ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ: ಸಿದ್ಧ ಸೂತ್ರದ ‘ಗರ’ದಾಟ

Last Updated 3 ಮೇ 2019, 13:14 IST
ಅಕ್ಷರ ಗಾತ್ರ

ಚಿತ್ರ: ಗರ
ನಿರ್ಮಾಣ: ನಾಗಪ್ರಸಾದ್‌
ನಿರ್ದೇಶನ: ಕೆ.ಆರ್‌. ಮುರಳೀಕೃಷ್ಣ
ತಾರಾಗಣ: ರೆಹಮಾನ್‌ ಹಾಸನ, ಆವಂತಿಕಾ ಮೋಹನ್, ಪ್ರದೀಪ್‌ ಆರ್ಯನ್, ಜಾನಿ ಲಿವರ್, ಸಾಧುಕೋಕಿಲ

**

ಊರಿನ ಎಲ್ಲರನ್ನೂ ಮಾನಸಿಕವಾಗಿ ಹಿಂಸಿಸುವ ಯಜಮಾನ. ಆತನ ಬಲಗೈ ಬಂಟನೇ ನಾಯಕ. ಆತನಿಗೊಬ್ಬಳು ಪ್ರೇಯಸಿ. ‌ಈ ಇಬ್ಬರ ಪ್ರೀತಿಗೆ ಮುಳುವಾಗುವ ಯಜಮಾನ. ಕೊನೆಗೆ ತನ್ನ ಪ್ರೀತಿ ಉಳಿಸಿಕೊಳ್ಳಲು ಯಜಮಾನನ ವಿರುದ್ಧವೇ ತಿರುಗಿಬೀಳುವ ನಾಯಕ. ಹೀಗೆ ಪ್ರೀತಿ ವರ್ಸಸ್‌ ದ್ವೇಷ ಇಟ್ಟುಕೊಂಡ ಸಿನಿಮಾಗಳು ಈಗಾಗಲೇ ಸಾಕಷ್ಟು ಬಂದಿವೆ.

ಇಂತಹ ಕಥಾವಸ್ತು ಆಯ್ದುಕೊಂಡಾಗಲೇ ನಾಯಕನ ಪ್ರೀತಿ ಅಮರ, ಪ್ರೀತಿ ಕಂಡರೆ ಖಳನಟರಿಗೆ ದ್ವೇಷ, ನಾಯಕಿಯ ಪ್ರೀತಿ ಉಳಿಸಲು ಹೋರಾಡುವ ಆಕೆಯ ಸ್ನೇಹಿತೆ, ಆಕೆಯದ್ದು ಶ್ರೇಷ್ಠ ತ್ಯಾಗ ಎಂಬ ಪೂರ್ವಗ್ರಹವೊಂದು ಗೊತ್ತಿಲ್ಲದೆಯೇ ಸೇರಿಕೊಂಡು ಬಿಡುತ್ತದೆ. ಜೊತೆಗೆ, ಈ ವಸ್ತು ಆಧರಿಸಿದ ಸಿನಿಮಾಗಳು ಪ್ರೀತಿ ಮತ್ತು ಜೀವನ ಮೌಲ್ಯವನ್ನಷ್ಟೇ ಪ್ರತಿಪಾದಿಸುತ್ತವೆ.

‘ಗರ’ ಚಿತ್ರದ ನಿರ್ದೇಶಕ ಕೆ.ಆರ್‌. ಮುರಳೀಕೃಷ್ಣ ಅವರಿಗೂ ಈ ಸಿದ್ಧ ಮಾದರಿ ದಾಟಿ ವಾಸ್ತವದ ಕಾಲುದಾರಿಯಲ್ಲಿ ನೋಡುಗರನ್ನು ಕರೆದೊಯ್ಯಲು ಸಾಧ್ಯವಾಗಿಲ್ಲ. ಸಾಹಿತಿ ಆರ್‌.ಕೆ. ನಾರಾಯಣ್‌ ಅವರ ‘ದಿ ಅಸ್ಟ್ರಾಲರ್ಜಸ್‌ ಡೇಸ್‌’ ಕಥೆಯ ಎಳೆಯಿಂದ ಸ್ಫೂರ್ತಿ ಪಡೆದು ನಿರ್ಮಿಸಿರುವ ಸಿನಿಮಾ ಇದು. ಇದರಲ್ಲಿ ರಿವರ್ಸ್‌ ಸ್ಕ್ರೀನ್‌ ಪ್ಲೇ ಮೂಲಕ ನೋಡುಗರಿಗೆ ಹೊಸತನ ನೀಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಆದರೆ, ಮನಸ್ಸನ್ನು ಆರ್ದ್ರಗೊಳಿಸುವ ಭಾವತೀವ್ರ ಸನ್ನಿವೇಶಗಳನ್ನು ಕಟ್ಟಿಕೊಡುವಲ್ಲಿ ವಿಫಲರಾಗಿದ್ದಾರೆ.

ಡಿಜಿಟಲ್‌ ಗೌಡ ಜೂಜುಕೋರ. ಆತ ಹೇಳಿದಂತೆ ಕವಡೆ ಹಾಕುವುದು ನಿಶಾಂತ್‌ ಅಲಿಯಾಸ್‌ ಗಂಗಸ್ವಾಮಿಯ ಕೆಲಸ. ಗರದಿಂದ ಬರುವ ಗರಿಗರಿ ನೋಟುಗಳ ಮೇಲೆ ನಿಶಾಂತ್‌ಗೆ ವಿಪರೀತ ಮೋಹ. ತನ್ನ ಹೆಂಡತಿಯ ಆಸೆ ಪೂರೈಸಲು ಆ ದುಡ್ಡೇ ಅವನಿಗೆ ಆಧಾರ. ಕೊನೆಗೊಂದು ದಿನ ಡಿಜಿಟಲ್‌ ಗೌಡ ಜೂಜಾಟದಲ್ಲಿ ಸೋಲುತ್ತಾನೆ. ಆಗ ಗಂಗಸ್ವಾಮಿಯ ಬದುಕು ಬೀದಿಗೆ ಬೀಳುತ್ತದೆ. ಜೊತೆಗೆ, ಯಜಮಾನನ ದ್ವೇಷಕ್ಕೆ ತುತ್ತಾಗುತ್ತಾನೆ. ತನ್ನೊಡೆಯನ ಹಿಡಿತದಿಂದ ಹೆಂಡತಿಯನ್ನು ಉಳಿಸಿಕೊಳ್ಳಲು ಹೆಣಗಾಟ ನಡೆಸುತ್ತಾನೆ. ಪ್ರತಿಯೊಬ್ಬರ ಬದುಕಿನಲ್ಲಿ ‘ಗರ’ ಹೇಗೆ ಪ್ರವೇಶ ಪಡೆಯುತ್ತದೆ ಎನ್ನುವುದೇ ಚಿತ್ರದ ತಿರುಳು.

ಚಿತ್ರದ ಮೊದಲಾರ್ಧ ಆಮೆಗತಿಯಲ್ಲಿ ಸಾಗುತ್ತದೆ. ದ್ವಿತೀಯಾರ್ಧದಲ್ಲೂ ಇದೇ ಸ್ಥಿತಿ. ಹಲವೆಡೆ ನಾಯಕ ನಟ ರೆಹಮಾನ್‌ ಸುದ್ದಿ ನಿರೂಪಣಾ ಶೈಲಿಯಲ್ಲಿ ಸಂಭಾಷಣೆ ಒಪ್ಪಿಸುತ್ತಾರೆ. ಜಾನಿ ಲಿವರ್‌ ಮತ್ತು ಸಾಧುಕೋಕಿಲ ಅವರ ಕಾಮಿಡಿಯೂ ಸಪ್ಪೆಯಾಗಿದೆ. ಸಾಗರ್‌ ಗುರುರಾಜ್‌ ಸಂಗೀತ ಸಂಯೋಜನೆಯ ಹಾಡುಗಳು ಮನದಲ್ಲಿ ಉಳಿಯುವುದಿಲ್ಲ. ಎಚ್‌.ಸಿ. ವೇಣು ಕ್ಯಾಮೆರಾ ಕೈಚಳಕ ಕೆಲವು ದೃಶ್ಯಗಳಿಗಷ್ಟೇ ಸೀಮಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT