ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿಯಾದ ’ಸೋಮಣ್ಣನ ಸ್ಟಾಕ್‌ʼ

Last Updated 3 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಎಚ್‌.ಜಿ ಸೋಮಶೇಖರ್‌. ನನ್ನ ಪಾಲಿಗೆ ಅಣ್ಣ. ಜೀವ ಕಳೆದುಕೊಂಡ ಅವರ ದೇಹವನ್ನು ಮಲಗಿಸುವಾಗನನಗನಿಸಿದ್ದು ಹೌದು ‘ಸೋಮಣ್ಣನ ಸ್ಟಾಕ್‌’ ಖಾಲಿಯಾಯಿತು...

‘ಸೋಮಣ್ಣನ ಸ್ಟಾಕ್’ನಿಂದ‌ ಅವರು ಬರೆದ, ಅವರ ಜೀವನವನ್ನು ಕಟ್ಟಿಕೊಟ್ಟ ಅದ್ಭುತವಾದ ಕೃತಿ.

ಸೋಮಣ್ಣ ಅವರು ಪರಿಚಯವಾದದ್ದು ತೆರೆಯ ಮೂಲಕವೇ. ಮಿಥಿಳೆಯ ಸೀತೆಯರು ಚಿತ್ರದಲ್ಲಿ ಒಬ್ಬಕೆಟ್ಟತಂದೆಯ ಪಾತ್ರದ ಮೂಲಕ. ಒಬ್ಬ ಕೆಟ್ಟ ತಂದೆ ಹೀಗೂ ಇರಲು ಸಾಧ್ಯವೇ ಎಂಬ ಪ್ರಶ್ನೆ ಕಾಡಿತ್ತು. ಕೆಟ್ಟ ತಂದೆಯ ಪಾತ್ರವನ್ನು ಕಟ್ಟಿಕೊಟ್ಟವರ ಪೈಕಿ ಎಸ್‌.ಎಲ್‌. ಭೈರಪ್ಪ (‘ಭಿತ್ತಿ’ ಕಾದಂಬರಿ) ಕೂಡಾ ಇದ್ದಾರೆ. ಆದರೆ, ‘ಮಿಥಿಳೆಯ ಸೀತೆಯರು’ ಚಿತ್ರದ ‘ಕೆಟ್ಟ ತಂದೆ’ಯನ್ನು ನೋಡಿದಾಗ ಸೋಮಣ್ಣ ಅವರ ಬಗ್ಗೆ ಅಸಹ್ಯ, ತಾತ್ಸಾರ ಬೆಳೆದಿತ್ತು. 1990ರಲ್ಲಿ ‘ಆಸ್ಫೋಟ’ ಎಂಬ ಚಿತ್ರ ಬಿಡುಗಡೆ ಆಗಿತ್ತು. ಅದರಲ್ಲಿ ದತ್ತಣ್ಣ ಅವರದ್ದು ಕೆಟ್ಟ ರಾಜಕಾರಣಿಯ ಪಾತ್ರ. ಹೋ ಅಣ್ಣ ತಮ್ಮ ಇಬ್ಬರೂ ದುಷ್ಟರೇ ಎಂಬ ಭಾವನೆ ಬೆಳೆದಿತ್ತು.

ಅವರು ಕೆನರಾ ಬ್ಯಾಂಕ್‌ನಲ್ಲಿ ಅಧಿಕಾರಿ ಆಗಿದ್ದರು. ಅವರು ತುಂಬಾ ಜನರಿಗೆ ಸಾಲ ಕೊಡಿಸ್ತಾರೆ ತುಂಬಾ ಒಳ್ಳೆಯವರು ಎಂಬ ಅಭಿಪ್ರಾಯ ಸಮಾಜದಲ್ಲಿಇತ್ತು. ಅವರು ಪರಿಚಯ ಆಗುವವರೆಗೆ ನನ್ನ ಅಭಿಪ್ರಾಯ ಬದಲಾಗಿರಲೇ ಇಲ್ಲ.

1990–91ರ ವೇಳೆಗೆ ನಾನು ಪೂರ್ಣ ಪ್ರಮಾಣದಲ್ಲಿ ಸಿನಿಮಾ, ಧಾರಾವಾಹಿ ಕ್ಷೇತ್ರಗಳಲ್ಲಿ ತೊಡಗಿಕೊಂಡೆ. ಆಗ ಒಂದು ಚಿತ್ರಕಥೆಯನ್ನು ದತ್ತಣ್ಣ ಅವರಿಗೆ ಹೇಳಬೇಕಾಗಿ ಬಂತು. ಶ್ರೀನಗರದಲ್ಲಿರುವ ಅವರ ಮನೆಗೆ ಹೋಗಿದ್ದೆ. ಅಣ್ಣ ತಮ್ಮ ಇಬ್ಬರೂ ದುಷ್ಟರೇ. ಅವರಿಗೆ ಕಥೆ ಹೇಳಬೇಕಾಯಿತಲ್ಲಾ ಎಂದು ಕಸಿವಿಸಿಪಟ್ಟುಕೊಳ್ಳುತ್ತಲೇ ಹೋಗಿದ್ದೆ.

ಸೋಮಣ್ಣ ಅವರ ಮನೆಯ ಮಹಡಿಯ ಕೊಠಡಿಯಲ್ಲಿ ದತ್ತಣ್ಣ ಇದ್ದರು. ಹಾಗೆ ಸಂಪರ್ಕ ನಿರಂತರವಾಗುತ್ತಾ ಮುಂದುವರಿಯಿತು. ಅವರ ಸಹೃದಯತೆ ಪರಿಚಯವಾಯಿತು. ಹಾಗೆಯೇ ಅವರಿಬ್ಬರೂ ನನ್ನ ಅಣ್ಣಂದಿರಾದರು. ಈ ಸಂಬಂಧ ಬೆಳೆದು ಸುಮಾರು 30 ವರ್ಷ ಕಳೆದವು.

ದತ್ತಣ್ಣ ಅವರನ್ನು ನೋಡಬೇಕಾದರೆ ಸೋಮಣ್ಣ ಅವರನ್ನು ಹಾದು ಹೋಗಬೇಕಿತ್ತು. ಅವರೇ ಬಂದು ಮಾತನಾಡಿಸುತ್ತಿದ್ದರು. ಏನು ಸಿನಿಮಾ ಮಾಡುತ್ತಿದ್ದಿ? ಎಂದೆಲ್ಲಾ ಕೇಳುವವರು. ಸಿನಿಮಾ ಚೆನ್ನಾಗಿದ್ದರೆ ಶ್ಲಾಘಿಸುತ್ತಿದ್ದರು. ಇಲ್ಲವಾದರೆ ಬೈಯಲೂ ಹಿಂಜರಿಯುತ್ತಿರಲಿಲ್ಲ. ಹೀಗೆ ಅವರು ನನ್ನ ಬದುಕಿನ ವಿಮರ್ಶಕರು.

ನನ್ನ ಬಹುತೇಕ ಚಿತ್ರಗಳಲ್ಲಿ ದತ್ತಣ್ಣ ಇದ್ದಾರೆ. ಸೋಮಣ್ಣ ಪಾತ್ರ ಮಾಡಲು ಆಗಲೇ ಇಲ್ಲ. ಒಂದೆರಡು ಬಾರಿ ಕೇಳಿದ್ದರೂ ಅದೇನೇನೋ ಸಮಸ್ಯೆಗಳು ಎದುರಾಗಿದ್ದವು. ಅದು ನನ್ನ ದುರದೃಷ್ಟ. ‘ಎಲ್ಲ ಪಾತ್ರಗಳನ್ನೂ ದತ್ತಣ್ಣ ಅವರಿಗೇ ಕೊಡ್ತಾ ಇದ್ದೀಯಾ. ನೀನು ಪಕ್ಷಪಾತಿ’ ಎಂದು ನನಗೆ ಆಗಾಗ ಛೇಡಿಸುತ್ತಿದ್ದರು ಸೋಮಣ್ಣ.

ದತ್ತಣ್ಣನ ಬಗ್ಗೆ ನಾನು ಸಾಕ್ಷ್ಯ ಚಿತ್ರ ಮಾಡಿದಾಗ ನಂದು ಯಾವಾಗ ಮಾಡ್ತೀಯಾ ಕೇಳಿದ್ದರು.ತುಂಬಾ ಶಿಸ್ತಿನ ವ್ಯಕ್ತಿ. ನಿಷ್ಠುರವಾದಿ. ಆ ದಂಪತಿ ಯಾರಿಗೂ ಹೊರೆಯಾಗಬಾರದು ಎಂದು ಇಬ್ಬರೇ ಬದುಕಿದ್ದರು. ಅವರಿಗೆ ಇಬ್ಬರು ಗಂಡುಮಕ್ಕಳು. ಸೋಮಣ್ಣ 9 ಪುಸ್ತಕಗಳನ್ನು ಬರೆದಿದ್ದಾರೆ.

ಕೋವಿಡ್‌ನ ಒತ್ತಡದ ಸಾವು?: ದತ್ತಣ್ಣನೊಂದಿಗೆ ಮಾತನಾಡುತ್ತಿದ್ದೆ. ಅವರು ಹೇಳಿದ್ದು, ‘ಸೋಮಣ್ಣ ಕೋವಿಡ್‌ನಿಂದ ತೀರಿಕೊಂಡಿದ್ದಲ್ಲ. ಕೋವಿಡ್‌ ತಂದಿಟ್ಟ ಒತ್ತಡ ಅವನ ಸಾವಿಗೆ ಕಾರಣವಾಯಿತು. ನಿರಂತರ ಜನರೊಂದಿಗೆ ಒಡನಾಡುತ್ತಿದ್ದ. ಬರೆಯುತ್ತಿದ್ದವನು ಇದ್ದಕ್ಕಿದ್ದಂತೆಯೇ ಮನೆಯೊಳಗೇ ಇರಬೇಕೆನಿಸಿದಾಗ ಒಂಟಿತನ ಒತ್ತಡ ಸೃಷ್ಟಿಸುವುದು ಸಹಜ ಅದೇ ಕಾರಣವಿರಬಹುದುʼ ಎಂದು ಸಂದೇಹ ವ್ಯಕ್ತಪಡಿಸಿದ್ದರು ಅವರು.

ಸಾಹಿತ್ಯ, ಚಲನಚಿತ್ರ, ರಂಗಭೂಮಿ ಮೂರೂ ಕ್ಷೇತ್ರಗಳಲ್ಲೂ ತೊಡಗಿಕೊಂಡಿದ್ದಅಪರೂಪದ ವ್ಯಕ್ತಿ. ಇನ್ನಿಲ್ಲವಾದರು. ಹೌದು ಸೋಮಣ್ಣನ ಸ್ಟಾಕ್‌ ಖಾಲಿಯಾಯಿತು ಅನಿಸುತ್ತಿದೆ.

ನಿರೂಪಣೆ: ಶರತ್ ಹೆಗ್ಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT