ಮಂಗಳವಾರ, ಫೆಬ್ರವರಿ 25, 2020
19 °C
‘ಪಲ್ಲಟ’ದಿಂದ ‘ಗಿಫ್ಟ್‌ಬಾಕ್ಸ್‌’ವರೆಗೆ... ನಿರ್ದೇಶಕ ರಘು ಸಿನಿ ಪಯಣ

ಪ್ರೇಕ್ಷಕರ ಪ್ರಜ್ಞೆ, ಸಂವೇದನೆ ಹಗುರಾಗಿ ಪರಿಗಣಿಸದಿರಿ: ರಘು ಎಸ್‌.ಪಿ.

ಸಂದರ್ಶನ: ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

‘ಪಲ್ಲಟ’ ಚಿತ್ರದ ಮೂಲಕ ಸಹೃದಯಿ ಪ್ರೇಕ್ಷಕರ ಮನಗೆದ್ದಿದ್ದ ನಿರ್ದೇಶಕ ರಘು ಎಸ್‌.ಪಿ. ಅವರು ಈಗ ‘ಗಿಫ್ಟ್‌ಬಾಕ್ಸ್‌’ ಎಂಬ ಮತ್ತೊಂದು ಸಿನಿಮಾದ ಮೂಲಕ ಪ್ರೇಕ್ಷಕರ ಅಂತಃಕರಣ ಮೀಟಲು ಸಿದ್ಧರಾಗಿದ್ದಾರೆ. ಅವರು ಈ ಚಿತ್ರದಲ್ಲಿ ಮಾನವ ಕಳ್ಳಸಾಗಣೆಯ ವಿಚಾರವನ್ನು ಒಬ್ಬ ಪುರುಷನ ದೃಷ್ಟಿಕೋನದಲ್ಲಿ ಹೇಳುವ  ಪ್ರಯತ್ನ ಮಾಡಿದ್ದಾರೆ. ಫೆ.14ರಂದು ರಾಜ್ಯದಾದ್ಯಂತ ತೆರೆಕಾಣುತ್ತಿರುವ ‘ಗಿಫ್ಟ್‌ಬಾಕ್ಸ್‌’ ಚಿತ್ರದ ಕುರಿತಾಗಿ ನಿರ್ದೇಶಕರು ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

 

* ಚಿತ್ರದ ಸಬ್ಜೆಕ್ಟ್‌ ಹೊಳೆದಿದ್ದು ಹೇಗೆ?

ನಾನು ಸುಮಾರು ವರ್ಷಗಳಿಂದ ಮೈಸೂರಿನ ಒಡನಾಡಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇದು ಮಾನವ ಕಳ್ಳಸಾಗಣೆಗೆ ಸಿಲುಕಿದ ಹೆಣ್ಣುಮಕ್ಕಳನ್ನು ರಕ್ಷಣೆ ಮಾಡಿ ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದೆ. ಈ ಸಂಸ್ಥೆಯ ನಿರ್ದೇಶಕರು ಮತ್ತು ಸಂಸ್ಥಾಪಕರಾದ ಸ್ಟ್ಯಾನ್ಲಿ ಮತ್ತು ಪರುಶು ಅವರ ಜತೆ ಮಾತನಾಡುವಾಗ ಮತ್ತು ಅಲ್ಲಿನ ಮಕ್ಕಳ ಜತೆಗೆ ಸಂವಾದ ನಡೆಸುವಾಗ ಸಾಕಷ್ಟು ಕತೆ ಕೇಳಿಬಂದವು. ನಾನು ಅಲ್ಲಿ ಕೇಳಿದ ಕತೆಗಳು, ನೋಡಿದ ಘಟನೆಗಳನ್ನು ಕ್ರೋಡೀಕರಿಸಿ ಒಂದು ಸಿನಿಮಾ ಮಾಡುವ ಪ್ರಯತ್ನ ಮಾಡಿದ್ದೇನೆ.

ಅಂತಃಕರಣ ಇರುವ ಒಬ್ಬ ಮನುಷ್ಯ ಇನ್ನೊಬ್ಬನ ಭಾವನೆಗಳಿಗೆ ಸದಾ ಸ್ಪಂದಿಸುತ್ತಾನೆ. ಮಾನವ ಸಂಬಂಧಗಳು ದೊಡ್ಡದು. ಎಲ್ಲದಕ್ಕಿಂತ ಮುಖ್ಯವಾಗಿ ಬದಲಾವಣೆಗೆ ಎಲ್ಲರಿಗೂ ಅವಕಾಶ ಇದೆ. ಅದನ್ನು ಬಳಸಿಕೊಂಡು ಎಲ್ಲರೂ ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಬಹುದು ಎಂಬ ವಿಚಾರವೇ ಈ ಸಿನಿಮಾ ಮಾಡಲು ನನಗೆ ಪ್ರೇರಣೆ ನೀಡಿತು.

* ಗಿಫ್ಟ್‌ ಬಾಕ್ಸ್‌ ಸಿನಿಮಾದ ವಿಶೇಷತೆ ಏನು?

ಮಾನವ ಕಳ್ಳಸಾಗಣೆ ಕುರಿತಾಗಿ ಜಗತ್ತಿನಾದ್ಯಂತ ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ, ಒಬ್ಬ ಮೇಲ್‌ ಪರ್ಸ್ಪೆಕ್ಟಿವ್‌ನಲ್ಲಿ ಈ ವಿಚಾರವನ್ನು ಯಾರೂ ಈವರೆಗೆ ಸಿನಿಮಾ ಮಾಡಿಲ್ಲ. ಇದೇ ಈ ಚಿತ್ರದ ವಿಶೇಷ. ವಿಭಿನ್ನ ನೆಲೆಯಲ್ಲಿ ಕತೆಯನ್ನು ಹೇಳಲು ಹೊರಟಾಗ ಹಲವು ಸವಾಲುಗಳು ಎದುರಾದವು. ಸಾಕಷ್ಟು ಯೋಚಿಸಿದಾಗ ಮಾನವ ಸಂಬಂಧಗಳು, ಅಂತಃಕರಣ, ಬದಲಾವಣೆ ಮಾತ್ರ ಕೊನೆಯಲ್ಲಿ ಉಳಿಯುತ್ತವೆ ಅಂತ ಅನ್ನಿಸಿತು. ಹಾಗಾಗಿ, ಈ ವಿಷಯ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಲು ನಿರ್ಧರಿಸಿದೆ. ಅದಕ್ಕಾಗಿ ಸಾಕಷ್ಟು ಸಂಶೋಧನೆ ಕೂಡ ನಡೆಸಿದೆ. ನಡೆದ ಘಟನೆಗಳು, ಕೇಳಿದ ಘಟನೆಗಳನ್ನು ಸೇರಿಸಿ ಅದಕ್ಕೆ ಒಂದು ಸ್ವರೂಪ ಕೊಟ್ಟು ಗಿಫ್ಟ್‌ಬಾಕ್ಸ್‌ ಸಿನಿಮಾ ಮಾಡಿದ್ದೇನೆ.

* ಸಿನಿಮಾ ನಿರೂಪಣೆಗೆ ಯಾವ ಶೈಲಿ ಅನುಸರಿಸಿದ್ದೀರಿ?

ಸಾಮಾನ್ಯವಾಗಿ ಸಿನಿಮಾ ನಿರೂಪಣೆಯಲ್ಲಿ ಎರಡು ಶೈಲಿಗಳಿರುತ್ತವೆ. ಒಂದು, ನಿರ್ದೇಶಕ ಪ್ರೇಕ್ಷಕರನ್ನು ಕಂಟ್ರೋಲ್‌ ಮಾಡುತ್ತ ಕಥೆ ಹೇಳುವ ತಂತ್ರ ಅನುಸರಿಸುತ್ತಾನೆ. ಈ ವಿಧಾನದಲ್ಲಿ ಪ್ರೇಕ್ಷಕ ಎಲ್ಲಿ ನಗಬೇಕು, ಎಲ್ಲಿ ಎಮೋಷನ್‌ಗೆ ಒಳಗಾಗಬೇಕು, ಎಲ್ಲಿ ಚಪ್ಪಾಳೆ, ಶಿಳ್ಳೆ ಹೊಡೆಯಬೇಕು ಅಂತ ಅವನೇ ನಿರ್ಧರಿಸುತ್ತಾನೆ. ಇನ್ನೊಂದು ಶೈಲಿಯಲ್ಲಿ ನಿರ್ದೇಶಕ, ನಾನು ಕಥೆ ಹೇಳುತ್ತಾ ಹೋಗುತ್ತೇನೆ, ಪ್ರೇಕ್ಷಕರಾದ ನೀವೆಲ್ಲರೂ ನನ್ನ ಜತೆ ಟ್ರಾವೆಲ್‌ ಮಾಡಿ ಅನ್ನುತ್ತಾನೆ. ಹೀಗೆ ಟ್ರಾವೆಲ್‌ ಮಾಡುವ ವೇಳೆ ಪ್ರೇಕ್ಷಕನಿಗೆ ಹಲವು ವಿಚಾರಗಳು ತಿಳಿಯುತ್ತವೆ. ಅವನ್ನೆಲ್ಲಾ ಗ್ರಹಿಸಿ ಆಸ್ವಾದಿಸು ಅನ್ನುತ್ತಾನೆ. ನಾನು ಇಲ್ಲಿ ಎರಡನೇ ಶೈಲಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ.

ಪ್ರೇಕ್ಷಕರನ್ನು ಚಿಂತನೆಗೆ ಹಚ್ಚಬೇಕು ಎಂಬುದು ನನ್ನ ಯೋಚನೆ. ಅದರ ಜತೆಗೆ ನಾನ್‌ಲೀನಿಯರ್‌ನಲ್ಲಿ ಕತೆ ಹೇಳಿದ್ದೇನೆ. ಚಿತ್ರದಲ್ಲಿ ಬರುವ ಪಾತ್ರಗಳ ಜತೆಗೆ ಬೇರೆ ಬೇರೆ ಸ್ಥರಗಳಲ್ಲಿ ಕತೆಯನ್ನು ಹೇಳಲಾಗಿದೆ. ಬರುವ ಪ್ರತಿ ಪಾತ್ರದ ಜತೆಗೆ ಒಂದೊಂದು ಕತೆ, ಫ್ಲಾಷ್‌ಬ್ಯಾಕ್‌ ತೆರೆದುಕೊಳ್ಳುತ್ತದೆ. 

* ಕಮರ್ಷಿಯಲ್‌ ಮತ್ತು ಕಲಾತ್ಮಕ ಅಂಶಗಳ ಬಗ್ಗೆ ಹೇಳಿ?

ಒಂದು ಸಿನಿಮಾವನ್ನು ಕಮರ್ಷಿಯಲ್‌ ಅಥವಾ ಕಲಾತ್ಮಕ ಅಂತ ವಿಂಗಡಿಸಿ ನೋಡುವ ಬಗ್ಗೆಯೇ ನನಗೆ ತಕರಾರು ಇದೆ. ಯಾಕಂದ್ರೆ ಸಿನಿಮಾನೇ ಒಂದು ಕಲೆ.

ನಾಗರಿಕತೆ ಹುಟ್ಟಿದಾಗಿನಿಂದಲೂ ಮಾನವ ಕಳ್ಳಸಾಗಣೆ ಎಂಬುದು ಇದೆ. ಹೀಗೆ ಕಾಲಾಂತರದಿಂದಲೂ ನಡೆಯುತ್ತಿರುವ ಘಟನೆಯನ್ನು ವಿಮೆನ್‌ ಪರ್ಸ್ಪೆಕ್ಟಿವ್‌ ಬಿಟ್ಟು, ಪುರುಷನ ದೃಷ್ಟಿಕೋನದಲ್ಲಿ ಕತೆ ಹೇಳಲು ಹೊರಟಿದ್ದೇನೆ. ಯಾಕಂದ್ರೆ ಒಬ್ಬ ಪುರುಷ ಕೂಡ ಈ ವ್ಯೂಹದೊಳಗೆ ತನಗೆ ಗೊತ್ತಿಲ್ಲದಂತೆಯೇ ಸಿಲುಕಿರುತ್ತಾನೆ. ಅದರಿಂದ ಹೊರಕ್ಕೆ ಬರಲು ಒದ್ದಾಡುತ್ತಿರುತ್ತಾನೆ.

ಅಲ್ಲಿ ಅವನದ್ದೇ ಆದ ತುಮುಲಗಳು, ಸಂವೇದನೆ, ಭಯ, ಕನಸುಗಳೆಲ್ಲವೂ ಇರುತ್ತವೆ. ಅವನೊಳಗೆ ಅವನೇ ನಡೆಸುವಂತಹ ಪ್ರತಿದಿನದ ಹೋರಾಟ ಇರುತ್ತದೆ. ಆಂತರಿಕ ಮತ್ತು ಬಾಹ್ಯ ಪ್ರಪಂಚದ ಹೋರಾಟ ಇವೆರಡನ್ನೂ ಮೀರಿ ಅವನು ಹೇಗೆ ಆಚೆ ಬರುತ್ತಾನೆ ಎಂಬುದು ನಾವು ಸೈಕಲಾಜಿಕಲ್‌ ಥ್ರಿಲ್ಲರ್‌ ಮೂಲಕ ಹೇಳಲು ಹೊರಟಿದ್ದೇವೆ. ಇಲ್ಲಿ ಸೈಕಲಾಜಿಕಲ್‌ ಎಂಬುದನ್ನು ಕಲಾತ್ಮಕ; ಥ್ರಿಲ್ಲರ್‌ ಎಂಬುದನ್ನು ಕಮರ್ಷಿಯಲ್‌ ಎಂದುಕೊಳ್ಳಬಹುದು.

ವಿಮೆನ್‌ ಟ್ರಾಫಿಕಿಂಗ್‌ ಸಿನಿಮಾ ಅಂದ ತಕ್ಷಣ ಹಸಿ ಹಸಿ ದೃಶ್ಯಗಳನ್ನು ತೋರಿಸುವ ಎಲ್ಲ ಸಾಧ್ಯತೆಗಳು ಇರುತ್ತವೆ. ಆದರೆ, ಆ ಎಲ್ಲಾ ಸಾಧ್ಯತೆಗಳನ್ನು ಮೀರಿ ನಾವು ಕತೆ ಹೇಳುವ ಪ್ರಯತ್ನ ಮಾಡಿದ್ದೇವೆ.

* ಗಿಫ್ಟ್‌ಬಾಕ್ಸ್‌ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಪ್ರೇಕ್ಷಕರ ನಿರೀಕ್ಷೆಯ ಮಟ್ಟವನ್ನು ತಲುಪುವ ಭರವಸೆ ಇದೆಯೇ?

ಗಿಫ್ಟ್‌ಬಾಕ್ಸ್‌ ಚಿತ್ರದ ಬಗ್ಗೆ ಜನ ಮಾತನಾಡುತ್ತಿರುವುದು ಖುಷಿ ಕೊಟ್ಟಿದೆ. ಈ ಸಿನಿಮಾದ ಕತೆಯನ್ನು ಹಲವು ಪದರಗಳಲ್ಲಿ ಹೇಳಲಾಗಿದೆ. ಹೀಗೆ ಪ್ರತಿಯೊಂದು ಲೇಯರ್‌ನಲ್ಲೂ ವಿವಿಧ ಪ್ರೇಕ್ಷಕರು ಕತೆಯೊಟ್ಟಿಗೆ ತಮ್ಮನ್ನು ತುಲನೆ ಮಾಡಿಕೊಂಡು ನೋಡುತ್ತಾರೆ. ಚಿತ್ರದಲ್ಲಿರುವ ಆತ್ಮ ಪ್ರತಿಯೊಬ್ಬ ಪ್ರೇಕ್ಷಕನ ಮನಸ್ಸಿಗೂ ತಾಗುತ್ತದೆ ಎಂಬ ಭರವಸೆ ಇದೆ. 

* ಗಿಫ್ಟ್‌ಬಾಕ್ಸ್‌ ಸಿನಿಮಾ ಬಗ್ಗೆ ನಿಮ್ಮ ನಿರೀಕ್ಷೆಗಳೇನು?

ನಾನು ನಿರ್ದೇಶಿಸಿದ ಎರಡು ಸಿನಿಮಾಗಳ ನೆಲೆಯಲ್ಲಿ ದಕ್ಕಿದ ಅನುಭವದ ಮೇಲೆ ಹೇಳುವುದಾದರೆ ಪ್ರೇಕ್ಷಕರ ಇಂಟೆಲಿಜೆನ್ಸಿ ಮತ್ತು ಸೆನ್ಸಿಬಿಲಿಟಿಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಬಹಳಷ್ಟು ಪ್ರೇಕ್ಷಕರು ತುಂಬ ಬುದ್ಧಿವಂತರು ಇರುತ್ತಾರೆ. ಅವರು ಚಿತ್ರ ಮಾರುಕಟ್ಟೆಯ ಆಚೆಗೂ ಸ್ಪಂದಿಸುತ್ತಾರೆ. ಈ ವಿಚಾರ ನನಗೆ ಚೆನ್ನಾಗಿ ಅರಿವಾಗಿದ್ದು ‘ಪಲ್ಲಟ’ ಸಿನಿಮಾದಿಂದ. ಈ ಚಿತ್ರ ಎಲ್ಲ ನೆಲೆಯಲ್ಲೂ ಎಲ್ಲ ಪ್ರೇಕ್ಷಕರನ್ನು ತಲುಪಿತ್ತು. ಒಳ್ಳೆ ಪ್ರಯತ್ನವನ್ನು ಜನ ಯಾವಾಗಲೂ ಪ್ರೋತ್ಸಾಹಿಸುತ್ತಾರೆ. ಎಲ್ಲೂ ಮುಜುಗರವಾಗದಂತೆ ಒಳ್ಳೆಯ ಕತೆಯನ್ನು ಸಿನಿಮಾ ಮಾಡಿ ಪ್ರೇಕ್ಷಕರ ಮುಂದೆ ಬಂದಿದ್ದೇವೆ. ಚಿತ್ರವನ್ನು ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಬಲವಾಗಿದೆ. ಹಾಗಾಗಿ, ನಿರೀಕ್ಷೆಗಳೂ ಜೋರಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)