ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹಮೋಹಿಗಳಿಗೆ ಫರ್ಹಾ ನುಡಿಚಾಟಿ

Last Updated 27 ಮಾರ್ಚ್ 2020, 20:30 IST
ಅಕ್ಷರ ಗಾತ್ರ
ADVERTISEMENT
""

ಕೊರೊನಾ ವೈರಸ್ ಹರಡುವ ಭೀತಿಯಿಂದ ಮನೆಯಲ್ಲೇ ಉಳಿದಿರುವ ನಟೀಮಣಿಯರು, ತಾರಾನಟರು ಏನೆಲ್ಲ ಮಾಡುತ್ತಿದ್ದಾರೆ ಎನ್ನುವ ಕುರಿತ ವಿಡಿಯೊಗಳು ಪುಂಖಾನುಪುಂಖವಾಗಿ ಹರಿದಾಡಿದವು, ಈಗಲೂ ಹರಿದಾಡುತ್ತಲೇ ಇವೆ. ಕತ್ರಿನಾ ಕೈಫ್ ಅವರು ಮನೆಯಲ್ಲಿ ವಾರ್ಮ್‌ಅಪ್‌ ಮಾಡುವುದು ಹೇಗೆ, ವರ್ಕ್‌ಔಟ್‌ ಯಾವ ರೀತಿ ಇರಬೇಕು ಎನ್ನುವುದರ ಪ್ರಾತ್ಯಕ್ಷಿಕೆಯ ವಿಡಿಯೊವನ್ನೇ ಹಾಕಿದ್ದರು. ಜಾಕ್ವೆಲಿನ್ ಫರ್ನಾಂಡಿಸ್ ಸೂರ್ಯ ನಮಸ್ಕಾರ ಮಾಡುವ ಬಗೆಯ ವಿಡಿಯೊ ತೇಲಿಬಿಟ್ಟಿದ್ದರು. ಶಿಲ್ಪಾ ಶೆಟ್ಟಿ ಮನೆಯ ಮೆಟ್ಟಿಲುಗಳನ್ನೇ ಬಳಸಿ ಯಾವ ರೀತಿ ದೇಹದಂಡನೆ ಮಾಡಬಹುದು ಎನ್ನುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು.

ಇವನ್ನೆಲ್ಲ ನೋಡಿದ್ದೇ ನೃತ್ಯ ನಿರ್ದೇಶಕಿ, ಚಿತ್ರ ತಯಾರಕಿ ಫರ್ಹಾ ಖಾನ್‌ ಅವರಿಗೆ ಪಿತ್ತ ನೆತ್ತಿಗೇರಿದೆ. ಅದಕ್ಕೇ ಅವರೂ ಒಂದು ವಿಡಿಯೊ ಹಾಕಿದರು. ‘ಬಾಲಿವುಡ್ ತಾರೆಗಳಿಗೆಲ್ಲ ಈಗಲೂ ತಮ್ಮ ದೇಹವೇ ದೇಗುಲ. ಅವರ ದೇಹಮೋಹ ಈ ಪರಿಯಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ತಮ್ಮ ದೇಹಾಕಾರವನ್ನು ಕಾಪಾಡಿಕೊಳ್ಳುವುದೇ ದೊಡ್ಡ ವಿಷಯ ಎನ್ನುವಂತೆ ಮೇಲಿಂದ ಮೇಲೆ ವಿಡಿಯೊಗಳನ್ನು ಹಾಕುತ್ತಿದ್ದಾರೆ. ಜನರ ಸಮಸ್ಯೆಗಳು ನೂರಾರು ಇವೆ. ಹೀಗಾಗಿ ಇಂತಹ ಅಪಸವ್ಯಗಳು ಬೇಡ. ಇನ್ನಾದರೂ ಇಂತಹ ವಿಡಿಯೊಗಳ ಹಾಕುವುದನ್ನು ನಿಲ್ಲಿಸಿ’ ಎಂಬ ಧಾಟಿಯಲ್ಲಿ ಮಾತನಾಡಿ, ಎಲ್ಲರಿಗೂ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಕರಣ್ ಜೋಹರ್, ಝೋಯಾ ಅಖ್ತರ್, ಸೋನಂ ಕಪೂರ್, ಶಿಲ್ಪಾ ಶೆಟ್ಟಿ, ಟಬು, ರವೀನಾ ಟಂಡನ್, ಅರ್ಜುನ್ ಕಪೂರ್ ಮೊದಲಾದವರು ನಗುಮುಖದ ಎಮೋಜಿಯನ್ನು ಈ ವಿಡಿಯೊಗೆ ಪ್ರತಿಕ್ರಿಯಾತ್ಮಕವಾಗಿ ಹಾಕಿದ್ದಾರೆ.

ಈ ವಿಡಿಯೊ ಗಾಂಭೀರ್ಯದ ಕುರಿತು ಒಂದು ಸುತ್ತು ಚರ್ಚೆ ನಡೆಯುವ ಹೊತ್ತಿಗೇ ಬಹುಭಾಷಾ ನಟಿ ಸಮೀರಾ ರೆಡ್ಡಿ ಮನೆಯಲ್ಲೇ ಲಾಕ್‌ಡೌನ್‌ ಆಗಿರುವ ಮಕ್ಕಳನ್ನು ಸಂಭಾಳಿಸಲು ಅಮ್ಮಂದಿರು ಪಡುತ್ತಿರುವ ಕಷ್ಟಗಳನ್ನು ಹೇಳಿಕೊಂಡು ಕಣ್ಣೀರಾಗಿರುವುದು ಗಮನಾರ್ಹ.

ಸೈಫ್ ಅಲಿ ಖಾನ್, ತೈಮೂರ್ ಅಲಿ ಖಾನ್ ಮತ್ತು ಕರೀನಾ ಕಪೂರ್

ಈಗ ತುಸು ತಮಾಷೆ ಪ್ರಸಂಗದ ಕಡೆಗೆ ಹೊರಳೋಣ. ಗುರುವಾರ ಸೈಫ್ ಅಲಿ ಖಾನ್ ಅವರನ್ನು ಟಿ.ವಿ ವಾಹಿನಿಯ ನಿರೂಪಕಿ ಮನೆಯಿಂದಲೇ ಸಂದರ್ಶನಕ್ಕೆ ಆಹ್ವಾನಿಸಿದರು. ಸ್ಟುಡಿಯೊದಲ್ಲಿ ನಿರೂಪಕಿ ಇದ್ದರೆ, ತಮ್ಮ ಮನೆಯಲ್ಲೇ ಸೈಫ್ ಕುಳಿತಿದ್ದರು. ಸಂದರ್ಶನವೇನೋ ಶುರುವಾಯಿತು. ಆದರೆ, ಪುಟಾಣಿ ತೈಮೂರ್ ಅಪ್ಪ ಇದ್ದಲ್ಲಿಗೆ ಧಾವಿಸಿ ಬಂದ. ಕ್ಯಾಮೆರಾಗೆ ಮುಖ ಒಡ್ಡಿದ್ದ ಸೈಫ್ ಇರಿಸು ಮುರಿಸಾದರು. ದೂರ ಸರಿಯುವಂತೆ ಕಣ್ಣಲೇ ಇಶಾರೆ ಮಾಡಿದರೂ ಫಲಕಾರಿಯಾಗಲಿಲ್ಲ. ನಿರೂಪಕಿ, ‘ಯಾರು ಬಂದರು, ಏನಾಯಿತು’ ಎಂದು ಸಹಜವಾಗಿಯೇ ಪ್ರಶ್ನಿಸಿದರು. ತೈಮೂರ್ ಅಲ್ಲಿರುವುದನ್ನು ಸೈಫ್ ತಿಳಿಸಿದ್ದೇ, ಅವನನ್ನೂ ಕ್ಯಾಮೆರಾಗೆ ತೋರುವಂತೆ ನಿರೂಪಕಿ ಮಾತು ಹೊರಳಿಸಿದರು.

ಕರೀನಾ ಅನುಮತಿ ಪಡೆದ ಮೇಲೆ ಮುಖಕ್ಕೆ ಹಾಕಿದ್ದ ಮಾಸ್ಕ್ ತೆಗೆದು, ಮಗುವನ್ನು ಕ್ಯಾಮೆರಾಗೆ ಹಿಡಿದರು. ಅವನದ್ದೇ ಭಾಷೆಯಲ್ಲಿ ಕುಶಲೋಪರಿ ನಡೆಸಿದ. ನಿರೂಪಕಿ ಎಲ್ಲೂ ಕಾಣುತ್ತಿಲ್ಲ. ಆದರೂ ಧ್ವನಿ ಕೇಳುತ್ತಿರುವುದರ ಕುರಿತು ಮಗುವಿಗೆ ಕುತೂಹಲ. ಟಿ.ವಿಯಲ್ಲಿ ತಾನು ಕಾಣುತ್ತೇನೆಂದು ನಿರೂಪಕಿ ಹೇಳಿದ್ದೇ ಮುಗ್ಧ ನಗು. ಒಟ್ಟಿನಲ್ಲಿ, ಸೈಫ್ ಸಂದರ್ಶನವನ್ನು ಅವರ ಮಗ ಹೈಜಾಕ್ ಮಾಡಿದ್ದೂ ಸುದ್ದಿಯೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT