ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲ್ಯಾನ್‌ ಬಿ ಇಲ್ಲ, ನಟನೆಯೇ ಎಲ್ಲ

Last Updated 6 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಕಿಶೋರ್ ಮೂಡಬಿದ್ರೆ ನಿರ್ದೇಶನದ ಚಿತ್ರ ‘ಮಾಲ್ಗುಡಿ ಡೇಸ್’ ಶುಕ್ರವಾರ (ಫೆ. 7) ತೆರೆಗೆ ಬರುತ್ತಿದೆ. ವಿಜಯ ರಾಘವೇಂದ್ರ ಅವರು ವೃದ್ಧನ ಪಾತ್ರಕ್ಕೆ ಜೀವ ತುಂಬಿರುವ ಚಿತ್ರ ಇದು. ಈ ಚಿತ್ರದ ಆಕರ್ಷಣೆಗಳಲ್ಲಿ ಅವರ ಪಾತ್ರವೂ ಒಂದು.

ಅದಕ್ಕಿಂತಲೂ ದೊಡ್ಡ ಆಕರ್ಷಣೆ ಈ ಚಿತ್ರದ ಶೀರ್ಷಿಕೆ. ಆರ್.ಕೆ. ನಾರಾಯಣ್ ಅವರ ಜನಪ್ರಿಯ ಕಥಾಸಂಕಲನ ‘ಮಾಲ್ಗುಡಿ ಡೇಸ್’. ಅದರಲ್ಲಿ ಸ್ವಾಮಿ ಸೇರಿದಂತೆ ಹತ್ತಾರು ಪಾತ್ರಗಳು ಓದುಗನ ಕಲ್ಪನೆಯ ಪರಿಧಿ ವಿಸ್ತರಿಸುವ ಟಾನಿಕ್‌ ಇದ್ದಂತೆ. ನಾರಾಯಣ್ ಸೃಷ್ಟಿಸಿದ ಮಾಲ್ಗುಡಿಯ ದಿನಗಳಿಗೂ ಈ ಚಿತ್ರದಲ್ಲಿನ ಕಥೆಗೂ ಸಂಬಂಧವಿಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

ಈ ಚಿತ್ರದ ನಾಯಕಿ ಗ್ರೀಷ್ಮಾ ಶ್ರೀಧರ್ ಅವರು ‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕಿದ್ದರು. ಹಿಂದೆ ‘ನಾತಿಚರಾಮಿ’ ಚಿತ್ರದಲ್ಲಿ ನಾಯಕಿಯ ಸ್ನೇಹಿತೆಯಾಗಿ ಕಾಣಿಸಿಕೊಂಡಿದ್ದರು ಗ್ರೀಷ್ಮಾ. ಆ ಪಾತ್ರದ ಹೆಸರು ಹಸೀನಾ. ‘ಮಾಲ್ಗುಡಿ ಡೇಸ್‌’ನಲ್ಲಿ ಗ್ರೀಷ್ಮಾ ಅವರು ‘ಪ್ರಕೃತಿ’ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ನಾಯಕಿಯಾಗಿ ಇದು (ಮಾಲ್ಗುಡಿ ಡೇಸ್) ನನ್ನ ಮೊದಲ ಸಿನಿಮಾ. ನಟಿಯಾಗಿ ನನ್ನ ಮೊದಲ ಸಿನಿಮಾ ನಾತಿಚರಾಮಿ. ಅದರಲ್ಲಿ ನಾನು ನಾಯಕಿಯ ಸ್ನೇಹಿತೆಯಾಗಿ ಪೂರಕ ಪಾತ್ರದಲ್ಲಿ (ಪಾತ್ರದ ಹೆಸರು ಹಸೀನಾ) ಕಾಣಿಸಿಕೊಂಡಿದ್ದೆ. ನಾತಿಚರಾಮಿ ಚಿತ್ರಕ್ಕೆ ಆಡಿಷನ್ ಮೂಲಕ ಆಯ್ಕೆಯಾಗಿದ್ದೆ’ ಎಂದು ತಮ್ಮ ಸಿನಿಮಾ ಪ್ರವೇಶವನ್ನು ಚುಟುಕಾಗಿ ಹೇಳಿದರು ಗ್ರೀಷ್ಮಾ.

ಇವರಿಗೆ ‘ಮಾಲ್ಗುಡಿ ಡೇಸ್‌’ನಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಕೂಡ ಆಡಿಷನ್‌ ಮೂಲಕವೇ. ಗ್ರೀಷ್ಮಾ ಅವರು ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ನಂತರ, ಮುಂಬೈನಲ್ಲಿ ನಟನೆಯ ವಿಚಾರವಾಗಿ ವ್ಯಾಸಂಗ ಮಾಡಿದ್ದಾರೆ. ಇವರು ಈಜುಪಟು ಕೂಡ ಹೌದು. ಈಗ ಇವರಿಗೆ ನಟನೆಯೇ ವೃತ್ತಿ. ‘ನಟನೆ ಹೊರತುಪಡಿಸಿದರೆ ಬೇರೆ ಏನೂ ಇಲ್ಲ. ಪ್ಲ್ಯಾನ್‌ ಬಿ ಅಂತ ಯಾವುದೂ ಇಲ್ಲ’ ಎನ್ನುತ್ತಾರೆ.

‘ಮಾಲ್ಗುಡಿ ಡೇಸ್‌ನಲ್ಲಿ ನಾನು ಐ.ಟಿ. ಕಂಪನಿಯೊಂದರಲ್ಲಿ ಕೆಲಸ ಮಾಡುವ ಯುವತಿಯ ಪಾತ್ರ ನಿಭಾಯಿಸಿದ್ದೇನೆ. ಕೆಲಸ ಮಾಡುವ ಹುಡುಗಿಯರನ್ನು ಇತರರು ನೋಡುವ ರೀತಿ ಬೇರೆಯೇ ಆಗಿರುತ್ತದೆ. ಕೆಲಸ ಮಾಡುವ ಹುಡುಗಿಯರ ಜೊತೆ ಇತರರು ವರ್ತಿಸುವ ರೀತಿಯೂ ಬೇರೆಯಾಗಿರುತ್ತದೆ. ಅಂಥ ವರ್ತನೆಗಳನ್ನು ಸಹಿಸಿಕೊಳ್ಳದ ಹುಡುಗಿಯ ಪಾತ್ರ ನನ್ನದು. ತಪ್ಪು ಕಂಡರೆ ದನಿ ಎತ್ತುವವಳೂ ಹೌದು’ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿದರು.

‘ಮಾಲ್ಗುಡಿ ಡೇಸ್ ಎಂಬ ಹೆಸರಿಗೇ ದೊಡ್ಡ ಶಕ್ತಿ ಇದೆ. ಅದಕ್ಕೆ ಸರಿಸಾಟಿಯಾದ ಹೂರಣ ಈ ಚಿತ್ರದಲ್ಲಿ ಇದೆಯೇ’ ಎಂದು ಪ್ರಶ್ನಿಸಿದಾಗ, ‘ನಾವು ನಮ್ಮ ಪ್ರಯತ್ನವನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ. ಅದು ಹೇಗೆ ಮೂಡಿಬಂದಿದೆ ಎಂಬುದನ್ನು ಜನ ಸಿನಿಮಾ ನೋಡಿ ಹೇಳಬೇಕು. ಈ ಶೀರ್ಷಿಕೆ ಕಾರಣದಿಂದಾಗಿ ನಮ್ಮ ಮೇಲಿನ ಜವಾಬ್ದಾರಿ ಕೂಡ ಹೆಚ್ಚಿದೆ’ ಎಂದು ಉತ್ತರಿಸಿದರು.

ಅವರ ಕೈಯಲ್ಲಿ ಇನ್ನೂ ಎರಡು ಸಿನಿಮಾಗಳು ಇವೆ. ಈ ಚಿತ್ರಗಳ ಶೀರ್ಷಿಕೆ ಇನ್ನೂ ಅಂತಿಮ ಆಗಿಲ್ಲವಂತೆ. ಹಾಗಾಗಿ, ಈ ಎರಡು ಸಿನಿಮಾಗಳ ಕುರಿತು ಒಂದು ಗುಲಗಂಜಿಯಷ್ಟೂ ವಿವರ ನೀಡಲಿಲ್ಲ ಗ್ರೀಷ್ಮಾ!‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT