ತಿರುವನಂತಪುರ: ‘ಮಲಯಾಳಂ ಚಿತ್ರರಂಗದ ಯಾವುದೇ ಶಕ್ತಿ ಬಣದಲ್ಲಿಯೂ ನಾನು ಗುರುತಿಸಿಕೊಂಡಿಲ್ಲ. ಅಂತಹ ಬಣಗಳ ಅಸ್ತಿತ್ವದ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಹಿರಿಯ ನಟ ಮೋಹನ್ ಲಾಲ್ ಹೇಳಿದರು.
ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ(ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮೋಹನ್ ಲಾಲ್, ‘ಹೇಮಾ ಸಮಿತಿ ವರದಿ ಬಿಡುಗಡೆ ಮಾಡಿರುವುದು ಸರ್ಕಾರ ಉತ್ತಮ ನಿರ್ಧಾರವಾಗಿದೆ‘ ಎಂದರು.
ರಾಜೀನಾಮೆ ನೀಡಲು ಕಾರಣವೇನು ಎಂಬ ಪ್ರಶ್ನೆಗೆ, ‘ವರದಿ ಬಿಡುಗಡೆಯಾದ ಬೆನ್ನಲ್ಲೇ ಕಲಾವಿದರ ಸಂಘದ ವಿರುದ್ಧ ಆರೋಪಗಳು ಕೇಳಿಬಂದಿದ್ದು, ಈ ಹಿನ್ನೆಲೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಯಿತು’ ಎಂದು ಹೇಳಿದರು.
ಸಂಘದ ಕೆಲವು ಸದಸ್ಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ತಪ್ಪು ಮಾಡಿದವರ ವಿರುದ್ಧ ಸರಿಯಾದ ಸಾಕ್ಷಿಗಳಿದ್ದರೆ ಶಿಕ್ಷಿಸಲಿ’ ಎಂದು ಹೇಳಿದರು.
‘ಸಾವಿರಾರು ಜನ ಕೆಲಸ ಮಾಡುವ ಮಲಯಾಳಂ ಚಿತ್ರರಂಗವು ಒಂದು ದೊಡ್ಡ ಉದ್ಯಮವಾಗಿದ್ದು, ಅಲ್ಲಿ ತಲೆದೋರಿದ ಸಮಸ್ಯೆಗಳನ್ನು ಪರಿಹರಿಸಲು ಕಲಾವಿದರ ಸಂಘಕ್ಕೆ ಸಾಧ್ಯವಾಗಲಿಲ್ಲ’ ಎಂದು ಇದೇ ವೇಳೆ ವಿಷಾದ ವ್ಯಕ್ತಪಡಿಸಿದರು.
ಮಲಯಾಳ ಸಿನಿಮಾ ರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಶೋಷಣೆ, ತಾರತಮ್ಯ ಮತ್ತು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಇತ್ತೀಚೆಗೆ ಬಿಡುಗಡೆಯಾಗಿತ್ತು. ವರದಿ ಬಹಿರಂಗಗೊಂಡ ಬೆನ್ನಲ್ಲೇ ಕಲಾವಿದರ ಸಂಘಕ್ಕೆ ಅಧ್ಯಕ್ಷ ನಟ ಮೋಹನ್‌ಲಾಲ್, ಇತರ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರು.