ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ವಿದೇಶಿ ವಾದ್ಯ, ದೇಸಿ ನಾದ!

ಕ್ಲಾರಿಯೊನೆಟ್‌ನಲ್ಲಿ ಯಮನ್‌ ಕಲ್ಯಾಣಿ
Last Updated 16 ಸೆಪ್ಟೆಂಬರ್ 2020, 3:30 IST
ಅಕ್ಷರ ಗಾತ್ರ

ಸಂಗೀತ ಹಿಂದೂಸ್ತಾನಿಯೇ ಆಗಿರಲಿ, ಕರ್ನಾಟಕ ಸಂಗೀತ ಪ್ರಕಾರವೇ ಆಗಿರಲಿ, ವಾದ್ಯದ ಮೂಲಕ ರಾಗ, ತಾಳ, ಶ್ರುತಿ, ಲಯಬದ್ಧವಾಗಿ ಹೊಮ್ಮಿತೆಂದರೆ ಅದು ಎಂದಿಗೂ ಶ್ರವಣಾನಂದಕರವೇ.

ವಿದೇಶದಿಂದ ತಂದ ಸಂಗೀತ ವಾದ್ಯಗಳಿಗೆ ನಮ್ಮ ದೇಸೀ ಸಂಗೀತವನ್ನು ಅಳವಡಿಸಿ ನುಡಿಸಿದ್ದನ್ನು ಕೇಳಿದಾಗ ನಮ್ಮಲ್ಲಿ ವಿಶಿಷ್ಟ ಅನುಭೂತಿ ಉಂಟಾಗುತ್ತದೆ. ಸ್ಯಾಕ್ಸೊಫೋನ್‌ನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಳವಡಿಸಿ ಹತ್ತು ಹಲವು ಸುಮಧುರ ರಾಗಗಳನ್ನು ನುಡಿಸಿ ಈ ವಾದ್ಯವನ್ನು ಜಗದ್ವಿಖ್ಯಾತಗೊಳಿಸಿದವರು ಕದ್ರಿಗೋಪಾಲನಾಥ್‌ ಅವರು. ಅದೇ ರೀತಿ ಕ್ಲ್ಯಾರಿಯೊನೆಟ್‌ನಲ್ಲಿ ಹಿಂದೂಸ್ತಾನಿ ಸಂಗೀತ ಅಳವಡಿಸಿ ಅದನ್ನು ನುಡಿಸಿ ಪ್ರಸಿದ್ಧರಾದವರು ಪಂ. ನರಸಿಂಹಲು ವಡವಾಟಿ.

ಅಂದ ಹಾಗೆ ಮೊನ್ನೆ ಭಾನುವಾರ ವಡವಾಟಿ ಅವರು ‘ಪ್ರಜಾವಾಣಿ’ ಆಯೋಜಿಸಿದ ಫೇಸ್‌ಬುಕ್‌ ಲೈವ್‌ ಸರಣಿಯಲ್ಲಿ ಕ್ಲ್ಯಾರಿಯೊನೆಟ್‌ ನುಡಿಸಿದರು. ಸುಪ್ರಸಿದ್ಧ ಯಮನ್‌ಕಲ್ಯಾಣಿ ರಾಗವನ್ನು ಹಿತಮಿತವಾದ ಆಲಾಪದೊಂದಿಗೆ ನುಡಿಸುತ್ತಾ. ಕಲ್ಯಾಣ್‌ ಥಾಟ್‌ನಲ್ಲಿ ಬರುವ ಸಂಜೆಯ ಸುಮಧುರ ರಾಗವನ್ನು ಹೆಚ್ಚಿನ ‘ತಾನ್‌’ಗಳ ಅಬ್ಬರವಿಲ್ಲದೆ ಬಂದೀಶ್‌ ಅನ್ನು ಮಾತ್ರ ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದರು. ಮುಂದೆ ‘ಮಧುಮದ್‌ ಸಾರಂಗ’ ರಾಗದಲ್ಲಿ ಸುಪ್ರಸಿದ್ಧ ದಾಸರ ಪದ ಭಾಗ್ಯದ ಲಕ್ಷ್ಮಿ ಬಾರಮ್ಮಾ.., ಅದಾಗಿ ಮತ್ತೊಂದು ದಾಸರ ಪದ ‘ತಂಬೂರಿ ಮೀಟಿದವ..’ ನುಡಿಸಿದರು. ಕೊನೆಗೆ ಸಿಂಧು ಭೈರವಿ ಹಾಗೂ ಭೈರವಿ ರಾಗದಲ್ಲಿ ಠುಮ್ರಿ ನುಡಿಸಿ ಕಛೇರಿಗೆ ಮಂಗಳ ಹಾಡಿದರು. ಸಹವಾದನದಲ್ಲಿ ಕುಮಾರ್‌ ವೆಂಕಟೇಶ್‌ ವಡವಾಟಿ ಹಾಗೂ ತಬಲಾದಲ್ಲಿ ಗೋಪಾಲ್‌ ಗುಡಿಬಂಡೆ ಸಹಕರಿಸಿದ್ದರು.

ಕ್ಲಾರಿಯೊನೆಟ್‌ ವಾದನ ಕೇಳಲು ಆಪ್ಯಾಯಮಾನವಾಗಿತ್ತು. ಕೊರೊನಾ ಕರಿನೆರಳಿನಲ್ಲಿ ಹೊರಗೆಲ್ಲೂ ಸಂಗೀತ ಕಛೇರಿಗಳಿಲ್ಲದೆ ಕಲಾಲೋಕ ಸೊರಗಿ ಹೋಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಂಗೀತ ಕಛೇರಿಗಳ ರಸದೌತಣವೇ ಕೇಳುಗರಿಗೆ ಸಿಗುತ್ತಿರುವುದು ಸೌಭಾಗ್ಯವೇ ಸರಿ.

ಸಂಗೀತದ ಮನೆತನ

ಪಂ. ನರಸಿಂಹಲು ವಡವಾಟಿ ಅವರು ಚಿಕ್ಕ ವಯಸ್ಸಿನಲ್ಲೇ ಸಂಗೀತದತ್ತ ಆಕರ್ಷಿತರಾದವರು. ಮನೆಯಲ್ಲಿ ಸದಾ ಸಂಗೀತ ಇರುತ್ತಿತ್ತು. ತಂದೆ ಈರಣ್ಣ ಶೆಹನಾಯ್ ವಾದಕರು, ಕ್ಲಾರಿಯೊನೆಟ್‌ ಕೂಡ ನುಡಿಸುತ್ತಿದ್ದರು. ಮಟಾಮಾರಿ ವೀರಣ್ಣ ಅವರೇ ಮೊದಲ ಗುರು, ಬಳಿಕ ಪಂ. ಸಿದ್ಧರಾಮ ಜಂಬಲದಿನ್ನಿ ಅವರಿಂದ ಜೈಪುರ್‌ ಹಾಗೂ ಗ್ವಾಲಿಯರ್‌ ಘರಾಣೆಯಲ್ಲಿ ಹಾಡುವುದನ್ನು ಕಲಿತರು.

ಇಂಗ್ಲೆಂಡ್‌ ಅಮೆರಿಕ ಫ್ರಾನ್ಸ್‌ ಮುಂತಾದ ಕಡೆ ಸಂಗೀತ ಕಛೇರಿ ನೀಡಿದರು. ದೇಶದ ನಾನಾ ಭಾಗಗಳಲ್ಲಿ ಕ್ಲಾರಿಯೊನೆಟ್‌ ನುಡಿಸಿ ಕೇಳುಗರಿಗೆ ಈ ವಾದ್ಯದ ಅರಿವು ಮೂಡಿಸಿದವರು. ರಾಯಚೂರಿನಲ್ಲಿ ಸ್ವರಸಂಗಮ ಸಂಗೀತ ವಿದ್ಯಾಲಯ ಸ್ಥಾಪಿಸಿ ಆಸಕ್ತಿರಿಗೆ ಸಂಗೀತ ಹೇಳಿಕೊಡುತ್ತಿದ್ದಾರೆ. ಬೆಂಗಳೂರಿನಲ್ಲಿಯೂ ಪಂ. ನರಸಿಂಹಲು ವಡವಾಟಿ ಸಂಗೀತ ಅಕಾಡೆಮಿ ಸ್ಥಾಪಿಸಿದ್ದಾರೆ. ಇಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಸಂಗೀತ ಹೇಳಿಕೊಡುತ್ತಿದ್ದಾರೆ.

