ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗ್ಗೇಶ್ ಪಿಸ್ತೂಲು ಬಿಟ್ರು, ಚಾಕ್‌ಪೀಸ್‌ ಹಿಡ್ಕೊಂಡ್ರು!

Last Updated 14 ಡಿಸೆಂಬರ್ 2018, 9:42 IST
ಅಕ್ಷರ ಗಾತ್ರ

ಕೆಲವೇ ತಿಂಗಳುಗಳ ಹಿಂದೆ ‘8 ಎಂ.ಎಂ’ ಪಿಸ್ತೂಲು ಹಿಡಿದಿದ್ದ ನವರಸ ನಾಯಕ ಜಗ್ಗೇಶ್ ಈಗ ಪಿಸ್ತೂಲು ಸಾಕು ಎಂದು ಚಾಕ್‌ ಪೀಸ್ ಹಿಡಿದುಕೊಂಡಿದ್ದಾರೆ! ತಬರನೊಬ್ಬ ಬಂಡೇಳುವ ಕಥೆ ಜಗ್ಗೇಶ್ ಅವರ ‘8 ಎಂ.ಎಂ’ ಸಿನಿಮಾದಲ್ಲಿ ಇತ್ತು.

ಈಗ ಜಗ್ಗೇಶ್ ಅವರ ಹೊಸ ಸಿನಿಮಾ ಸೆಟ್ಟೇರಿದೆ. ಅದರು ಹೆಸರು ‘ಕಾಳಿದಾಸ ಕನ್ನಡ ಮೇಷ್ಟ್ರು’. ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಕವಿರಾಜ್. ಜಗ್ಗೇಶ್ ಇದರಲ್ಲಿ ಸರ್ಕಾರಿ ಶಾಲೆಯಲ್ಲಿ ಪಾಠ ಮಾಡುವ ಕನ್ನಡ ಮೇಷ್ಟ್ರು. ಹಾಗಾಗಿ ಅವರ ಕೈಯಲ್ಲಿ ಈಗ ಚಾಕ್‌ ಪೀಸ್‌ ಬಂದಿದೆ.

ಚಿತ್ರದ ಮುಹೂರ್ತ ಮುಗಿದ ನಂತರ ಹೊಸ ಸಿನಿಮಾ ತಂಡ ಜಗ್ಗೇಶ್ ಜೊತೆ ಸುದ್ದಿಗಾರರೊಂದಿಗೆ ಮಾತಿಗೆ ಕುಳಿತಿತ್ತು. ಈ ಸಿನಿಮಾದಲ್ಲಿ ಇರುವ ಕಥೆಯ ಎಳೆಯೊಂದಕ್ಕೂ, ಜಗ್ಗೇಶ್ ಜೀವನದಲ್ಲಿ ನಡೆದ ಘಟನೆಯೊಂದಕ್ಕೂ ಸಂಬಂಧ ಇದೆ. ಅದನ್ನು ಜಗ್ಗೇಶ್ ಅವರೇ ವಿವರಿಸಿದರು.

‘ಬಹುತೇಕ ಪಾಲಕರಿಗೆ ತಮ್ಮ ಮಕ್ಕಳು ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧಿಸುವ ದೊಡ್ಡ ಶಾಲೆಗಳಲ್ಲಿ ಓದಲಿ ಎಂಬ ಬಯಕೆ ಇರುತ್ತದೆ. ನನ್ನ ದೊಡ್ಡ ಮಗನನ್ನು ದೊಡ್ಡ ಶಾಲೆಯೊಂದಕ್ಕೆ ಸೇರಿಸಬೇಕು ಎಂದು ಹಿಂದೆ ನನ್ನ ಪತ್ನಿ ಕೂಡ ಒತ್ತಾಯ ಮಾಡಿದ್ದಳು. ಆ ವಿಚಾರವಾಗಿ ಆಕೆ ನನಗೆ ಚಿಕ್ಕದಾಗಿ ಒಂದು ಕ್ಲಾಸ್‌ ಕೂಡ ಮಾಡಿದ್ದಳು. ಆಕೆ ಮಗನನ್ನು ಸೇರಿಸಬೇಕು ಎಂದು ತೀರ್ಮಾನಿಸಿದ್ದ ಶಾಲೆಗೆ ಡೊನೇಷನ್ ರೂಪದಲ್ಲಿ ₹ 2 ಲಕ್ಷ ಕೊಡಬೇಕಿತ್ತು. ಅದಾದ ನಂತರ ₹ 15 ಸಾವಿರ ಶುಲ್ಕ ಪಾವತಿಸಬೇಕಿತ್ತು’ ಎಂದು ಜಗ್ಗೇಶ್ ತಮ್ಮ ಹಳೆಯ ದಿನಗಳನ್ನು ವಿವರಿಸಲು ಆರಂಭಿಸಿದರು.

‘ಆ ಸಂದರ್ಭದಲ್ಲಿ ನಿರ್ದೇಶಕ ರಾಘವೇಂದ್ರ ರಾವ್ ಅವರು ನಮ್ಮ ಮನೆಗೆ ಬಂದರು. ಅವರ ಸಿನಿಮಾದಲ್ಲಿ ನಟಿಸುವಂತೆ ಕೇಳಿದರು. ನಾನು, ಇಂತಿಷ್ಟು ಹಣವನ್ನು ಒಂದೇ ಬಾರಿಗೆ ಪಾವತಿಸಿದರೆ ನಟಿಸುವೆ ಎಂದು ಹೇಳಿದೆ. ಏಕೆಂದರೆ ಆಗ ಶಾಲೆಗೆ ಕೊಡಲು ಹಣ ಬೇಕಿತ್ತು. ಅವರು ಹಣ ಕೊಟ್ಟರು. ನಾನು ಅದನ್ನು ಬಳಸಿ ಶಾಲೆಯ ಶುಲ್ಕ, ಡೊನೇಷನ್ ಮೊತ್ತ ಭರಿಸಿದೆ. ಇದನ್ನೇ ವಿವರಿಸುವ ಎಳೆಯೊಂದು ಈ ಸಿನಿಮಾದಲ್ಲಿ ಇದೆ. ತನ್ನ ಮಕ್ಕಳ ಶಿಕ್ಷಣಕ್ಕಾಗಿ ಬಹುದೊಡ್ಡ ಮೊತ್ತವನ್ನು ಒಂದೇ ಬಾರಿಗೆ ಪಾವತಿಸುವ ಸಂದರ್ಭ ಎದುರಾದಾಗ ಮನುಷ್ಯ ಹೇಗಾಗುತ್ತದೆ ಎನ್ನುವುದು ಸಿನಿಮಾದಲ್ಲಿ ಇದೆ’ ಎಂದರು ಜಗ್ಗೇಶ್.

ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದು ಹೇಗೆ ಎಂಬುದು ಈ ಚಿತ್ರದ ಕಥೆ. ಹಾಗೆಯೇ, ‘ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಕೊಡಿ. ಆಗ ಅವನು ದೇಶವನ್ನೇ ಸಾಕುತ್ತಾನೆ’ ಎನ್ನುವ ಸಂದೇಶ ಕೂಡ ಇದೆ ಎಂದೂ ಅವರು ಹೇಳಿದರು.

‘ಜಾಗತೀಕರಣದ ಈ ಸಂದರ್ಭದಲ್ಲಿ ನಮ್ಮೆಲ್ಲರ ಜೀವನವನ್ನು ಬೇರೆ ಯಾರೋ ನಿರ್ದೇಶಿಸುತ್ತಿದ್ದಾರೆ. ನಾವು ನಮ್ಮ ಜೀವನವನ್ನು ನಮಗೆ ಬೇಕಾದಂತೆ ಬದುಕುತ್ತಿಲ್ಲ. ಶಿಕ್ಷಣ ಕ್ಷೇತ್ರದಲ್ಲೂ ಇದೇ ಆಗುತ್ತಿದೆ. ನಾವೆಲ್ಲ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲೇ ಓದಬೇಕಾದ ಸ್ಥಿತಿಯನ್ನು ಬೇರೆ ಯಾರೋ ನಿರ್ಮಿಸುತ್ತಿದ್ದಾರೆ. ಇವೆಲ್ಲ ಮಾರುಕಟ್ಟೆಯ ತಂತ್ರಗಾರಿಕೆಗಳು’ ಎಂದರು ಕವಿರಾಜ್.

ಮಕ್ಕಳ ಶಾಲಾ ಶಿಕ್ಷಣದ ಬಗ್ಗೆ ಪಾಲಕರು ಆಲೋಚಿಸುವಂತೆ ಮಾಡುತ್ತದೆ ಈ ಸಿನಿಮಾ ಎಂಬುದು ಕವಿರಾಜ್ ಅವರಲ್ಲಿನ ಭರವಸೆ. ಗುರುಕಿರಣ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಿನಿಮಾ ಚಿತ್ರೀಕರಣ ಬೆಂಗಳೂರು ಹಾಗೂ ಸುತ್ತಮುತ್ತ ನಡೆಯಲಿದೆ. ಮೇಘಾ ಗಾಂವ್ಕರ್‌ ಅವರು ಇದರಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನು ಪ್ರತಿಪಾದಿಸುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

*
ಈ ಚಿತ್ರದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕನ ಪಾತ್ರ ಮಾಡುತ್ತಿದ್ದೇನೆ. ನಾನು ಮೂರು ದಶಕಗಳಿಂದ ಬಣ್ಣದ ಲೋಕದಲ್ಲಿ ಇದ್ದೇನೆ. ಒಂದೇ ಬಗೆಯ ಪಾತ್ರಗಳನ್ನು ಮಾಡಲು ಮನಸ್ಸಿಲ್ಲ. ಬೇರೆ ಬೇರೆ ರೀತಿಯ ಪಾತ್ರಗಳನ್ನು ನಾನು ಮಾಡಬೇಕಿದೆ.
– ಜಗ್ಗೇಶ್, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT