ಗುರುವಾರ , ಜುಲೈ 29, 2021
25 °C
ಕರಣ್, ಯಶ್ ರಾಜ್ ಫಿಲಂಸ್, ಸಲ್ಮಾನ್ ವಿರುದ್ಧ ಭುಗಿಲೆದ್ದ ಆಕ್ರೋಶ: ನಟಿ ಕಂಗನಾ ಬೆಂಬಲ, 2.78 ಲಕ್ಷ ಸಹಿ ಸಂಗ್ರಹ

ಸುಶಾಂತ್‌ ಸಾವಿಗೆ ಪ್ರತೀಕಾರ: ಬಾಲಿವುಡ್‌ ಸ್ವಜನ ಪಕ್ಷಪಾತದ ವಿರುದ್ಧ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಶಾಂತ್ ಸಿಂಗ್‌ ರಜಪೂತ್

ಅರಳುವ ಮುನ್ನವೇ ಬಾಡಿದ ಬಾಲಿವುಡ್‌ ನಟ ಸುಶಾಂತ್ ಸಿಂಗ್‌ ರಜಪೂತ್‌ ಆತ್ಮಹತ್ಯೆ ಬಾಲಿವುಡ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

ಆಶ್ಚರ್ಯವೆಂದರೆ, ಪಕ್ಷಪಾತಿ ಚಿತ್ರನಿರ್ಮಾಣ ಸಂಸ್ಥೆಗಳು ಮತ್ತು ಕೆಲವು ನಟರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಆರಂಭಿಸಿರುವ ಸಹಿ ಸಂಗ್ರಹ ಅಭಿಯಾನಕ್ಕೆ ಬಾಲಿವುಡ್‌ನ ಖ್ಯಾತನಾಮ ನಟ, ನಟಿಯರು, ನಿರ್ದೇಶಕರು ಸಹ ಕೈಜೋಡಿಸಿದ್ದಾರೆ. 

ಸಿನಿಮಾ ಮನೆತನದ ಹಿನ್ನೆಲೆ ಮತ್ತು ಗಾಡ್‌ಫಾದರ್‌ ಇಲ್ಲದೆ ಬಾಲಿವುಡ್‌ ಅಂಗಳಕ್ಕೆ ಕಾಲಿಟ್ಟ ಸುಶಾಂತ್‌ ಬಗ್ಗೆ ಕನಿಕರದ ಹೊಳೆಯೇ ಹರಿಯುತ್ತಿದೆ. ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ ಎಂಬ ಕಾರಣಕ್ಕೆ ಸುಶಾಂತ್‌ ಅವರನ್ನು ಅವಮಾನಿಸಲಾಯಿತು. ಪ್ರತಿಭಾವಂತರಾಗಿದ್ದರೂ ದೊಡ್ಡ ಬ್ಯಾನರ್‌ಗಳ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗಲಿಲ್ಲ ಎನ್ನುವುದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. 

ದೊಡ್ಡ ಬ್ಯಾನರ್‌ ಚಿತ್ರಗಳನ್ನು ಬಹಿಷ್ಕರಿಸಿ ಎಂದು ಆರಂಭಿಸಿರುವ ಸಹಿ ಸಂಗ್ರಹ ಅಭಿಯಾನದ ಬೆಂಬಲಕ್ಕೆ ನಟಿ ಕಂಗನಾ ಸೇರಿ ಹಲವು ನಟರು ನಿಂತಿದ್ದಾರೆ. ಕಂಗನಾ ಸೇರಿದಂತೆ ಈ ಎಲ್ಲ ನಟ, ನಟಿಯರೂ ಬಾಲಿವುಡ್‌ನ ಸ್ವಜನ ಪಕ್ಷಪಾತದ ಧೋರಣೆಯಿಂದ ಬೇಸತ್ತವರೇ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಸ್ವಜನಪಕ್ಷಪಾತದ ಬಗ್ಗೆ ಬಾಲಿವುಡ್‌ ಅಂತರಂಗದಲ್ಲೂ ಮಡುಗಟ್ಟಿರುವ ಆಕ್ರೋಶ ಜ್ವಾಲಾಮುಖಿಯಂತೆ ಈಗ ಸ್ಫೋಟಿಸುತ್ತಿದೆ.  

ಜಯಶ್ರೀ ಶ್ರೀಕಾಂತ್ ಎಂಬುವವರು ಆರಂಭಿಸಿರುವ ಈ ಅಭಿಯಾನ ಹತ್ತು ಲಕ್ಷ ಸಹಿಯ ಗುರಿ ಹೊಂದಿದ್ದು, ಈಗಾಲೇ 2.78 ಲಕ್ಷ ಸಹಿ ಸಂಗ್ರಹಿಸಲಾಗಿದೆ. ಹೆಚ್ಚಿನವರು ನಿರ್ದೇಶಕ ಕರಣ್ ಜೋಹರ್, ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಂಸ್ ಮತ್ತು ನಟ ಸಲ್ಮಾನ್ ಖಾನ್ ಅವರನ್ನು ಬಹಿಷ್ಕರಿಸುವಂತೆ ಮನವಿ ಮಾಡಿದ್ದಾರೆ.

‘ಈ ನಿರ್ಮಾಣ ಸಂಸ್ಥೆಯ ಸಿನಿಮಾಗಳನ್ನು ಪ್ರಸಾರ, ಪ್ರಚಾರ ಮಾಡದಂತೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಹಾಟ್‌ಸ್ಟಾರ್‌ಗಳಿಗೆ ಮನವಿ ಮಾಡಲಾಗಿದೆ. ಇಂಥ ದುರ್ಘಟನೆ ಮತ್ತೆ ಸಂಭವಿಸುವುದಕ್ಕೆ ನಾವು ಅವಕಾಶ ನೀಡಬಾರದು. ಪ್ರತಿಭಾವಂತ ಕಲಾವಿದರನ್ನು ತುಳಿಯುವುದನ್ನು ನಿಲ್ಲಿಸಿ ಮತ್ತು ಗಾಡ್‌ಫಾದರ್‌ ಬೆಂಬಲ ಇಲ್ಲದ ಹೊಸ ನಟರಿಗೆ ಅವಕಾಶ ಕೊಡಿ' ಎಂದು ಅಭಿಯಾನ ಪತ್ರದಲ್ಲಿ ಒತ್ತಾಯಿಸಲಾಗಿದೆ.

'ಸುಶಾಂತ್ ಒಬ್ಬ ಅದ್ಭುತ ವಿದ್ಯಾರ್ಥಿ. ಭೌತಶಾಸ್ತ್ರದ ಒಲಿಂಪಿಯಾಡ್ ವಿನ್ನರ್ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಟಾಪರ್ ಆಗಿದ್ದವರು. ನಟನಾಗುವ ಸಲುವಾಗಿ ಎಂಜಿನಿಯರಿಂಗ್ ಅರ್ಧದಲ್ಲಿ ಬಿಟ್ಟು ಬಾಲಿವುಡ್‌ಗೆ ಬಂದಿದ್ದರು' ಎಂದು ಸುಶಾಂತ್‌ ಕನಸುಗಳನ್ನು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ.

ಬಾಲಿವುಡ್‌ ಸಿನಿಮಾಗಳ ಕಾಸ್ಟಿಂಗ್‌ನಲ್ಲಿ ಪ್ರಭಾವ ಬೀರುವ ಕರಣ್ ಜೋಹರ್ ಒಬ್ಬ ರಾಕ್ಷಸ. ತಾವು ಇಷ್ಟಪಡದವರನ್ನು ನಾಶಪಡಿಸುವ ಕ್ರೂರಿ. ಕರಣ್‌ ನಡೆಸಿಕೊಡುವ ‘ಕಾಫಿ ವಿತ್‌ ಕರಣ್’ ಷೊದಲ್ಲಿ ನೀವು ಅತಿಥಿಯಾದರೆ ಅವರ ಬಾಲಿಶ ಹಾಸ್ಯಗಳಿಗೆ ನಗಬೇಕಾಗುತ್ತದೆ. ಆತನ ದಬ್ಬಾಳಿಕೆಯ ಹಾಸ್ಯಗಳನ್ನು ಸಹಿಸಿಕೊಳ್ಳಬೇಕು. ಇಲ್ಲದಿದ್ದರೆ ಆತ ಕೆಟ್ಟದಾಗಿ ಬೇಟೆಯಾಡುತ್ತಾನೆ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

'ಕರಣ್, ಯಶ್‌ ರಾಜ್‌, ಶಾರುಖ್ ಖಾನ್, ಸಂಜಯ್ ಲೀಲಾ ಬನ್ಸಾಲಿ ಮುಂತಾದವರು ಸ್ವಜನಪಕ್ಷಪಾತ ಮಾಡುವ ಗ್ಯಾಂಗ್‌ನ ಭಾಗ. ಅವರ ಆಶೀರ್ವಾದವಿಲ್ಲದೆ ನೀವು ಬಾಲಿವುಡ್‌ನಲ್ಲಿ ಉಳಿಯಲು ಸಾಧ್ಯವಿಲ್ಲ' ಎಂದು ಮನವಿ ಪತ್ರದಲ್ಲಿ ಹರಿಹಾಯಲಾಗಿದೆ.

'ಬಾಲಿವುಡ್‌ನಲ್ಲಿ ಬೆಳೆಯಲು ನೀವು ಒಂದೋ ಸ್ಟಾರ್‌ಕಿಡ್‌ ಆಗಿರಬೇಕು. ಇಲ್ಲವೇ ಕೆಲವು ನಿರ್ದಿಷ್ಟ ಸರ್‌ನೇಮ್‌ಗಳಿರಬೇಕು. ಬಾಲಿವುಡ್‌ಗೆ ಹೊಸಬರಾದ ಸುಶಾಂತ್ ಅವರನ್ನು ಹೀನಾಯವಾಗಿ ಟ್ರೋಲ್ ಮಾಡಲಾಗಿತ್ತು, ಶೋಷಿಸಲಾಗಿತ್ತು' ಎಂದು ಈ ಪತ್ರದಲ್ಲಿ ಕಿಡಿಕಾರಲಾಗಿದೆ. 

ಈ ಅಭಿಯಾನ ಬೆಂಬಲಿಸಲು: https://www.change.org/p/sushant-singh-rajput-boycott-karan-johar-yrf-fi...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು