ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Interview | ಹರಿಪ್ರಿಯಾ–ವಸಿಷ್ಠ ಜೋಡಿ ಕಥೆ

Published 2 ಜೂನ್ 2023, 0:43 IST
Last Updated 2 ಜೂನ್ 2023, 0:43 IST
ಅಕ್ಷರ ಗಾತ್ರ
ಹರಿಪ್ರಿಯಾ
ಪ್ರ

ಈ ಸಿನಿಮಾದಲ್ಲಿ ನಿಮ್ಮ ಪಾತ್ರವೇನು, ಎಷ್ಟು ಪ್ರಾಮುಖ್ಯವಿದೆ?

ಸಿನಿಮಾ ಒಪ್ಪಿಕೊಳ್ಳೋಕೆ ಮುಖ್ಯ ಕಾರಣವೇ ಚಿತ್ರಕಥೆ ಮತ್ತು ಪಾತ್ರದ ಪ್ರಾಮುಖ್ಯ. ಇಲ್ಲಿವರೆಗೂ ವಿಭಿನ್ನ ಪಾತ್ರಗಳನ್ನೇ ಮಾಡಿಕೊಂಡು ಬಂದಿರುವೆ. ಈ ಚಿತ್ರದಲ್ಲಿ ಪ್ರಿಯಾಂಕ ಎಂಬ ಪಾತ್ರ. ಆಕೆ ಉದ್ಯಮಿ. ಪಾತ್ರಕ್ಕೆ ತುಂಬ ಆಯಾಮಗಳಿವ, ಭಾವನೆಗಳಿವೆ. ಪ್ರೇಕ್ಷಕರಲ್ಲಿಯೂ ಭಾವನೆಗಳನ್ನು ಮೂಡಿಸುವ ಪಾತ್ರ. ಒಂದೇ ಸಲಕ್ಕೆ ಭಾವನೆಗಳು ಬದಲಾಗುವ ಸನ್ನಿವೇಶಗಳಿವೆ. ಹೀಗಾಗಿ ನಟನೆ ತುಂಬಾ ಸವಾಲಾಗಿತ್ತು. 

ಪ್ರ

ನಿಮ್ಮ ಪಾತ್ರ ಮೂಲ ಸಿನಿಮಾದ ‘ಸಮೀರಾ’ ಪಾತ್ರದಂತೆಯೇ ಇರುತ್ತದೆಯಾ?

ಮುಖ್ಯ ಎಳೆ ಆ ಸಿನಿಮಾದಂತೆ ಇರುತ್ತದೆ. ಆದರೆ ಈ ಚಿತ್ರ ಬೇರೆ ಬೇರೆ ಭಾಷೆಯಲ್ಲಿ ತೆರೆಕಂಡು ಯಶಸ್ವಿಯಾಗಿದೆ. ಅಲ್ಲೆಲ್ಲ ಬೇರೆ ರೀತಿ ಪ್ರೆಸೆಂಟ್‌ ಮಾಡಿದ್ದಾರೆ. ಕನ್ನಡದಲ್ಲಿ ಕೂಡ ನಮ್ಮ ಪ್ರಾದೇಶಿಕತೆಗೆ ಒತ್ತು ನೀಡಲಾಗಿದೆ. ನಮಗೆ ಕನೆಕ್ಟ್‌ ಆಗುತ್ತದೆ. ಒಂದಷ್ಟು ಸನ್ನಿವೇಶಗಳು ಮೂಲ ಸಿನಿಮಾದಂತೆ ಅತ್ಯಾಪ್ತತೆ ಕೇಳುತ್ತವೆ. ಇಲ್ಲಿವರೆಗೆ ಒಬ್ಬಳೇ ಬೋಲ್ಡ್‌ ಪಾತ್ರ ಮಾಡಿದ್ದೆ. ಜೊತೆಯಾಗಿ ಬೋಲ್ಡ್‌ ಪಾತ್ರ ಮಾಡಿರಲಿಲ್ಲ. ಹೀಗಾಗಿ ಮುಜುಗರ ಆಗಬಹುದು ಅನ್ನಿಸಿತು. ಇದರಿಂದ ಶೂಟಿಂಗ್‌ ತೊಂದರೆಯಾಗಬಹುದೆಂಬ ಭಾವನೆ ಬಂದಿತು. ಹೀಗೆ ಯೋಚನೆ ಮಾಡಿ ಈ ಪಾತ್ರವನ್ನು ಮಾಡುವಂತೆ ವಸಿಷ್ಠ ಸಿಂಹ ಅವರನ್ನು ಕೇಳಿಕೊಂಡೆ. 

ಪ್ರ

ರೀಲ್‌ನಲ್ಲಿ ಜೋಡಿಯಾಗಿ ಶೂಟಿಂಗ್‌ ಅನುಭವ ಹೇಗಿತ್ತು?

2016ರಿಂದ ನಮ್ಮಬ್ಬಿರ ಪರಿಚಯ. ಇಬ್ಬರಿಗೂ ಇಷ್ಟವಾಗಿದ್ದು ನಮ್ಮ ಕೆಲಸ. ಅವರು ಕಾಲೇಜಿನಿಂದಲೂ ನನ್ನ ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದಾರೆ. ನಂತರ ಸ್ನೇಹ ಪ್ರೇಮವಾಯಿತು. ಪ್ರೇಮಿಗಳಾಗಿ ಶೂಟಿಂಗ್‌ ಅನುಭವ ಮಜವಾಗಿತ್ತು. ನಮ್ಮಿಬ್ಬರ ಪ್ರೀತಿ ಹೊರಗಡೆಯವರಿಗೆ ತಿಳಿಯದಂತೆ ನಿಭಾಯಿಸುವುದು ಕಷ್ಟವಾಗಿತ್ತು. ಎಲ್ಲಿ ಮೂರನೆಯವರಿಗೆ ಗೊತ್ತಾಗಿಬಿಡುತ್ತದೆಯೋ ಎಂಬ ಭಯವಿತ್ತು. ಇಬ್ಬರ ನಡುವೆ ನಟನೆಯಲ್ಲಿ ಒಂದು ಆರೋಗ್ಯಯುತ ಪೈಪೋಟಿ ಇತ್ತು.

ಪ್ರ

ನಿಮ್ಮ ಮುಂದಿನ ಯೋಜನೆಗಳು?

ಉಪೇಂದ್ರ ಜೊತೆಗೆ ‘ಲಗಾಮು’ ಸಿನಿಮಾ ನಡೆಯುತ್ತಿದೆ. ‘ಬೆಲ್‌ಬಾಟಂ–2’ ಮುಹೂರ್ತವಾಗಿದೆ. ಹೊಸ ಸಿನಿಮಾಗಳ ಕಥೆ ಕೇಳುತ್ತಿದ್ದೇನೆ. ತುಂಬ ಚೆನ್ನಾಗಿರುವುದನ್ನು ಮಾತ್ರ ಒಪ್ಪಿಕೊಳ್ಳೋಣ ಎಂಬ ನಿರ್ಧಾರ ಮಾಡಿರುವೆ. ಇಷ್ಟು ವರ್ಷ ಜೀವನ ಸಿನಿಮಾವೇ ಆಗಿತ್ತು. ಈಗ ಕುಟುಂಬಕ್ಕೆ ಸ್ವಲ್ಪ ಸಮಯ ನೀಡೋಣ ಎಂದಿರುವೆ. 

ಪ್ರ

ಇಬ್ಬರೂ ಜೊತೆಗೂಡಿ ಬೇರೆ ಸಿನಿಮಾ ಮಾಡುವ ಆಲೋಚನೆ ಇದೆಯಾ?

ನಿರ್ಮಾಣ, ನಿರ್ದೇಶನದ ಆಲೋಚನೆಗಳಿವೆ. ಆದರೆ ತಕ್ಷಣ ಅಲ್ಲ. ಒಟ್ಟಿಗೆ ನಟಿಸಲು ತುಂಬ ಸ್ಕ್ರಿಪ್ಟ್‌ಗಳು ಬಂದಿವೆ. ಅದರಲ್ಲಿ ಒಂದೆರಡರ ಮೇಲೆ ಕೆಲಸ ನಡೆಯುತ್ತಿದೆ. ನಮ್ಮದೇ ಕನಸು, ಗುರಿ ಇದೆ. ಆ ರೀತಿಯ ಪಾತ್ರಗಳನ್ನು ಬಂದರೆ ಒಟ್ಟಿಗೆ ಮಾಡುತ್ತೇವೆ. 

ವಸಿಷ್ಠ ಸಿಂಹ
ಪ್ರ

ಸಿನಿಮಾದಲ್ಲಿ ನಿಮ್ಮ ಪಾತ್ರವೇನು, ಎಷ್ಟು ಪ್ರಾಮುಖ್ಯವಿದೆ?

ಪ್ರಮುಖ ಪಾತ್ರ. ಆದರೆ ನಾಯಕನ ಪಾತ್ರವಲ್ಲ. ಇವತ್ತಿನ ಶ್ರೀಮತಿ, ಆವತ್ತಿನ ಪ್ರೇಯಸಿಗಾಗಿ ಈ ಪಾತ್ರ ಒಪ್ಪಿಕೊಂಡಿದ್ದು. ಚಿತ್ರದಲ್ಲಿ ಒಂದಷ್ಟು ಬೋಲ್ಡ್‌ ಸನ್ನಿವೇಶಗಳಿವೆ. ಅದನ್ನು ಬೇರೆ ನಟರ ಜೊತೆ ಮಾಡಲು ಮುಜುಗರವಾಗುತ್ತೆ ಎಂಬ ಕಾರಣಕ್ಕೆ ಹರಿಪ್ರಿಯಾ ಈ ಪಾತ್ರವನ್ನು ಮಾಡುವಂತೆ ಒಪ್ಪಿಸಿದರು.

ಪ್ರ

ಇದು ‘ಎವರು’ ಚಿತ್ರದ ರೀಮೇಕ್‌. ಅದರಲ್ಲಿ ನಡೆಯುವ ದುರ್ಘಟನೆಗಳು ಇಲ್ಲಿಯೂ ಇವೆಯಾ?

ನಾನು ನೇರವಾದ ರೀಮೇಕ್‌ ಚಿತ್ರಗಳನ್ನು ಮಾಡುವುದಿಲ್ಲ. ಇದು ಪೂರ್ತಿ ರೀಮೇಕ್‌ ಅಲ್ಲ. ಅಲ್ಲಿನ ಕಥೆಯ ಎಳೆಯನ್ನು ಇಟ್ಟುಕೊಂಡು ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಈ ಚಿತ್ರದ ಬರವಣಿಗೆಯ ಭಾಗವೂ ಆಗಿದ್ದೇನೆ. ಹೀಗಾಗಿ ಇದು ನಮ್ಮ ನೆಲದ ಚಿತ್ರ ಎನ್ನಿಸುವಷ್ಟು ಸ್ವಂತಿಕೆ ಇಲ್ಲಿದೆ.

ಪ್ರ

ರೀಲ್‌ನಲ್ಲಿ ಜೋಡಿಯಾಗಿ ಶೂಟಿಂಗ್‌ ಅನುಭವ ಹೇಗಿತ್ತು?

ಇದೊಂಥರ ಖುಷಿಯ ಅನುಭವ. ಮೊದಲು ನಾವಿಬ್ಬರೂ ಸಮಯ ಹೊಂದಿಸಿಕೊಂಡು ಭೇಟಿ ಮಾಡುವುದು ಕಷ್ಟವಾಗುತ್ತಿತ್ತು. ಆದರೆ ಈ ಚಿತ್ರದಲ್ಲಿ ಇಬ್ಬರಿಗೂ ಒಟ್ಟಿಗೆ ಕಾಲ ಕಳೆಯಲು ಸಾಕಷ್ಟು ಸಮಯ ಸಿಕ್ಕಿತ್ತು. ಇಬ್ಬರಿಗೂ ಅತ್ಯಾಪ್ತತೆ ಇರುವುದರಿಂದ ಪಾತ್ರವಾಗಿ ಇಬ್ಬರ ಕೆಮಿಸ್ಟ್ರಿ ಇಲ್ಲಿ ಚೆನ್ನಾಗಿ ಕೆಲಸ ಮಾಡಿದೆ.

ಪ್ರ

ನಿಮ್ಮ ಮುಂದಿನ ಯೋಜನೆಗಳು?

‘ಲವ್ಲಿ’ ಸಿನಿಮಾ ಬಹುತೇಕ ಮುಗಿದಿದೆ. ಲಂಡನ್‌ ಚಿತ್ರೀಕರಣದ ಭಾಗವಷ್ಟೆ ಬಾಕಿಯಿದೆ. ‘ಕಾಲಚಕ್ರ’ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಇನ್ನೊಂದಷ್ಟು ಸಿನಿಮಾಗಳು ಪ್ರಾರಂಭಿಕ ಹಂತದಲ್ಲಿವೆ. 

ಪ್ರ

ನಟನೆ ಜೊತೆಗೆ ಉತ್ತಮ ಗಾಯಕರು ಕೂಡ. ಗಾಯನ ಕ್ಷೇತ್ರದಲ್ಲಿನ ಕೆಲಸ ಹೇಗಿದೆ?

ತುಂಬ ಇಷ್ಟವಾಗಿದ್ದನ್ನು ಅಥವಾ ಈ ಗೀತೆಗೆ ನನ್ನದೇ ಧ್ವನಿ ಬೇಕು ಎಂಬಂತಹ ಗೀತೆಗಳನ್ನು ಮಾತ್ರ ಹಾಡುತ್ತೇನೆ. ಇಲ್ಲವಾದಲ್ಲಿ ಹೊಸಬರಿಗೆ ಪ್ರೋತ್ಸಾಹ ನೀಡುವಂತಹ, ನನ್ನಿಂದ ಹೊಸ ತಂಡಕ್ಕೆ ಉಪಯೋಗವಾಗುವಂತಹ ಗೀತೆಗಳನ್ನು ಹಾಡುತ್ತೇನೆ. ‘ಯದಾ ಯದಾ ಹಿ’ ಟೈಟಲ್‌ ಟ್ರ್ಯಾಕ್‌ ಅನ್ನು ನಾನು ಮತ್ತು ಹರಿಪ್ರಿಯ ಒಟ್ಟಿಗೆ ಹಾಡಿದ್ದೇವೆ. ‘ರಕ್ತಾಕ್ಷ ’ ಸಿನಿಮಾದ ಟೈಟಲ್‌ ಟ್ರ್ಯಾಕ್‌ ಹಾಡಿರುವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT