ಬುಧವಾರ, ಅಕ್ಟೋಬರ್ 21, 2020
26 °C

ಫಿಟ್‌ನೆಸ್‌ ನಮ್ಮ ಅಜ್ಜನಿಂದಲೇ ನಮಗೆ ಬಳುವಳಿ-ಚಿರಂಜೀವಿ ಸರ್ಜಾ

ಕೆ.ಎಂ. ಸಂತೋಷ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ಕ್ರೀಡಾಪಟುಗಳು, ಸಿನಿಮಾ ತಾರೆಯರು ಯೋಗ ಕೇಂದ್ರ, ಜಿಮ್ ಸೆಂಟರ್‌ಗಳಲ್ಲಿ ಬೆವರು ಹರಿಸುವುದನ್ನು ನೋಡಿದಾಗ ಅವರಿಗೆ ‘ಹಮ್ ಫಿಟ್, ತೋ ಇಂಡಿಯಾ ಫಿಟ್’ ಸವಾಲು ಅಂತಹ ದೊಡ್ಡ ಸವಾಲೆಂದು ಅನಿಸುವುದಿಲ್ಲ. ಬಹುತೇಕ ಸಿನಿಮಾ ತಾರೆಯರು ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನಲ್ಲಿ ಫಿಟ್‍ನೆಸ್‌ಗೆ ಒತ್ತು ಕೊಡುತ್ತಾರೆ.

ವೃತ್ತಿ ಬದುಕಿನಷ್ಟೇ ಫಿಟ್‌ನೆಸ್‌ಗೂ ಒತ್ತು ಕೊಡುವ ಕನ್ನಡ ಚಿತ್ರರಂಗದ ಸ್ಟಾರ್‌ ನಟರಲ್ಲಿ ಒಬ್ಬರಾದ ಚಿರಂಜೀವಿ ಸರ್ಜಾ, ‘ಫಿಟ್‌ನೆಸ್‌ ನನಗೆ ರಕ್ತಗತವಾಗಿಯೇ ಬಂದಿದೆ’ ಎನ್ನುತ್ತಾರೆ. ಫಿಟ್‌ನೆಸ್‌ ಪ್ರಿಯರಿಗೂ ಅವರು ಸಾಕಷ್ಟು ಟಿಪ್ಸ್‌ಗಳನ್ನು  ಕೊಡುತ್ತಾರೆ. ತಮ್ಮ ಫಿಟ್‌ನೆಸ್‌ ರಹಸ್ಯವನ್ನು ಅವರು ಇಲ್ಲಿ ತೆರೆದಿಟ್ಟಿದ್ದಾರೆ.

‘ನನ್ನ ಸೋದರ ಮಾವ ಅರ್ಜುನ್‌ ಸರ್ಜಾ, ನಾನು ಹಾಗೂ ಸಹೋದರ ಧ್ರುವ ಸರ್ಜಾ ಎಲ್ಲರೂ ವ್ಯಕ್ತಿಗತವಾಗಿ ಫಿಟ್‌ನೆಸ್‌ಗೆ ಒತ್ತು ಕೊಡುತ್ತೇವೆ. ನಮ್ಮ ಅಜ್ಜ ಶಕ್ತಿ ಪ್ರಸಾದ್‌ ಸಹ ಫಿಟ್‌ನೆಸ್‌ ಕಾಯ್ದುಕೊಂಡವರೇ. ಫಿಟ್‌ನೆಸ್‌ ನಮಗೆ ರಕ್ತಗತವಾಗಿ ಬಂದಿದೆ. ಅದು ಬದುಕಿನ ಭಾಗ. ದಿನನಿತ್ಯ ಊಟ, ತಿಂಡಿ ಹೇಗೆ ಮಾಡುತ್ತೇವೊ, ಅದೇ ರೀತಿ ತಪ್ಪದೇ ವರ್ಕೌಟ್‌ ಮಾಡ್ತೀವಿ’ ಎನ್ನುತ್ತಾರೆ ಚಿರು.

ಫಿಟ್‌ನೆಸ್‌ ವಿಷಯ ಬಂದಾಗ ಎಲ್ಲ ನಟರಿಗೂ ಒಂದೇ ತರಹದ ಅನುಭವ. ಎಲ್ಲವೂ ಇದ್ದೂ ಏನೂ ಇಲ್ಲದಂತೆ ಅದು. ನೋಡಿದ್ದನ್ನೆಲ್ಲ ಖರೀದಿಸಿ ತಿನ್ನಲು ಹಣವಿರುತ್ತದೆ. ಆದರೆ, ಅದನ್ನು ತಿನ್ನುವಂತಿಲ್ಲ. ಕ್ಷಣಕ್ಕೆ ತಿನ್ನುವ ಅವಕಾಶವಿಲ್ಲ ಎನ್ನುವ ಕೊರಗು ಕಾಡಬಹುದು. ಆದರೆ, ದೂರಗಾಮಿಯಾಗಿ ಯೋಚಿಸಿದಾಗ ಫಲಿತಾಂಶ ಒಳ್ಳೆಯದೇ ಆಗಿರುತ್ತದೆ. ಅದರಲ್ಲೂ ಸೆಲೆಬ್ರಿಟಿಗಳು ಕಾಯ್ದುಕೊಳ್ಳುವ ಫಿಟ್‌ನೆಸ್‌ಗೆ ಅಭಿಮಾನಿಗಳು ಖುಷಿಪಡುತ್ತಾರೆ. ಜತೆಗೆ ನಾವೂ ಅವರಂತೆಯೇ ಫಿಟ್‌ನೆಸ್‌ ಕಾಪಾಡಿಕೊಳ್ಳಬೇಕೆಂದು ದೇಹ ಮತ್ತು ಮನಸಿನ ಆರೋಗ್ಯದ ಬಗ್ಗೆ ಕಾಳಜಿವಹಿಸುತ್ತಾರೆ ಎನ್ನುವುದು ಚಿರಂಜೀವಿ ಸರ್ಜಾ ಅನಿಸಿಕೆ.

ಫಿಟ್‌ನೆಸ್‌ ಸ್ಥಿತಿ ಸಿನಿಮಾದಿಂದ ಸಿನಿಮಾಕ್ಕೆ ಬದಲಾಗುತ್ತಲೇ ಇರುತ್ತದೆ. ದೇಹದ ತೂಕ ಹೆಚ್ಚಿಸುವುದು, ಇಳಿಸುವುದು ವೃತ್ತಿ ಬದುಕಿನಲ್ಲಿ ಸಹಜ ಪ್ರಕ್ರಿಯೆ. ಅದು ಪಾತ್ರ ಬಯಸಿದಂತೆ ನಾವು ಮಾಡಲೇಬೇಕಾಗುತ್ತದೆ. ನಾನು ಎಂದೂ ತೂಕವನ್ನು ಅಳೆದಿಲ್ಲ. ಪಾತ್ರಕ್ಕೆ ತಕ್ಕಂತೆ ದೇಹದಾರ್ಢ‍್ಯ ಕಾಯ್ದುಕೊಳ್ಳಲಷ್ಟೇ ನನ್ನ ಗಮನ ಎನ್ನುತ್ತಾರೆ.

ಎಲ್ಲಿ ಸರಿಯಾಗಿ ತರಬೇತಿ ನೀಡುತ್ತಾರೋ, ಅಲ್ಲಿಗೆ ಹೋಗಿ ದೈಹಿಕ ಕಸರತ್ತು ಕಲಿಯಬೇಕು. ನಾನು ಒಬ್ಬನೇ ವರ್ಕೌಟ್‌ ಮಾಡಬಹುದು. ಯುಟ್ಯೂಬ್‌ನಲ್ಲಿ ವಿಡಿಯೊ ನೋಡಿ ಕಲಿಯಬಹುದು. ಆದರೆ, ನುರಿತವರು ಅಥವಾ ಸಹಾಯಕರು ಜತೆಯಲ್ಲಿ ಇದ್ದರೆ ಮಾಂಸಖಂಡ ಗಾಯಗೊಳ್ಳುವುದನ್ನು ತಪ್ಪಿಸಬಹುದು ಎನ್ನುವುದು ಅವರ ಸಲಹೆ.

‘ನಮ್ಮ ಮನೆಯಲ್ಲಿ ಜಿಮ್‌ ಸಲಕರಣೆಗಳು ಇದ್ದರೂ, ಆಗಾಗ ಜಿಮ್‌ಗೆ ಹೋಗಿ ವರ್ಕೌಟ್‌ ಮಾಡ್ತೀನಿ. ನನಗೆ ಗೊತ್ತಿಲ್ಲದ್ದನ್ನು ಟ್ರೇನರ್‌ಗಳಿಂದ ಕಲಿತುಕೊಳ್ಳುತ್ತೇನೆ. ಜಿಮ್‌ಗೆ ಹೋದಾಗ ಪ್ರೇರಣೆ ಸಿಗುತ್ತದೆ. ಅಲ್ಲದೆ, ಒಂದು ಶಿಸ್ತು, ಅರ್ಪಣಾ ಮನೋಭಾವ ಬರುತ್ತದೆ. ಸ್ವಯಂ ಕಲಿತವರಿಗೆ ತರಬೇತುದಾರರ ಅಗತ್ಯವಿಲ್ಲ. ಆದರೆ, ಫಿಟ್‌ನೆಸ್‌ ಬಗ್ಗೆ ಅರೆ ಜ್ಞಾನವಿದ್ದರೆ ಅಂತಹವರಿಗೆ ತರಬೇತುದಾರರ ಅಗತ್ಯ ಖಂಡಿತ ಇದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

‘ಮುಂದಿನ ಸಿನಿಮಾಗಳಿಗೆ ನನ್ನ ದೇಹವನ್ನು ಸಿಕ್ಸ್‌ ಪ್ಯಾಕ್‌ ಮಾಡುತ್ತಿದ್ದೇನೆ. ಹೊಸ ಸಿನಿಮಾ ಬಗ್ಗೆಯೂ ಮಾತುಕತೆ ನಡೆಯುತ್ತಿದೆ’ ಎಂದು ಅವರ ಅಭಿಮಾನಿಗಳೂ ಖುಷಿಪಡುವ ವಿಷಯವನ್ನು ಚಿರು ಹಂಚಿಕೊಂಡರು. ಅವರ ಕೈಯಲ್ಲಿ ಸದ್ಯ ‘ಚಿರು–2’, ‘ಕ್ಷತ್ರಿಯ’, ‘ಜುಗಾರಿ ಕ್ರಾಸ್‌’ ಹಾಗೂ ಕ್ರಿಸ್ಟಲ್‌ ಪಾರ್ಕ್‌ ಬ್ಯಾನರ್‌ನ ಹೆಸರಿಡದ ಹೊಸ ಚಿತ್ರವಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು