ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇಮ್ಸ್‌ ಬಿಡುಗಡೆಪೂರ್ವ ಕಾರ್ಯಕ್ರಮ: ಪುನೀತ್‌ ನೆನೆದು ಭಾವುಕರಾದ ಅಣ್ಣಂದಿರು

ಅಪ್ಪು ನೆನಪು
Last Updated 14 ಮಾರ್ಚ್ 2022, 10:43 IST
ಅಕ್ಷರ ಗಾತ್ರ

ಕರ್ನಾಟಕದ ಸೇರಿದಂತೆ ವಿಶ್ವದ ಹಲವೆಡೆ, ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಜೇಮ್ಸ್‌’ ಚಿತ್ರದ ಬಿಡುಗಡೆಗೆ ಅದ್ಧೂರಿ ಸಿದ್ಧತೆ ಆರಂಭವಾಗಿದೆ. ಮಾರ್ಚ್‌ 17ರಂದು ಪುನೀತ್‌ ಅವರ ಜನ್ಮದಿನದಂದೇ ಚಿತ್ರವು ತೆರೆಕಾಣುತ್ತಿದೆ. ಚಿತ್ರದ ಬಿಡುಗಡೆಪೂರ್ವ ಸಮಾರಂಭವು ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದು, ಪ್ರೀತಿಯ ತಮ್ಮನನ್ನು ನೆನೆದು, ನಟರಾದ ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಶಿವರಾಜ್‌ಕುಮಾರ್‌ ಭಾವುಕರಾದರು.

ವೇದಿಕೆಯಲ್ಲಿ ಭಾವುಕರಾಗಿಯೇ ಮಾತು ಆರಂಭಿಸಿದ ರಾಘವೇಂದ್ರ ರಾಜ್‌ಕುಮಾರ್‌, ‘ಚೆನ್ನಾಗಿ ಓಡುತ್ತಿದ್ದ ಗಾಡಿಯನ್ನು ದೇವರು ಹೇಗೆ ನಿಲ್ಲಿಸಿಬಿಟ್ಟ ನೋಡಿ. ನಾನು ಕುಂಟಿಕೊಂಡು ಓಡಾಡುತ್ತಿದ್ದೇನೆ. ಆದರೆ ದೇವರು ನನ್ನನ್ನು ಇನ್ನೂ ಇಟ್ಟುಕೊಂಡಿದ್ದಾನೆ. ಹೃದಯಾಘಾತವಾಗಿ, ಪೇಸ್‌ಮೇಕರ್‌ ಹಾಕಿಕೊಂಡು ಜೀವಿಸುತ್ತಿದ್ದೇನೆ. ಇದನ್ನೆಲ್ಲಾ ನೋಡುತ್ತಿದ್ದಾಗ, ಏತಕ್ಕೋಸ್ಕರ ಇರಬೇಕು ಎಂದೆನಿಸುತ್ತದೆ. ನಾನು ಅವನನ್ನು ಹುಡುಕಿಕೊಂಡು ಹೋಗುತ್ತೇನೆ. ಅವನು ಇರುವ ಕಡೆ ಹೋಗುತ್ತೇನೆ. ನನಗಂತೂ ಇರಲು ಆಗುತ್ತಿಲ್ಲ. ನಾನು ಹೊರಡಲು ಸಿದ್ಧ’ ಎಂದರು.

‘ಜೇಮ್ಸ್‌ ಚಿತ್ರತಂಡದವರು ಕೊನೆಯ ನಾಲ್ಕು ತಿಂಗಳು ಅವನೊಟ್ಟಿಗೇ ಸಮಯ ಕಳೆದಿರಲ್ಲವೇ. ನನಗೆ ನಿಮ್ಮನ್ನು ನೋಡಿ ಹೊಟ್ಟೆಕಿಚ್ಚು ಆಗುತ್ತಿದೆ. ನೀವು ಪುಣ್ಯವಂತರು. ನಾನು ಅವನನ್ನು ಹುಡುಕಿಕೊಂಡು ಹೋಗುತ್ತೇನೆ. ಮುಗಿದು ಹೋಯಿತು ಕಥೆ ಎನ್ನುತ್ತಾ’ ಮಾತು ನಿಲ್ಲಿಸಿದರು.

ಈ ಮಾತನ್ನು ಕೇಳಿ ಶಿವರಾಜ್‌ಕುಮಾರ್‌ ಭಾವುಕರಾದರು. ನಂತರ ವೇದಿಕೆ ಏರಿ ‘ಯಾಕೆ ನೀನು ಹಾಗೆ ಮಾತನಾಡಿದೆ’ ಎನ್ನುತ್ತಾ ರಾಘವೇಂದ್ರ ರಾಜ್‌ಕುಮಾರ್‌ ಅವರನ್ನು ತಬ್ಬಿಹಿಡಿದು ಕಣ್ಣೀರಾದರು. ‘ಕ್ಷಮಿಸು..ಕ್ಷಮಿಸು’ ಎನ್ನುತ್ತಾ ಮತ್ತೆ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್‌ ಅವರು ‘ಸ್ವಲ್ಪ ಭಾವುಕನಾದೆ. ಅಪ್ಪುವನ್ನು ನೋಡುತ್ತಾ ಹೀಗಾಯಿತು. ನಿಮ್ಮ ಜೊತೆ ಇರುತ್ತೇನೆ. ನೀವು ನನ್ನ ಜೊತೆ ಇರಿ’ ಎಂದರು.

ತೆರೆಯ ಮೇಲೆ ಅಪ್ಪು–ಶಿವಣ್ಣ ಜೋಡಿ

‘ನಾನೂ, ಅಪ್ಪು ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಬೇಕು ಎಂದು ಕಳೆದ ನಾಲ್ಕೈದು ವರ್ಷದಿಂದ ಯೋಚಿಸುತ್ತಿದ್ದೆವು. ಎರಡು ಮೂರು ಕಥೆ ಕೇಳಿದ್ದೆವು. ಆದರೆ ಆಗಲೇ ಇಲ್ಲ. ಆದರೂ, ತಮ್ಮನಿಗಾಗಿ ಆಂಧ್ರದ ನಿರ್ದೇಶಕರೊಬ್ಬರ ಒಂದು ಕಥೆ ಕೇಳಿದ್ದೇನೆ. ಆ ಕಥೆಯಲ್ಲಿ ನನ್ನನ್ನೂ ಅಪ್ಪುವನ್ನೂ ನೋಡುತ್ತೀರಿ. ಭಾವನಾತ್ಮಕವಾದ ಕಥೆ ಇದು. ಇದು ನಾನು ಅಪ್ಪುಗೆ ನೀಡುತ್ತಿರುವ ಕೊಡುಗೆ’ ಎಂದರು ಶಿವರಾಜ್‌ಕುಮಾರ್‌.

ಕಾರ್ಯಕ್ರಮದಲ್ಲಿ ಜೈಮ್ಸ್ ಚಿತ್ರದ ನಾಯಕಿ ಪ್ರಿಯಾ ಆನಂದ್
ಕಾರ್ಯಕ್ರಮದಲ್ಲಿ ಜೈಮ್ಸ್ ಚಿತ್ರದ ನಾಯಕಿ ಪ್ರಿಯಾ ಆನಂದ್

‘ಅಪ್ಪು ಸಿನಿಮಾವನ್ನು ನೋಡಿ ಮೆಚ್ಚಿ, ಕೊಂಡಾಡಿದ್ದೇವೆ. ರಾಘು ಮಾತನಾಡಿದ್ದು ಕೇಳಿ ನೋವಾಯಿತು. ನನಗಿಂತ ಚಿಕ್ಕವರು ಇವರು. ಇವರು ಈ ರೀತಿ ಮಾತನಾಡಿದರೆ ನಾವು ನೋಡಬೇಕಲ್ಲವೇ. ರಾಘುಗೆ ಹೃದಯಾಘಾತ ಆಗಿರುವುದು, ಅಪ್ಪು ನಮ್ಮನ್ನು ಬಿಟ್ಟುಹೋಗಿರುವುದು ಇದನ್ನೆಲ್ಲ ನೋಡಿ ನಾನು ಹೇಗೆ ಇರಬೇಕು. ನಗುತ್ತೇವೆ, ಚಿತ್ರೀಕರಣ ಮಾಡುತ್ತೇವೆ..ಆದರೆ ಒಳಗಡೆ ಆ ನೋವು ಇನ್ನೂ ಇದೆ. ಅಪ್ಪು ಎಲ್ಲರಿಗೂ ಮುದ್ದು ಮಗ. ಐವರಲ್ಲಿ ಒಬ್ಬ ಇಲ್ಲ ಎನ್ನುವುದು ನೋವು ತರುತ್ತದೆ. ಈ ರೀತಿಯ ತಮ್ಮನನ್ನು ಪಡೆಯಲು ಪುಣ್ಯ ಮಾಡಿದ್ದೆವು. ನಟನೆಯ ಜೊತೆಗೆ ಆತನ ವ್ಯಕ್ತಿತ್ವದಿಂದ ಆತ ನಮಗಿಂತ ದೊಡ್ಡವನಾಗಿ ಬೆಳೆದಿದ್ದ’ ಎಂದು ಶಿವರಾಜ್‌ಕುಮಾರ್‌ ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT