ಶುಕ್ರವಾರ, ಆಗಸ್ಟ್ 23, 2019
22 °C

ಗುಬ್ಬಿಯ ಕಾಮಿಡಿ ಅಸ್ತ್ರ

Published:
Updated:
Prajavani

ಜನಪ್ರಿಯ ನಾಣ್ನುಡಿಗಳನ್ನು ಶೀರ್ಷಿಕೆಯಾಗಿ ಇಟ್ಟುಕೊಂಡು ಬರುತ್ತಿರುವ ಕನ್ನಡ ಸಿನಿಮಾಗಳ ದೊಡ್ಡ ಪಟ್ಟಿಯನ್ನೇ ತಯಾರಿಸಬಹುದು. ಸುಜಯ್‌ ಶಾಸ್ತ್ರಿ ನಿರ್ದೇಶಿಸಿರುವ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ವೂ ಈ ಪಟ್ಟಿಯಲ್ಲಿ ಸೇರಿಕೊಳ್ಳುವ ಚಿತ್ರ.

‘ಬೆಲ್‌ ಬಾಟಂ’ ಚಿತ್ರದಲ್ಲಿ ‘ಸೆಗಣಿ ಪಿಂಟೊ’ ಪಾತ್ರಕ್ಕೆ ಜೀವ ತುಂಬಿದ್ದವರೇ ಈ ಸುಜಯ್. 

ಇದು ಪಕ್ಕಾ ಕಾಮಿಡಿ ಕಥೆ ಎಂಬುದು ಟ್ರೇಲರ್‌ ನೋಡಿದಾಕ್ಷಣ ಅರ್ಥವಾಗುತ್ತಿತ್ತು. ಹಾಗೆಯೇ ಕೌಟುಂಬಿಕ ಚಿತ್ರವಾಗಿರುವ ಸುಳಿವೂ ಅದರಲ್ಲಿತ್ತು.

ಕೈಯಲ್ಲಿ ಮೈಕ್‌ ಹಿಡಿದ ಸುಜಯ್‌ ಶಾಸ್ತ್ರಿ ತಂಡದ ಸದಸ್ಯರ ಬಗ್ಗೆ ಪರಿಚಯ ಮಾಡಿಕೊಡುತ್ತಿದ್ದರು. ಸಿನಿಮಾ ಬಗ್ಗೆ ಎಲ್ಲವನ್ನೂ ಹೇಳಿಕೊಳ್ಳುವ ತವಕ ಅವರಲ್ಲಿತ್ತು. ಆದರೆ, ಕಥೆಯ ಎಳೆ ಹೇಳಲು ಹಗ್ಗಜಗ್ಗಾಟಕ್ಕೆ ಇಳಿದರು. ‘ಸಂಭಾಷಣೆಗೆ ಹೆಚ್ಚು ಜೋತು ಬೀಳದೆ ಸಿನಿಮಾ ಕಟ್ಟಿಕೊಟ್ಟಿದ್ದೇವೆ. ನನ್ನ ಕನಸು ಇದರ ಮೂಲಕ ಸಾಕಾರಗೊಂಡಿದೆ’ ಎಂದು ಹೇಳಿ ಪಕ್ಕದಲ್ಲಿದ್ದ ಚಿತ್ರದ ನಾಯಕ ರಾಜ್‌ ಬಿ.ಶೆಟ್ಟಿ ಕೈಗೆ ಮೈಕ್‌ ಹಸ್ತಾಂತರಿಸಿದರು.

ಚಿತ್ರದಲ್ಲಿ ರಾಜ್‌ ಬಿ. ಶೆಟ್ಟಿ ಅವರದು ಸಾಫ್ಟ್‌ವೇರ್‌ ಎಂಜಿನಿಯರ್‌ ಪಾತ್ರ. ಗುಬ್ಬಿಯಂತಹ ಸಣ್ಣ ಪಾತ್ರದ ಮೇಲೆ ಪ್ರಪಂಚದಷ್ಟು ಗಾತ್ರದ ಸಮಸ್ಯೆ ಬಿದ್ದಾಗ ಏನಾಗುತ್ತದೆ ಎನ್ನುವುದೇ ಈ ಚಿತ್ರದ ತಿರುಳು.

‘ಈ ಸಿನಿಮಾದ ಆಶಯ ನಗಿಸುವುದಷ್ಟೇ. ಎಲ್ಲಿಯೂ ಬೇಕೆಂದು ಎಮೋಷನ್‌ಗಳ ಮಿಶ್ರಣಕ್ಕೆ ಪ್ರಯತ್ನಿಸಿಲ್ಲ’ ಎಂದರು ರಾಜ್‌ ಬಿ. ಶೆಟ್ಟಿ. 

ಟಿ.ಆರ್‌. ಚಂದ್ರಶೇಖರ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕವಿತಾ ಗೌಡ ಇದರ ನಾಯಕಿ. ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸುನಿತ್‌ ಹಲಗೇರಿ ಅವರದು.

Post Comments (+)