ಸುಷಿರ ವಾದ್ಯದಲ್ಲಿ ರಾಗಗಳ ಮೋಡಿ

ಕ್ಲಾರಿಯೊನೆಟ್ ಜರ್ಮನಿ ಮೂಲದ ವಾದ್ಯ, ಸುಷಿರ ವಾದ್ಯಗಳ ಗುಂಪಿಗೆ ಸೇರಿದ ಈ ವಿಶಿಷ್ಟ ವಾದ್ಯ ಪ್ರಕಾರವನ್ನು ಪಾಶ್ಚಾತ್ಯ ಜಾಸ್ ಸಂಗೀತದಲ್ಲಿ ಹೆಚ್ಚಾಗಿ ಬಳಸುತ್ತಾರೆ, ಇದೀಗ ಈ ವಾದ್ಯ ನಮ್ಮ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಚೆನ್ನಾಗಿ ಒಗ್ಗಿಸಿಕೊಂಡಿದೆ. ಸಣ್ಣ ಕೊಳವೆಯಂತಿರುವ ಈ ವಾದ್ಯದಿಂದ ಸುಮಧುರ ನಿನಾದ ಅಲೆಅಲೆಯಾಗಿ ಕೇಳಿ ಬಂದಾಗ ಅದ್ಭುತ ಅನುಭವ ಹಾಗೂ ರಸಾನುಭೂತಿ ಉಂಟಾಗುವುದು ಕೌತುಕವೇ ಸರಿ. ಹಿಂದೂಸ್ತಾನಿ ಸಂಗೀತದ ರಾಗಗಳನ್ನು ಸರಾಗವಾಗಿ ಇದರಲ್ಲಿ ನುಡಿಸಬಹುದು.

ಹಾಗೆಂದು ಪಾಶ್ಚಾತ್ಯವಾದ್ಯ ಕ್ಲಾರಿಯೊನೆಟ್ ನುಡಿಸಲು ಕಲಿಯುವ ಮುನ್ನ ಶಾಸ್ತ್ರೀಯ ಸಂಗೀತವನ್ನು ಚೆನ್ನಾಗಿ ಕಲಿತಿರಬೇಕು. ಗಾಯನ ಕಲಿತ ನಂತರ ಆ `ಗಾಯಕಿ'ಗೆ ತಕ್ಕಂತೆ ಈ ವಾದ್ಯ ನುಡಿಸಾಣಿಕೆ ಕಲಿಯಲು ಸಾಧ್ಯ. ಅಲ್ಲದೆ ಇದನ್ನು ಕಲಿಯಬೇಕಾದರೆ ಗುರುವಿನ ಸಮಕ್ಷಮ ಬೇಕೇಬೇಕು. ಈ ವಾದ್ಯದಲ್ಲಿ ಬಿದಿರ ವಾದ್ಯ ಕೊಳಲಿನಲ್ಲಿ ಮಾಡುವಂತೆ ಆಲಾಪ್, ಮೀಂಡ್, ಗಮಕಗಳಂತಹ ಪ್ರಯೋಗಶೀಲತೆ ಸ್ವಲ್ಪ ಕಷ್ಟ. ನಿರಂತರ ರಿಯಾಜ್‌, ಸತತ ಪರಿಶ್ರಮ ಬಯಸುತ್ತದೆ ಈ ವಾದ್ಯ. ಆದರೆ ಒಮ್ಮೆ ಒಲಿಸಿಕೊಂಡರೆ ನಾವೇ ಪ್ರಯೋಗಗಳನ್ನು ಮಾಡಬಹುದು. ಇದರ ನಾದದಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಏಕತಾನತೆಯನ್ನು ಮರೆಸುತ್ತದೆ.

ಸಾಮಾನ್ಯವಾಗಿ ಈ ವಾದ್ಯವನ್ನು ವಿದೇಶಗಳಲ್ಲಿ ಬ್ಯಾಂಡ್‌ಸೆಟ್‌ಗಳಲ್ಲಿ, ಸರ್ಕಸ್‌ಗಳಲ್ಲಿ, ಆರ್ಕೆಸ್ಟ್ರಾಗಳಲ್ಲಿ ಬಳಸುತ್ತಾರೆ. ಪಾಶ್ಚಾತ್ಯ ಸಂಗೀತ ಗುಂಪುಗಳಲ್ಲಿ ನಡೆಯುತ್ತದೆ. ಅದೂ ಸುಮಾರು 50–60 ಕಲಾವಿದರ ತಂಡದಲ್ಲೇ ಈ ವಾದ್ಯ ನುಡಿಸುವುದು.

ಹೊಸ ಸಂಗೀತ ಭಾಷ್ಯ!

ಸಂಗೀತ ಕ್ಷೇತ್ರದಲ್ಲಿ ಇಂದು ಅಚ್ಚರಿ ಮೂಡಿಸುವಷ್ಟು ಬೆಳವಣಿಗೆಗಳಾಗುತ್ತಿವೆ. ಪ್ರಯೋಗಗಳು ನಿರಂತರವಾಗಿ ನಡೆಯುತ್ತಿವೆ. ಹೊಸ ರಾಗ, ಹೊಸ ತಾಳ, ಹೊಸ ವಾದ್ಯ, ವಿದೇಶಿ ವಾದ್ಯಗಳಲ್ಲಿ ಅಪ್ಪಟ ದೇಸಿ ನಾದದ ಕಂಪು ಹೊಮ್ಮಿ ನಾದಲೋಕ ದಿನೇದಿನೇ ಹೊಸ ಸಂಗೀತ ಭಾಷ್ಯ ಬರೆಯುತ್ತಿದೆ.

ಸಂಗೀತದಲ್ಲಿ ಪ್ರಯೋಗಶೀಲತೆ ಹೊಸ ಪರಿಕಲ್ಪನೆಯಲ್ಲ. ಷಡ್ಜದಿಂದ ನಿಷಾದದವರೆಗೆ ಸಪ್ತಸ್ವರಗಳು ಸಮೂಹಗಳಾಗಿ, ನಾದವಾಗಿ, ಗಾನವಾಗಿ ಕೇಳುಗರ ಹೃದಯ ತಟ್ಟುತ್ತದೆ. ಹಾಗೆ ನೋಡಿದರೆ ಸ್ಯಾಕ್ಸೊಫೋನ್‌, ಕ್ಲಾರಿಯೊನೆಟ್‌, ಗಿಟಾರ್‌, ವಯೊಲಿನ್‌, ಅಂಕ್ರಂಗ್‌.. ಇಷ್ಟೇ ಅಲ್ಲ ‍ಪಿಯಾನೊ, ಸ್ವರಬತ್‌, ಹಾರ್ಪ್‌ ಎಲ್ಲವೂ ವಿದೇಶಿ ಮೂಲದ ವಾದ್ಯಗಳೇ. ಈ ವಿದೇಶಿ ವಾದ್ಯದಲ್ಲಿ ನಮ್ಮ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತದ ರಾಗಗಳು ದಳದಳವಾಗಿ ಅರಳಿದರೆ ಅಲ್ಲಿ ಸುಂದರ ಭಾವಗುಚ್ಛವೇ ನಿರ್ಮಾಣವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT