ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಗೀತದ ಆತ್ಮ ಅಧ್ಯಾತ್ಮ’ ಕೈಲಾಶ್ ಖೇರ್

Last Updated 2 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

‘ಸಂಗೀತದ ಆತ್ಮ ಅಧ್ಯಾತ್ಮ. ಅದು ಸದ್ದಿಲ್ಲದೇ ಹರಿಯುವ ನದಿಯಂತೆ. ಸ್ವರ ಸ್ವರದಲ್ಲೂ ಅಡಗಿರುವ ಅಧ್ಯಾತ್ಮದ ಎಳೆಯನ್ನು ಗ್ರಹಿಸಲುಶಕ್ತರಾದವರು ಉತ್ತಮ ಸಂಗೀತಗಾರರಾಗುತ್ತಾರೆ’ ಎನ್ನುತ್ತ ಸ್ವರಮಾಂತ್ರಿಕ ಕೈಲಾಶ್‌ ಖೇರ್‌ ಮುಗುಳ್ನಕ್ಕರು. ತಮ್ಮ ಗಾಯನದಲ್ಲಿರುವ ಸೂಫಿತನವನ್ನು ಮಾತಿನಲ್ಲಿಯೂ ವ್ಯಕ್ತಿತ್ವದಲ್ಲಿಯೂ ಅಳವಡಿಸಿಕೊಂಡಂತೆ ಕಂಡ ಅವರು ತಮ್ಮ ಉದ್ದ ಕೂದಲನ್ನು ಒಮ್ಮೆ ನೇವರಿಸಿ, ‘ಅಂಗ್ರೇಜಿ’ ನನಗೆ ಇಷ್ಟದ ಭಾಷೆ. ಅದು ನನ್ನ ಬೆಳವಣಿಗೆಗೂ ದೊಡ್ಡ ಕೊಡುಗೆ ನೀಡಿದೆ‘ ಎನ್ನುತ್ತಲೇ ನಿರರ್ಗಳ ಹಿಂದಿಯಲ್ಲಿ ಮಾತನಾಡಿದರು.

ಸಂಗೀತಕ್ಕಾಗಿಯೇ ಬದುಕು ಎಂದು ನಂಬಿಕೊಂಡಿರುವ ಕಂಚಿನ ಕಂಠದ, ಪಕ್ಕಾ ದೇಸಿ ಶೈಲಿಯ ಸೂಫಿ ಸಂಗೀತಗಾರ ಕೈಲಾಶ್‌, ಸಂಗೀತ ಅಕಾಡೆಮಿಯೊಂದನ್ನು ತೆರೆಯಲು ಸಿದ್ಧರಾಗಿದ್ದಾರೆ.ಜುವೆಲರಿ ಕಂಪನಿಯೊಂದರ ಜಾಹೀರಾತಿನ ಜಿಂಗಲ್ಸ್‌ನಿಂದ ಆರಂಭವಾದ ಸಂಗೀತಯಾನ ಅವರನ್ನು ಇಲ್ಲಿಯವರೆಗೆ ಕೈ ಹಿಡಿದು ನಡೆಸಿಕೊಂಡು ಬಂದಿದೆ. ಒರಾಯನ್ ಮಾಲ್‌ನಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಬಂದಿದ್ದ ಅವರನ್ನು ಮಾತನಾಡಿಸಿದಾಗ....

*ಪದ್ಮಶ್ರೀ ಪಡೆಯುವ ಹಂತಕ್ಕೆ ಸಾಧನೆ ಮಾಡ್ತೀನಿ ಅಂತ ಎಂದಾದ್ರು ಅಂದ್ಕೊಂಡಿದ್ರಾ?

ಖಂಡಿತಾ ಇಲ್ಲ. ನಾನು ಬೆಳೆದು ಬಂದ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿದರೆ ನನ್ನ ಕಷ್ಟದ ದಿನಗಳಲ್ಲಿ ಒಂದು ಹೊತ್ತಿನ ಊಟ ಸಿಗುವುದೇ ದೊಡ್ಡದಾಗಿತ್ತು. ಬದುಕು ತಂದೊಡ್ಡುವ ಯಾವ ಕಷ್ಟವೂ ಕಷ್ಟವಲ್ಲ ಎಂಬುದನ್ನು ಕ್ರಮೇಣ ಅರಿತೆ. ಸಂಗೀತ ಕಲಿಯಲೆಂದು 14ನೇ ವರ್ಷಕ್ಕೆ ಮನೆಯಿಂದ ಹೊರಗೆ ಬಂದೆ. ಎಲ್ಲೆಲ್ಲೋ ಇದ್ದುಕೊಂಡು ದಿನ ದೂಡಿದ್ದೇನೆ. 20ರ ಹರೆಯದಲ್ಲಿದ್ದಾಗ ಸಣ್ಣ ಉದ್ಯಮವೊಂದನ್ನು ಮಾಡಿ, ಕೈಸುಟ್ಟುಕೊಂಡೆ. ಬದುಕನ್ನೇ ಕೊನೆಗಾಣಿಸಿಕೊಳ್ಳಬೇಕೆಂದು ಆತ್ಮಹತ್ಯೆಯ ಪ್ರಯತ್ನವನ್ನೂ ಮಾಡಿದ್ದೆ. ಬದುಕಿನೆಡೆಗೆ ಯಾವ ಭರವಸೆಯೂ ಇಲ್ಲದಿದ್ದಾಗ ಸಂಗೀತವೊಂದನ್ನೇ ಧೇನಿಸಿ ಕಾಲ ಕಳೆದಿದ್ದೇನೆ. ಸಂಗೀತವೇ ನನ್ನನ್ನು ಇಲ್ಲಿಗೆ ಕರೆ ತಂದು ನಿಲ್ಲಿಸಿದೆ ಅಷ್ಟೆ.

*ಬದುಕಿಗೆ ಪ್ರೇರಣೆ ಏನು?

ಕಷ್ಟದ ದಿನಗಳು ಮತ್ತು ಅದು ನೀಡಿದ ಸವಾಲುಗಳು ನನ್ನೊಳಗೆ ಸದಾ ದುಡಿಯುವ ಮತ್ತು ತುಡಿಯುವ ಕಾವನ್ನು ಉಳಿಸಿಕೊಟ್ಟಿದೆ. ಒಲೆಯ ನಿಗಿ ಕೆಂಡದ ಮುಂದೆ ರೊಟ್ಟಿ ಸುಡುತ್ತಿದ್ದ ಅಮ್ಮನ ಬಳಿ ಹೋಗಿ, ಇನ್ನು ಮುಂದೆ ಹಾಡುತ್ತೇನೆ ಅಮ್ಮ ಎಂದು ಹೇಳಿದ್ದೆ. ‘ಇಷ್ಟು ದಿನವೂ ಅದೇ ಮಾಡಿದ್ದಲ್ಲವ, ಹೊಟ್ಟೆಗೆ ಏನು ಮಾಡುತ್ತೀಯಾ’ ಎಂದು ಮರುಪ್ರಶ್ನೆ ಇಟ್ಟಿದ್ದಳು. ಕಷ್ಟವೊಂದು ಇಲ್ಲದೇ ಇದ್ದರೆ, ನಾನು ಇಲ್ಲಿ ಕುಳಿತು ಮಾತನಾಡಲು ಸಾಧ್ಯವಾಗುತ್ತಿತ್ತೇ? ಕಷ್ಟವಿಲ್ಲದೇ ಇದ್ದಿದ್ದರೆ ಛಲವೇ ಹುಟ್ಟುತ್ತಿರಲಿಲ್ಲ. ಕಷ್ಟವೇ ನನ್ನ ಬದುಕಿಗೆ ದೊಡ್ಡ ಸ್ಫೂರ್ತಿ.

*ಮೊದಮೊದಲು ಅವಕಾಶ ಪಡೆದುಕೊಂಡ ದಿನಗಳನ್ನು ನೆನಪಿಸಿಕೊಳ್ಳಬಹುದಾ?

ಖಂಡಿತ. ಗೆದ್ದರೂ, ಸೋತರೂ ಅದು ಮುಂಬೈನಲ್ಲಿಯೇ ಎಂಬ ದೃಢನಿರ್ಧಾರದಿಂದ 2001ರಲ್ಲಿ ಮುಂಬೈಗೆ ತೆರಳಿದೆ. ಪ್ರತಿಷ್ಠಿತ ಕಂಪನಿಯೊಂದಕ್ಕೆ ಮೂರು ಹಾಡುಗಳನ್ನು ಬರೆದು, ರಾಗ ಸಂಯೋಜಿಸಿ ಕಳುಹಿಸಿದ್ದೆ. ಆದರೆ, ಅದರಲ್ಲಿ ಎರಡು ತಿರಸ್ಕೃತಗೊಂಡಿದ್ದವು. ಒಂದು ಮಾತ್ರ ಉಸ್ತಾದ್‌ ನುಸ್ರತ್‌ ಫತೇ ಆಲಿ ಖಾನ್‌ ಅವರ ಹಾಡಿರಬಹುದು ಎಂದುಕೊಂಡು ಆಯ್ಕೆ ಮಾಡಿದ್ದರು. ನಿಜವಾಗಿಯೂ ಆ ಹಾಡನ್ನು ನಾನು ಬರೆದು, ಹಾಡಿದ್ದೆ. ಬೇರೆಯವರ ಹೆಸರಿನಲ್ಲಿ ತಮ್ಮ ಹಾಡು ಜನಪ್ರಿಯಗೊಂಡರೆ ಅದಕ್ಕಿಂತ ದುಃಖದ ಸಂಗತಿ ಸಂಗೀತಗಾರನಿಗೆ ಬೇರೆನಿದೆ ಹೇಳಿ? ನನಗೊಬ್ಬ ಖೊಟ್ಟಿ ಮ್ಯಾನೇಜರ್‌ ಇದ್ದ. ಹೀಗಾದರೂ ನಿನ್ನ ಹಾಡು ಆಯ್ಕೆಯಾಯಿತಲ್ಲ ಎಂದು ಆತ ಹುರಿದುಂಬಿಸುತ್ತಿದ್ದ. ಇದಾದ ಮೇಲೆ ‘ದೌಲತ್‌, ಶೋರತ್‌’ ಹಾಡು ಹುಟ್ಟಿತು. ಜುವೆಲರಿ ಕಂಪನಿಯೊಂದರ ಜಾಹೀರಾತಿನ ಜಿಂಗಲ್ಸ್‌ನಿಂದ ಸಂಗೀತಯಾನ ಆರಂಭಗೊಂಡಿತು.

*ನಿಮ್ಮ ಸಂಗೀತ ಅಕಾಡೆಮಿ ಹೇಗೆ ಭಿನ್ನ?

ಕೈಲಾಶ್‌ ಖೇರ್‌ ಅಕಾಡೆಮಿ ಆಫ್‌ ಲರ್ನಿಂಗ್‌ ಆರ್ಟ್ಸ್‌ ಸ್ಥಾಪನೆ ಬಗ್ಗೆ ಈಗಾಗಲೇ ಘೋಷಣೆ ಮಾಡಿದ್ದೇನೆ. ಅದಕ್ಕಾಗಿ ತಯಾರಿ ನಡೆದಿದೆ. ಇದು ಸಂಪೂರ್ಣ ಆನ್‌ಲೈನ್‌ ಕೋರ್ಸ್‌. ಸಂಗೀತಕ್ಕೆ ಅಧ್ಯಾತ್ಮವೇ ಮೂಲಾಧಾರ. ಭಾರತದ ಸಂಗೀತದ ಇತಿಹಾಸವನ್ನು ಅವಲೋಕಿಸಿದರೆ ನಿಮಗಿದು ತಿಳಿಯುತ್ತದೆ. ಹಾಗಾಗಿ ಈ ಅಕಾಡೆಮಿಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸಂಗೀತದಲ್ಲಿರುವ ಅಧ್ಯಾತ್ಮವನ್ನು ಅರ್ಥೈಸಿಕೊಳ್ಳುವ ಬಗೆಯನ್ನು ಕಲಿಸಲಾಗುತ್ತದೆ. ವೃತ್ತಿಪರ ಹಾಗೂ ಹವ್ಯಾಸಿ ಸಂಗೀತಗಾರರಿಗಾಗಿ ಕೋರ್ಸ್‌ಗಳು ಲಭ್ಯವಿರಲಿವೆ.

*ಹೊಸ ಮ್ಯೂಸಿಕ್ ಆಲ್ಬಂ ಯಾವಾಗ ನಿರೀಕ್ಷಿಸಬಹುದು?

ಎರಡು ದಿನಗಳಲ್ಲಿ ಈ ಬಗ್ಗೆ ಹೊಸ ಸುದ್ದಿಯೊಂದನ್ನು ಪ್ರಕಟಿಸಲಿದ್ದೇನೆ. ಕಾದು ನೋಡಿ.

*ಕನ್ನಡದಲ್ಲಿಯೂ ಹಾಡಿದ್ದೀರಿ. ಬೇರೆ ಬೇರೆ ಭಾಷೆಗಳಲ್ಲಿ ಹಾಡುವಾಗ ಹೇಗನಿಸುತ್ತದೆ?

ಜಂಗ್ಲಿ ಸಿನಿಮಾದ ‘ಹಳೆ ಪಾತ್ರೆ ಹಳೆ ಕಬ್ಣ...’ ನಾನು ಹಾಡಿದ ಮೊದಲ ಕನ್ನಡ ಹಾಡು. ಈಗಲೂ ಲಿರಿಕ್ಸ್‌ ನೋಡಿಕೊಳ್ಳದೇ ನಾಲ್ಕು ಸಾಲು ಹಾಡಬಲ್ಲ ಕನ್ನಡದ ಹಾಡೂ ಹೌದು. ಸಂಗೀತಕ್ಕೆ ಯಾವ ಭಾಷೆಯೂ ಇಲ್ಲ. ದೇಶದ ಯಾವ ಭಾಷೆಯಲ್ಲಿ ಹಾಡೆಂದರೂ ಹಾಡಲು ನಾನು ಸಿದ್ಧ. ಭಾಷೆ ಭಾವಾಭಿವ್ಯಕ್ತಿಗಿರುವ ಒಂದು ಸಾಧನ ಅಷ್ಟೆ. ಸಂಗೀತದ ಮೂಲಕ ಜನರ ಹೃದಯ ತಲುಪುವುದಷ್ಟೆ ಮುಖ್ಯ. ಅದಕ್ಕೆ ಭಾಷೆಯ ಹಂಗ್ಯಾಕೆ?

*ಸಾರ್ಥಕತೆ ತಂದುಕೊಟ್ಟ ಕ್ಷಣ?

ಸಂಗೀತ ಕಾರ್ಯಕ್ರಮ ಮಾಡಿದಾಗೆಲ್ಲ ಮೂರು ತರಹದ ಕೇಳುಗರು ಸಿಗುತ್ತಾರೆ. ಹಣ ತೆತ್ತು ದುಬಾರಿ ಪಾಸ್‌ ಪಡೆದವರು, ಪ್ರಭಾವ ಬಳಸಿ ಶೋಗೆ ಬಂದವರು ಮತ್ತು ವೇದಿಕೆಯ ಆಚೆ ಕಾಪೌಂಡಿನ ಮರೆಯಲ್ಲಿ ನಿಂತು ಹಾಡು ಕೇಳುವವರು. ಈ ಮೂವರು ಕೇಳುಗರು ನನ್ನವರೇ. ಈ ಮೂವರು ಖುಷಿಪಡಲೆಂದೇ ನಾನು ಹಾಡುತ್ತೇನೆ. ಕಳೆದ ವರ್ಷ ಕಾರ್ಗಿಲ್‌ ಗಡಿಯಲ್ಲಿ ಹಾಡು ಹೇಳಿದ್ದೆ. ‘ತೇರಿ ದಿವಾನಿ’ ಹಾಡು ಕೆಲವರಿಗೆ ರೊಮ್ಯಾಂಟಿಕ್‌ ಹಾಡು ಎನಿಸಿದರೆ, ಅಲ್ಲಿದ್ದ ಅಪ್ಪಂ ಎನ್ನುವ ಯೋಧ ‘ಸ್ಫೂರ್ತಿಯ ಸೆಲೆ’ ಎಂದು ಹೇಳಿದ್ದ. ‘ಈ ಹಾಡು ಕೇಳುತ್ತ ಟೈಗರ್‌ ಹಿಲ್‌ನಲ್ಲಿ ಗುಂಡಿನ ಶಬ್ದ ಕೇಳಿದರೂ ನಾನು ಹೆದರುವುದಿಲ್ಲ. ಈ ಹಾಡನ್ನು ಗುನುಗಿಕೊಳ್ಳುತ್ತ ಮುನ್ನುಗ್ಗುತ್ತೇನೆ’ ಎಂದು ಹೇಳಿದ್ದ. ಇದಕ್ಕಿಂತ ಯಾವ ಸನ್ಮಾನ ಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT