ಗುರುವಾರ , ಅಕ್ಟೋಬರ್ 22, 2020
24 °C

ನುಡಿ ನಮನ: ತೊಗರಿಬೇಳೆ ಕದ್ದ ಅಭಿಮಾನಿಗಳ ನಡುವೆಯೇ ನಗಿಸಿದ ಸುಧಾಕರ್

ಎನ್ವಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನ ನವರಂಗ್ ಚಿತ್ರಮಂದಿರದ ಹತ್ತಿರ ಟ್ರಾಫಿಕ್ ಸಿಗ್ನಲ್. ದ್ವಿಚಕ್ರವಾಹನದಲ್ಲಿ ಮನೆಗೆ ವ್ಯಕ್ತಿಯೊಬ್ಬರು ರೇಷನ್ ತೆಗೆದುಕೊಂಡು ಹೊರಟಿದ್ದರು. ಅವರನ್ನು ಗುರುತಿಸಿದ ಕೆಲವರು ಪಕ್ಕಕ್ಕೆ ಕರೆದು, ಗಾಡಿಯಿಂದ ಕೆಳಗಿಳಿಸಿ, ಮೊಬೈಲ್‌ನಿಂದ ಫೋಟೊ ಕ್ಲಿಕ್ಕಿಸತೊಡಗಿದರು. ಸೆಲ್ಫಿ ಎನ್ನುವುದು ಆಗ ಈಗಿನಷ್ಟು ಜನರಿಗೆ ಗೀಳಾಗಿರಲಿಲ್ಲ. ಬದುಕಿನಲ್ಲಿ ಮೊದಲ ಸಲ ಜನರು ತಮ್ಮನ್ನು ಗುರುತಿಸಿದರಲ್ಲ ಎಂದು ಮುಗ್ಧಭಾವದಲ್ಲಿ ಸ್ವಲ್ಪ ಹೊತ್ತು ಮಾನಸಿಕವಾಗಿ ಕಳೆದುಹೋಗಿದ್ದ ಅವರು ಆಮೇಲೆ ಮನೆಗೆ ಹೋಗಿ ನೋಡಿದರು. ರೇಷನ್ನಿನ ಚೀಲದಿಂದ ಯಾರೋ ತೊಗರಿಬೇಳೆ ಹಾರಿಸಿದ್ದರು.

ಆ ನಡುವಯಸ್ಸಿನ ವ್ಯಕ್ತಿ ತಮ್ಮನ್ನು ಸಿನಿಮಾರಂಗಕ್ಕೆ ನಟನಾಗಿ ಪರಿಚಯಿಸಿದ ನಿರ್ದೇಶಕರಿಗೆ ಫೋನ್ ಮಾಡಿದರು. ‘ನೀವು ಎಂಥ ಕೆಲಸ ಮಾಡಿದಿರಿ ನೋಡಿ...ನನ್ನ ತೊಗರಿಬೇಳೆಯನ್ನೇ ಯಾರೋ ಅಬೇಸ್ ಮಾಡಿಬಿಟ್ಟರು’ ಎಂದು ಹೇಳಿದಾಗ, ಅತ್ತ ನಿರ್ದೇಶಕರಿಗೆ ನಗು ತಡೆಯಲು ಆಗಿರಲಿಲ್ಲ.

ತೊಗರಿಬೇಳೆ ಹೊತ್ತೊಯ್ಯುತ್ತಿದ್ದ ಆ ನಟ ರಾಕ್‌ಲೈನ್ ಸುಧಾಕರ್. ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ಯೋಗರಾಜ್ ಭಟ್. ಭಟ್ಟರು ಈ ಅನುಭವ ಹೇಳಿಕೊಂಡೇ ಸುಧಾಕರ್ ಅವರನ್ನು ಸ್ಮರಿಸಿದರು.

ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಸಂಸ್ಥೆಯಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕಾರಣಕ್ಕೆ ಸುಧಾಕರ್ ಅವರ ಹೆಸರಿನೊಟ್ಟಿಗೆ ರಾಕ್‌ಲೈನ್ ಪದ ಸೇರಿದೆ.

‘ಮನಸಾರೆ’ ಸಿನಿಮಾ ನಿರ್ಮಾಣವಾದಾಗ ಭಟ್ಟರಿಗೆ ಈ ವ್ಯಕ್ತಿಯ ಪರಿಚಯವಾಯಿತು. ಅವರು ಬದುಕಿನ ಕತೆಗಳನ್ನು ಹೇಳುತ್ತಿದ್ದ ರೀತಿ, ಜೀವನಾನುಭವ ಕಂಡೇ ಅವರನ್ನೂ ಯಾಕೆ ನಟನಾಗಿಸಬಾರದು ಎಂಬ ಯೋಚನೆ ಭಟ್ಟರಿಗೆ ಹೊಳೆದದ್ದು. ‘ಪಂಚರಂಗಿ’ ಸಿನಿಮಾದಲ್ಲಿ ನೀನಾಸಂ ಸತೀಶ್ ಮಾಡಿದ್ದ ಪಾತ್ರದ ತಂದೆಯ ಗೆಟಪ್ಪಿನಲ್ಲಿ ಅವರು ನಟಿಸಿದರು. ಕುರುಡನಾದರೂ ತಮ್ಮದೇ ಶೈಲಿಯಲ್ಲಿ ತತ್ವ ತುಳುಕಿಸುತ್ತಾ, ವ್ಯಾವಹಾರಿಕ ಜಾಣ್ಮೆ ತೋರುವ ಪಾತ್ರವದು.

‘ಸುಧಾಕರ್ ಅವರ ದನಿ, ಧೈರ್ಯ ನೋಡಿ ನಾನು ಅವರಿಗೆ ಪಾತ್ರ ನೀಡಿದೆ. ಅವರು ಕಮ್ಯುನಿಕೇಟ್ ಮಾಡುತ್ತಿದ್ದ ರೀತಿಯೇ ವಿಶೇಷವಾಗಿತ್ತು. ಜತೆಗೆ ವಿಷಯ ಸ್ಪಷ್ಟತೆ ಇರುತ್ತಿತ್ತು. ಅವರಿಗೆ ಸಾಕಷ್ಟು ಆಳವಾಗಿ ಚಿತ್ರರಂಗದ ಸೂಕ್ಷ್ಮಗಳ ಪರಿಚಯವಿತ್ತು. ಅವರು ಆಗೀಗ ನನ್ನ ಜತೆ ಮಾತನಾಡುತ್ತಿದ್ದರು. ಮಾತಿನಲ್ಲಿ ಪ್ರೀತಿ ಸದಾ ಇರುತ್ತಿತ್ತು. ಸಹೃದಯಿ. ಸಜ್ಜನ. ಬದುಕನ್ನು ಪ್ರೀತಿಸಿದವರು’ ಎಂದು ಯೋಗರಾಜ್ ಭಟ್ ಸ್ಮರಿಸಿದರು.

‘ಪಂಚರಂಗಿ’ ಹಾಸ್ಯನಟನಾಗಿ ಸುಧಾಕರ್ ಅವರನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿತು. ಆಮೇಲೆ ನೂರು ಸಿನಿಮಾಗಳಲ್ಲಿ ಅವರು ನಟಿಸಿದರು.  ಕಳೆದೊಂದು ದಶಕದಲ್ಲಿ ಚಿತ್ರರಂಗದ ಹಲವರಿಗೆ ಪ್ರೀತಿ ಹಂಚಿದ್ದ ಸುಧಾಕರ್ ತೊಗರಿಬೇಳೆಯನ್ನೇನೋ ಕಳೆದುಕೊಂಡರು. ಆದರೆ ಸಂಪಾದಿಸಿದ ಅಭಿಮಾನಿಗಳ ಸಂಖ್ಯೆ ದೊಡ್ಡದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು