ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶಿಷ್ಟ ವ್ಯಕ್ತಿತ್ವದ ಇರ್ಫಾನ್‌; ಶಿಷ್ಯನ ನೆನಪಿಸಿಕೊಂಡ ರಂಗಕರ್ಮಿ ಪ್ರಸನ್ನ

Last Updated 30 ಏಪ್ರಿಲ್ 2020, 3:04 IST
ಅಕ್ಷರ ಗಾತ್ರ
ADVERTISEMENT
""

ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಲಂಡನ್‌ನಿಂದ ಕಳೆದ ಸೆಪ್ಟೆಂಬರ್‌ನಲ್ಲಿ ಮುಂಬೈಗೆ ವಾಪಸಾಗಿದ್ದ ಬಾಲಿವುಡ್‌ ನಟ ಇರ್ಫಾನ್‌ ಖಾನ್‌ ಬದುಕಿಗೆ ಗುಡ್‌ಬೈ ಹೇಳಿದ್ದಾರೆ. ತಮ್ಮ ಪ್ರಿಯ ಶಿಷ್ಯನ ಜೊತೆಗಿನ ಒಡನಾಟ ಕುರಿತು ಹಿರಿಯ ರಂಗಕರ್ಮಿ, ಗಾಂಧಿವಾದಿ ಪ್ರಸನ್ನ ಅವರು ‘ಪ್ರಜಾ ಪ್ಲಸ್’‌ ಜೊತೆಗೆ ನೆನಪು ಹಂಚಿಕೊಂಡಿದ್ದಾರೆ.

ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಸುಮಾರು ಎರಡೂವರೆ ದಶಕಗಳ ಕಾಲ ನಾಟಕ ನಿರ್ದೇಶನ ಮಾಡಿದ್ದೇನೆ. ನನ್ನಿಂದ ತರಬೇತಿ ಪಡೆದ ಅನೇಕರು ಪ್ರಖ್ಯಾತ ಸಿನಿಮಾ ನಟ–ನಟಿಯರಾಗಿದ್ದಾರೆ. ಬಹುಶಃ ನಂತರದ ದಿನಗಳಲ್ಲಿ ನನ್ನ ಕಾರ್ಯಕ್ಷೇತ್ರ ಬೇರೆಯಾದ ಕಾರಣವೋ ಏನೋ, ಅವರ‍್ಯಾರ ಜತೆಗೂ ನೇರ ಸಂಪರ್ಕವಿಲ್ಲ; ಪ್ರೀತಿ, ಅಭಿಮಾನವಿದೆ. ಆದರೆ, ಇರ್ಫಾನ್ ಜತೆಗೆ ಮಾತ್ರ ಸಂಪರ್ಕ ನಿರಂತರವಾಗಿ ಮುಂದುವರಿದಿತ್ತು.

ಅದಕ್ಕೆ ಕಾರಣ, ನನಗೆ ಅವನೊಬ್ಬ ವಿಶೇಷ ವ್ಯಕ್ತಿಯಂತೆ ಕಾಣುತ್ತಿದ್ದ. ನಟನೆಯಷ್ಟೇ ಅಲ್ಲದೇ, ಯಾವುದೇ ವಿಚಾರಗಳ ಬಗ್ಗೆಯೂ ಆಳವಾಗಿ ಯೋಚನೆ ಮಾಡುತ್ತಿದ್ದ. ಅವನ ಈ ವ್ಯಕ್ತಿತ್ವ, ನಟನಾ ಕೌಶಲ, ಸಾಮಾಜಿಕ ವಿಚಾರಗಳನ್ನು ನಿರ್ವಹಿಸುವ ರೀತಿಗೆ ಮನಸೋಲದವರಿಲ್ಲ.ರಾಜಸ್ಥಾನದಿಂದ ಇಲ್ಲಿಗೆ ಬಂದಿದ್ದ ಇರ್ಫಾನ್, ನಾಟಕ ಶಾಲೆಯಲ್ಲಿದ್ದಾಗ ಸಾಮಾನ್ಯ ವಿದ್ಯಾರ್ಥಿಗಳಂತೆಯೇ ಇದ್ದ.

ಇರ್ಫಾನ್‌ ಸಾಮಾಜಿಕ ಕಳಕಳಿಗೆ ಬದನವಾಳು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದನ್ನು ಉದಾಹರಿಸಬಹುದು. ಮೈಸೂರು ಸಮೀಪದ ಬದನವಾಳುವಿನಲ್ಲಿ 2015ರಏಪ್ರಿಲ್ 19ರಂದು ‘ಬದನವಾಳು ಸತ್ಯಾಗ್ರಹ’ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮಕ್ಕೆಇರ್ಫಾನ್ ಮತ್ತು ಅವನ ಪತ್ನಿ ಶುತಾಪ ಬಂದಿದ್ದರು. ಶುತಾಪ ಕೂಡ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿನಿ. ಇರ್ಫಾನ್‌ನ ಸಹಪಾಠಿ.

ಬದನವಾಳುವಿನ ಖಾದಿ ಕೇಂದ್ರದಲ್ಲಿ ನಾವೆಲ್ಲರೂ ವಾಸ್ತವ್ಯ ಹೂಡಿದ್ದೆವು. ಕನಿಷ್ಠ ಮೂಲಸೌಕರ್ಯವಿಲ್ಲದ ಕಟ್ಟಡವದು (ಶೌಚಾಲಯವಿಲ್ಲ. ಶಿಥಿಲ ಕಟ್ಟಡ). ಇರ್ಫಾನ್ ಮತ್ತು ಶುತಪಾ ನಮ್ಮೊಟ್ಟಿಗೆ ಅಲ್ಲೇ ಉಳಿದಿದ್ದರು. ಅಡುಗೆ ಮಾಡಿದರು. ಎಲ್ಲರೊಂದಿಗೆ ಕೂಡಿ ಊಟ ಮಾಡಿದರು. ಸತ್ಯಾಗ್ರಹವೂ ಸೇರಿದಂತೆ ಅನೇಕ ಸಾಮಾಜಿಕ ವಿಚಾರಗಳ ಬಗ್ಗೆ ರಾತ್ರಿ ಇಡೀ ಚರ್ಚಿಸಿದರು. ಬಾಲಿವುಡ್‌ ಸ್ಟಾರ್ ಆಗಿದ್ದರೂ ಹಮ್ಮು, ಬಿಮ್ಮು ಇಲ್ಲದೇ ಎಲ್ಲರೊಂದಿಗೆ ಬೆರೆಯುತ್ತಿದ್ದ ನಟ ಇರ್ಫಾನ್‌.

ಸಿನಿಮಾದಲ್ಲಿ ಅಷ್ಟೆಲ್ಲ ಖ್ಯಾತಿಗಳಿಸಿದ್ದರೂ ಆತನಿಗೆ ನಾಟಕ ಮಾಡುವ ಆಸೆ ಅದಮ್ಯವಾಗಿತ್ತು. ಅದನ್ನು ನನ್ನೊಡನೆ ಹೇಳಿಕೊಂಡಿದ್ದ. ನಾಟಕದ ಸ್ಕ್ರಿಪ್ಟ್ ತಯಾರಿಗಾಗಿಯೇ ಮುಂಬೈನ ಅವರ ಮನೆಗೆ ಹೋಗಿ, ಒಂದು ವಾರ ಇದ್ದೆ. ಇದಕ್ಕಾಗಿ ಆತ ತನ್ನ ಶೂಟಿಂಗ್‌ ರದ್ದು ಮಾಡಿದ್ದ. ಆ ನಾಟಕದಲ್ಲಿ ಗಾಂಧಿ, ಚಾಪ್ಲಿನ್ ಪಾತ್ರಗಳೂ ಇದ್ದವು. ಆದರೆ, ಸ್ಕ್ರಿಪ್ಟ್ ಪೂರ್ಣವಾಗಲಿಲ್ಲ. ‘ಮುಂದೆ ಯಾವಾಗಲಾದರೂ ನಾಟಕ ಮಾಡೋಣ’ ಎಂದು ಮುಂದೂಡಿದ್ದ. ಮುಂದೆ ನಾಟಕ ಮಾಡುವ ಕನಸು ಈಡೇರಲಿಲ್ಲ. ಆದರೆ, ಆ ಸ್ಕ್ರಿಪ್ಟ್‌ ‘ಸ್ವರಾಜ್ಯದಾಟ’ ಎಂಬ ನಾಟಕವಾಗಿ ಪ್ರದರ್ಶನಗೊಂಡಿತು.

ಒಮ್ಮೆ ನಾನು ‘ಲಾಲ್ ಘಾಸ್ ಪರ್ ನೀಲೇ ಘೋಡೆ’ ನಾಟಕ ನಿರ್ದೇಶಿಸುತ್ತಿದ್ದೆ. ಅದರಲ್ಲಿ ಅವನು ‘ಲೆನಿನ್’ ಪಾತ್ರ ಮಾಡಬೇಕಿತ್ತು. ಅದಕ್ಕಾಗಿ ತಲೆ ಬೋಳಿಸಿಕೊಳ್ಳಬೇಕಿತ್ತು. ‘ನಾನು ವಿಭಿನ್ನ ಪಾತ್ರಗಳನ್ನು ಮಾಡಬೇಕಿದೆ. ಹೇಗೆ ಮಾಡಲಿ’ ಎಂದು ಕೇಳಿದ್ದ. ಅದನ್ನು ಕೇಳಿ ನಾನು ನಕ್ಕಿದ್ದೆ. ‘ಚಿಂತೆ ಮಾಡಬೇಡ. ನೀನು ಹೇಗಿದ್ದೆಯೋ ಹಾಗೆಯೇ ಪಾತ್ರ ಮಾಡು’ ಎಂದು ಹೇಳಿದ್ದೆ. ಆ ಪಾತ್ರದ ಮೂಲಕ ರಂಗಭೂಮಿ ಕ್ಷೇತ್ರದಲ್ಲಿ ಹೊಸದೊಂದು ರೀತಿಯ ಬೆಳವಣಿಗೆಯಾಯಿತು. ಲೆನಿನ್ ತರಹ ಕಾಣಿಸುವ ಲೆನಿನ್ ಅದರಲ್ಲಿರಲಿಲ್ಲ. ಆದರೆ, ಲೆನಿನ್ ಕಾರ್ಯಕ್ಷಮತೆ, ಜೀವನೋತ್ಸಾಹ ಪ್ರದರ್ಶಿಸುವ ಕೆಲಸವನ್ನು ಇರ್ಫಾನ್ ಮಾಡಿದ್ದ.

ನಟ ಇರ್ಫಾನ್ ಖಾನ್

ಕೃಷಿ, ಪರಿಸರ, ಪ್ರಾಣಿಗಳ ಬಗ್ಗೆ ಬಲು ಪ್ರೀತಿ ಇರ್ಫಾನ್‌ಗೆ. ಮುಂಬೈ ಸಮೀಪದ ಇಗ್ಗತ್‌ಪುರಿ ಎಂಬಲ್ಲಿ ಕೃಷಿ ಮಾಡುತ್ತಿದ್ದ. ನಾನು ಎರಡು ತಿಂಗಳ ಹಿಂದೆ ದೆಹಲಿಗೆ ಹೋಗಿ ವಾಪಸ್ ಬರುವಾಗ ಮುಂಬೈನಲ್ಲಿ ಅವನ ಮನೆಗೆ ಹೋಗಿ ಬರಬೇಕೆಂದುಕೊಂಡಿದ್ದೆ. ಅದನ್ನು ತಿಳಿಸಿದ್ದೆ. ‘ಎರಡು ದಿನ ಇದ್ದು ಹೋಗಬೇಕೆಂದು’ ಹೇಳಿದ್ದ. ದೆಹಲಿಯಿಂದ ಹೊರಡುವ ವೇಳೆಗೆ ಶುತಪಾ ಕರೆ ಮಾಡಿ, ‘ಹಸು ಕರು ಹಾಕಿದೆ. ಇರ್ಫಾನ್ ಜಮೀನಿನಲ್ಲಿದ್ದಾರೆ. ಬರಲು ಹೇಳಬೇಕಾ’ ಎಂದಳು. ‘ಬೇಡ, ಅವನು ಅಲ್ಲಿ ಖುಷಿಯಾಗಿದ್ದಾನೆ. ಅಲ್ಲೇ ಇರಲಿ. ಇನ್ನೊಮ್ಮೆ ಸಿಗುತ್ತೇನೆ’ ಎಂದೆ. ಈ ಸಮಯದಲ್ಲಿ ಆತನ ಆರೋಗ್ಯ ತೀರ ಕೆಟ್ಟಿತ್ತು. ಆದರೆ, ಅನಾರೋಗ್ಯದಲ್ಲೂ ಇರ್ಫಾನ್‌ನಪ್ರಾಣಿ ಪ್ರೀತಿ ಕರಗಿರಲಿಲ್ಲ.

ಇರ್ಫಾನ್‌ಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ ಆತ ಮೊದಲು ಸಾಗರ ಸಮೀಪದ ಆನಂದಪುರದಲ್ಲಿರುವ ಪಂಡಿತರ ಬಳಿ ಔಷಧಿ ತೆಗೆದುಕೊಳ್ಳಲು ಬಂದಿದ್ದ. ಆಗ ಫೋನ್ ಮಾಡಿದ್ದ. ಅಂದು ನಾನು ಇಡೀ ದಿನ ಅವನ ಜತೆ ಇದ್ದೆ. ಅಲ್ಲಿಂದ ವಾಪಸ್ ಮುಂಬೈಗೆ ಹೋದ ಮೇಲೆ, ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ಹೋದ. ಅಲ್ಲಿನ ಆಸ್ಪತ್ರೆಯಿಂದಲೇ ಒಂದು ಪತ್ರ ಬರೆದ. ಆ ಪತ್ರದಲ್ಲಿ ಅವನ ಜೀವನದ ಬಗೆಗಿನ ನಂಬಿಕೆ ಕಾಣಿಸುತ್ತಿತ್ತು. ‘ನಾನು ಈ ಕ್ಯಾನ್ಸರ್‌ಗೆ ಹೆದರಲ್ಲ. ಆದರೆ, ಶರಣಾಗುತ್ತಿದ್ದೇನೆ. ಉಳಿದ ದಿನಗಳನ್ನು ಸುಂದರವಾಗಿ ಕಳೆಯಲು ಬಯಸುತ್ತೇನೆ’ ಎಂದು ಬರೆದುಕೊಂಡಿದ್ದ. ಕೊನೆಯವರೆಗೂ ಸುಂದರವಾಗಿಯೇ ದಿನಗಳನ್ನು ಕಳೆದ.

ಇತ್ತೀಚೆಗೆ ನಾನು ‘ಅಜ್ಞಾತ ಸ್ಥಳದಲ್ಲಿ ಉಪವಾಸ ಮಾಡುತ್ತಿದ್ದೇನೆ’ ಎಂದು ತಿಳಿಸಿದ್ದೆ. ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದಾಗಲೇ ಟ್ವೀಟ್ ಮಾಡಿ, ನನಗೆ ಬೆಂಬಲ ಸೂಚಿಸಿದ್ದ. ನಾವು ಕೇಳದಿದ್ದರೂ ತನ್ನ ಟ್ರಸ್ಟ್‌ನಿಂದ ₹ 40 ಸಾವಿರವನ್ನು ನಮ್ಮ ಸಂಘದ ಬ್ಯಾಂಕ್ ಖಾತೆಗೆ ಡಿಪಾಸಿಟ್ ಮಾಡಿದ್ದ.

ಅಂಥ ವಿಶಿಷ್ಟ, ಅಪರೂಪದ ವ್ಯಕ್ತಿತ್ವ ಇರ್ಫಾನ್ ನಾನು ತುಂಬಾ ಗೌರವಿಸುವ ವ್ಯಕ್ತಿ. ಅವನಿಗೆ ಶಾಂತಿ ಸಿಗಲಿ. ಅವರ ಮನೆಯವರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಬಯಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT