ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ್ ಹೆಸರಲ್ಲಿ ವಂಚನೆ ಆರೋಪ, ದೂರು ದಾಖಲು: ತಲೆ ತೆಗಿತೀನಿ ಎಂದ ನಟ

Last Updated 11 ಜುಲೈ 2021, 14:01 IST
ಅಕ್ಷರ ಗಾತ್ರ

ಮೈಸೂರು: ನಟ ದರ್ಶನ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ನಗರದ ಹರ್ಷ ಮೆಲಂತಾ ಎಂಬುವವರಿಗೆ ₹ 25 ಲಕ್ಷ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡಿದ ಸಂಬಂಧ ಅರುಣಕುಮಾರಿ ಎಂಬುವವರ ವಿರುದ್ಧ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಭಾನುವಾರ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಇಲ್ಲಿನ ಎನ್.ಆರ್.ವಿಭಾಗದ ಎಸಿಪಿ ಕಚೇರಿಗೆ ಹಾಜರಾಗಿದ್ದರು.

ಏನಿದು ಪ್ರಕರಣ?

ನಗರದ ಹೆಬ್ಬಾಳದಲ್ಲಿ ‘ಮೈಸೂರು ಯೂನಿಯನ್’ ಕ್ಲಬ್‌ ನಡೆಸುತ್ತಿರುವ ಹರ್ಷ ಅವರನ್ನು ಜೂನ್ 16ರಂದು ಆರೋಪಿ ಅರುಣಕುಮಾರಿ ಭೇಟಿಯಾಗುತ್ತಾರೆ.

ತಾನು ಬ್ಯಾಂಕ್‌ನ ವ್ಯವಸ್ಥಾಪಕಿ ಎಂಬುದಾಗಿ ಪರಿಚಯಿಸಿಕೊಂಡು, ‘ಬೆಂಗಳೂರಿನ ಸೌತ್‌ಎಂಡ್ ವೃತ್ತದಲ್ಲಿರುವ ಕೆನರಾ ಬ್ಯಾಂಕಿನಲ್ಲಿ ₹ 25 ಕೋಟಿ ಸಾಲಕ್ಕೆ ತಾವು ಅರ್ಜಿ ಸಲ್ಲಿಸಿದ್ದೀರಿ. ಅದರಲ್ಲಿ ನಟ ದರ್ಶನ್ ಅವರ ಆಸ್ತಿಯ ನಕಲಿ ದಾಖಲೆ ಒದಗಿಸಿದ್ದೀರಿ. ಅವರ ಸಹಿಯನ್ನೂ ನಕಲು ಮಾಡಿರುತ್ತೀರಿ’ ಎಂದು ಹೇಳುತ್ತಾರೆ. ಅಲ್ಲದೇ, ಈ ವಿಷಯವನ್ನು ಬಹಿರಂಗಪಡಿಸಬಾರದು ಎಂದರೆ ₹ 25 ಲಕ್ಷ ನೀಡಬೇಕು ಎಂದು ಬ್ಲ್ಯಾಕ್‌ಮೇಲ್‌ ಮಾಡುತ್ತಾರೆ. ಮಹಿಳೆಯು ನಕಲಿ ಅಧಿಕಾರಿ ಎಂಬುದು ಗೊತ್ತಾಗುತ್ತಿದ್ದಂತೆ, ಜುಲೈ 3ರಂದು ಹರ್ಷ ದೂರು ದಾಖಲಿಸುತ್ತಾರೆ.

ನಿರ್ಮಾಪಕ ಉಮಾಪತಿ ಅವರಿಗೂ ಕರೆ ಮಾಡಿದ ಇದೇ ಮಹಿಳೆ, ‘ಹರ್ಷ ಅವರು ಸಾಲಕ್ಕಾಗಿ ದರ್ಶನ್ ಅವರ ಜಾಮೀನು ಹಾಗೂ ದಾಖಲಾತಿ ನೀಡಿದ್ದಾರೆ. ಇದು ನಿಜವೇ’ ಎಂಬುದಾಗಿ ಪ್ರಶ್ನಿಸುತ್ತಾರೆ. ಅನುಮಾನಗೊಂಡ ಉಮಾಪತಿ, ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಗೆ ಜೂನ್ 17ರಂದು ದೂರು ನೀಡಿದ್ದರು.

ತಲೆ ತೆಗೆಯುತ್ತೇನೆ: ದರ್ಶನ್ ಗುಡುಗು

ಭಾನುವಾರ ಇಲ್ಲಿನ ನರಸಿಂಹರಾಜ ಉಪವಿಭಾಗದ ಎಸಿಪಿ ಕಚೇರಿಗೆ ಬಂದ ದರ್ಶನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ‘ಯಾರೇ ನನ್ನ ಹೆಸರನ್ನು ದುರುಪಯೋಗಪಡಿಸಿಕೊಂಡರೂ, ಅವರ ರೆಕ್ಕೆಯನ್ನಲ್ಲ; ತಲೆಯನ್ನೇ ತೆಗೆಯುತ್ತೇನೆ’ ಎಂದು ಗುಡುಗಿದರು.

‘ನನಗೆ ಯಾರೂ ಬ್ಲಾಕ್‌ಮೇಲ್‌ ಮಾಡಿಲ್ಲ. ಆದರೆ, ನನ್ನ ಮೇಲೆ ಗೂಬೆ ಕೂರಿಸುವ ಯತ್ನ ನಡೆದಿದೆ. ಪೊಲೀಸರು ತನಿಖೆ ಪೂರ್ಣಗೊಂಡ ಬಳಿಕ ವಿವರ ನೀಡುತ್ತೇನೆ’ ಎಂದರು.

‘ನಾವು ಯಾರನ್ನೂ ವಶಕ್ಕೆ ಪಡೆದಿಲ್ಲ ಹಾಗೂ ಯಾರನ್ನೂ ವಿಚಾರಣೆಗೆ ಕರೆದಿಲ್ಲ. ದೂರುದಾರರ ಜತೆ ಕೆಲವರು ಬಂದಿದ್ದರು’ ಎಂದು ಡಿಸಿಪಿ ಪ್ರದೀಪ್‌ ಗುಂಟಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT