ಭಾನುವಾರ, ಮೇ 22, 2022
28 °C

ಪುನೀತ್‌ ಮುಂದೆ ಶಾಂಪೇನ್ ಸಂಭ್ರಮ: ಕ್ಷಮೆಯಾಚಿಸಿದ ನಿರ್ದೇಶಕ ಜೋಗಿ ಪ್ರೇಮ್

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇತ್ತೀಚೆಗಷ್ಟೇ ನಿಧನರಾದ ನಟ ಪುನೀತ್‌ ರಾಜ್‌ಕುಮಾರ್ ಅವರ ಭಾವಚಿತ್ರದ ಮುಂದೆ ‘ಏಕ್‌ ಲವ್‌ಯಾ’ ಚಿತ್ರತಂಡ ಶಾಂಪೇನ್‌ ಬಾಟಲಿ ಹಿಡಿದು ಸಂಭ್ರಮಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ನಟಿ ರಚಿತಾ ರಾಮ್ ಅವರು ಕ್ಷಮೆ ಕೇಳಿದ ನಂತರ ಇದೀಗ ನಿರ್ದೇಶಕ ಜೋಗಿ ಪ್ರೇಮ್ ಕೂಡ ಬಹಿರಂಗ ಕ್ಷಮೆ ಕೇಳಿದ್ದಾರೆ.

ಟ್ವಿಟರ್‌ನಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, ‘ಅಪ್ಪು ಅವರ ಅಗಲಿಕೆಯ ನೋವು ಇನ್ನೂ ನಮ್ಮ ಮನಸ್ಸಿನಲ್ಲಿದೆ. ಆ ಕಾರಣಕ್ಕೆ ನ.4 ಕ್ಕೆ ಬಿಡುಗಡೆಯಾಗಬೇಕಿದ್ದ ಏಕ್ ಲವ್ ಯಾ ಸಿನಿಮಾದ ಹಾಡನ್ನು ನ.12 ಕ್ಕೆ ಬಿಡುಗಡೆ ಮಾಡಲಾಯಿತು. ಸಮಾರಂಭದ ಉದ್ಘಾನೆಯೇ ಅಪ್ಪು ಅವರನ್ನು ಸ್ಮರಿಸಿಕೊಂಡು ಆಯಿತು. ಶಾಂಪೇನ್ ಬಿಡುಗಡೆ ಮಾಡಿದ್ದು ಕೇವಲ ಹಾಡು ಬಿಡುಗಡೆಯ ಅಂಗವಾಗಿ. ಇದರಿಂದ ಅಪ್ಪು ಅವರ ಅಭಿಮಾನಿಗಳಿಗೆ ನೋವಾಗಿದ್ದಲ್ಲಿ ಏಕ್ ಲವ್ ಯಾ ಚಿತ್ರತಂಡದಿಂದ ಕ್ಷಮೆ ಕೇಳುತ್ತೇನೆ‘ ಎಂದು ಹೇಳಿದ್ದಾರೆ.

ಶುಕ್ರವಾರ ಬೆಂಗಳೂರಿನ ತಾಜ್‌ ವೆಸ್ಟ್ ಎಂಡ್‌ ಹೋಟೆಲ್‌ನಲ್ಲಿ ಏಕ್‌ಲವ್‌ ಯಾ ಚಿತ್ರದ ‘ಎಣ್ಣೆಗೂ ಹೆಣ್ಣಿಗೂ....’ ಹಾಡು ಬಿಡುಗಡೆ ನಡೆದಿದೆ. ಕಾರ್ಯಕ್ರಮದ ವೇದಿಕೆಯಲ್ಲಿ ಪುನೀತ್‌ ಅವರ ಭಾವಚಿತ್ರ ಇಟ್ಟು ಗೌರವ ಸಲ್ಲಿಸಲಾಗಿತ್ತು. ಬಳಿಕ ಅದೇ ವೇದಿಕೆಯಲ್ಲಿ ಚಿತ್ರದ ಹಾಡು ಬಿಡುಗಡೆಗೂ ಮುನ್ನ ಶಾಂಪೇನ್‌ ಬಾಟಲ್‌ ತೆರೆದು ನಟಿಯರಾದ ರಚಿತಾ ರಾಮ್‌, ರಕ್ಷಿತಾ, ಗಾಯಕಿ ಮಂಗ್ಲಿ, ನಿರೂಪಕ ಅಕುಲ್ ಬಾಲಾಜಿ, ರಾಣಾ, ನಿಶ್ವಿಕಾ ನಾಯ್ಡು, ಸಂಭ್ರಮಿಸಿದ್ದರು. ಈ ವರ್ತನೆ ಟೀಕೆಗೆ ಗುರಿಯಾಗಿದೆ.

 

ಈ ಬಗ್ಗೆ ನಿರ್ಮಾಪಕ ಸಾ.ರಾ. ಗೋವಿಂದು ಸೇರಿದಂತೆ ಅನೇಕ ಜನ ಬೇಸರ ವ್ಯಕ್ತಪಡಿಸಿದ್ದಾರೆ. ಪುನೀತ್‌ ಸಾರಿದ ಆದರ್ಶಗಳಿಗೆ ವಿರುದ್ಧವಾಗಿ ಚಿತ್ರತಂಡ ನಡೆದುಕೊಂಡಿದೆ ಎಂದು ‘ಅಪ್ಪು’ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಚಿತ್ರತಂಡ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ವೇಳೆ ಚಿತ್ರದ ನಾಯಕಿ ರಚಿತಾ ರಾಮ್‌ ಕ್ಷಮೆ ಯಾಚಿಸಿದ್ದು, ಅಪ್ಪು ಅವರನ್ನು ಅವಮಾನಿಸುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

‘ನಮ್ಮ ಚಿತ್ರರಂಗದವರೇ ಇಂಥ ಕೆಲಸ ಮಾಡಿದರೆ ನಾವು ಯಾರ ಮೇಲೆ ಆಪಾದನೆ ಮಾಡಲಿ. ದಯವಿಟ್ಟು ಇಂಥದ್ದನ್ನೆಲ್ಲ ಮಾಡಬೇಡಿ. ಪುನೀತ್ ಇಂದು ನಮ್ಮಿಂದ ದೂರವಾಗಿರಬಹುದು. ಆದರೆ ಅವರಿಗೆ ಅವಮಾನ ಆಗುವಂತಹ ಕೆಲಸ ಮಾಡಬೇಡಿ. ಪುನೀತ್‌ ಅವರಿಗೆ ಅವಮಾನ ಆಗುವಂತೆ ನಮ್ಮ ಚಿತ್ರರಂಗದವರು ನಡೆದುಕೊಂಡಿರುವುದರಿಂದ ನಾವೆಲ್ಲರೂ ತಲೆ ತಗ್ಗಿಸುವಂತೆ ಆಗಿದೆ’ ಎಂದು ಸಾ.ರಾ. ಗೋವಿಂದು ಹೇಳಿದ್ದಾರೆ.

ಇವುಗಳನ್ನೂ ಓದಿ

ಪುನೀತ್‌ ಭಾವಚಿತ್ರದ ಮುಂದೆ ಶಾಂಪೇನ್‌ ಬಾಟಲಿ: ಕ್ಷಮೆಯಾಚಿಸಿದ ರಚಿತಾ ರಾಮ್

ಎಣ್ಣೆ ಬಾಟಲ್ ಹಿಡಿದ ರಚಿತಾ ರಾಮ್! ಏಕ್ ಲವ್ ಯಾ ಸಿನಿಮಾದ ಹೊಸ ಹಾಡು ಬಿಡುಗಡೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು