ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್‌ನಲ್ಲಿ ಪಣಜಿ ಚಲನಚಿತ್ರೋತ್ಸವ: ಬಿಜೆಪಿ– ಕಾಂಗ್ರೆಸ್‌ ನಡುವೆ ವಾಕ್ಸಮರ

Last Updated 14 ಆಗಸ್ಟ್ 2020, 9:51 IST
ಅಕ್ಷರ ಗಾತ್ರ

ಕೋವಿಡ್‌–19 ನಡುವೆಯೇ ನವೆಂಬರ್‌ನಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) ಆಯೋಜನೆಗೆ ಗೋವಾದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್ ನೇತೃತ್ವದ ರಾಜ್ಯ ಸರ್ಕಾರ ಸಜ್ಜಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಕ್ಸಮರ ಶುರುವಾಗಿದೆ. ಪಣಜಿಯಲ್ಲಿ ಪ್ರತಿವರ್ಷದ ನವೆಂಬರ್‌ 20ರಿಂದ 28ರವರೆಗೆ ಚಲನಚಿತ್ರೋತ್ಸವ ನಡೆಯುತ್ತದೆ.

‘ಈ ಮೊದಲೇ ನಿಗದಿಯಾದಂತೆ ನವೆಂಬರ್‌ನಲ್ಲಿ ಚಲನಚಿತ್ರೋತ್ಸವ ಆಯೋಜಿಸಲಾಗುವುದು. ಇದಕ್ಕೆ ಅಗತ್ಯವಿರುವ ಸಿದ್ಧತೆ ಕೈಗೊಳ್ಳಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಮಾಧ್ಯಮದವರಿಗೆ ತಿಳಿಸಿದ್ದಾರೆ. ಸರ್ಕಾರದ ಈ ತೀರ್ಮಾನಕ್ಕೆ ಪ್ರತಿಪಕ್ಷ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ.

‘ರಾಜ್ಯದ ಜನರ ಬದುಕು ಮತ್ತು ಆರ್ಥಿಕ ಸ್ಥಿತಿಯ ಮೇಲೆ ಕೋವಿಡ್‌–19 ಗಂಭೀರ ಪರಿಣಾಮ ಬೀರಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಚಲನಚಿತ್ರೋತ್ಸವ ಹಮ್ಮಿಕೊಳ್ಳುವುದು ಸೂಕ್ತವಲ್ಲ. ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಕಾಂಗ್ರೆಸ್‌ನ ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್‌ ಟ್ವೀಟ್‌ ಮೂಲಕ ಒತ್ತಾಯಿಸಿದ್ದಾರೆ.

‘ಪ್ರಮೋದ್ ಸಾವಂತ್‌ ಕೂಡ ಕೋವಿಡ್‌ನಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಸಂಕಷ್ಟಕ್ಕೆ ಸಿಲುಕಿರುವುದನ್ನು ಈಗಾಗಲೇ ಒಪ್ಪಿಕೊಂಡಿದ್ದಾರೆ. ಕೂಡಲೇ, ಚಲನಚಿತ್ರೋತ್ಸವಕ್ಕೆ ಮಾಡುವ ವೆಚ್ಚ ಕುರಿತು ಶ್ವೇತಪತ್ರ ಹೊರಡಿಸಬೇಕು. ಇದರಿಂದ ಸ್ಥಳೀಯ ಸಿನಿಮೋದ್ಯಮ ಮತ್ತು ಪ್ರವಾಸೋದ್ಯಮಕ್ಕೆ ಆಗಿರುವ ಪ್ರಯೋಜನದ ಬಗ್ಗೆಯೂ ಮಾಹಿತಿ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಕೇಂದ್ರ ಮಾಹಿತಿ ಹಾಗೂ ಪ್ರಸಾರ ಇಲಾಖೆ, ಚಲನಚಿತ್ರಗಳ ನಿರ್ದೇಶನಾಲಯ ಮತ್ತು ಗೋವಾ ರಾಜ್ಯ ಸರ್ಕಾರದ ಸಹಯೋಗದಡಿ ಚಲನಚಿತ್ರೋತ್ಸವವನ್ನು ಆಯೋಜಿಸಲಾಗುತ್ತದೆ. ಇದಕ್ಕಾಗಿ ಪ್ರತಿವರ್ಷ ₹ 20ರಿಂದ ₹ 25 ಕೋಟಿ ವೆಚ್ಚ ಮಾಡಲಾಗುತ್ತಿದೆ. ಕೊರೊನಾದಿಂದ ರಾಜ್ಯದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಚಲನಚಿತ್ರೋತ್ಸವ ಆಯೋಜಿಸಿ ಸಂಭ್ರಮಿಸುವ ಸಮಯ ಇದಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ ದಿಗಂಬರ್‌ ಕಾಮತ್.

ಚಲನಚಿತ್ರೋತ್ಸವ ಆಯೋಜನೆ ಸಂಬಂಧ ಗೋವಾ ಸರ್ಕಾರ ಮತ್ತು ಕಾಂಗ್ರೆಸ್‌ ನಡುವೆ ಹಗ್ಗಜಗ್ಗಾಟ ಶುರುವಾಗಿರುವುದು ದಿಟ. ಆದರೆ, ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT