ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌ ಪ್ರಕರಣ: ನಟಿಯರಾದ ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ

ಹೈಕೋರ್ಟ್‌
Last Updated 3 ನವೆಂಬರ್ 2020, 16:30 IST
ಅಕ್ಷರ ಗಾತ್ರ

ಬೆಂಗಳೂರು:ಡ್ರಗ್ಸ್‌ ಪೂರೈಕೆ ಜಾಲದಲ್ಲಿ ಸಕ್ರಿಯರಾಗಿದ್ದ ಆರೋಪದ ಮೇಲೆ ಬಂಧಿತರಾಗಿರುವ ಚಿತ್ರ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಮತ್ತು ಅವರ ಆಪ್ತ ಪ್ರಶಾಂತ್‌ ರಂಕಾ ಜಾಮೀನು ಕೋರಿಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

ಇದೇ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳಾದ ಪ್ರಶಾಂತ್‌ ರಾಜು ಜಿ., ಅಭಿಸ್ವಾಮಿ ಮತ್ತು ಶಿವಪ್ರಕಾಶ್‌ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನೂ ನ್ಯಾಯಾಲಯ ತಿರಸ್ಕರಿಸಿದೆ. ಈ ಎಲ್ಲ ಅರ್ಜಿಗಳ ವಿಚಾರಣೆಯನ್ನು ಅಕ್ಟೋಬರ್‌ 24ರಂದು ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌, ತೀರ್ಪು ಕಾಯ್ದಿರಿಸಿದ್ದರು. ಮಂಗಳವಾರ ತೀರ್ಮಾನ ಪ್ರಕಟಿಸಿದ ನ್ಯಾಯಮೂರ್ತಿ, ಎಲ್ಲ ಆರೋಪಿಗಳ ಅರ್ಜಿಗಳನ್ನೂ ತಿರಸ್ಕರಿಸಿದರು.

ಡ್ರಗ್ಸ್‌ ಪೂರೈಕೆ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿರಾಗಿಣಿ ದ್ವಿವೇದಿ ಅವರನ್ನುಬೆಂಗಳೂರು ನಗರ ಸಿಸಿಬಿ ಪೊಲೀಸರು ಸೆ. 4ರಂದು ಬಂಧಿಸಿದ್ದರು. ಇದೇ ಪ್ರಕರಣದಲ್ಲಿ ಸೆ. 8ರಂದು ಸಂಜನಾಹಾಗೂ ಪ್ರಶಾಂತ್‌ ಅವರನ್ನು ಬಂಧಿಸಲಾಗಿತ್ತು.

ಸೆ.14ರಿಂದ ಎಲ್ಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ರಾಗಿಣಿ, ಸಂಜನಾ ಮತ್ತು ಪ್ರಶಾಂತ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಾದಕವಸ್ತು ನಿಯಂತ್ರಣ ಕಾಯ್ದೆ ಪ್ರಕರಣ ವಿಶೇಷ ನ್ಯಾಯಾಲಯ ಸೆ.28ರಂದು ತಿರಸ್ಕರಿಸಿತ್ತು. ಬಳಿಕ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

‘ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ಬಿ.ಕೆ. ರವಿಶಂಕರ್‌ ಹೇಳಿಕೆ ಆಧಾರದಲ್ಲಿ ತಮ್ಮನ್ನು ಬಂಧಿಸಲಾಗಿದೆ. ಯಾವುದೇ ಸಂಚಿನಲ್ಲೂ ತಾವು ಭಾಗಿಯಾಗಿಲ್ಲ. ತಮ್ಮ ಮನೆಗಳಲ್ಲಿ ಡ್ರಗ್ಸ್‌ ಪತ್ತೆಯಾಗಿಲ್ಲ. ಪೊಲೀಸರು ದುರುದ್ದೇಶದಿಂದ ತಮ್ಮನ್ನು ಬಂಧಿಸಿದ್ದಾರೆ’ಎಂದು ಜಾಮೀನು ಅರ್ಜಿಯಲ್ಲಿ ತಿಳಿಸಿದ್ದರು.

ನಗರದ ತಾರಾ ಹೋಟೆಲ್‌ಗಳು, ಪಬ್‌ಗಳು ಮತ್ತು ಹೊರವಲಯದ ಫಾರ್ಮ್‌ ಹೌಸ್‌ಗಳಲ್ಲಿ ಡ್ರಗ್ಸ್‌ ಪಾರ್ಟಿಗಳನ್ನುಆಯೋಜಿಸುತ್ತಿದ್ದ ಆರೋಪ ರಾಗಿಣಿ ಮತ್ತು ಸಂಜನಾ ಅವರ ಮೇಲಿದೆ.

ಗೋವಾ, ಪಂಜಾಬ್‌, ಮಹಾರಾಷ್ಟ್ರ ರಾಜ್ಯಗಳು ಹಾಗೂ ವಿದೇಶಗಳಿಂದ ಕೊಕೇನ್‌, ಎಂಡಿಎಂಎಮತ್ತಿತರ ನಿಷೇಧಿತ ಮಾದಕವಸ್ತುಗಳನ್ನು ತರಿಸಿ, ಪಾರ್ಟಿಗೆ ಬರುತ್ತಿದ್ದವರಿಗೆ ಪೂರೈಕೆ ಮಾಡುತ್ತಿದ್ದ ಆರೋಪವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT