ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊಯ್ಸಳ’ ಈಗ ‘ಗುರುದೇವ ಹೊಯ್ಸಳ’

Last Updated 12 ಮಾರ್ಚ್ 2023, 9:15 IST
ಅಕ್ಷರ ಗಾತ್ರ

ನಟ ಧನಂಜಯ ನಟನೆಯ 25ನೇ ಸಿನಿಮಾ, ವಿಜಯ್‌ ಎನ್‌. ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ಹೊಯ್ಸಳ’ ಚಿತ್ರದ ಶೀರ್ಷಿಕೆ ಬಿಡುಗಡೆ ಹೊಸ್ತಿಲಲ್ಲಿ ಬದಲಾಗಿದೆ. ಶೀರ್ಷಿಕೆ ವಿರುದ್ಧ ಚಿತ್ರತಂಡವೊಂದು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದ ಕಾರಣ ಇದೀಗ ಕೆಆರ್‌ಜಿ ಸ್ಟುಡಿಯೋಸ್‌ ಶೀರ್ಷಿಕೆಯನ್ನು ಬದಲಾವಣೆ ಮಾಡಿದೆ.

ಧನಂಜಯ ನಟನೆಯ ‘ಹೊಯ್ಸಳ’ ಸಿನಿಮಾ ಮಾರ್ಚ್‌ 30ರಂದು ‘ಗುರುದೇವ ಹೊಯ್ಸಳ’ ಎಂಬ ಬದಲಾದ ಶೀರ್ಷಿಕೆ ಹೊತ್ತು ತೆರೆಗೆ ಬರಲಿದೆ. ಶೀರ್ಷಿಕೆ ಬದಲಾವಣೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಧನಂಜಯ, ‘ಹೊಯ್ಸಳ ಎನ್ನುವ ಶೀರ್ಷಿಕೆ ಫಿಲಂ ಚೇಂಬರ್‌ನಲ್ಲಿ ನೋಂದಣಿಯಾಗಿತ್ತು. ರಾಮು ಅವರ ಪ್ರೊಡಕ್ಷನ್‌ನಲ್ಲಿ ಈ ಶೀರ್ಷಿಕೆ ಇತ್ತು. ಇದನ್ನು ನಾವು ಮಾಲಾಶ್ರೀ ಅವರ ಬಳಿ ಕೇಳಿ ತೆಗೆದುಕೊಂಡೆವು. ನಂತರದಲ್ಲೇ ಸಿನಿಮಾವನ್ನು ಘೋಷಿಸಿ, ಚಿತ್ರೀಕರಣ ಆರಂಭಿಸಿದ್ದೆವು. ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸುವವರೆಗೂ ಇನ್ನೊಂದು ಸಿನಿಮಾ ಇದೇ ಹೆಸರಿನಲ್ಲಿ ಸೆನ್ಸಾರ್‌ ಆಗಿದೆ ಎನ್ನುವುದು ನಮಗೆ ತಿಳಿದೇ ಇರಲಿಲ್ಲ. ನಮ್ಮ ಸಿನಿಮಾ ಶೀರ್ಷಿಕೆ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದ ಹೊಯ್ಸಳ ಮೂರ್ತಿ ಎನ್ನುವವರ ಜೊತೆ ನಾನು ಮಾತನಾಡಿದೆ. ‘ನಮ್ಮ ಸಿನಿಮಾ ಕಳೆದ ವರ್ಷವೇ ಸೆನ್ಸಾರ್‌ ಆಗಿ ಸಿದ್ಧವಾಗಿದೆ. ನಾನು ರಾಮು ಅವರ ಬಳಿ ಶೀರ್ಷಿಕೆ ಕೇಳಿದ್ದೆ. ಆದರೆ ಅವರು ಕೊಡಲಿಲ್ಲ. ಹೀಗಾಗಿ ಬೇರೆ ಚೇಂಬರ್‌ಗೆ ಹೋಗಿ ನೋಂದಣಿ ಮಾಡಿಕೊಂಡೆ’ ಎಂದು ಮೂರ್ತಿ ತಿಳಿಸಿದರು’ ಎಂದರು.

‘ಇದಕ್ಕೆಲ್ಲ ಏನು ಪರಿಹಾರ? ಎಂದು ನಾನು ಕೇಳಿದೆ. ‘ನಮಗೆ ಸೂಕ್ತ ಪರಿಹಾರ ಕೊಡುವುದಾದರೆ ಮಂಗಳವಾರ ಬಂದು ಮಾತನಾಡುತ್ತೇನೆ’ ಎಂದು ಮೂರ್ತಿ ಹೇಳಿದರು. ನಮ್ಮ ಬಳಿ ಆ ರೀತಿ ಯಾವ ಪರಿಹಾರವೂ ಇಲ್ಲ. ಹಾಗೆ ನೋಡುವುದಾದರೆ ಅವರೂ ಶೀರ್ಷಿಕೆ ನೋಂದಣಿ ಮಾಡಿಕೊಳ್ಳುವಂತಿಲ್ಲ. ಈ ಶೀರ್ಷಿಕೆ ಸಮಸ್ಯೆಗಳಿಗೆ ಫಿಲಂ ಚೇಂಬರ್‌ಗಳು ಜೊತೆಯಾಗಿ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ಬಹಳಷ್ಟು ಸಮಸ್ಯೆಗಳು ಉದ್ಭವಿಸುತ್ತದೆ. ಈ ಎಲ್ಲ ಕಾರಣಗಳಿಂದ ನಾವು ನಮ್ಮ ಸಿನಿಮಾವನ್ನು ‘ಗುರುದೇವ ಹೊಯ್ಸಳ’ ಎಂದು ನೋಂದಣಿ ಮಾಡಿಕೊಂಡು, ಇದೇ ಶೀರ್ಷಿಕೆಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ’ ಎಂದರು ಧನಂಜಯ.

‘ವಿಲನ್‌, ಪೋಷಕ ಪಾತ್ರಗಳು, ನಾಯಕನಾಗಿ ಎಲ್ಲ ಭಾಷೆಗಳನ್ನೂ ಒಟ್ಟುಗೂಡಿಸಿ ಇದು ನನ್ನ 25ನೇ ಸಿನಿಮಾ. ನೀವು ಸಮಾಜಕ್ಕೆ ಏನು ಹೇಳುತ್ತೀರಾ ಎನ್ನುವ ಪ್ರಶ್ನೆಯನ್ನು ಜನರು ನನಗೆ ಹೆಚ್ಚಾಗಿ ಕೇಳುತ್ತಿರುತ್ತಾರೆ. ಹೀಗಾಗಿ ‘ರತ್ನನ್‌ ಪ್ರಪಂಚ’, ‘ಬಡವ ರಾಸ್ಕಲ್‌’ ಸಿನಿಮಾದಲ್ಲಿ ಸಂದೇಶವೊಂದನ್ನು ನೀಡಿದ್ದೆ. ನಮ್ಮ ಸುತ್ತಮುತ್ತ ನಡೆಯುವ ಒಂದು ಗಂಭೀರವಾದ, ಸೂಕ್ಷ್ಮ ವಿಚಾರವನ್ನು ಇಟ್ಟುಕೊಂಡು ‘ಗುರುದೇವ ಹೊಯ್ಸಳ’ ಸಿನಿಮಾ ಮಾಡಿದ್ದೇವೆ. ಸಿನಿಮಾ ಬಿಡುಗಡೆಯಾದ ಮೇಲೆ ಈ ವಿಷಯದ ಬಗ್ಗೆ ಚರ್ಚೆ ನಡೆದರೆ ಒಳ್ಳೆಯದು. ಟ್ರೈಲರ್‌ನಲ್ಲೂ ನಾವು ಈ ವಿಷಯವನ್ನು ಬಿಟ್ಟುಕೊಟ್ಟಿಲ್ಲ’ ಎನ್ನುತ್ತಾರೆ ಧನಂಜಯ.

ಚಿತ್ರದಲ್ಲಿ ಧನಂಜಯ ಅವರು ‘ಗುರುದೇವ ಹೊಯ್ಸಳ’ ಎಂಬ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ನಟಿ ಅಮೃತಾ ಅಯ್ಯಂಗಾರ್ ಈ ಚಿತ್ರದಲ್ಲಿ ‘ಡಾಲಿ’ಗೆ ಜೋಡಿಯಾಗಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಪ್ರಸ್ತುತಿಯಲ್ಲಿ ಕೆಆರ್‌ಜಿ ಸ್ಟುಡಿಯೊಸ್‌ನ ಕಾರ್ತಿಕ್ ಮತ್ತು ಯೋಗಿ ಜಿ. ರಾಜ್ ಅವರು ಈ ಚಿತ್ರವನ್ನು ನಿರ್ಮಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT