ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಂದು ಐದು ಕನ್ನಡ ಸಿನಿಮಾಗಳು ತೆರೆಗೆ

Published : 19 ಸೆಪ್ಟೆಂಬರ್ 2024, 21:15 IST
Last Updated : 19 ಸೆಪ್ಟೆಂಬರ್ 2024, 21:15 IST
ಫಾಲೋ ಮಾಡಿ
Comments

ಇಂದು (ಸೆ.20) ಐದು ಹೊಸ ಸಿನಿಮಾಗಳು ತೆರೆಕಾಣುತ್ತಿವೆ. ಉಪೇಂದ್ರ ನಟಿಸಿ, ನಿರ್ದೇಶಿಸಿದ ‘ಉಪೇಂದ್ರ’ ಸಿನಿಮಾ ಮತ್ತೆ ಬಿಡುಗಡೆ ಆಗುತ್ತಿದೆ. 

ಹಗ್ಗ: ಅನು ಪ್ರಭಾಕರ್‌ ಮುಖ್ಯಭೂಮಿಕೆಯಲ್ಲಿರುವ ಹಾರರ್‌ ಸಿನಿಮಾ ಇದಾಗಿದೆ. ಚಿತ್ರಕ್ಕೆ ಅವಿನಾಶ್‌ ಆ್ಯಕ್ಷನ್‌ ಕಟ್‌ ಹೇಳಿದ್ದು, ಅದು ಅವರ ಚೊಚ್ಚಲು ಸಿನಿಮಾ. ಹರ್ಷಿಕಾ ಪೂಣಚ್ಚ, ತಬಲಾ ನಾಣಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ರಾಜ್‌ ಭಾರದ್ವಾಜ್‌ ನಿರ್ಮಾಣ ಮಾಡಿದ್ದಾರೆ. ‘ಚಿತ್ರದಲ್ಲಿ ಹಗ್ಗವನ್ನು ಆಯುಧವನ್ನಾಗಿ ಬಳಸಿಕೊಳ್ಳಲಾಗಿದೆ. ಒಳ್ಳೆಯ ವಿಷಯಕ್ಕಾಗಿ ಹಗ್ಗ ಹೋರಾಟ ಮಾಡುತ್ತದೆ. ಇದೊಂದು ಹಾರರ್ ಫ್ಯಾಂಟಸಿ ಆ್ಯಕ್ಷನ್‍ ಥ್ರಿಲ್ಲರ್ ಸಿನಿಮಾ. ಚಿತ್ರದಲ್ಲಿ ಗ್ರಾಫಿಕ್ಸ್‌ ಹೆಚ್ಚು ಇದೆ’ ಎಂದಿದ್ದಾರೆ ಅವಿನಾಶ್. 

ಧ್ರುವತಾರೆ: ಜಿ.ಪಿ. ಫಿಲಂಸ್ ಸ್ಟುಡಿಯೊಸ್‌ ಬ್ಯಾನರ್‌ನಡಿ ಗಣೇಶ್ ಕುಮಾರ್ ಈ ಸಿನಿಮಾ ನಿರ್ಮಾಣ ಮಾಡಿದ್ದು, ಪ್ರತೀಕ್ ನಿರ್ದೇಶನದ ಜೊತೆಗೆ ನಟನೆಯನ್ನು ಮಾಡಿದ್ದಾರೆ. ಇದೊಂದು ಫ್ಯಾಮಿಲಿ ಡ್ರಾಮಾದ ಕಥೆಯಾಗಿದೆ. ಚಿತ್ರದಲ್ಲಿ ಪ್ರತೀಕ್ ಅವರ ಪತ್ನಿ ಮೌಲ್ಯ ಅವರೇ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ರಮೇಶ್ ಭಟ್, ಸುಮನ್ ನಗರ್ಕರ್, ಅಶ್ವಿನ್ ರಾವ್ ಪಲ್ಲಕ್ಕಿ, ಪಿ.ಡಿ ಸತೀಶ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ‘ಬಿಗ್‌ಬಾಸ್’ ಖ್ಯಾತಿಯ ಕಾರ್ತಿಕ್ ಮಹೇಶ್ ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದಾರೆ. ಬಾಡಿ ಶೇಮಿಂಗ್ ಎನ್ನುವುದು ಎಷ್ಟು ಪರಿಣಾಮ ಬೀರುತ್ತದೆ ಎನ್ನುವ ಕಥೆಯನ್ನು ಈ ಸಿನಿಮಾ ಹೊತ್ತಿದೆ ಎಂದಿದೆ ಚಿತ್ರತಂಡ. 

ಲಂಗೋಟಿ ಮ್ಯಾನ್: ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಸಂಜೋತ ಭಂಡಾರಿ ನಿರ್ದೇಶನದ ಈ ಸಿನಿಮಾದಲ್ಲಿ ಆಕಾಶ್‌ ರಾಂಬೋ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ‘ಇದು ತಾತ ಮೊಮ್ಮಗನ ಸುತ್ತ ನಡೆಯುವ ಕಥೆ. ತಾತನಿಗೆ ಮೊಮ್ಮಗ ಲಂಗೋಟಿ ಹಾಕಿಕೊಳ್ಳಬೇಕು‌ ಎಂಬ ಬಯಕೆ. ಮೊಮ್ಮಗನಿಗೆ ಅಂಡರ್‌ವೇರ್ ಹಾಕಿಕೊಳ್ಳುವ ಆಸೆ. ಈ ವಿಷಯವನ್ನು ಹಾಸ್ಯ ರೂಪದಲ್ಲಿ ಚಿತ್ರದಲ್ಲಿ ಹೇಳಲಾಗಿದೆ’ ಎಂದಿದೆ ಚಿತ್ರತಂಡ. ಸ್ನೇಹ ಖುಷಿ, ಸಂಹಿತ ವಿನ್ಯಾ, ಹುಲಿ ಕಾರ್ತಿಕ್‌ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. 

ಕರ್ಕಿ: ‘ಸೂರ್ಯನ್’, ‘ಐ ಲವ್ ಇಂಡಿಯಾ’, ‘ಇಂದು’, ‘ಕಲ್ಲೂರಿ ವಾಸಲ್‍’ ಮುಂತಾದ ತಮಿಳು ಚಿತ್ರಗಳನ್ನು ನಿರ್ದೇಶಿಸಿದ್ದ ಪವಿತ್ರನ್ ಕನ್ನಡದಲ್ಲಿ ನಿರ್ದೇಶಿಸಿರುವ ಮೊದಲ ಸಿನಿಮಾ ಇದು. ಮರಿಸೆಲ್ವರಾಜ್‌ ನಿರ್ದೇಶನದ ‘ಪರಿಯೆರುಂ ಪೆರುಮಾಳ್‌’ ಚಿತ್ರದ ರಿಮೇಕ್‌ ಇದಾಗಿದೆ. ಪ್ರಕಾಶ್ ಪಳನಿ ‘ಕರ್ಕಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಜಯಪ್ರಕಾಶ್ (ಜೆ.ಪಿ) ರೆಡ್ಡಿ ಈ ಚಿತ್ರದ ನಾಯಕ. ಅವರಿಗೆ ಮೀನಾಕ್ಷಿ ಜೋಡಿಯಾಗಿದ್ದಾರೆ. ಸಾಧು ಕೋಕಿಲ, ಬಲ ರಾಜವಾಡಿ, ಯತಿರಾಜ್, ಮಿಮಿಕ್ರಿ ಗೋಪಿ ಮೊದಲಾದವರು ಚಿತ್ರದಲ್ಲಿದ್ದಾರೆ. 

‘ರಮ್ಮಿ ಆಟ’: ಆನ್‌ಲೈನ್ ಜೂಜಾಟದ ವಿರುದ್ಧ ಧ್ವನಿಯೆತ್ತುವ ಸಿನಿಮಾ ಇದಾಗಿದೆ. ಉಮರ್ ಷರೀಫ್ ಚಿತ್ರದ ನಿರ್ದೇಶಕರು. ರಮೇಶ್ ಯಾದವ್ ಹಾಗೂ ಹನುಮೇಶ್ ಪಾಟೀಲ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ಇವತ್ತು ಆನ್‌ಲೈನ್‌ ಜೂಜು ಸಾಕಷ್ಟು ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸುತ್ತಿವೆ. ಇಂತಹ ಆಟದ ಅಡ್ಡಪರಿಣಾಮಗಳನ್ನು ಹಾಸ್ಯದ ಮೂಲಕ ಹೇಳಲಾಗಿದೆ’ ಎಂದಿದೆ ಚಿತ್ರತಂಡ. ಚಿತ್ರಕ್ಕೆ ಕಾರ್ತಿಕ್‌ ಎಸ್. ಛಾಯಾಚಿತ್ರಗ್ರಹಣ, ಪ್ರಭು ಎಸ್.ಆರ್‌ ಸಂಗೀತವಿದೆ. ರಾಘವ ಸೂರ್ಯ ಹಾಗೂ ಸಯ್ಯದ್ ಇರ್ಫಾನ್ ಚಿತ್ರದ ನಾಯಕರು. ವಿನ್ಯಾ ಶೆಟ್ಟಿ, ಸ್ನೇಹರಾವ್, ಅಭಿಗೌಡ, ಶ್ರೀಕರ್, ರೋಷನ್ ಶ್ರೀನಿವಾಸ್‌ ಮುಂತಾದವರು ಉಳಿದ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT