ಭಾನುವಾರ, ಮಾರ್ಚ್ 26, 2023
31 °C

ಇತಿ ನಿಮ್ಮ ಪ್ರೀತಿಯ ಕನ್ನಡತಿ

ಪದ್ಮನಾಭ ಭಟ್ Updated:

ಅಕ್ಷರ ಗಾತ್ರ : | |

Prajavani

ಅವಳು ಬಿಂದಾಸ್‌ ಹುಡುಗಿ. ಆಕ್ಟೀವಾ ಬೈಕ್‌ನಲ್ಲಿ ಸುಯ್ಯನೇ ಬರುತ್ತಿದ್ದಾಳೆ. ಎದುರಿಗೆ ಕುರುಡನೊಬ್ಬ ಬರುತ್ತಾನೆ. ಸರಕ್ಕನೆ ಬ್ರೇಕ್‌ ಹಾಕಿ ಬೈಕ್‌ ನಿಲ್ಲಿಸಿ ಸಿಟ್ಟಿನಿಂದ ಡೈಲಾಗ್‌ ಹೇಳಬೇಕು.

ಇದು ‘ಕವಚ’ ಚಿತ್ರದ ಒಂದು ದೃಶ್ಯ. ಈ ದೃಶ್ಯಕ್ಕೆ ಆ್ಯಕ್ಷನ್‌ ಹೇಳುವಷ್ಟರಲ್ಲಿ ಆಕ್ಟೀವಾದಲ್ಲಿ ಬಂದು ಬೈಯಬೇಕಾಗಿದ್ದ ಹುಡುಗಿಯೇ ಹೆದರಿಕೆಯಲ್ಲಿ ಬೆವತು ಹೋಗಿದ್ದಳು. ಕೈಗಳು ಕಂಪಿಸುತ್ತಿದ್ದವು. ಕಾರಣ ಎದುರಿಗೆ ಕುರುಡನ ಪಾತ್ರದಲ್ಲಿ ಇದ್ದಿದ್ದು ಶಿವರಾಜ್‌ಕುಮಾರ್. ಅವನಿಗೆ ಬೈಯಬೇಕಾದ ಹುಡುಗಿ ಇತಿ ಆಚಾರ್ಯ.

‘ಮೊದಲ ದಿನವೇ ಶಿವರಾಜ್‌ಕುಮಾರ್‌ ಅವರ ಜತೆ ನಟಿಸಬೇಕಾಗಿದ್ದರಿಂದ ಭಯವಾಗಿಬಿಟ್ಟಿತ್ತು. ಅವರು ಸೂಪರ್‌ಸ್ಟಾರ್‌. ನಾನೋ ನಿನ್ನೆ ಮೊನ್ನೆ ನಟನೆಗೆ ಶುರುಮಾಡಿದವಳು. ಅವರ ಎದುರು ನಾನು ಏನೇನೂ ಅಲ್ಲ. ಹೇಗೆ ವರ್ತಿಸುತ್ತಾರೋ ಏನೋ ಎಂದು ಮನಸಲ್ಲಿಯೇ ಚಡಪಡಿಸುತ್ತಿದ್ದೆ. ಆದರೆ ನನ್ನ ಭಯವನ್ನೆಲ್ಲ ದೂರಗೊಳಿಸುವಂತೆ ಶಿವರಾಜ್‌ಕುಮಾರ್‌ ತುಂಬ ಅಕ್ಕರೆಯಿಂದ ಮಾತನಾಡಿಸಿದರು. ನಟನೆಯ ಹಲವು ಟಿಪ್ಸ್‌ ಕೊಟ್ಟರು. ಮತ್ತೊಂದು ದೃಶ್ಯದಲ್ಲಿ ನಾನು ಡಾನ್ಸ್‌ ಸ್ಟೆಪ್‌ ಬರದೆ ಒದ್ದಾಡುತ್ತಿದ್ದಾಗ ಹೆಣ್ಣಿನ ಡಾನ್ಸ್‌ ಸ್ಟೆಪ್‌ ಕೂಡ ಅವರೇ ಹೇಳಿಕೊಟ್ಟರು. ಅವರು ಸೂಪರ್‌ಸ್ಟಾರ್‌ ಆಗಿದ್ದು ಹೇಗೆ ಎಂದು ಆವಾಗ ನನಗೆ ಗೊತ್ತಾಯ್ತು’ ಎಂದು ತಮ್ಮ ಅನುಭವವನ್ನು ಹೆಮ್ಮೆಯಿಂದಲೂ ಪುಲಕದಿಂದಲೂ ನೆನಪಿಸಿಕೊಳ್ಳುತ್ತಾರೆ ಇತಿ.

ರಾಜಸ್ಥಾನದಲ್ಲಿ ಹುಟ್ಟಿ, ಪಂಜಾಬ್‌ನಲ್ಲಿಯೂ ಕೆಲಕಾಲ ವಾಸಮಾಡಿ ನಂತರ ಬೆಂಗಳೂರಿಗೆ ಬಂದು ಫ್ಯಾಷನ್‌ ಡಿಸೈನ್‌ ಕೋರ್ಸ್‌ ಮುಗಿಸಿದ ಇವರಿಗೆ ಕಾಲೇಜು ದಿನಗಳಲ್ಲಿಯೇ ಮಾಡೆಲಿಂಗ್‌ ಸಖ್ಯ ಬೆಳೆದಿತ್ತು. ಜಾಹೀರಾತು ಆಡಿಷನ್‌ ಒಂದರಲ್ಲಿ ಪಾಲ್ಗೊಳ್ಳಲು ಬಂದಿದ್ದ ಇತಿ, ಕನ್ನಡದ ನಿರ್ದೇಶಕರೊಬ್ಬರ ಕಣ್ಣಿಗೆ ಬಿದ್ದು ನಟನಾವೃತ್ತಿಯತ್ತ ಹೊರಳಿಕೊಂಡರು.

ಕಳೆದ ನಾಲ್ಕೈದು ವರ್ಷಗಳಿಂದ ನಟನೆಯಲ್ಲಿ ತೊಡಗಿಕೊಂಡಿರುವ ಇವರು, ತೆಲುಗು, ಮಲಯಾಳಂ, ಹಿಂದಿ, ತಮಿಳು ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇಷ್ಟೆಲ್ಲ ಆಗಿಯೂ ‘ಸ್ಯಾಂಡಲ್‌ವುಡ್‌ ನನ್ನ ಫೆವರೆಟ್‌’ ಎನ್ನುತ್ತಾರೆ ಅವರು.

‘ಕೆಜಿಎಫ್‌ ಸಿನಿಮಾ ಬಂದ ಮೇಲಂತೂ ನಾನು ಕನ್ನಡದ ನಟಿ ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತಿದೆ. ಆ ಸಿನಿಮಾವನ್ನು ನಾನು ರಾಜಸ್ಥಾನ, ಮುಂಬೈ, ಬೆಂಗಳೂರು, ದೆಹಲಿಗಳಲ್ಲಿ ನೋಡಿದ್ದೇನೆ. ಎಲ್ಲ ಕಡೆಗಳಲ್ಲಿಯೂ ಪ್ರೇಕ್ಷಕರ ಸ್ಪಂದನ ಅಷ್ಟೇ ಅದ್ಭುತವಾಗಿದೆ. ಕನ್ನಡದ ಸಿನಿಮಾವೊಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಹೆಮ್ಮೆ ಅಲ್ಲವೇ?’ ಎಂದು ಅಭಿಮಾನದಿಂದ ಕೇಳುತ್ತಾರೆ ಅವರು. ಕೆಜಿಎಫ್‌ ರೀತಿಯ ಬಹುಭಾಷೆ, ಗುಣಮಟ್ಟದ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವುದು ಅವರ ಕನಸೂ ಹೌದು.

‘ಸಿನಿಮಾ ನನಗೆ ಹವ್ಯಾಸ ಅಷ್ಟೇ ಅಲ್ಲ; ವ್ಯಸನದ ರೀತಿ ಆಗಿಬಿಟ್ಟಿದೆ. ಸಿನಿಮಾಗೆ ನಾನು ಅಡಿಕ್ಟ್‌ ಆಗಿದ್ದೇನೆ. ಶೂಟಿಂಗ್‌ ಇಲ್ಲದೆ ಬಿಡುವಾಗಿದ್ದಾಗಲೆಲ್ಲ ಸಿನಿಮಾ ನೋಡುತ್ತೇನೆ. ಶ್ರದ್ಧಾ ಶ್ರೀನಾಥ್‌ ರೀತಿ ಸಿನಿಮಾ ಮಾಡಬೇಕು. ರಶ್ಮಿಕಾ ಮಂದಣ್ಣ ಮಾಡುವಂಥ ಪಾತ್ರಗಳನ್ನು ಮಾಡಬೇಕು. ‘ಟಗರು’ ಚಿತ್ರದಲ್ಲಿ ಮಾನ್ವಿತಾ ಮಾಡಿದ ಪಾತ್ರಕ್ಕೆ ಎಷ್ಟೆಲ್ಲ ಶೇಡ್‌ಗಳಿವೆಯಲ್ಲ, ಅಂಥ ಪಾತ್ರಗಳಲ್ಲಿ ನಟಿಸುವುದು ಯಾವಾಗ?’ ಹೀಗೆ ಕನಸು ಕಾಣುತ್ತಿರುತ್ತೇನೆ’ ಅದು ಬಿಟ್ಟು ಬೇರೆ ಯೋಚನೆಯೇ ಇಲ್ಲ ನನಗೆ’ ಎನ್ನುವ ಇತಿಗೆ ಡಾನ್ಸ್‌, ಫ್ಯಾಷನ್‌, ಪ್ರವಾಸ ಮತ್ತು ಫೋಟೊಗ್ರಫಿಯಲ್ಲಿಯೂ ಆಸಕ್ತಿ ಇದೆ. ಆದರೆ ಈ ಆಸಕ್ತಿಯ ಉದ್ದೇಶವೂ ನಟನೆಗೆ ಪೂರಕವಾಗಿಯೇ ಇದೆ.

ಸದ್ಯಕ್ಕೆ ಶ್ರೀವತ್ಸ ಅವರ ಚಿತ್ರವೊಂದರಲ್ಲಿ ನಟಿಸುತ್ತಿರುವ ಇತಿ ಅವರ ತೆಲುಗು ಚಿತ್ರವೊಂದು ಬಿಡುಗಡೆಗೆ ಸಜ್ಜಾಗಿದೆ. ಬೇರೆ ಬೇರೆ ಬಗೆಯ ಅಭಿನಯಗಳಿಗೆ ಅವಕಾಶ ಇರುವ ಪಾತ್ರಗಳಲ್ಲಿ ನಟಿಸಬೇಕು ಎನ್ನುವ ಕನಸು ಅವರಿಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು