ಮಂಗಳವಾರ, ಫೆಬ್ರವರಿ 18, 2020
31 °C

ಹೌದಾ..ಹುಲಿಯಾ 2?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಹುಲಿಯಾ’ ಚಿತ್ರ ತೆರೆಕಂಡಿದ್ದು 1996ರಲ್ಲಿ. ಈ ಸಿನಿಮಾ ನಿರ್ದೇಶಿಸಿದ್ದು ಕೆ.ವಿ. ರಾಜು. ನಟ ದೇವರಾಜ್‌ ಅವರ ವೃತ್ತಿಬದುಕಿಗೆ ಹೊಸ ತಿರುವು ನೀಡಿದ ಸಿನಿಮಾವೂ ಹೌದು. ಜಿ. ಗೋವಿಂದ್‌ ಮತ್ತು ಕುದೂರ್‌ ರಮೇಶ್‌ ಇದಕ್ಕೆ ಬಂಡವಾಳ ಹೂಡಿದ್ದರು. ರಾಜಕೀಯ ಅವ್ಯವಸ್ಥೆಯ ಚಕ್ರವ್ಯೂಹದೊಳಗೆ ಜನಸಾಮಾನ್ಯನೊಬ್ಬ ಮಿಕವಾಗುವುದನ್ನು ಈ ಚಿತ್ರ ತೆರೆದಿಟ್ಟಿತ್ತು. ‘ಹುಲಿಯಾ’ನ ಪಾತ್ರಧಾರಿಯಾಗಿ ದೇವರಾಜ್‌ ಅವರ ಮನೋಜ್ಞ ನಟನೆ ಜನರ ಮೆಚ್ಚುಗೆಗಳಿಸಿತ್ತು.

ಈ ಚಿತ್ರದ ಬಳಿಕ ದೇವರಾಜ್‌ ಹಲವು ಸೂಪರ್‌ಹಿಟ್‌ ಚಿತ್ರಗಳಲ್ಲಿ ನಟಿಸಿದರೂ ‘ಹುಲಿಯಾ’ ಚಿತ್ರದಂತಹ ಪಾತ್ರದಲ್ಲಿ ಅವರು ಮತ್ತೆ ಕಾಣಿಸಿಕೊಳ್ಳಲಿಲ್ಲ. ಆ ಕೊರಗು ಅವರಲ್ಲೂ ಇದೆ. ಹಾಗಾಗಿಯೇ, ಅವರು ಮತ್ತೆ ಹುಲಿಯಾನನ್ನು ತೆರೆಯ ಮೇಲೆ ತರಲು ಸಿದ್ಧರಾಗಿದ್ದಾರಂತೆ. ಈಗ ಅವರೇ ‘ಹುಲಿಯಾ 2’ ಚಿತ್ರದ ಕಥೆ, ಸ್ಕ್ರಿಪ್ಟ್‌ ಬರೆಯುತ್ತಿದ್ದು, ಶೀಘ್ರವೇ ಈ ಚಿತ್ರ ಸೆಟ್ಟೇರುವ ನಿರೀಕ್ಷೆಯಿದೆ.

ದೇವರಾಜ್‌ ಅವರು ಬಣ್ಣದಲೋಕ ಪ್ರವೇಶಿಸಿ ಮೂರೂವರೆ ದಶಕ ಪೂರ್ಣಗೊಂಡಿದೆ. ಹಲವು ನಿರ್ದೇಶಕರ ಬಳಿ ಕೆಲಸ ಮಾಡಿದ್ದಾರೆ. ಅವರಿಗೂ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳುವ ಆಸೆ ಇದೆಯಂತೆ. ಹಾಗಾಗಿ, ‘ಹುಲಿಯಾ 2’ ಚಿತ್ರವನ್ನು ಅವರೇ ನಿರ್ದೇಶಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಈ ಕುರಿತು ಅವರ ಪುತ್ರ, ನಟ ಪ್ರಜ್ವಲ್ ದೇವರಾಜ್ ಹೇಳುವುದು ಹೀಗೆ: ‘ಅಪ್ಪ ಹುಲಿಯಾ 2 ಚಿತ್ರದ ಸ್ಕ್ರಿಪ್ಟ್‌ ಸಿದ್ಧಪಡಿಸುತ್ತಿರುವುದು ಸತ್ಯ. ಅವರಿಗೂ ಸಿನಿಮಾ ನಿರ್ದೇಶಿಸುವ ಆಸೆಯಿದೆ. ಅವರೇ ಆ್ಯಕ್ಷನ್‌ ಕಟ್‌ ಹೇಳಿದರೂ ಅಚ್ಚರಿಪಡಬೇಕಿಲ್ಲ’ ಎಂದು ಕುತೂಹಲದ ಬೀಜ ಬಿತ್ತುತ್ತಾರೆ.

‘ನೀವು ಆ ಚಿತ್ರದ ನಾಯಕನಾಗಿ ನಟಿಸುತ್ತೀರಾ’ ಎಂಬ ಪ್ರಶ್ನೆಗೆ, ‘ನನಗೂ ಅ‍ಪ್ಪ ನಟಿಸಿದ ಹುಲಿಯಾ ಚಿತ್ರದಂತಹ ಪಾತ್ರದಲ್ಲಿ ನಟಿಸಬೇಕೆಂಬ ಆಸೆ ಇದೆ. ಆದರೆ, ಯಾರು ಆ ಸಿನಿಮಾದ ನಾಯಕನಾಗಬೇಕು ಎಂಬುದನ್ನು ಅವರೇ ನಿರ್ಧರಿಸಲಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)