ಭಾನುವಾರ, ಜನವರಿ 26, 2020
31 °C

‘ತಿಥಿ’ ಗಡ್ಡಪ್ಪ ಈಗ ಸರ್ಕಲ್‌ ಡಾನ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೆರೆತ ನೀಳ ಗಡ್ಡ, ಖಾಕಿ ಚಡ್ಡಿ, ಮಾಸಲು ಷರಟು, ಹೆಗಲಮೇಲೆ ವಲ್ಲಿ, ಕಾಲಿಗೆ ಹವಾಯಿ ಚಪ್ಪಲಿ – ಇದು ‘ತಿಥಿ’ ಖ್ಯಾತಿಯ ಗಡ್ಡಪ್ಪನ ನೈಜ ವೇಷಭೂಷಣ. ಇಂತಹ ಗಡ್ಡಪ್ಪನಿಗೆ ಶೂಟು, ಬೂಟು, ಕೋಟು, ಗಾಗಲ್‌ ಹಾಕಿಸಿ ಒಂದು ಕೈಯಲ್ಲಿ ಮೊಬೈಲು, ಇನ್ನೊಂದು ಕೈಗೆ ಗನ್ನು ಹಿಡಿಸಿದರೆ ಹೇಗಿರಬಹುದು!

ಹೌದು, ಈ ರೀತಿಯ ಹೊಸ ಗೆಟಪ್‌ನಲ್ಲಿ ಗಡ್ಡಪ್ಪ ‘ಗಡ್ಡಪ್ಪನ ಸರ್ಕಲ್‌’ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ  ಭೂಗತದೊರೆ ಪಾತ್ರ ನಿಭಾಯಿಸಿರುವ ಗಡ್ಡಪ್ಪನಿಗೆ ಪ್ರತಿಸ್ಪರ್ಧಿಯಾಗಿ ಸೆಂಚುರಿಗೌಡರೂ ‘ಮೈಲಾರಿ’ ಪಾತ್ರದಲ್ಲಿ ಜೀನ್ಸ್‌ ಪ್ಯಾಂಟ್‌, ಟಿ–ಷರಟು, ಬೂಟುಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಜೋಡಿ ಗನ್ನಿನಲ್ಲಿ ಬುಲೆಟ್‌ ಸಿಡಿಸುವುದಕ್ಕಿಂತಲೂ ಹೆಚ್ಚಾಗಿ ಹಾಸ್ಯದ ತುಪಾಕಿ ಹಾರಿಸುವುದು ಖರೆ ಎನ್ನುವಂತಿದೆ ಚಿತ್ರದ ಟ್ರೇಲರ್‌ ನೋಡಿದರೆ. ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಚಿತ್ರರಸಿಕರಿಗೆ ಮಜಬೂತಾದ ಹಾಸ್ಯದ ರಸದೌತಣವನ್ನು ಉಣಬಡಿಸುವ ನಿರೀಕ್ಷೆ ಹುಟ್ಟುಹಾಕಿದೆ.

ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಗಡ್ಡಪ್ಪ ಈಗ ಚೇತರಿಸಿಕೊಂಡಿದ್ದು, ತಮ್ಮ ಜವಾರಿ ಶೈಲಿಯ ಬಟ್ಟೆಯಲ್ಲೇ ಸುದ್ದಿಗೋಷ್ಠಿಗೆ ಹಾಜರಾಗಿದ್ದರು. ಈ ಚಿತ್ರದಲ್ಲಿ ನಿರ್ದೇಶಕರು ಕೊಟ್ಟ ಶೂಟು– ಬೂಟು ಧರಿಸಿಕೊಂಡು ನಟಿಸಿದ್ದೇನೆ. ಚಿತ್ರ ಎಲ್ಲ ವಿಧದಲ್ಲೂ ಯಶಸ್ಸು ಕಾಣಲಿ ಎಂದು ಹಾರೈಸಿದರು.

ಈ ಚಿತ್ರ ಫೆಬ್ರುವರಿ 7ರಂದು ತೆರೆಗೆ ಲಗ್ಗೆ ಇಡಲಿದೆ. ಈ ಚಿತ್ರಕ್ಕೆ ಬಿ.ಆರ್‌. ಕೇಶವ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.  ಬೆಂಗಳೂರು ಸಿನಿಮಾಸ್‌ ಬ್ಯಾನರ್‌ನಡಿ ತುಳಸಿರಾಮ್‌ ಬಂಡವಾಳ ಹೂಡಿದ್ದಾರೆ. ಪಿ.ಶೇಷಗಿರಿ ಸಂಭಾಷಣೆ ಹೊಸೆದಿದ್ದು, ಛಾಯಾಗ್ರಹಣ ಪ್ರಮೋದ್‌, ಸಂಗೀತ ನಯನ್‌ ವಿ.ಕೆ., ಸಂಕಲನ ಸಿದ್ದರಾಜು ಎಸ್‌.ಕೆ. ಅವರದ್ದು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು