ಸೋಮವಾರ, ಜನವರಿ 18, 2021
25 °C

70ನೇ ವಸಂತದ ಹೊಸ್ತಿಲಲ್ಲಿ ನಟಿ ಗಿರಿಜಾ ಲೋಕೇಶ್‌

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

Prajavani

ಹೌದು ಎಪ್ಪತ್ತು ಹತ್ತಿರವಾಯ್ತಲ್ಲಾ. ಅಭಿನಯಿಸಿದ ನಾಟಕ– ಜೀವನ ನಾಟಕ ಎಲ್ಲದರಲ್ಲೂ ತುಂಬಾ ಖುಷಿಪಟ್ಟಿದ್ದೇನೆ...

70ನೇ ವಸಂತದ ಹೊಸ್ತಿಲಲ್ಲಿರುವ ನಟಿ ಗಿರಿಜಾ ಲೋಕೇಶ್‌ ‘ಪ್ರಜಾಪ್ಲಸ್‌’ ಜತೆಗೆ ಮಾತು ಮುಂದುವರಿಸಿದರು. ಅದನ್ನು ಅವರ ಮಾತುಗಳಲ್ಲೇ ಕೇಳೋಣ.

ಆ ಬಾಲ್ಯ: ತಂದೆ ಪುಟ್ಟಸ್ವಾಮಿ ಅವರು ಏಲಕ್ಕಿ ವ್ಯಾಪಾರ ಮಾಡುತ್ತಿದ್ದರು. ಅದು ಸಂಪೂರ್ಣ ನಷ್ಟವಾದಾಗ ನಾವು ಅಕ್ಷರಶಃ ಬೀದಿಗೆ ಬಂದ ಪರಿಸ್ಥಿತಿ. ಆದರೆ ನಮ್ಮ ಅಮ್ಮ ನಮಗೆ ಎಲ್ಲ ವಿದ್ಯೆಯನ್ನೂ ಕಲಿಸಿದರು. ನೃತ್ಯ, ಸಂಗೀತ, ಈಜು, ಸೈಕ್ಲಿಂಗ್‌... ಹೀಗೆ. ಆದರೆ, ನಾನು ಎಲ್ಲವನ್ನೂ ಕಲಿಯಲಿಲ್ಲ. ಭರತನಾಟ್ಯ ಕಲಿತೆ. ಇದು ನನ್ನ ಅನ್ನದ ದಾರಿಯಾಗುತ್ತದೆ ಎಂಬುದನ್ನು ಊಹಿಸಿರಲಿಲ್ಲ.

ದೋಸೆ, ತರಕಾರಿ ಮಾರಿದ್ದು: ಬದುಕೇ ಮುಖ್ಯ. ಬದುಕಿಗೆ ಬೆನ್ನು ಹಾಕಿ ಹೋಗಬಾರದು. ನಾವು ಮಾಡದ ಕೆಲಸ ಇರಲಿಲ್ಲ. ಮಾರುಕಟ್ಟೆಯಿಂದ ತರಕಾರಿ ತಂದು ಮಾರೋದು. ಅಮ್ಮ ದೋಸೆ ಮಾಡಿ ಕೊಡುತ್ತಿದ್ದರು. ಅಣ್ಣ ಅದನ್ನು ಬಸ್‌ ನಿಲ್ದಾಣ, ರೈಲ್ವೆ ಸ್ಟೇಷನ್‌ನಲ್ಲಿ ಮಾರಲು ಹೋಗುತ್ತಿದ್ದ. ದೋಸೆ ಮಾರಾಟವಾಗದೆ ವಾಪಸಾದ ದಿನ ನಮಗೆ ಖುಷಿಯೋ ಖುಷಿ. ಆದರೆ, ದೋಸೆ ಮಾರಾಟವಾಗದ ಸಂಕಟ ಅಮ್ಮನಿಗಷ್ಟೇ ಗೊತ್ತಿತ್ತು. ಇದು ನಮ್ಮ ಬಾಲ್ಯ.

ಬಳಿಕ ನಾನು ನಾಟಕ ಕಂಪನಿ ಸೇರಿದೆ. ನಾನು ದುಡಿದಿದ್ದರಲ್ಲಿ ಸ್ವಲ್ಪ ಮನೆಗೆ ಹೋಗುತ್ತಿತ್ತು. ಹೆಚ್ಚುಪಾಲು ಅಪ್ಪನ ಕೈಗೆ ಹೋಗುತ್ತಿತ್ತು. ಆರಂಭದಲ್ಲಿ ನೃತ್ಯ ಮಾಡಲು ಹೋದರೆ 7 ರೂಪಾಯಿ ಕೊಡುತ್ತಿದ್ದರು. ಆ ಮೇಲೆ 15 ರೂಪಾಯಿ ಕೊಡಲು ಶುರು ಮಾಡಿದರು. ಅದು ನಮ್ಮ ಜೀವನ ನಿರ್ವಹಣೆಗೆ ಸಾಕಾಗುತ್ತಿತ್ತು.

ಗಿರಿಜಾ ಬದುಕಿನಲ್ಲಿ ಲೋಕೇಶ್‌: ಮುಂದಿನ ಜನ್ಮ ಇದ್ದರೆ ಅಲ್ಲಿಯೂ ಲೋಕೇಶ್‌ ನನ್ನವರಾಗಿ ಸಿಗಬೇಕು. ಈ ಜನ್ಮದಲ್ಲಿ ಅವರು ನನ್ನ ಗಂಡ ಆಗಿದ್ದರು ಎನ್ನುವುದು ಅವರಿಗೆ, ಅವರ ಹೆಂಡತಿಯಾಗಿದ್ದೆ ಎನ್ನುವುದು ನನಗೆ ನೆನಪಾಗಬೇಕು.

ಲೋಕೇಶ್‌ ಎಂದರೆ, ‘ಎಲ್ಲರಂಥವನಲ್ಲ ನನ್ನ ಗಂಡ’ ಅನ್ನುತ್ತಾರಲ್ಲಾ ಹಾಗೆ. ನಾನು ತಪ್ಪು ಮಾಡಿದಾಗ ಅವರು ಕ್ಷಮಿಸಿದ್ದರು. ಶೂಟಿಂಗ್‌, ನಾಟಕದ ಸಂದರ್ಭದಲ್ಲಾದ ಘಟನೆಗಳನ್ನು ಹೇಳಿಕೊಂಡಾಗ ಅವರು ಒಳ್ಳೆಯ ಭಾವನೆಯಿಂದಲೇ ಸ್ವೀಕರಿಸುತ್ತಿದ್ದರು. ‘ಸಾಮ್ರಾಟ್‌ ಅಶೋಕ’ ಲೋಕೇಶ್‌ ಅವರ ಜತೆ ನಟಿಸಿದ ಮೊದಲ ನಾಟಕ. ಆ ಷೋ ಮುಗಿದಾಗ ನನಗೆ 30 ರೂಪಾಯಿ ಸಂಭಾವನೆ ಕೊಟ್ಟಿದ್ದರು.

ಕಾಪು ಕಡೆಗೆ ತಲೆ ಹಾಕಲಿಲ್ಲ: ಒಮ್ಮೆ ಉಡುಪಿ ಸಮೀಪ ಕಾಪುವಿನಲ್ಲಿ ನನ್ನ ನೃತ್ಯ ಕಾರ್ಯಕ್ರಮವಿತ್ತು. ಬೆಂಗಳೂರಿನ ಕಲಾವಿದೆ ಗಿರಿಜಾ ಅವರಿಂದ ಓರಿಯಂಟಲ್‌ ಡ್ಯಾನ್ಸ್‌ ಎಂದು ದೊಡ್ಡ ಬ್ಯಾನರ್‌ ಹಾಕಿದ್ದರು. ನನಗೆ ಖುಷಿಯೋ ಖುಷಿ. ಆದರೆ ನನಗೆ ಓರಿಯಂಟಲ್‌ ಡ್ಯಾನ್ಸ್‌ ಎಂದರೇನೆಂದೇ ಗೊತ್ತಿರಲಿಲ್ಲ. ನಾನು ಕಲಿತದ್ದು ಭರತನಾಟ್ಯ. ಒಂದು ಷೋ ಎಂದರೆ ಮೂರು ನೃತ್ಯ. ಬಳಿಕ ಇನ್ನೊಂದು ಪ್ರದರ್ಶನಕ್ಕೆ ಸಿದ್ಧಳಾಗಬೇಕಿತ್ತು. ಹೀಗೆ ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕುಣಿದಿದ್ದೇನೆ! ಆವತ್ತಿನಿಂದ ಇಂದಿನವರೆಗೂ ಕಾಪು ಕಡೆಗೆ ತಲೇನೇ ಹಾಕಿಲ್ಲ.

ಮಕ್ಕಳು ಕಲಾ ಬದುಕನ್ನು ಸದ್ಯ ಚೆನ್ನಾಗಿಯೇ ನಡೆಸಿಕೊಳ್ಳುತ್ತಿದ್ದಾರೆ. ಮಗ ಸೃಜನ್‌ ಲೋಕೇಶ್‌ ಚೆನ್ನಾಗಿಯೇ ಓದುತ್ತಿದ್ದ. ಬಾಲಾಜಿ ಟೆಲಿಫಿಲ್ಮ್ಸ್‌ನ ‘ಇತಿಹಾಸ’ ಧಾರಾವಾಹಿಗೆ ಅವನು ಆಯ್ಕೆಯಾದ. ಆಗ ನನಗೆ ಕೋಪ ಬಂದಿತ್ತು. ಈಗ ಅವನು ಕಲಾ ಕ್ಷೇತ್ರದಲ್ಲಿ ಬೆಳೆದಿದ್ದಾನೆ. ನನ್ನ ಎರಡನೇ ಮೊಮ್ಮಗ ನೃತ್ಯ ಕಲೆ ಹಚ್ಚಿಕೊಂಡಿದ್ದಾನೆ. ಆದರೆ, ಯಾರೇ ಆದರೂ ಒಳ್ಳೆಯ ಶಿಕ್ಷಣ ಪಡೆದೇ ಈ ಕ್ಷೇತ್ರಕ್ಕೆ ಬರಬೇಕು.

ನಮ್ಮ ಮಾವನವರ ಕಾಲದಲ್ಲೇ ಆ ರಂಗ ವೇದಿಕೆ, ವೈಭವ ನೋಡಿದರೆ ಅದರಲ್ಲೊಂದು ಪರ್ಫೆಕ್ಷನ್‌ ಇತ್ತು. ಮುಂದೆ ನಮ್ಮ ಕಾಲದಲ್ಲಿ ಹಿನ್ನೆಲೆಯಾಗಿ ಒಂದು ನೀಲಿ ಪರದೆ ಹಾಕಿ ಅದರ ಮುಂದೆ ನಾಟಕ ಆಡುತ್ತಿದ್ದೆವು. ಆಮೇಲೆ ಆಧುನಿಕ ಎಂಬಂತೆ ಬರೀ ಫ್ರೇಮ್‌ ಇಟ್ಟು (ಕಿಟಕಿ– ಬಾಗಿಲು ಎಂದು ಭಾಸವಾಗುವಂತೆ) ನಾಟಕ ಆಡುತ್ತಿದ್ದಾರೆ. ಆವಾಗ ಎಲ್ಲರೂ ಕಷ್ಟಪಡುತ್ತಿದ್ದರು. ಈಗ ಎಲ್ಲವೂ ಸುಲಭ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು