ಚಿತ್ರದಲ್ಲಿ ನಿಮ್ಮ ಪಾತ್ರವೇನು?
ಇದೊಂದು ಮಿಸ್ಟ್ರಿ, ಥ್ರಿಲ್ಲರ್ ಸಿನಿಮಾ. ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತ ಇರುತ್ತೇನೆ. ನಾಯಕ ದಿಗಂತ್ ಕೂಡ ನನ್ನ ಕಂಪನಿಯಲ್ಲೇ ಕೆಲಸ ಮಾಡುತ್ತಿರುತ್ತಾರೆ. ಇಬ್ಬರ ನಡುವೆ ಪ್ರೇಮಾಂಕುರವಾಗುತ್ತದೆ. ಅಲ್ಲಿಂದ ನಂತರ ಏನೆಲ್ಲ ಅಗುತ್ತದೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. ಇದೊಂದು ಹಾಸ್ಯಮಯ ಕಥೆ ಹೊಂದಿರುವ ಚಿತ್ರ. ಎಲ್ಲ ಕೆಲಸಗಳಿಗೂ ಎಡಗೈಯನ್ನು ಬಳಸುವವರ ಕಷ್ಟವನ್ನು ಹೇಳಲಾಗಿದೆ. ಆದರೆ ನಾನು ಚಿತ್ರದಲ್ಲಿ ಲೆಫ್ಟಿಯಲ್ಲ.
‘ಪಂಚರಂಗಿ’ ಜೋಡಿ ಮೇಲೆ ನಿರೀಕ್ಷೆ ಹೆಚ್ಚಿದೆಯಲ್ಲ?
ಹೌದು ‘ಪಂಚರಂಗಿ’ಯಲ್ಲಿ ನಾವಿಬ್ಬರು ಒಟ್ಟಿಗೆ ನಟಿಸಿದ್ದೆವು. ಅದೊಂದು ಮೋಡಿ ಮಾಡಿದ ಜೋಡಿ. 14 ವರ್ಷಗಳ ನಂತರ ಮತ್ತೆ ಜತೆಯಾಗಿದ್ದೇವೆ. ಹಾಗಂತ ಆ ಕಥೆಗೆ ಇದನ್ನು ಹೋಲಿಸಲು ಸಾಧ್ಯವಿಲ್ಲ. ಯೋಗರಾಜ್ ಭಟ್ಟರ ಸಿನಿಮಾ ಶಾಲೆಯೇ ಒಂದು ಭಿನ್ನ ಅನುಭವ. ಆಗೆಲ್ಲ ಮೊದಲೇ ಸ್ಕ್ರಿಪ್ಟ್ ಕೊಡುತ್ತಿರಲಿಲ್ಲ. ಯೋಗರಾಜ್ ಭಟ್ಟರು ನಮ್ಮನ್ನು ಮರದ ಮೇಲೆ ಕೂರಿಸಿ, ಅಲ್ಲೇ ಸ್ಟ್ರಿಪ್ಟ್ ಬರೆದು ಓದುತ್ತಿದ್ದರು. ಅದನ್ನು ಕಲಿತು ನಟಿಸಬೇಕಿತ್ತು. ಈಗೆಲ್ಲ ಕಥೆ, ಸ್ಕ್ರಿಪ್ಟ್ ಮುಂಚಿತವಾಗಿಯೇ ಕೊಡುತ್ತಾರೆ. ಆದರೂ ಹೆಚ್ಚು ಸಿದ್ಧತೆಯೊಂದಿಗೆ ಹೋದರೆ ನಟನೆ ಸಹಜ ಎನ್ನಿಸುವುದಿಲ್ಲವೇನೋ ಅನ್ನಿಸುತ್ತದೆ.
ಕನ್ನಡ ಚಿತ್ರರಂಗದಿಂದ ನೀವು ವಿರಾಮ ತೆಗೆದುಕೊಂಡಿದ್ದು ಏಕೆ?
‘ಶೆಫ್ ಚಿದಂಬರ’ ಹಾಗೂ ಈ ಸಿನಿಮಾ ಎರಡೂ ಒಟ್ಟಿಗೆ ಶುರುವಾಗಿದ್ದು. ಆ ಸಿನಿಮಾ ಕಳೆದ ವರ್ಷ ಬಿಡುಗಡೆಯಾಯಿತು. ‘ಯುಐ’ನಲ್ಲಿ ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡೆ. ಆದರೆ ಅಷ್ಟಾಗಿ ಜನಕ್ಕೆ ಗೊತ್ತಾಗಲಿಲ್ಲ. ನಾನು ಬೇಕಂತಲೆ ಇಂಡಸ್ಟ್ರಿಯಲ್ಲಿ ಗ್ಯಾಪ್ ತೆಗೆದುಕೊಂಡಿಲ್ಲ. ಯಾವುದೇ ಅವಕಾಶಗಳು ಬರಲಿಲ್ಲ. ನನಗೆ ನಟನೆ ಬಿಟ್ಟು ಬೇರೆ ಕೆಲಸ ಬರುವುದಿಲ್ಲ ಅನ್ನಿಸುತ್ತದೆ. ಹೀಗಾಗಿ ಗ್ಯಾಪ್‌ನಲ್ಲಿಯೂ ಬೇರೆ ಕೆಲಸ ಮಾಡಲು ಯತ್ನಿಸಲಿಲ್ಲ. ನಟನೆಯಾಚೆಗೆ ನಾನು ಬರಹಗಾರ್ತಿ. ಕಥೆ, ಕಾದಂಬರಿ ಬರೆಯುತ್ತೇನೆ. ನನ್ನದೇ ಬ್ಲಾಗ್ ಇದೆ. ಈಗ ಒಂದು ಕಥೆ ಬರೆಯುತ್ತಿದ್ದೇನೆ. ಅದು ಕಾದಂಬರಿಯಾಗುತ್ತದೆಯಾ? ಅಥವಾ ಸಿನಿಮಾ ಸ್ಕ್ರಿಪ್ಟ್ ಆಗುತ್ತದೆಯಾ? ಗೊತ್ತಿಲ್ಲ.
ಈತನಕ ಸಿನಿಪಯಣ ಹೇಗಿತ್ತು?
ಮೂಲತಃ ನಾನು ಕ್ರೀಡಾಪಟು. ಮೈಸೂರಿನಲ್ಲಿ ಕಾಲೇಜು ಓದುವಾಗ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದೆ. ಕಾಲೇಜಿನಲ್ಲಿ ಅಚಾನಕ್ಕಾಗಿ ಮಾಡೆಲ್‌ಗಳ ಜತೆ ಹೆಜ್ಜೆ ಹಾಕುವ ಅವಕಾಶ ಬಂತು. ಅಲ್ಲಿಂದ ಮಾಡಲಿಂಗ್ ಪ್ರಾರಂಭಿಸಿದೆ. ರಾಷ್ಟ್ರಮಟ್ಟದ ಜಾಹೀರಾತು ಒಂದರಲ್ಲಿ ನಟಿಸಿದೆ. ಅದು ನನ್ನನ್ನು ಸಿನಿಮಾ ಕಡೆಗೆ ಕರೆದುಕೊಂಡು ಬಂದಿತು. ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡೆ. ಇಲ್ಲಿ ಒಂದಷ್ಟು ಸಿನಿಮಾಗಳು ಹಿಟ್ ಆದವು. ಮೊದಲಿನಿಂದಲೂ ಜಾಹೀರಾತುಗಳಲ್ಲಿ ನಟಿಸುತ್ತಿದ್ದೆ. ಹೀಗಾಗಿ ಒಂದಷ್ಟು ಕಾಲ ಮುಂಬೈ ಹೋದೆ. ಮತ್ತೆ ಈಗ ಇಲ್ಲಿಗೆ ಮರಳಿರುವೆ.
ನೀವು ಕನ್ನಡದಲ್ಲಿ ಉತ್ತುಂಗದಲ್ಲಿದ್ದಾಗ, ಇಲ್ಲಿನ ಅವಕಾಶಗಳನ್ನು ತಿರಸ್ಕರಿಸಿ ಬಾಲಿವುಡ್ ಕಡೆ ಮುಖ ಮಾಡಿದ್ರಾ?
ನಿಧಿ ಸುಬ್ಬಯ್ಯ ಪೀಕ್‌ನಲ್ಲಿ ಇದ್ದಾಗ ಕನ್ನಡ ಇಂಡಸ್ಟ್ರಿ ಬಿಟ್ಟು ಹೋದರು. ಇಲ್ಲೇ ಇದ್ದರೆ ಈಗ ಪ್ರಮುಖ ನಾಯಕಿಯರ ಪಟ್ಟಿಯಲ್ಲಿ ಜಾಗ ಪಡೆದಿರುತ್ತಿದ್ದರು ಎಂದು ಅನೇಕರು ಹೇಳುತ್ತಾರೆ. ‘ಕೃಷ್ಣನ ಮ್ಯಾರೇಜ್ ಸ್ಟೋರಿ’, ‘ಪಂಚರಂಗಿ’, ‘ಅಣ್ಣಾ ಬಾಂಡ್’ ಸಿನಿಮಾಗಳು ಹಿಟ್ ಆದರೂ ನನಗೆ ಅವಕಾಶ ಸಿಗಲಿಲ್ಲ. ಆರು ತಿಂಗಳು ಖಾಲಿ ಕುಳಿತೆ. ಆಗ ಕನ್ನಡದಲ್ಲಿ ಬಾಂಬೆ ಹೀರೋಯಿನ್ ಕ್ರೇಜ್ ತುಂಬ ಇತ್ತು. ಯಾವ ಸಿನಿಮಾದಲ್ಲಿ ಅವಕಾಶ ಕೇಳಿದರೂ, ಬಾಂಬೆಯಿಂದ ಹೀರೋಯಿನ್ ಕರೆಸಿದೀವಿ ಅನ್ನೋರು. ಭಾಷೆ ಗೊತ್ತಿಲ್ಲದ ಆ ನಟಿಯರಿಗೆ ಇಲ್ಲಿನ ಸಿನಿಮಾ ಹಿಟ್ ಆದರೂ, ತೋಪಾದರೂ ವೃತ್ತಿ ಬದುಕಿಗೆ ಹೆಚ್ಚು ಪರಿಣಾಮ ಬೀರುತ್ತಿರಲಿಲ್ಲ. ಹೀಗೆ ಬಂದು ಹಾಗೇ ಹೋಗುತ್ತಿದ್ದರು. ನಾವು ಇಲ್ಲೇ ಇದ್ದರೂ ಗುರುತಿಸುತ್ತಿರಲಿಲ್ಲ. ಹೀಗಾಗಿ ಬಾಲಿವುಡ್‌ನತ್ತ ಮುಖ ಮಾಡಿದೆ. ನಾನು ಒಮ್ಮೆ ಮುಂಬೈಗೆ ಹೋದ ನಂತರ ಇಲ್ಲಿ ಮತ್ತೆ ಅವಕಾಶಗಳು ಪ್ರಾರಂಭವಾಯಿತು. ಆದರೆ ಅಲ್ಲಿ ಕೆಲ ಹಿಂದಿ ಸಿನಿಮಾಗಳನ್ನು ಒಪ್ಪಿಕೊಂಡಿದ್ದೆ. ಹೀಗಾಗಿ ಇಲ್ಲಿನ ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಅಲ್ಲಿಂದ ಬಂದ ನಂತರವೂ ಅಷ್ಟೇನೂ ಅವಕಾಶಗಳು ಸಿಗಲಿಲ್ಲ.
ನಿಮ್ಮ ಮುಂದಿನ ಸಿನಿಮಾಗಳು ಯಾವುವು?
ಕನ್ನಡದಲ್ಲಿ ಸದ್ಯ ಬೇರೆ ಯಾವುದೇ ಸಿನಿಮಾಗಳಿಲ್ಲ. ತೆಲುಗಿನಲ್ಲಿ ಒಂದು ಸಿನಿಮಾ ಮಾತುಕತೆ ನಡೆಯುತ್ತಿದೆ. ಬೇರೆ ಭಾಷೆಯ ವೆಬ್ ಸಿರೀಸ್ ಒಂದರಲ್ಲಿ ನಟಿಸುತ್ತಿರುವೆ. ನನಗೆ ನಟನೆಯೇ ಒಂದು ರೀತಿ ಧ್ಯಾನ. ಇಲ್ಲಿ ಸಿಕ್ಕ ಖುಷಿ ಬೇರೆ ಎಲ್ಲಿಯೂ ಸಿಗುವುದಿಲ್ಲ. ಹೀಗಾಗಿ ಅವಕಾಶಗಳಿಗೆ ಕಾಯುವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.