇಗೆ?

ಕರ್ನಾಟಕ ಗುಬ್ಬಿ ಫಿಲ್ಮ್ಸ್‌ನ ಬ್ಯಾನರ್‌ ಅಡಿನಿರ್ಮಿಸಿದ‌ 'ಗುಣ ಸಾಗರಿ’ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದ ಗುಬ್ಬಿ ವೀರಣ್ಣನವರು ಮದ್ರಾಸಿನ ಎವಿಎಂ ಚೆಟ್ಟಿ ಅವರೊಂದಿಗೆ ಸೇರಿ ಮತ್ತೊಂದು ಚಿತ್ರವನ್ನು ತಯಾರಿಸುವ ಯೋಚನೆಯಲ್ಲಿದ್ದರು. ಕಣ್ಣಪ್ಪನ ಪಾತ್ರಕ್ಕಾಗಿ ಸ್ಫುರದ್ರೂಪಿ ನಾಯಕ ನಟನ ಹುಡುಕಾಟದಲ್ಲಿದ್ದರು.

50ರ ದಶಕದಲ್ಲಿ ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದ್ದ ಎಲಿವಾಳ ಸಿದ್ಧಯ್ಯ ಸ್ವಾಮಿ, ಎಸ್‌.ಆರ್‌. ರಾಜನ್ (ಬ್ಲಡ್‌ ರಾಜು)‌ ಹಾಗೂ ಮೂರ್ನಾಲ್ಕು ನಾಟಕ ಕಲಾವಿದರ ಸ್ಕ್ರೀನ್‌ ಟೆಸ್ಟ್‌ ಅನ್ನು ಚೆನ್ನೈನಲ್ಲಿ ಮಾಡಲಾಗಿತ್ತು. ಬಹುತೇಕ ಎಲಿವಾಳ ಸಿದ್ಧಯ್ಯ ಸ್ವಾಮಿ ಅವರ ಆಯ್ಕೆಯಾಗಿ ಹೋಗಿತ್ತು.

ಎಡತೊರೆ ರಾಮಶೆಟ್ಟರ ನಾಟಕ ಕಂಪನಿತುಮಕೂರಿನಲ್ಲಿ ‘ವಿಶ್ವಾಮಿತ್ರ’ ನಾಟಕವಾಡುತ್ತಿದ್ದರು. ಅದು ಅಷ್ಟೇನೂ ಜನಪ್ರಿಯವಾಗಲಿಲ್ಲ. ಹೊಸ ನಾಟಕದ ಹುಡುಕಾಟದಲ್ಲಿದ್ದ ರಾಮಶೆಟ್ಟರಿಗೆ ಹರಿಕಥಾ ವಿದ್ವಾನ್‌ ರಾಮಶಾಸ್ತ್ರಿಗಳು‘ಬೇಡರ ಕಣ್ಣಪ್ಪ’ ನಾಟಕದ ಸ್ಕ್ರಿಪ್ಟ್‌ ನೀಡುತ್ತಾರೆ.

ಶೆಟ್ಟರು ಈ ಸ್ಕ್ರಿಪ್ಟ್ ಅನ್ನು‌ ಪರಿಷ್ಕರಿಸುವಂತೆ ತಮ್ಮ ಕಂಪನಿಯಲ್ಲಿದ್ದ ಜಿ.ವಿ. ಅಯ್ಯರ್‌, ಬಾಲಕೃಷ್ಣ ಕೈಗಿಡುತ್ತಾರೆ. ಮುಂದೆ ಈ ನಾಟಕ ಎಷ್ಟು ಮನೆಮಾತು ಆಯ್ತು ಎಂದರೆ ಎಂದರೆ ಗುಬ್ಬಿ ಕಂಪನಿ, ಸುಬ್ಬಯ್ಯ ನಾಯ್ಡು ಅವರ ಕಂಪನಿಗಳೂ ‘ಬೇಡರ ಕಣ್ಣಪ್ಪ’ ನಾಟಕ ಆಡಲು ಶುರು ಮಾಡಿದವು.

ಮುತ್ತುರಾಜ್‌ಗೆ ತಿರುವು ನೀಡಿದ ಚಿತ್ರದುರ್ಗ

ಆ ಕಾಲದಲ್ಲಿ ಮನೆಮಾತಾಗಿದ್ದ ‘ಬೇಡರ ಕಣ್ಣಪ್ಪ’ ನಾಟಕವನ್ನೇ ಸಿನಿಮಾ ಮಾಡುವ ಐಡಿಯಾವನ್ನು ಗುಬ್ಬಿ ವೀರಣ್ಣನವರಿಗೆ ಕೊಟ್ಟಿದ್ದು ತಿಪಟೂರಿನ ವಿನೋದಾ ಟಾಕೀಸ್‌ ಮಾಲೀಕ ಟಿ.ಎಸ್‌. ಕರಿಬಸಯ್ಯ. ಚಿತ್ರದುರ್ಗದಲ್ಲಿಕ್ಯಾಂಪ್‌ ಮಾಡಿದ್ದ ಸುಬ್ಬಯ್ಯ ನಾಯ್ಡು ಕಂಪನಿಯ ‘ಬೇಡರ ಕಣ್ಣಪ್ಪ’ ನಾಟಕ ಪ್ರದರ್ಶಿಸುತ್ತಿತ್ತು.

‘ಕಣ್ಣಪ್ಪನ ಪಾತ್ರದಲ್ಲಿ ಮುತ್ತುರಾಜ್ ಎಂಬ ಯುವಕ‌ ಅದ್ಭುತವಾಗಿ ನಟಿಸುತ್ತಾರೆ. ಒಂದು ಸಾರಿ ನೀವು ನೋಡಬೇಕು’ ಎಂದು ಪತ್ರಕರ್ತ ಬಿ.ವಿ. ವೈಕುಂಠರಾಜು ಅವರು ಸಾಹುಕಾರ್ ದುಮ್ಮಿ ಮುರಿಗೆಪ್ಪ ಅವರನ್ನು ಒತ್ತಾಯ ಮಾಡಿ ನಾಟಕ ನೋಡಲು ಕರೆದೊಯ್ಯುತ್ತಾರೆ. ಮುರಿಗೆಪ್ಪನವರು ಗುಬ್ಬಿ ಕಂಪನಿಯ ಪಾಲುದಾರರಾಗಿದ್ದವರು.

ಮುತ್ತುರಾಜ್ ಸಹಜ ಅಭಿನಯಕ್ಕೆ ಮನಸೋತ ಮುರಿಗೆಪ್ಪನವರು ‘ಬೇಡರ ಕಣ್ಣಪ್ಪ’ ಚಿತ್ರದ ನಾಯಕ ನಟನ ಪಾತ್ರಕ್ಕೆ ಶಿಫಾರಸು ಮಾಡುತ್ತಾರೆ. ನಿರ್ದೇಶಕ ನಂಜನಗೂಡಿನ ಎಚ್‌.ಎಲ್‌.ಎನ್‌ ಸಿಂಹ ಅವರು ಮುತ್ತುರಾಜ್‌ ಅವರನ್ನುಸ್ಕ್ರೀನ್‌ ಟೆಸ್ಟ್‌ಗೆ ಮದ್ರಾಸ್‌ಗೆ ಬರುವಂತೆ ಹೇಳಿ ಕಳಿಸುತ್ತಾರೆ.ಮದ್ರಾಸಿನ ಎವಿಎಂ ಸ್ಟುಡಿಯೊದಲ್ಲಿ ಸ್ಕ್ರೀನ್‌ ಟೆಸ್ಟ್ ನಡೆಯುತ್ತದೆ. ಕಣ್ಣಪ್ಪ ಪಾತ್ರಕ್ಕೆ ಮುತ್ತುರಾಜ್‌ ಬಣ್ಣ ಹಚ್ಚುತ್ತಾರೆ.

‘ಬೇಡರ ಕಣ್ಣಪ್ಪ’ ಚಿತ್ರವು ವೃತ್ತಿ ನಾಟಕ ಕಂಪನಿಯ ಮುತ್ತುರಾಜ್‌ ಅದೃಷ್ಟದ ಬಾಗಿಲು ತೆರೆಯುತ್ತದೆ. ಮುಂದೆ ಅವರು ಮುಟ್ಟಿದೆಲ್ಲ ಚಿನ್ನ. ದಶಕಗಳ ಕಾಲ ಅವರು ಅಕ್ಷರಶಃ ಕನ್ನಡ ಚಿತ್ರರಂಗದ ರಾಜ್‌ಕುಮಾರನಂತೆಯೇ ಮೆರೆದದ್ದು ಇತಿಹಾಸ.

ಏಳು ತಿಂಗಳಲ್ಲಿ ಚಿತ್ರೀಕರಣ ಪೂರ್ಣ

ಖ್ಯಾತ ಚಿತ್ರ ನಿರ್ಮಾಪಕ ಚೆಟ್ಟಿಯಾರ್‌ ಅವರ ಮದ್ರಾಸಿನ ಎವಿಎಂ ಸ್ಟುಡಿಯೋದಲ್ಲಿ 1953ರ ಆಗಸ್ಟ್‌ 27ರಂದು ‘ಬೇಡರ ಕಣ್ಣಪ್ಪ’ ಚಿತ್ರದ ಮುಹೂರ್ತ ನಡೆಯುತ್ತದೆ. ಎವಿಎಂ ಸ್ಟುಡಿಯೋದಲ್ಲಿಯೇಬಹುತೇಕ ಚಿತ್ರೀಕರಣ ನಡೆಯುತ್ತದೆ.ಏಳು ತಿಂಗಳಲ್ಲಿ ಚಿತ್ರೀಕರಣ ಮುಗಿಯುತ್ತದೆ. ಡಬ್ಬಿಂಗ್‌, ಎಡಿಟಿಂಗ್‌ ಮುಗಿದು 1954ರ ಮೇ 7ರಂದು ತೆರೆಗೆ ಬರುತ್ತದೆ. ಆ ಕಾಲಕ್ಕೆ ಚಿತ್ರಕ್ಕೆ ಖರ್ಚಾದದ್ದು ಅಂದಾಜು 90 ಸಾವಿರ ರೂಪಾಯಿ!

ರಾಜ್‌ಕುಮಾರ್‌ ಅವರಿಗೆ ತಿಂಗಳಿಗೆ ₹300ರಂತೆ ಆರು ತಿಂಗಳಿಗೆ ₹1,800 ಸಂಭಾವನೆ ದೊರೆಯುತ್ತದೆ. ಆಗಾಗಲೇ ಹೆಸರು ಮಾಡಿದ್ದಪಂಡರಿಬಾಯಿ ನಾಯಕಿಯಾಗಿ ಆಯ್ಕೆಯಾಗುತ್ತಾರೆ. ರಾಜ್‌ ಅವರಿಗಿಂತ ಮೊದಲೇ ನರಸಿಂಹರಾಜು ಅವರನ್ನು ಕಾಶಿ ಪಾತ್ರಕ್ಕೆ ಚೆಟ್ಟಿಯಾರ್ ಆಯ್ಕೆ ಮಾಡಿರುತ್ತಾರೆ.‌

ತಾರಾಗಣದಲ್ಲಿ ಮೊದಲು ಹಿರಿಯ ಕಲಾವಿದರಾದ ಎಂ. ಪಂಡರಿಬಾಯಿ,ಸಂಧ್ಯಾ, ರಾಜಾ ಸುಲೋಚನಾ, ಬಿ. ಶಾರದಮ್ಮ ಅವರ ಹೆಸರು, ನಂತರ ಹೊಸಬರಾದ ರಾಜ್‌ಕುಮಾರ್‌‌, ಜಿ.ವಿ. ಅಯ್ಯರ್‌, ನರಸಿಂಹರಾಜು ಅವರ ಹೆಸರುಗಳಿವೆ. ಚಿತ್ರಕ್ಕೆ ಆರ್.ಸುದರ್ಶನಂ ಸಂಗೀತ, ಕೆ. ಶಂಕರ್‌ ಸಂಕಲನ, ಎಸ್. ಮಾರುತಿರಾವ್‌ ಛಾಯಾಗ್ರಣವಿತ್ತು.

ರಾಜ್‌ ಅಭಿನಯದ ಏಕೈಕ ಪರಭಾಷಾ ಚಿತ್ರ!

ಕನ್ನಡದ ಯಶಸ್ಸಿನ ನಂತರ ಮೂರು ಭಾಷೆಗಳಲ್ಲಿ ಎವಿಎಂ ನಿರ್ಮಾಣ ಸಂಸ್ಥೆಯು ಈ ಚಿತ್ರಗಳನ್ನು ನಿರ್ಮಿಸುತ್ತದೆ.‌ ಎಚ್‌.ಎಲ್‌.ಎನ್‌ ಸಿಂಹ ಅವರೇ ಈ ಚಿತ್ರಗಳನ್ನು ನಿರ್ದೇಶಿಸುತ್ತಾರೆ. ತಮಿಳಿನಲ್ಲಿ ‘ವೇಡರ್‌ ಕಣ್ಣನ್‌’ ಹೆಸರಿನಲ್ಲಿ ಡಬ್‌ ಆದರೆ, ಹಿಂದಿಯಲ್ಲಿ ‘ಶಿವಭಕ್ತ್ ’ ಮತ್ತು ತೆಲುಗಿನಲ್ಲಿ ‘ಕಾಳಹಸ್ತಿ ಮಹಾತ್ಮೆ’ಹೆಸರಿನಲ್ಲಿ ರಿಮೇಕ್‌‌ ಆಗುತ್ತದೆ.ಹಿಂದಿಯಲ್ಲಿ ಪಂಡರಿಬಾಯಿ ಮತ್ತು ಸಾಹು ಮೋದಿಕ್, ಅನಂತ್‌ ಮರಾಠೆ‌ ತಾರಾಗಣದಲ್ಲಿದ್ದಾರೆ.

ಬೇಡರ ಕಣ್ಣಪ್ಪ ಸಿನಿಮಾ ನಂತರ ಬೇರೆ ಚಿತ್ರಗಳು ಕೈಯಲ್ಲಿ ಇಲ್ಲದ ಕಾರಣ ರಾಜ್ ಕುಮಾರ್‌ ಹುಬ್ಬಳ್ಳಿಯಲ್ಲಿ ಕ್ಯಾಂಪ್‌ ಮಾಡಿದ್ದ ಗುಬ್ಬಿ ಕಂಪನಿ ಸೇರುತ್ತಾರೆ. ಮತ್ತೆ ಬೇಡರ ಕಣ್ಣಪ್ಪನ ಪಾತ್ರದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಆಗ, ಬೇಡರ ಕಣ್ಣಪ್ಪ ತೆಲುಗು ಆವತರಣಿಕೆ ಚಿತ್ರವಾದ ‘ಕಾಳಹಸ್ತಿ ಮಹಾತ್ಮೆ’ಯಲ್ಲಿ ನಟಿಸಲು ಮತ್ತೆ ಮದ್ರಾಸ್‌ನಿಂದ ಬುಲಾವ್‌ ಬರುತ್ತದೆ. ಈ ಚಿತ್ರವನ್ನೂ ನಿರ್ಮಿಸಿದ್ದು ಗುಬ್ಬಿ ಕಂಪನಿ ಮತ್ತು ಎವಿಎಂ ಸಂಸ್ಥೆ.ತೆಲುಗಿನಲ್ಲಿ ರಾಜ್‌ಕುಮಾರ್‌ ಮತ್ತುಕೆ. ಮಾಲತಿ ನಟಿಸುತ್ತಾರೆ. ರಾಜ್‌ ನಟಿಸಿದ ಏಕೈಕ ಪರಭಾಷಾ ಚಿತ್ರ ‘ಕಾಳಹಸ್ತಿ ಮಹಾತ್ಮೆ’.

ಮದ್ರಾಸ್‌ನಿಂದ ಬೆಂಗಳೂರಿಗೆ ವಾಸ್ತವ್ಯ ಬದಲಿಸಲು ಮುಂದಾದ ಡಾ. ರಾಜ್‌ ಬೆಂಗಳೂರಿನಲ್ಲಿ ಸೂಕ್ತ ಮನೆಯ ಹುಡುಕಾಟದಲ್ಲಿರುತ್ತಾರೆ. ಈ ಸುದ್ದಿ ಎವಿಎಂ ಚೆಟ್ಟಿಯಾರ್ ಅವರ ಕಿವಿಗೆ ಬೀಳುತ್ತದೆ.‌ ಸದಾಶಿವ ನಗರದ ತಮ್ಮ ಗೆಸ್ಟ್‌ಗೌಸ್ ಅನ್ನು ಡಾ. ರಾಜ್‌ ಅವರಿಗೆ ಮಾರಾಟ ಮಾಡುತ್ತಾರೆ.

(ಮಾಹಿತಿ: ಹಿರಿಯ ಛಾಯಾಗ್ರಾಹಕ ಬಿ.ಎಸ್‌. ಬಸವರಾಜು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT